ಏಷ್ಯಾದ ಬೆಳಕು ಗೌತಮ ಬುದ್ಧ

4 months ago

ಏಷ್ಯಾದ ಬೆಳಕು ಗೌತಮ ಬುದ್ಧ ತಮ್ಮ ಜೀವಿತಾವಧಿಯಲ್ಲಿ ಮಹತ್ವದ ಸಾಧನೆ ಮರೆದ ಪರ್ವತಕ್ಕೆ ಸಮನಾದ ವ್ಯಕ್ತಿತ್ವ. ಸಮತೆ, ಮಮತೆ, ಕರುಣೆ, ತ್ಯಾಗ, ಪ್ರೀತಿ, ದಯೆ, ಅನುಕಂಪ ಬುದ್ಧ ಜಗತ್ತಿಗೆ ಕೊಟ್ಟ ಅತ್ಯಂತ ದೊಡ್ಡ ಕೊಡುಗೆಗಳು.

ಜಗತ್ತಿನಲ್ಲಿ ದುಃಖ ಏಕಿದೆ ಎಂಬ ಪ್ರಶ್ನೆ ಬುದ್ಧನನ್ನು ಬಹುವಾಗಿ ಕಾಡಿತ್ತು. ಅದಕ್ಕೆ ಅವನ ಬದುಕಿನಲ್ಲಿ ನಡೆದ ವೈಯಕ್ತಿಕ ಘಟನೆಗಳು ಕಾರಣವಾಗಿದ್ದವು. ವೈಯಕ್ತಿಕ ಸಮಸ್ಯೆಯ ಕುರಿತು ಆಲೋಚನೆ ಆರಂಭಿಸಿದ ಬುದ್ಧ ಜಗತ್ತಿಗೆ ಬೆಳಕು ನೀಡಿದ ಮಹಾನ್ ಚೇತನವಾಗಿ ಬದಲಾದ ಕತೆ ಬಹಳ ಜನರಿಗೆ ಪೂರ್ಣವಾಗಿ ಗೊತ್ತಿಲ್ಲ.

ಸಾಮಾನ್ಯವಾಗಿ ಹೇಳುವಂತೆ ಅರಮನೆಯಲ್ಲಿದ್ದ ಬುದ್ಧ ರೋಗಿ, ವಯೋವೃದ್ಧ ಮತ್ತು ಶವವನ್ನು ನೋಡಿ ಅರಮನೆ ಬಿಟ್ಟು ಹೊರಟು ಹೋದ ಎನ್ನುತ್ತಾರೆ. ಆದರೆ ಅಂಬೇಡ್ಕರ್ ಅವರು ಬುದ್ಧ ಅರಮನೆ ತೊರೆಯಲು ಇನ್ನೊಂದು ಕಾರಣವಿತ್ತು ಎಂದು ವಿವರಿಸುತ್ತಾರೆ. ಅವರ ಪ್ರಕಾರ, ರೋಹಿಣಿ ನದಿ ನೀರಿನ ಹಂಚಿಕೆ ಸಂಬಂಧ ಶಾಕ್ಯರು ಮತ್ತು ಕೋಲಿಯರ ನಡುವೆ ತಕರಾರು ಏರ್ಪಡುತ್ತದೆ. ಆಗ ಎರಡೂ ಕಡೆಯವರು ಯುದ್ಧಕ್ಕೆ ಸನ್ನದ್ಧರಾಗುತ್ತಾರೆ. ಆದರೆ ಗೌತಮ ಯುದ್ಧ ವಿರೋಧಿ ನಿಲುವನ್ನು ತಳೆಯುತ್ತಾನೆ. ಆದರೆ ಶಾಕ್ಯ ಸಂಘದಲ್ಲಿ ನಿಯಮವನ್ನು ಮೀರುವಂತೆ ಇರಲಿಲ್ಲ. ಸಂಘದ ಸದಸ್ಯ ಯುದ್ಧ ಮಾಡಲೇಬೇಕು. ಸಂಘದ ಸದಸ್ಯನಾಗಿದ್ದ ಗೌತಮ ಯುದ್ಧ ಮಾಡುವುದಿಲ್ಲ ಎಂದಾಗ ಅವನಿಗೆ ಮೂರು ಅವಕಾಶಗಳಿರುತ್ತವೆ. 1. ಎಲ್ಲರಂತೆ ಸೈನ್ಯ ಸೇರಿ ಯುದ್ಧದಲ್ಲಿ ಪಾಲ್ಗೊಳ್ಳುವುದು. 2. ಗಡೀಪಾರಾಗುವುದು ಇಲ್ಲವೇ ಬಹಿಷ್ಕಾರಕ್ಕೆ ಒಳಗಾಗುವುದು. 3. ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಯನ್ನು ಅನುಭವಿಸುವುದು. ಈ ಮೂರರ ಪೈಕಿ ಗೌತಮ ಗಡೀಪಾರು ಶಿಕ್ಷೆಯನ್ನು ಸ್ವೀಕರಿಸಿ ಮಹಾ ಸಾಧನೆ ಮಾಡಲು ಮುನ್ನುಡಿ ಬರೆಯುತ್ತಾನೆ.

ಆಸೆಯೇ ದುಃಖಕ್ಕೆ ಮೂಲ ಎಂಬ ಬುದ್ಧನ ಜ್ಞಾನೋದಯ ಅತ್ಯಂತ ವೈಜ್ಞಾನಿಕವಾದುದಾಗಿದೆ. ಉದಾಹರಣೆಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ತನಗೆ ಶೇ. 40 ಅಂಕಗಳೊಂದಿಗೆ ನಾನು ಪಾಸ್ ಆಗುತ್ತೇನೆ ಎಂದುಕೊಂಡಿದ್ದು, ಅವನಿಗೆ ಅಷ್ಟೇ ಅಂಕಗಳು ಬಂದು ಅವನು ಪಾಸ್ ಆದರೆ ಆಗ ಅವನಿಗೆ ಯಾವ ದುಃಖವೂ ಆಗುವುದಿಲ್ಲ. ಅದೇ ವಿದ್ಯಾರ್ಥಿ 80 ಅಂಕಗಳೊಂದಿಗೆ ನಾನು ಪಾಸ್ ಆಗುತ್ತೇನೆ ಎಂದುಡಿದ್ದು, ಅವನಿಗೆ ಶೇ. 40 ಅಥವಾ ಅದಕ್ಕಿಂತ ಕಡಿಮೆ ಅಂಕಗಳು ಬಂದರೆ ಅವನಿಗೆ ದುಃಖವಾಗುತ್ತದೆ. ಈ ಹಿನ್ನೆಲೆಯಲ್ಲಿ ಬುದ್ಧನ ಆಸೆಯೇ ದುಃಖಕ್ಕೆ ಮೂಲ ಎಂಬ ಮಾತನ್ನು ಅರ್ಥಮಾಡಿಕೊಳ್ಳಬೇಕು.

ಜಾತಿ, ವರ್ಣ, ವರ್ಗ, ಲಿಂಗ ತಾರತಮ್ಯ ಸೃಷ್ಟಿಯಾಗಿದ್ದ ಭಾರತೀಯ ಸಮಾಜದಲ್ಲಿ ಸಮಾನತೆಯನ್ನು ಬಿತ್ತಲು ಬುದ್ಧನು ತನ್ನ ಜೀವಿತಾವಧಿಯಲ್ಲಿ ಪ್ರಯತ್ನಿಸಿದ. ಅವನ ಸರಳ ಬೋಧನೆಗಳು ಜನರಲ್ಲಿ ಅತ್ಯಂತ ಬೇಗ ಪ್ರಚಾರವಾದವು. ಆ ಕಾಲದಲ್ಲಿ ಪುರೋಹಿತಶಾಹಿಗಳ ಹಿಡಿತದಲ್ಲಿದ್ದ ಜನಸಾಮಾನ್ಯರು ಮತ್ತು ರಾಜಮಹಾರಾಜರು ಸರಳ ಬೋಧನೆ ಮತ್ತು ಅದರ ತಿರುಳನ್ನು ಬಹಳ ಬೇಗ ಗ್ರಹಿಸಿದರು. ಬಹುತೇಕ ರಾಜರು ಬೌದ್ಧ ಧರ್ಮ ಸ್ವೀಕರಿಸಿದರು. ಜನಸಾಮಾನ್ಯರೂ ಇದೇ ಹಾದಿ ಹಿಡಿದರು. ಸಮಾನತೆ, ಸಹೋದರತೆ ಮತ್ತು ವೈಚಾರಿಕತೆಯೇ ಬುದ್ಧನ ಬೋಧನೆಗಳಲ್ಲಿ ಪ್ರಧಾನವಾಗಿದೆ. ನೊಂದವರಿಗೆ ಬಿಡುಗಡೆಯ ದಾರಿಯನ್ನು ಬುದ್ಧ ತೋರಿದ. ಅದೇ ದಾರಿಯನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಹಿಡಿದರು ಎಂಬುದನ್ನು ನಾವು ಯಾರೂ ಮರೆಯಬಾರದು.

ಅಸಂಗ್ರಹ ತತ್ವ ಬುದ್ಧನು ಬೋಧಿಸಿದ ತತ್ವಗಳಲ್ಲೆಲ್ಲ ಮಹತ್ವದ್ದಾಗಿದೆ. ಇದನ್ನೇ ಬಸವಣ್ಣ ದಾಸೋಹ  ಪರಿಕಲ್ಪನೆಯ ಮೂಲಕ ದಾನ ಮಾಡಿ ಎಂದಿದ್ದಾರೆ. ಅಂಬೇಡ್ಕರ್ ಅವರು ಹೇಳುವ ಪೇ ಬ್ಯಾಕ್ ಟು ದಿ ಸೊಸೈಟಿ ಫಿಲಾಸಫಿ ಬೇರೆಯಲ್ಲಿ ಅಸಂಗ್ರಹ ತತ್ವ ಮತ್ತು ದಾಸೋಹ ತತ್ವ ಬೇರೆಯಲ್ಲವೆನಿಸುತ್ತದೆ. ತಮ್ಮ ದುಡಿಮೆಯನ್ನು ತಾವು, ತಮ್ಮ ಕುಟುಂಬ, ತಮ್ಮ ಜಾತಿ, ಧರ್ಮ ಇತ್ಯಾದಿಗಳಿಗೆ ಸೀಮಿತವಾಗದೆ ಅಶಕ್ತರಿಗೆ, ಅಸಹಾಯಕರಿಗೆ, ಶೋಷಿತರೊಂದಿಗೆ ಹಂಚಿಕೊಳ್ಳಬೇಕು. ಹೀಗೆ ಹಂಚಿಕೊಂಡರೆ ಸಮಾಜದಲ್ಲಿ ಹಸಿವು, ಅಸಮಾನತೆಗಳೆರಡೂ ಇಲ್ಲವಾಗುತ್ತವೆ. ಇಂತಹ ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳನ್ನು ನಾವೆಲ್ಲ ಮೈಗೂಡಿಸಕೊಳ್ಳಬೇಕಿದೆ.

ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ, ಪತ್ರಕರ್ತ

Leave a Reply