ಮಹಾರಾಜನನ್ನು ಹುಡುಕಿಕೊಡಿ

2 years ago

ಮಹಾರಾಜನನ್ನು ಹುಡುಕಿಕೊಡಿ

ನಮ್ಮ ಮಹಾರಾಜ ಕಾಣೆಯಾಗಿದ್ದಾನೆ ಹುಡುಕಿಕೊಡಿ
ಹಸಿವು, ರೋಗಗಳ ಕೂಪದಲ್ಲಿ
ಕನಲುತ್ತಿರುವ ನನ್ನವರ
ಉಸಿರ ಬಿಸಿ ಹಬೆ ಆ ರಾಜನಿಗೆ
ಇನ್ನೂ ತಾಕಿಲ್ಲವಂತೆ
ಬಹುಶಃ ನವಿಲಿಗೆ ನಾಟ್ಯ ಕಲಿಸುವ ಭರದಲ್ಲಿ
ನನ್ನ ಭಾರತವನ್ನು ಮರೆತಿರಬಹುದು
ನೀವಾದರೂ ಹುಡುಕಿಕೊಡಿ
ಸೂಕ್ತ ಬಹುಮಾನ ಸಿಗಬಲ್ಲದು

ನನ್ನೂರಲ್ಲಿ ಬಿಕರಿಯಾಗದ ಭಾಷಣಗಳನ್ನು
ಹೊರದೇಶದಲ್ಲಿ ಹರಾಜಾಕಲು ಹೊರಟಿರಬಹುದು
ಅಲ್ಲಿನ ಮೈಕುಗಳ ತುಂಬಾ
ಭವ್ಯಭಾರತದ್ದೇ ಸಪ್ಪಳ
ನಿಮ್ಮ ಭಾಷಣ ಯಾರಿಗೆ ಬೇಕು ಸ್ವಾಮಿ
ಇಲ್ಲೇ ಇಲ್ಲೇ ಮೂಲೆಯಂಚಲ್ಲಿ ಮಲಗಿ
ನಲಗುತ್ತಿರುವವರಿಗೆ ಪ್ರೀತಿಯ ಸಲುಗೆ
ನೀಡ ಬನ್ನಿ

ಧರ್ಮ ರಾಜಕಾರಣದಲ್ಲಿ ನಮ್ಮವರನ್ನು
ಒತ್ತೆಯಿಟ್ಟ ಮಹಾರಾಜ ಕಾಣೆಯಾಗಿದ್ದಾನೆ
ಹುಡುಕಿಕೊಡಿ
ಸೂಕ್ತ ಬಹುಮಾನ ಕೊಟ್ಟರಾಯ್ತು
ನನ್ನವರಿಗೆ ದಶಮಾನದ ಅಲ್ಲ ಅಲ್ಲ
ಶತಮಾನದ ಉಪವಾಸಕ್ಕೆ ಮುಕ್ತಿ ಕೊಡಿ
ಮೊದಲು ಮಹಾರಾಜನನ್ನು ಹುಡುಕಿಕೊಡಿ

ನಿಮ್ಮ ಡಿಜಿಟಲೀಕರಣ, ಜಾಗತೀಕರಣ,
ಇನ್ಯಾವುದೋ ಕರಣಗಳು ಬೇಡ
ನೊಂದ ಜೀವಗಳಿಗೆ ಮಿಡಿತಗಳಿಗೆ
ಮಿಡಿಯುವ ಕರಣವಾಗಿಸಲು
ಯುವರಾಜನನ್ನಾದರೂ ಹುಡುಕಿಕೊಡಿ

ನಿಮ್ಮ ಮೋಹದ ಮಲ್ಲಿಗೆಯ ಘಮಲು
ನಮಗೆ ಬೇಕಿಲ್ಲ
ಕೊನೆ ಪಕ್ಷ ಹೊಟ್ಟೆ ತುಂಬುವ
ಪ್ಯಾಕೇಜ್ ಘೋಷಿಸಲಾದರೂ
ನಿಮ್ಮ ಅನುಪಸ್ಥಿತಿಯಲ್ಲಿ
ಇನ್ನೊಬ್ಬ ರಾಜನನ್ನಾದರೂ ನೇಮಕ ಮಾಡಿಬಿಡಿ
ಏಕೆಂದರೆ ನನ್ನದು ಭವ್ಯ ಭಾರತ
ನನ್ನದು ಭವ್ಯ ಭಾರತ

– ನಾಗೊಂಡಹಳ್ಳಿ ಸುನಿಲ್

Leave a Reply