ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ

2 days ago

ಬೆಂಗಳೂರು: ಜೀವನೋಪಾಯಕ್ಕಾಗಿ ಪರ ರಾಜ್ಯಗಳಿಗೆ ವಲಸೆ ಹೋಗುವವರು ಆ ಮಣ್ಣಿನ ಭಾಷೆ ಕಲಿಯುವುದು ಮೂಲಭೂತ ಕರ್ತವ್ಯ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಕ್ರಾಂತಿಕಾರಿ ನಿರ್ಧಾರವನ್ನು ಕರ್ನಾಟಕವೂ ತಕ್ಷಣ ಜಾರಿಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ‌.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾರಾಷ್ಟ್ರದ ‘ಧೈರ್ಯದ’ ನಿರ್ಧಾರಕ್ಕೆ ಸ್ವಾಗತಿಸಿದ್ದು, ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಬಾರದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿರುವುದನ್ನು ಕರವೇ ಹೃದಯಪೂರ್ವಕವಾಗಿ ಸ್ವಾಗತಿಸಿದೆ. ಮೇ 1ರ ಮಹಾರಾಷ್ಟ್ರ ದಿನಾಚರಣೆಯಂದು ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದ್ದು, ಈಗಾಗಲೇ 59 ಆರ್‌ಟಿಒ ಕಚೇರಿಗಳಲ್ಲಿ ತಪಾಸಣೆ ಆರಂಭವಾಗಿದೆ ಎಂದಿದ್ದಾರೆ.

ಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ನಮ್ಮ ಅಸ್ಮಿತೆ ಮತ್ತು ಆತ್ಮಗೌರವದ ಸಂಕೇತ. ಮಣ್ಣಿನ ಭಾಷೆ ಬಾರದವರಿಂದ ಪ್ರಯಾಣಿಕರಿಗೆ ಸಂವಹನದಲ್ಲಿ ತೊಂದರೆಯಾಗುವುದು ಸಹಜ. ಹೀಗಾಗಿ ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರ ಅತ್ಯಂತ ಅರ್ಥಪೂರ್ಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲೂ ಬೆಳೆಯುತ್ತಿದೆ ಭಾಷಾ ಸಮಸ್ಯೆ: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಕನ್ನಡ ಬಾರದ ವಲಸಿಗ ಚಾಲಕರಿಂದ ಕನ್ನಡಿಗರು ನಿರಂತರ ಸಮಸ್ಯೆ ಎದುರಿಸುತ್ತಿದ್ದಾರೆ. ಸಂವಹನದ ಕೊರತೆ, ವಿಳಾಸದ ಗೊಂದಲ ಮತ್ತು ಮೀಟರ್ ವ್ಯವಹಾರದಲ್ಲಿನ ಅವಾಂತರಗಳು ಕನ್ನಡಿಗರ ನೆಮ್ಮದಿ ಕೆಡಿಸಿವೆ. ತಮಿಳುನಾಡಿನಲ್ಲೂ ಚಾಲಕರಿಗೆ ತಮಿಳು ಜ್ಞಾನ ಕಡ್ಡಾಯವಾಗಿರುವಾಗ, ಕರ್ನಾಟಕದಲ್ಲಿ ಮಾತ್ರ ಯಾಕೆ ಈ ಉದಾಸೀನ? ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಕರವೇ ಪ್ರಮುಖ ಬೇಡಿಕೆಗಳು:
ಪರವಾನಗಿ ರದ್ದು: ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬಾರದ ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಬೇಕು.

ಕಡ್ಡಾಯ ನಿಯಮಾವಳಿ: ಹೊಸದಾಗಿ ಪರವಾನಗಿ ಪಡೆಯುವವರಿಗೆ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯ ಮಾನದಂಡವಾಗಿಸಬೇಕು.

ಆತ್ಮಗೌರವದ ರಕ್ಷಣೆ: ವಲಸಿಗರು ಇಲ್ಲಿನ ಮಣ್ಣು, ನೀರು ಬಳಸುವಾಗ ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆಯುವುದು ನೈತಿಕ ಜವಾಬ್ದಾರಿಯಾಗಿದ್ದು, ಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ನಮ್ಮ ರಾಜ್ಯದಲ್ಲಿ ವ್ಯವಹಾರ ಮಾಡುವವರು ನಮ್ಮ ಭಾಷೆಯನ್ನು ಗೌರವಿಸಲೇಬೇಕು. ಮಹಾರಾಷ್ಟ್ರದ ಮಾದರಿಯನ್ನು ಅನುಸರಿಸಿ ಕರ್ನಾಟಕ ಸರ್ಕಾರವೂ ಕನ್ನಡ ಚಾಲಕರ ಪರವಾನಗಿ ವಿಚಾರದಲ್ಲಿ ಕಠಿಣ ನಿಲುವು ತಳೆಯಬೇಕು.

Leave a Reply