ನಮ್ಮನ್ನು ಅಗಲಿಹೋದ ಗೆಳೆಯ, ಕವಿ, ನಾಟಕಕಾರ, ಪರಿಸರವಾದಿ, ಪ್ರಗತಿಪರ ಚಿಂತಕ, ನಿವೃತ್ತ ಪ್ರಾಧ್ಯಾಪಕ ಭೂಹಳ್ಳಿ ಪುಟ್ಟಸ್ವಾಮಿ ಅವರ ಅಂತ್ಯಕ್ರಿಯೆ ಅತ್ಯಂತ ಘನತೆ ರಹಿತವಾಗಿ ನಡೆಯಿತೆಂದು ತಿಳಿಸಲು ವಿಷಾದಿಸುತ್ತೇನೆ. ಕವಿಯ ಸಾವಿನ ದುಃಖದ ಆಚರಣೆಗೂ ಸ್ಪಂದಿಸದಿರುವ ಬರಡುತನಕ್ಕೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ತಲುಪಿರುವುದು ನೋಡಿ ನನಗೆ ದಿಗಿಲಾಯಿತು. ನಾನು ಹಿಂದೆಂದೂ ಕಂಡಿರದ ದಯನೀಯ ಸ್ಥಿತಿಯಲ್ಲಿ ಭೂಹಳ್ಳಿ ಪುಟ್ಟಸ್ವಾಮಿಯವರ ಅಂತ್ಯಕ್ರಿಯೆ ನಡೆಯಿತು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ತುಂಬಲಾರದ ನಷ್ಟ ಉಂಟಾಗಿದೆ. ತನಗೆ ಮತ್ತು ತನ್ನ ಕುಟುಂಬಕ್ಕೆ ಮಾತ್ರ ಬದುಕದೆ ತನ್ನ ಅ್ವಂತ ದುಡಿಮೆಯಿಂದ ಹತ್ತು ವನಗಳನ್ನು ನಿರ್ಮಿಸಿ ಸಾವಿರಾರು ಮರಗಿಡಗಳನ್ನು ಬೆಳೆಸಿದ ಪರಿಸರವಾದಿ ಕವಿ ಪುಟ್ಟಸ್ವಾಮಿಯವರ ಅಂತ್ಯಕ್ರಿಯೆಯಲ್ಲಿ ನಾನು ಮತ್ತು ಮೈಸೂರಿನ ಡಾ.ಸಿ.ಪಿ.ಸಿದ್ಧಾಶ್ರಮ ಅವರನ್ನು ಹೊರತುಪಡಿಸಿ ಕನ್ನಡದ ಯಾವೊಬ್ಬ ಕವಿ- ಸಾಹಿತಿಗಳು ಪಾಲ್ಗೊಂಡಿರಲಿಲ್ಲ. ರಾಮನಗರ ಜಿಲ್ಲೆಯ ಯಾವೊಬ್ಬ ಪತ್ರಕರ್ತ ಕೂಡಾ ಹಾಜರಿರಲಿಲ್ಲ.
ಭೂಹಳ್ಳಿ ಪುಟ್ಟಸ್ವಾಮಿಯವರ ಪರಿಸರ ಪ್ರೇಮ ಅಗಾಧವಾದದ್ದು. ಇಡೀ ಜೀವಮಾನದ ದುಡಿಮೆಯಿಂದ ಕೂಡಿಟ್ಟ ಹಣ ಹಾಗೂ ತಮ್ಮ ನಿವೃತ್ತಿಯ ಪಿಂಚಣಿ ಹಣವೂ ಸೇರಿದಂತೆ ಸುಮಾರು 40 ರಿಂದ 45 ಲಕ್ಷ ರೂಪಾಯಿಗಳನ್ನು ವ್ಯಯಿಸಿ ಸರ್ಕಾರಿ ಜಾಗಗಳಲ್ಲಿ ಹತ್ತು ಉದ್ಯಾನವನಗಳನ್ನು ಬೆಳೆಸಿದ ಪುಟ್ಟಸ್ವಾಮಿ ಅವರ ಅಂತ್ಯಕ್ರಿಯೆಗೆ ಯಾವುದೇ ಸರ್ಕಾರಿ ಗೌರವವೂ ಸಲ್ಲಲಿಲ್ಲ. ವಿವಿಧ ಜಾಗಗಳಲ್ಲಿ ಅಂದಾಜು 35 ರಿಂದ 40 ಎಕರೆಗಳಷ್ಟು ವಿಸ್ತೀರ್ಣದ ಭೂಮಿಯಲ್ಲಿ ಸಾವಿರಾರು ಗಿಡಮರಗಳನ್ನು ಬೆಳೆಸಿರುವ ಈ ಪರಿಸರವಾದಿಯನ್ನು ಸರ್ಕಾರ ಕನಿಷ್ಠ ಗುರುತಿಸಲಿಲ್ಲ. ಯಾವುದೇ ಪ್ರಶಸ್ತಿ ನೀಡಲಿಲ್ಲ. ಕಳೆದ ಇಪ್ಪತ್ತು ವರ್ಷಗಳ ಇವರ ಕಾಯಕಕ್ಕೆ ಸರ್ಕಾರದ ಕಿಲುಬು ಕಾಸಿನ ಅನುದಾನವನ್ನು ನೀಡುವ ಮಾತಿರಲಿ ಯಾವುದೇ ಸಂಘ ಸಂಸ್ಥೆಗಳು ಇವರ ಕೆಲಸಕ್ಕೆ ಆರ್ಥಿಕ ನೆರವು ನೀಡಲಿಲ್ಲ.
ಭೂಹಳ್ಳಿ, ಭೂಹಳ್ಳಿಯಲ್ಲಿ, ಭೂಹಳ್ಳಿ ಸಮೀಪದ ಉಜ್ಜನಹಳ್ಳಿ ಗುಡ್ಡದಲ್ಲಿ , ಚನ್ನಪಟ್ಟಣ – ಸಾತನೂರು ರಸ್ತೆಯಲ್ಲಿ, ಚನ್ನಪಟ್ಟಣದ ಕಣ್ವ ಬಡಾವಣೆಯಲ್ಲಿ ಮತ್ತು ಮಹದೇಶ್ವರ ನಗರದಲ್ಲಿ, ಸಿಎಂಸಿ ಬಡಾವಣೆ ಮತ್ತು ಎಲೆಕೇರಿ ಬಡಾವಣೆಯಲ್ಲಿ, ಚನ್ನಪಟ್ಟಣ ರೈಲ್ವೇ ಸ್ಟೇಷನ್ ಹತ್ತಿರ ಅನೇಕ ಸಾರ್ವಜನಿಕ ಜಾಗಗಳಲ್ಲಿ ನೂರಾರು ತಳಿಗಳ ಸಾವಿರಾರು ಗಿಡಗಳನ್ನು ನೆಟ್ಟು ಉದ್ಯಾನವನಗಳನ್ನಾಗಿಸಿದ್ದಾರೆ. ಅಲ್ಲೆಲ್ಲಾ ಸಾವಿರಾರು ಜನ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರ ಮಾಡುತ್ತಿದ್ದಾರೆ.
ತನ್ನ ಹುಟ್ಟೂರು ಬುದ್ಧವನ ಅಥವಾ ಬುದ್ಧೇಶ್ವರ ವನದಲ್ಲಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಹತ್ ಬುದ್ಧೇಶ್ವರ ಶಿಲಾ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಇದೇ ಕವಿ ವನದಲ್ಲಿ ತನ್ನ ಅಂತ್ಯಕ್ರಿಯೆ ನಡೆಯಬೇಕೆಂಬುದು ಪುಟ್ಟಸ್ವಾಮಿ ಅವರ ಬಯಕೆಯಾಗಿತ್ತು. ಅವರ ಶವವನ್ನು ಬೆಂಕಿಯಿಂದ ಸುಡದೆ ಮರವೊಂದರ ಬುಡದಲ್ಲಿ ಹೂಳಬೇಕೆಂಬುದು ಅವರಿಗಿದ್ದ ಆಸೆಯಾಗಿತ್ತು. ಈ ವಿಷಯವನ್ನು ಅವರು ತಮ್ಮ ಅನೇಕ ಗೆಳೆಯರೊಂದಿಗೆ ಹೇಳಿಕೊಂಡಿದ್ದರು. ಇವತ್ತು ಭೂಹಳ್ಳಿ ಗ್ರಾಮದ ಜನ ಪುಟ್ಟಸ್ವಾಮಿಯವರ ಕಳೇಬರವನ್ನು ಬುದ್ಧೇಶ್ವರ ವನದಲ್ಲಿ ಹೂಳಬಾರದೆಂದು ತಡೆಯೊಡ್ಡಿದರು. ಬುದ್ಧೇಶ್ವರ ವನದಲ್ಲಿ ಮಾರಮ್ಮದೇವಿಯ ಗುಡಿ ಇರುವುದರಿಂದ ಆ ಜಾಗದಲ್ಲಿ ಶವವನ್ನು ಹೂಳಿ ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಭಂಗ ತರಬಾರದೆಂದು ಜನ ತಗಾದೆ ಮಾಡಿದರು.
ನಾವು ಕೆಲವರು ಗ್ರಾಮಸ್ಥರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಜನ ಜಗ್ಗದೆ ಕವಿವನದಲ್ಲಿ ಶವ ಸಂಸ್ಕಾರ ಕೂಡದೆಂದು ಪಟ್ಟು ಹಿಡಿದರು. ನಾನು ಜನರನ್ನು ಉದ್ದೇಶಸಿ, ”ಎಡೆಯೂರು ಸಿದ್ಧಲಿಂಗೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಇಂತಹ ನೂರಾರು ಸಾಧಕ-ಶರಣರು ನಿಧನರಾದ ಬಳಿಕ ಅವರ ಸಮಾಧಿ ಸ್ಥಳಗಳೆಲ್ಲವೂ ದೇವಾಲಯಗಳಾಗಿವೆ. ಅವರಂತೆ ಕವಿ ಪುಟ್ಟಸ್ವಾಮಿ ಇಂತಹ ಸಾಧಕರ ಸಾಲಿಗೆ ಸೇರಿದವರು. ಪುಟ್ಟಸ್ವಾಮಿ ಇಲ್ಲಿಯೇ ಮಣ್ಣಾಗಿ ಕವಿಗಳು ಮತ್ತು ಪರಿಸರ ಪ್ರೇಮಿಗಳ ಶ್ರದ್ಧಾ ಕೇಂದ್ರದಂತಾಗಲಿ” ಎಂದು ಮನವೊಲಿಸಲು ಪ್ರಯತ್ನಿಸಿದೆ. ಆಗ ಊರಿನವರು, “ಪುಟ್ಟಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅವರನ್ನು ಇಲ್ಲಿ ಹೂಳುವುದು ಬೇಡ. ಆಸ್ಪತ್ರೆಯಲ್ಲಿ ಶವವನ್ನು ಡಾಕ್ಟರುಗಳು ಕುಯ್ದು ಭಂಗವಾಗಿದೆ. ಇಂತಹ ಶವವನ್ನು ನಮ್ಮ ಸಂಪ್ರದಾಯದ ಪ್ರಕಾರ ಸುಡಲೇಬೇಕು, ಹೂಳಬಾರದು” ಎಂದು ತಾಕೀತು ಮಾಡಿದರು.
ಕವಿ ಪುಟ್ಟಸ್ವಾಮಿ ಬೆಳೆಸಿದ ಜೀವೇಶ್ವರ ವನ, ಪುಲಕೇಶಿ ವನ, ನೃಪತುಂಗ ವನ, ಕದಂಬ ವನ, ಗಾಂಧೀಜಿ ವನ, ಅಂಬೇಡ್ಕರ್ ವನ ಇಂತಹ ಯಾವುದೇ ವನದಲ್ಲಿ ಶವ ಸಂಸ್ಕಾರ ಮಾಡಲು ಸ್ವತಃ ಭೂಹಳ್ಳಿ ಪುಟ್ಟಸ್ವಾಮಿ ಅವರ ಮನೆಯ ಸದಸ್ಯರು ಕೂಡಾ ಒಪ್ಪಲಿಲ್ಲ. ಕೊನೆಗೆ ಮೂಢನಂಬಿಕೆಗಳ ಕಡು ವಿರೋಧಿಯಾಗಿದ್ದ ಕವಿ ಭೂಹಳ್ಳಿ ಪುಟ್ಟಸ್ವಾಮಿಯವರ ಇಚ್ಛೆಗೆ ವಿರುದ್ಧವಾಗಿ ಅವರದ್ದೇ ಜಮೀನಿನಲ್ಲಿ ಕಳೇಬರವನ್ನು ಸಕಲ ಸಾಂಪ್ರದಾಯಿಕ ಮೂಢನಂಬಿಕೆಯ ಆಚರಣೆಗಳಂತೆ ಸಾವಿಗೊಂದು ಘನತೆ ಇರದಂತೆ ಸುಟ್ಟರು. ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳಿರುವ ಭೂಹಳ್ಳಿಯ ಗ್ರಾಮದ ಜನ ಕವಿಯ ಸಾವಿಗೆ ಹೇಗೆ ಸ್ಪಂದಿಸಿದ್ದರೆಂಬುದನ್ನು ಹೇಗೆ ಹೇಳಲಿ? ಪರಿಸರ ಪ್ರೇಮಿ ಕವಿ ಪುಟ್ಟಸ್ವಾಮಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸೇರಿದ ಜನ ಕನಿಷ್ಠ ನೂರು ಮಂದಿ ಕೂಡಾ ಇರಲಿಲ್ಲ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು




