ನಾಟಿ ಸ್ಟೈಲ್ ಎಂಬುದು ಬರೀ ಸ್ಲೋಗನ್ನಾ… ರಿಯಾಲಿಟಿಯಾ..?: ಫ್ಯಾಕ್ಟ್ ಚೆಕ್
ರಿಂಗ್ ರೋಡ್ ಲಗ್ಗೆರೆ ಬ್ರಿಡ್ಜ್ ಬಳಿ ಇರುವ ಅವನಿ ಧಮ್ ಬಿರಿಯಾನಿ (ನಾಟಿ ಸ್ಟೈಲ್)
ಸುಮಾರು 28 ವರ್ಷಗಳಿಂದ ಹೋಟೆಲು, ಮೆಸ್ ಗಳ ಊಟ ನನಗೆ ಮಾಮೂಲು. ಬೆಂಗಳೂರಿನಲ್ಲಾಗಲಿ ನಾನು ತಾರಾಡುವ ಊರುಗಳಲ್ಲಾಗಲಿ, ಸಂಚರಿಸುವ ಹೈವೇಗಳಲ್ಲಾಗಲಿ ಎಲ್ಲಿ ಒಳ್ಳೆಯ ತಿಂಡಿ-ಊಟ-ಕಾಫಿ ಸಿಗುತ್ತೆ ಎಂದು ಸಾಮಾನ್ಯವಾಗಿ ಪತ್ತೆ ಮಾಡಿಕೊಂಡಿಕೊಂಡಿರುತ್ತೇನೆ. ಅಂಥ ಕಡೆ ಹೋದಾಗ ಮೊದಲೇ ನೋಡಿಕೊಂಡಿದ್ದ ಹೋಟೆಲು, ಮೆಸ್ ಗಳಿಗೋಗುವುದು ರೂಢಿ.

ಒಳ್ಳೆಯ ಊಟ ಏನು ಹೀಗಂದ್ರೆ ? ಇದು ವ್ಯಕ್ತಿಯಿಂದ ವ್ಯಕ್ತಿಗೆ, ಊರಿನಿಂದ ಊರಿಗೆ ಭಿನ್ನವಾದ ಅರ್ಥ ಕೊಡುವ ಮಾತು. ನನಗೆ ಒಳ್ಳೆಯ ಊಟ. ನಿಮಗಲ್ಲ. ನಿಮ್ಮ ಒಳ್ಳೆಯ ಊಟ ನನ್ನದಲ್ಲ. ಹಾಗಾಗಿ ಒಳ್ಳೆಯ ಊಟದ ಬಗ್ಗೆ ತಕರಾರು ಮಾಡದೆ ಒಂದು ತೀರ್ಮಾನಕ್ಕೆ ಬಂದುಬಿಟ್ಟಿದ್ದೇನೆ.
ಯಾವ ಊಟ ಒಂದು ತುತ್ತು ಹೆಚ್ಚು ತಿನ್ನಬೇಕೆನಿಸುತ್ತದೋ, ಯಾವ ಊಟ ಮಾಡಿದಾಗ ಸಮಾಧಾನವಾಗುತ್ತದೋ, ಯಾವ ಊಟ ಮಾಡಿದಾಗ ಹೊಟ್ಟೆ ಕೆಡುವುದಿಲ್ಲವೋ ಅದು ಒಳ್ಳೇ ಊಟ. ಅದರಲ್ಲೂ ನಾನ್ ವೆಜ್ ಹೋಟೆಲುಗಳಿಗೆ ಹೋಗುವವರು ಹೊಟ್ಟೆಯ ಬಗ್ಗೆ ಬಹಳ ಹುಷಾರಾಗಿರಬೇಕು. ನಾನ್ ವೆಜ್ ಊಟದಲ್ಲಿ ನಾನು ಯಾವಾಗಲೂ ಸೆಲೆಕ್ಟೀವ್. ಬೆಂಗಳೂರಿನಲ್ಲಿ ಪ್ರಶಾಂತ್, ಆದಿತ್ಯ, ಮರಾಠ, ರಂಗಣ್ಣ ಮಿಲ್ಟ್ರಿ ಹೋಟೆಲ್ ಹೀಗೆ ಕೆಲವು ಹೋಟೆಲುಗಳು ನನ್ನ ಆಯ್ಕೆ.

ನನ್ನ ಆಯ್ಕೆಯ ಪಟ್ಟಿಗೆ ಇಂದಿನಿಂದ ಇನ್ನೊಂದು ನಾನ್ ವೆಜ್ ಹೋಟೆಲ್ ಸೇರ್ಪಡೆ ಆಯಿತು. ರಿಂಗ್ ರೋಡ್ ಲಗ್ಗೆರೆ ಬ್ರಿಡ್ಜ್ ಬಳಿ ಇರುವ ಅವನಿ ಧಮ್ ಬಿರಿಯಾನಿ (ನಾಟಿ ಸ್ಟ್ರೈಲ್).
ನಾಟಿ ಸ್ಟ್ರೈಲ್ ಎಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ನಿಜವಾಗಿಯೂ ಹೌದಾ ಎಂದು ಹುಡುಕಿದರೆ ಅನೇಕರು ನಾಟಿ ಸ್ಟ್ರೈಲ್ ಎಂಬುದನ್ನು ಪ್ರಚಾರದ ನುಡಿಗಟ್ಟಾಗಿ ಬಳಸಿಕೊಳ್ಳುವುದೇ ಹೆಚ್ಚು. ಆದರೆ ಅವನಿ ಧಮ್ ಬಿರಿಯಾನಿ ಹೋಟೆಲ್ ಮಾಡಿರುವ ಹುಡುಗರನ್ನು ಕುತೂಹಲಕ್ಕೆಂದು ಏನು ನಾಟಿ ಸ್ಟ್ರೈಲ್ ಅಂದ್ರೆ – ಎಂದು ಕೇಳಿದೆ. ಸಾರ್ ನಾವು ಯಾವುದೇ ಮಸಾಲೆ ಪದಾರ್ಥ ರೆಡಿಮೇಡ್ ಬಳಸುವುದಿಲ್ಲ. ಎಲ್ಲಾ ಮಸಾಲೆ ಪದಾರ್ಥಗಳನ್ನು ಮಲೆನಾಡಿನಿಂದ ತರುತ್ತೇವೆ, ಮನೆಯಲ್ಲಿಯೇ ಕುಟ್ಟುವುದು-ರುಬ್ಬುವುದು ಏನೇನು ಮಾಡಬೇಕೋ ಅದೆಲ್ಲಾ ಮಾಡಿಕೊಂಡು ಮಸಾಲೆ ರಡಿ ಮಾಡಿಕೊಳ್ಳುತ್ತೇವೆ. ಟೇಸ್ಟಿಂಗ್ ಪೌಡರ್ ಬಳಸುವುದಿಲ್ಲ. ನಮ್ಮ ಹೋಟೆಲ್ ನಲ್ಲಿ ಊಟ ಮಾಡಿದವರನೇಕರು ಮಸಾಲೆಯನ್ನೂ ಕೇಳುತ್ತಾರೆ. ಈಗಾಗಲೇ ಹತ್ತದಿನೈದು ನಾನ್ ವೆಜ್ ಹೋಟೆಲುಗಳಿಗೆ ಮಸಾಲೆಯನ್ನೂ ಒದಗಿಸುತ್ತಿದ್ದೇವೆ. ಅದೂ ಕೂಡಾ ನಮ್ಮ ವ್ಯಾಪಾರವಾಗಿದೆ ಎಂದರು.

ನಿಮ್ಮ ಮಸಾಲೆಗೆ ಬ್ರಾಂಡ್ ಇಲ್ವಾ ಅಂದ್ರೆ, ನಾಟಿ ಸ್ಟೈಲ್ ಗೇಕೆ ಬ್ರಾಂಡಿಂಗ್ ಎಂದು ನಾಟಿ ಸ್ಟ್ರೈಲ್ ನಲ್ಲಿ ನಕ್ಕು ಸುಮ್ಮನಾದರು ಸಂತೋಷ್.
ಎನಿ ವೇ ದೂರದ ಶಿವಮೊಗ್ಗದ ಬಳಿಯ ಕಮ್ಮರಡಿಯ ಯುವಕ, ಕುಣಿಗಲ್ ಬಾಜೂ ಹಳ್ಳಿಯಿಂದ ಬಂದ ಸಂತೋಷ ಒಂದೊಳ್ಳೆ ಪುಟ್ಟ ಹೋಟೆಲ್ ಮಾಡಿದ್ದಾರೆ. ಅವರೇ ಖುದ್ದು ಅಡುಗೆ ಮನೆಯಲ್ಲಿ ನಿಂತು ಕೆಲಸ ಮಾಡುತ್ತಾರೆ. ತಾನೇ ನಿಂತು ಮಾಡುವುದು ಉತ್ತಮ ಎಂಬ ಮಾತಿನಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಊಟ ಚನ್ನಾಗಿದೆ. ರೇಟೂ ಹೆಚ್ಚಿಲ್ಲ. ಹೊಟ್ಟೆ ಕೆಡಲ್ಲ. ಇನ್ನೇನು ಬೇಕು. ನೀವೂ ಒಮ್ಮೆ ಟ್ರೈ ಮಾಡಿ. ಲಗ್ಗೆರೆಯ ಗಿಜಿ ಗಿಜಿ ರಸ್ತೆ ನಿಮಗಿಷ್ಟವಾಗದೆ ಇರಬಹುದು. ಪಾರ್ಸೆಲ್ ಕೊಂಡು ಹೋಗಿ. ಯು ವಿಲ್ ಎಂಜಾಯ್ ಫುಡ್.

ಸಂತೋಷನೆಂಬ ಉತ್ಸಾಹಿ ಹುಡುಗನಿಗೆ ಜಯವಾಗಲಿ…
– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು




