ಯಥಾಸ್ಥಿತಿವಾದಿಗಳ ಸವಾಲು ಮೆಟ್ಟಿ ನಿಂತ ಬಸವಣ್ಣ

4 months ago

ಬೀದರ್ ಬಸವಣ್ಣನ ಕರ್ಮಭೂಮಿ. 12ನೇ ಶತಮಾನದಲ್ಲಿ ಬಸವಣ್ಣ ಪುರೋಹಿತಶಾಹಿಗಳ ಎಲ್ಲ ಸವಾಲುಗಳನ್ನು ಮೆಟ್ಟಿ ಅಪೂರ್ವ ಸಾಧನೆ ಮಾಡಿದವರು. ವಿಶೇಷವಾಗಿ ನಾವು ಇಂದು ಕೂಡ ಸಾಧಿಸಲು ಅಸಾಧ್ಯವೆನಿಸುವಂತಹ ಅನೇಕ ಸಾಧನೆಗಳನ್ನು ಬಸವಣ್ಣ ಮತ್ತು ಅವರ ಸಮಕಾಲೀನರು ಮಾಡಿದರು.

ದೇವರನ್ನು ಎಲ್ಲರೂ ಪೂಜಿಸುವ, ದೇವಸ್ಥಾನಕ್ಕೆ ಎಲ್ಲರೂ ಪ್ರವೇಶಿಸುವ ಹಕ್ಕು 12ನೇ ಶತಮಾನದಲ್ಲಿ ಇರಲಿಲ್ಲ. ಆದರೆ ಎಲ್ಲರಿಗೂ ದೇವರನ್ನು ಮುಟ್ಟುವ, ಪೂಜಿಸುವ, ಮಾತನಾಡಿಸುವ ಮನಸು ಸಾಮಾನ್ಯವಾಗಿ ಇರುತ್ತದೆ. ಆದರೆ ಯಥಾಸ್ಥಿತಿವಾದಿಗಳು ಆಧ್ಯಾತ್ಮಿಕವಾದ ಈ ಹಕ್ಕನ್ನು ಶೂದ್ರ, ಮಹಿಳೆಯರು ಮತ್ತು ದಲಿತರಿಗೆ ನಿರಾಕರಿಸಿದ್ದರು.

ಬಸವಣ್ಣ ತನ್ನ ಕಾಲದಲ್ಲಿ ದಲಿತರು, ಶೂದ್ರರು ಮತ್ತು ಮಹಿಳೆಯರಿಗೆ ಆಧ್ಯಾತ್ಮಿಕ ಶಕ್ತಿ, ಚೈತನ್ಯ ಮತ್ತು ಬಿಡುಗಡೆಯ ಹಾದಿಯನ್ನು ತೆರೆದರು. ಬಸವಣ್ಣನವರ ಇಷ್ಟಲಿಂಗ ಪರಿಕಲ್ಪನೆ  ಈ ನಿಟ್ಟಿನಲ್ಲಿ ದಮನಿತರ ಶೋಷಣೆಯಿಂದ ಬಿಡುಗಡೆಯ ಹಾದಿಯತ್ತ ಕೊಂಡೊಯ್ದಿತು. ಇಷ್ಟಲಿಂಗವನ್ನು ಲಿಂಗಾಯತ ಧರ್ಮವನ್ನು ಅನುಸರಿಸುವ ಯಾರು ಬೇಕಾದರೂ ದೀಕ್ಷೆ ಪಡೆದ ನಂತರ ಧರಿಸಬಹುದಾಗಿತ್ತು. ಇದಕ್ಕೆ ಲಿಂಗ, ಜಾತಿ, ವರ್ಗ, ವರ್ಣಗಳ ಭೇದವೇ ಇರಲಿಲ್ಲ. ಇದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯ ನಡೆಯಾಗಿತ್ತು.

ದೇವರನ್ನು ಪೂಜಿಸುವ ಹಕ್ಕು ಪುರೋಹಿತ ಶಾಹಿಗಳಿಗೆ ಸೀಮಿತವಾಗಿದ್ದ ಸಂದರ್ಭದಲ್ಲಿ ಬಸವಣ್ಣ ಇಷ್ಟಲಿಂಗವನ್ನು ಶೋಷಿತ ಸಮುದಾಯಗಳಿಗೆ ನೀಡಿದರು. ಈ ನಡೆಯಿಂದ ಎಲ್ಲರೂ ತಮ್ಮ ತಮ್ಮ ದೇವರನ್ನು ಪೂಜಿಸುವ, ಮುಟ್ಟುವ ಮತ್ತು ತಮ್ಮ ಕಷ್ಟ ಸುಖವನ್ನು ನೇರವಾಗಿ ಹೇಳಿಕೊಳ್ಳುವ ಅವಕಾಶ ಸಿಕ್ಕಿತು. ಇಷ್ಟು ದಿನಗಳ ಕಾಲ ದೇವರಿಂದ ದೂರವಾಗಿದ್ದ ಸಮುದಾಯಗಳಿಗೆ ದೇವರನ್ನೇ ತಮ್ಮ ಮೇಲೆ ಹೊತ್ತುಕೊಂಡು ಓಡಾಡುವ ಅವಕಾಶವನ್ನು ಬಸವಣ್ಣನವರು ಕೊಟ್ಟರು. ಇದು ಅಂದಿನ 770 ಜಾತಿಗೆ ಸೇರಿದ ಶರಣ ಮತ್ತು ಶರಣೆಯರಲ್ಲಿ ಆತ್ಮವಿಶ್ವಾಸಕ್ಕೆ ಕಾರಣವಾಯಿತು.

ಇಷ್ಟಲಿಂಗ ಪೂಜೆಗೆ ನೀವು ಹಣ ಮತ್ತು ಸಮಯವನ್ನು ಕೂಡ ವ್ಯರ್ಥಮಾಡುವಂತಿಲ್ಲ. ಪೂಜೆಗಾಗಿ ನೀವು ಹಾಲು, ತುಪ್ಪ, ಬೆಣ್ಣೆ ಇತ್ಯಾದಿಗಳನ್ನು ಬಳಸಬೇಕಿಲ್ಲ. ಬಲಿ ಇತ್ಯಾದಿ ಆಚರಣೆಯೂ ಇರಲಿಲ್ಲ. ಎಡಗೈಯಲ್ಲಿ ಇಷ್ಟಲಿಂಗವನ್ನು ಇರಿಸಿ, ಅದನ್ನು ತೊಳೆದು ವಿಭೂತಿ ಹಚ್ಚಿ ಓನಮಶಿವಾಯ ಮಂತ್ರವನ್ನು ಹೇಳಿ ಪತ್ರೆ ಅಥವಾ ಹೂವನ್ನು ಅರ್ಪಿಸಿ ಊದುಬತ್ತಿಯನ್ನು ಬೆಳಗಿದರೆ ಇಷ್ಟಲಿಂಗ ಪೂಜೆ ಶಿವಾರ್ಪಿತವಾಗುತ್ತಿತ್ತು. ಇದಕ್ಕಾಗಿ ದೇವಸ್ಥಾನ, ಮಂದಿರ ಇತ್ಯಾದಿಗಳಿಗೆ ಹೋಗುವ ಅಗತ್ಯವೂ ಇರಲಿಲ್ಲ. ಗುರು ಲಿಂಗ ಜಂಗಮಕ್ಕೆ ಇಷ್ಟಲಿಂಗ ಪೂಜೆಯೇ ಶಿವಾರ್ಪಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜನರನ್ನು ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ, ಮೌಢ್ಯಾಚರಣೆ, ಅನವಶ್ಯಕ ದುಂದುವೆಚ್ಚಗಳಿಂದ ಬಸವಣ್ಣ ತಳಸಮುದಾಯದವರನ್ನು ಹೊರಗೆ ತಂದರು.

ಕಾಯಕವೇ ಕೈಲಾಸ ಸಿದ್ಧಾಂತ ಕೂಡ ಬಸವಣ್ಣ ಅನುಷ್ಠಾನಕ್ಕೆ ತಂದ ಮತ್ತೊಂದು ಕ್ರಾಂತಿಕಾರಿ ಚಿಂತನೆ. ಮನುಧರ್ಮದ ಪ್ರಕಾರ, ಶೂದ್ರರು, ಮಹಿಳೆಯರು ಮತ್ತು ದಲಿತರು ಧನಸಂಗ್ರಹ ಮಾಡಬಾರದು. ಆದರೆ ಬಸವಣ್ಣ ಮಾಡುವ ಕೆಲಸದಲ್ಲೇ ನಿಮಗೆ ದೇವರು ಸಿಗುತ್ತಾನೆ ಎಂದು ತಳ ಸಮುದಾಯದವರಿಗೆ ಧೈರ್ಯ ತುಂಬಿದರು. ಇದರಿಂದಾಗಿ ಕಲ್ಯಾಣದಲ್ಲಿ ಉತ್ಪಾದನಾ ಕ್ರಾಂತಿಯಾಯಿತು.

ಕೇವಲ ಹೊಟ್ಟೆ ಪಾಡಿಗಾಗಿ ದುಡಿಯುತ್ತಿದ್ದ ಜನ ದೇವರನ್ನು ಕಾಣುವ ಹಂಬಲದಲ್ಲಿ ಹೆಚ್ಚುಹೆಚ್ಚು ದುಡಿಮೆಯಲ್ಲಿ ತೊಡಗಿದರು. ಇದರಿಂದ ಕಲ್ಯಾಣದಲ್ಲಿ ತಳಸಮುದಾಯದವರು ಉತ್ಪಾದನೆಯಲ್ಲಿ ತೊಡಗಿದರು. ರಾಜ್ಯಕ್ಕೆ, ವ್ಯಾಪಾರಿಗಳಿಗೆ ಮತ್ತು 770 ಕಾಯಕವನ್ನು ಮಾಡುತ್ತಿದ್ದ ಶರಣ ಶರಣೆಯರಿಗೆ ಆದಾಯ ಹೆಚ್ಚಿತು. ಇದು ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸುವ ಬಸವಣ್ಣನವರ ತಂತ್ರವಾಗಿತ್ತು. ದೇವರ ಹೆಸರಿನಲ್ಲಿ ಯಾವ ಸಮುದಾಯವನ್ನು ಕಟ್ಟಿ ಹಾಕಲು ಯತ್ನಿಸಿದ್ದರೋ ಅದೇ ಸಮುದಾಯವನ್ನು ಅದೇ ದೇವರ ಹೆಸರಿನಲ್ಲೇ ಸ್ವಾವಲಂಬಿಗಳನ್ನಾಗಿಸುವ ದೊಡ್ಡ ಪವಾಡವನ್ನು ಬಸವಣ್ಣನವರು ಮಾಡಿದರು.

ಇದರ ಜೊತೆಗೆ ದಾಸೋಹ ಸಿದ್ಧಾಂತವನ್ನು ಬಸವಣ್ಣ ಕೊಟ್ಟರು. ತಮ್ಮ ದಿನದ ದುಡಿಮೆಯನ್ನು ಪೂರ್ಣವಾಗಿ ತಾವೇ ವಿನಿಯೋಗಿಸದೆ, ಅಗತ್ಯವಿರುವವರಿಗೆ ಊಟ ಕೊಟ್ಟ ನಂತರ ತಾವು ಊಟ ಮಾಡಿ ಎಂದು ಬಸವಣ್ಣ ದಾಸೋಹ ಸಿದ್ಧಾಂತದ ಮೂಲಕ ಕರೆನೀಡಿದರು.

ಇಂದಿಗೂ ಭಾರತದಲ್ಲಿ ಸುಮಾರು 30 ಕೋಟಿ ಜನರಿಗೆ 2 ಹೊತ್ತಿನ ಊಟ ಸಿಗುತ್ತಿಲ್ಲ. ಬಸವಣ್ಣನವರ ದಾಸೋಹ ಸಿದ್ಧಾಂತವನ್ನು ನಾವು ನೀವೆಲ್ಲ ಅಳವಡಿಸಿಕೊಂಡು ಯಾರು ನಮ್ಮ ಸುತ್ತ ಹಸಿದಿದ್ದಾರೋ ಅವರಿಗೆ ಒಂದು ಹೊತ್ತಿನ ಊಟ ಕೊಟ್ಟ ನಂತರವೇ ನಾವು ಊಟ ಮಾಡುತ್ತೇವೆ ಎಂದು ನಿರ್ಧರಿಸಿದರೆ ಆ 30 ಕೋಟಿ ಜನ ಹಸಿವಿನಿಂದ ಬಳಲುವುದಿಲ್ಲ.

ಸಾಮಾಜಿಕ, ಆರ್ಥಿಕ, ಲಿಂಗ, ಧಾರ್ಮಿಕ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಸವಣ್ಣ ಮತ್ತು ಅವರ ಸಮಕಾಲೀನ 770 ಶರಣ ಶರಣೆಯರು ಇಟ್ಟ ದಿಟ್ಟ ಹೆಜ್ಜೆಯನ್ನು ನಾವುನೀವೆಲ್ಲ ಪಾಲಿಸಬೇಕು. ಅವರ ಸಮಾನತೆಯ ಆಶಯಗಳನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿರುವ ಸಂವಿಧಾನವನ್ನು ನಾವೆಲ್ಲ ಅನುಸರಿಸಬೇಕು. ಸಂವಿಧಾನದ ಆಶಯಗಳನ್ನೇ ಸಾರಿರುವ ವಚನಗಳ ಪ್ರಚಾರ ಕೂಡ ನಮ್ಮ ಆದ್ಯತೆಯಾಗಬೇಕು.

ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ, ಪತ್ರಕರ್ತ

Leave a Reply