ಮಾಂಜಾ ದಾರ ಮಾರಾಟ, ಬಳಕೆ ನಿಷೇಧಕ್ಕೆ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್

8 hours ago

ಬೆಂಗಳೂರು: ಹುಬ್ಬಳ್ಳಿಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಮಾರಕ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟ ದುರಂತ ಘಟನೆಯನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇಂತಹ ಅಪಾಯಕಾರಿ ಪ್ರವೃತ್ತಿಗಳಿಗೆ ಕೂಡಲೇ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಮೂಲ್ಯ ಜೀವಗಳು ಬಲಿಯಾಗುವ ಆತಂಕವಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಅಮಾಯಕ ಜೀವವೊಂದು ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.

ನಿಷೇಧದ ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ಬದ್ಧ: ಮಾರಕ ಚೀನಾ ಮಾಂಜಾ ಸೇರಿದಂತೆ ಅಪಾಯಕಾರಿ ಗಾಳಿಪಟದ ದಾರಗಳ ಮಾರಾಟ ಹಾಗೂ ಬಳಕೆಯ ಮೇಲೆ ಈಗಾಗಲೇ ಕಾನೂನುಬದ್ಧ ನಿಷೇಧ ಜಾರಿಯಲ್ಲಿದೆ. ಆದರೆ ನಿಯಮ ಮೀರಿ ನಡೆಯುತ್ತಿರುವ ಇಂತಹ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಸರ್ಕಾರ ಬದ್ಧವಾಗಿದೆ. ಈ ನಿಷೇಧಾಜ್ಞೆಯನ್ನು ಇನ್ನಷ್ಟು ಬಿಗಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದಿದ್ದಾರೆ.

ಮನರಂಜನೆ ಜೀವಕ್ಕೆ ಕಂಟಕವಾಗಬಾರದು: ಗಾಳಿಪಟ ಹಾರಿಸುವುದು ಒಂದು ಸಂಭ್ರಮ ಹಾಗೂ ಮನರಂಜನೆಯಾಗಬೇಕೇ ಹೊರತು, ರಸ್ತೆಯಲ್ಲಿ ಓಡಾಡುವ ಮತ್ತೊಬ್ಬರ ಜೀವಕ್ಕೆ ಅಪಾಯ ತಂದೊಡ್ಡುವ ಮಾರಕ ಸ್ಪರ್ಧೆಯಾಗಬಾರದು ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿರುವ ಅವರು, ನಾಗರಿಕರು ಕೂಡ ಈ ಬಗ್ಗೆ ಎಚ್ಚೆತ್ತುಕೊಂಡು ಇಂತಹ ಮಾರಕ ದಾರಗಳ ಬಳಕೆಯಿಂದ ದೂರವಿರಬೇಕೆಂದು ಮನವಿ ಮಾಡಿದ್ದಾರೆ.

ಈ ದುರಂತದ ಬೆನ್ನಲ್ಲೇ ಪೊಲೀಸರು ಹಾಗೂ ಸ್ಥಳೀಯ ಆಡಳಿತಗಳು ಮಾಂಜಾ ದಾರ ಮಾರಾಟ ಮಾಡುವವರ ವಿರುದ್ಧ ವ್ಯಾಪಕ ಕಾರ್ಯಾಚರಣೆ ಕೈಗೊಳ್ಳುವ ನಿರೀಕ್ಷೆಯಿದೆ.

Leave a Reply