ಬೆಳಗಾವಿ: ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ರೀತಿ ಮತ್ತು ಬಿಜೆಪಿ ಹೈಕಮಾಂಡ್ ಒತ್ತಡ ಹಾಕಿದ ರೀತಿ ಕೆಟ್ಟರೀತಯದ್ದಾಗಿದೆ. ಪಿತೂರಿ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಗೋಕಾಕಿನ ಹಿಲ್ ಗಾರ್ಡನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳಿಂದ ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿತ್ತು. ಕೊನೆಗೂ ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಕೆಳಗೆ ಇಳಿಸಲಾಗಿದೆ. ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ, ಒತ್ತಡ ಹೇರಿ ರಾಜೀನಾಮೆ ಕೊಡಿಸಿದ್ದಾರೆ. ಅವರು ಒಬ್ಬ ಜನ ನಾಯಕ. ಪಕ್ಷ ಕಟ್ಟಲು ಹೋರಾಡಿದ್ದನ್ನು ಭಾವುಕವಾಗಿ ಹೇಳಿಕೊಂಡಿದ್ದಾರೆ. ದೆಹಲಿಗೆ ಕೂಡ ಬರುವುದಿಲ್ಲ ಎಂದೂ ಹೇಳಿದ್ದಾರೆ. ಗೌರವಯುತವಾಗಿ ಹೊರ ಹೋಗುವುದಕ್ಕೆ ಅವರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು ಎಂದು ಅವರು ಪ್ರತಿಕ್ರಿಯಿಸಿದರು.
ಒತ್ತಡ ತಂತ್ರ ಮಾಡಿ ರಾಜೀನಾಮೆ ಪಡೆಯಲು ಯಶಸ್ವಿಯಾಗಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಅವರನ್ನು ಮನುವಾದಿಗಳು ಒತ್ತಡ ಹೇರಿ ಮಂತ್ರಿ ಸ್ಥಾನದಿಂದ ಇಳಿಸಿದ್ದರು. ಅದೇ ಸ್ಥಿತಿ ಯಡಿಯೂರಪ್ಪ ಅವರಿಗೆ ಬಂದಿದೆ. ಇದು ದುಃಖಕರ. ಮನುವಾದಿಗಳು ಆಗಲೂ ಯಶಸ್ವಿಯಾಗಿದ್ದರು; ಈಗಲೂ ಆಗಿದ್ದಾರೆ. ಮನುವಾದಿಗಳ ವಿರುದ್ಧ ಅವರು ಹೋರಾಡಬೇಕು. ಒತ್ತಡದಿಂದ ಇಳಿಸಿದ್ದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು.



