ಬೆಳಗಿನ ಜಾವ ಬೇಗ ಎಚ್ಚರವಾಯಿತು. ಸುಮ್ಮನೆ ಫೇಸ್ ಬುಕ್ ತೆರೆದೆ. `ನನ್ನ ಸಾವಿಗೆ ಯಾರೂ ಕಾರಣರಲ್ಲ, ಅನಾರೋಗ್ಯದಿಂದ ಬೇಸರಗೊಂಡು ಜೀವನ ಯಾತ್ರೆ ಮುಗಿಸುತ್ತಿದ್ದೇನೆ’ ಎಂದು ಗೆಳೆಯ ಭೂಹಳ್ಳಿ ಪುಟ್ಟಸ್ವಾಮಿ ಹಾಕಿದ ಪೋಸ್ಟ್ ಕಾಣಿಸಿತು. ಅತಿಯಾಗಿ ಎಲ್ಲವನ್ನು ಹಚ್ಚಿಕೊಂಡು ಒದ್ದಾಡುವ ಸ್ವಭಾವವಾದ್ದರಿಂದ ಯಾವುದೋ ಖಿನ್ನತೆಯ ಗಳಿಗೆಯಲ್ಲಿ ಬರೆದಿರಬಹುದು ಎನ್ನಿಸಿದರೂ, ಅಂತಹ ನಿರ್ಧಾರ ಬೇಡವೆಂದು ಕಾಮೆಂಟ್ ಮಾಡಿದೆ. ಇದು ನಿಜವಾಗಿಬಿಟ್ಟಿದ್ದರೆ ಎನ್ನುವ ಆತಂಕವೂ ಆಯಿತು. ನಿದ್ದೆ ಬರದೆ ಗೆಳೆಯರಿಗೆಲ್ಲ ಫೋನ್ ಮಾಡಿದರೂ ವಿಷಯ ತಿಳಿಯಲೇ ಇಲ್ಲ. ಕೊನೆಗೆ ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಅವನು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಪುಟ್ಟಸ್ವಾಮಿ ನಮ್ಮಂತೆ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಿದ್ದ, ಕವಿತೆಗಳನ್ನು ಬರೆಯುತ್ತಿದ್ದ ವ್ಯಕ್ತಿ ಮಾತ್ರ ಆಗಿರಲಿಲ್ಲ. ಪರಿಸರವಾದಿ. ತನ್ನದೇ ಸ್ವಂತ ನೆಲದಲ್ಲಿ ಹನ್ನೆರಡು ವನಗಳನ್ನು (ಕವಿವನ, ಜೀವೇಶ್ವರ, ಬುದ್ಧೇಶ್ವರ ವನ ಹೀಗೆ) ಸೃಷ್ಟಿಸಿದ್ದ. ನಾನು ಚನ್ನಪಟ್ಟಣ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದಾಗ ಬಾಲಕರ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಪುಟ್ಟಸ್ವಾಮಿ ತಪ್ಪದೇ ಪ್ರತಿ ಶನಿವಾರ ಕಾಲೇಜು ಮುಗಿದ ಮೇಲೆ ಬಂದು ಒಂದು ಗಂಟೆ ಮಾತನಾಡಿ ಹೋಗುತ್ತಿದ್ದ. `ಮನೆಗೆ ಹೋಗಿ ಆರಾಮಾಗಿರು, ನನ್ನ ಚಿಂತೆ ಯಾಕೆ ಮಾಡ್ತೀಯ’ ಅಂದರೆ `ನೋಡು ಕಮಲ, ಪ್ರಿನ್ಸಿಪಾಲ್ ಆದ ಮೇಲೆ ಎಲ್ಲರೂ ಒಂಟಿಯಾಗಿಬಿಡ್ತಾರೆ. ನೀನು ಎಷ್ಟೇ ಪ್ರೀತಿ ತೋರಿದರೂ ಅವರು ನಿನ್ನನ್ನು ಅನುಮಾನದಿಂದ ನೋಡ್ತಾರೆ. ನಿನ್ನಂಥ ಗಿಡ ಮರಗಳ ನಡುವೆ ಬೆಳೆದ ಹಳ್ಳಿ ಹುಡುಗಿಯ ವಿಶ್ವಾಸ, ನಂಬಿಕೆ ಗಿಡ ಬೆಳೆಸೋ ನನ್ನಂತಹವರಿಗೆ ಮಾತ್ರ ಅರ್ಥ ಆಗೋದು. ನೀನು ಜೀವೇಶ್ವರ ವನಕ್ಕೆ ಬರಬೇಕು. ನಾನು ಬೆಳೆಸಿದ ಗಿಡ ಮರಗಳನ್ನು ನೋಡಬೇಕು. ಬಹಳ ಖುಷಿ ಪಡ್ತೀಯ’ ಅನ್ನುತ್ತಿದ್ದ. ನನಗೆ ಹೋಗಲಾಗಲೇ ಇಲ್ಲ. ಅಲ್ಲಿಂದ ಬೆಂಗಳೂರಿಗೆ ವರ್ಗವಾಯಿತು. ಈ ಫೇಸ್ ಬುಕ್ಕಿನಲ್ಲಿ ಒಮ್ಮೊಮ್ಮೆ ಮಾತನಾಡುತ್ತಿದ್ದೆ ಅಷ್ಟೇ.
ನಾವು ಯಾರು ಇಲ್ಲಿ ಶಾಶ್ವತವಲ್ಲ. ಬದುಕಿದ್ದಷ್ಟು ದಿನ ಪ್ರೀತಿ ಹಂಚಿ ಹೋಗುವುದಷ್ಟೇ ನಮ್ಮ ಕೆಲಸ ಎಂದು ತಿಳಿದಿದೆ. ಆದರೂ ಕಳವಳವಾಯಿತು. ಯಾರಿಗೂ ಶ್ರದ್ಧಾಂಜಲಿ ಬರೆಯಬಾರದೆಂದು ನಿರ್ಧರಿಸಿದ್ದರೂ ಎರಡು ಸಾಲು ಬರೆದರೆ ಸಮಾಧಾನ ಅನ್ನಿಸಿದ್ದು ನಿಜ. ಪುಟ್ಟಸ್ವಾಮಿ ತಾನು ಬೆಳೆಸಿದ ಸಾವಿರಾರು ಗಿಡಗಳ ನಡುವೆ ಇದ್ದೇ ಇರುತ್ತಾನೆ.
– ಎಂ ಆರ್ ಕಮಲ


