ಮರ

2 years ago

ಮರ

೧
ಹಣ್ಣೆಲೆ ಉದುರುವಾಗ
ಮರದ ಚಿಗುರೆಲೆ ನಗುವುದಂತೆ! ಗೊತ್ತಿಲ್ಲ;
ಇದ್ದರೂ ಇರಬಹುದು?
‘ಹಣ್ಣೆಲೆ ನೆಲಕ್ಕಿಳಿದು ಕಳಿತರೇ
ತನ್ನ ನಗುವಿಗೆ ಬನಿ’ ಎಂದು
ಅಸುಳೆ ಎಳೆಯ ಎಲೆಗೆ ಅರಿವಾಗದಿರಬಹುದು

ಆಗಾಗ; ಉದುರುವ, ಮುರಿದು ಬೀಳುವ
ಎಲೆಗಳು, ಕೊನೆಗಳು.
ಗಾಳಿ ಮಳೆಗೆ ಸುರಿದ ಕಾಯಿ, ಕುಸುರಿನ
ಗೊನೆ ಗೊಂಚಲುಗಳು
ತನ್ನವೇ ತನಗೆ ಜೀವಾಣುಗಳೆಂದು ತಿಳಿಯದೆ
ಉಂಡ ಹೊಟ್ಟೆ ಮುಂದಿಟ್ಟುಕೊಂಡು
ಮರ ಅನ್ಯವಾಡೀತೇ?

ಆದರೂ ಜನರ ಗೊತ್ತುವಳಿ
ಯತಾ ಪ್ರಕಾರ
ಹಣ್ಣೆಲೆ ಉದುರುವಾಗ
ಚಿಗುರೆಲೆ ನಗುವುದು

೨
ಆ ಮರದಲ್ಲಿರುವುದು
ಉಸಿರು ನೀಡಿ ತೊಟ್ಟು ಕಳಚಿ
ನೆಲಕ್ಕೆ ಇಳಿದು ಚಿಗುರೆಲೆಗೆ
ಜೀವಕಳೆ ನೀಡಿದ, ಒಣ ಎಲೆ

೩
ಮರದ ಸ್ಮೃತಿಕೋಶದೊಳಗಿವೆ
ತಾನೇ ಕೊಡಲಿಗೆ ಕಾವಾಗಿ
ತಂದುಕೊಂಡ ಮೃತ್ಯು
ತಿಂದ ಏಟುಗಳ ನೋವು
ಎರಗಿ ಬಂದ ಕೊಲೆಗೆ ಕುತ್ತಿಗೆ ನೀಡಿ
ನೆಲಕ್ಕುರುಳಿದ ಸಂಕೀರ್ಣವಾದ ಸಂಕಟ

ಎದೆಯಾಲು ಕೊಟ್ಟು
ತಾಯಿ ಮಗುವ ನಿಧಾನ ಮಾಡಿದಂತೆ
ನೆರಳು ಕೊಟ್ಟು, ಅರಳೆಣ್ಣೆಯ ಹಾಗೆ
ನೆತ್ತಿ ತಂಪು ಮಾಡಿದ್ದು

ಪಕ್ಷಿಗಳು ಮನೆಕಟ್ಟಿ ಸಂಸಾರ ಮಾಡಿದ್ದು
ಹಾವುಗಳು ಮರಿ,
ಮೊಟ್ಟೆಗಳ ಉಂಡದ್ದು….
ವಲಸೆ ಹಕ್ಕಿಗಳ ಗೂಡುಗಳು
ಮರದ ಒಳಗೆ ಪಾಳು ಬಿದ್ದು
ನಿಲ ಹರಿದು ನೆಲದತ್ತ ಸಾಗಿದ್ದು…..
ಮರಿ ಕೋಗಿಲೆ
ತಾಯ್ತನ ತೊರೆದುಕೊಂಡದ್ದು…..
ಗಲ್ಡಾಳ ಹೊಡೆದ ಏಟಗೆ
ಜೇನು ಹಟ್ಟಿ, ರೊಚ್ಚಿಗೆದ್ದು
ಜನಜಂಗುಳಿ ಜಾನುವಾರುಳ
ಅಟ್ಟಾಡಿಸಿದ್ದು…..
ಮರದ ಬೇರು ಬೇರಿಗೂ ನೆನಪು

ಸೀತೆಯ ಅಗಲಿಕೆ
ರಾಮನ ವನವಾಸ
ಅಡಿಗೆ ಎರಗಿ ಬಂದ ಬುದ್ದ ಮಹಾಗುರುವು
ಪಟ್ಟ ಆನಂದ, ಪಡೆದ ಜ್ಞಾನ ಭಿಕ್ಷೆ ನಿಕ್ಷೇಪಗಳ
ಮರ ಮರೆಯಲಾದೀತೆ?

೪
ಹೆಗಲೇರಿ ಬರುವ ಅತಾರಗಳ ಅವತಾರಗಳು
ಅಂಗಾಂಗಗಳ ಕೊಯ್ಲಿಗೆ ಇಳಿವಾಗ
ಅದರ ಆತ್ಮ ನೋಯದಿರದು
ವನರಂಗದ ಅಂತರಂಗವ
ಮರದ ದುಃಖ ಮುಟ್ಟದಿರದು

– ಉಜ್ಜಜ್ಜಿ ರಾಜಣ್ಣ

Leave a Reply