ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಕ್ಷ ತೊರೆದವರ ಕುರಿತು ತಾವು ವೇಶ್ಯೆ ಎಂಬ ಪದ ಬಳಕೆ ಮಾಡಿಲ್ಲ. ನಾನು ಆ ಪದ ಬಳಕೆ ಮಾಡಿರುವುದನ್ನು ಸಾಬೀತು ಪಡಿಸಿದರೆ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಬೆಂಗಳೂರು ಪ್ರೆಸ್ಕ್ಲಬ್ ಏರ್ಪಡಿಸಿದ್ದ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನನಗೆ ಲೈಂಗಿಕ ಕಾರ್ಯಕರ್ತರ ಬಗ್ಗೆ ಅಪಾರ ಗೌರವ ಇದೆ. ನನ್ನ ಭಾಷಣದಲ್ಲಿ ವೇಶ್ಯೆ ಎಂಬ ಪದ ಬಳಕೆ ಮಾಡಿರಲಿಲ್ಲ. ಆದರೆ ಮಾಧ್ಯಮದಲ್ಲಿ ನಾನು ಪದ ಬಳಕೆ ಮಾಡಿದ್ದೇನೆ ಎಂದು ವರದಿ ಪ್ರಕಟವಾಗಿತ್ತು. ಅದಕ್ಕಾಗಿ ಕ್ಷಮೆ ಕೇಳಿದ್ದೇನೆ ಎಂದರು.
ನನ್ನ ಹೆಸರು ಬಳಸಿ ಮಾಧ್ಯಮಗಳ ವರದಿಯಲ್ಲಿ ಈ ಪದ ಬಳಕೆಯಾದ್ದರಿಂದ ಕ್ಷಮೆ ಕೇಳಿದ್ದೇನೆಯೇ ಹೊರತು ಪದ ಬಳಕೆ ಮಾಡಿ ಅಲ್ಲ. ಹೀಗಾಗಿ ನಾನು ಆ ಪದ ಪ್ರಯೋಗಿಸಿರುವ ದಾಖಲೆ ನೀಡಿದರೆ ರಾಜೀನಾಮೆ ಕೊಡುತ್ತೇನೆ ಎಂದರು.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಲ್ಲಿಯೂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಉದಾಹರಣೆ ಇಲ್ಲ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ಗೌರವ ಇದೆ. ವೇಶ್ಯೆ ಎಂಬ ಪದ ಬಳಸಿದ ಫೂಟೇಜ್ ಕೊಟ್ಟರೆ ನಾನು ರಾಜೀನಾಮೆ ಕೊಡಲು ಸಿದ್ದ ಎಂದರು.
ಪಕ್ಷಾಂತರ ಮಾಡುವುದು ಯಾವ ಸಂದರ್ಭದಲ್ಲಿ? ರಾಜ್ಯದಲ್ಲಿ ಒಂದು ವರ್ಷಗಳ ಕಾಲ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಒಂದೂವರೆ ವರ್ಷ ಎಲ್ಲವನ್ನು ಅನುಭವಿಸಿ ಮಂತ್ರಿ ಆಗಬೇಕು ಎಂದು ಮಾರಾಟವಾದವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದರೂ ಬಿಜೆಪಿಯಿಂದ ರಾಜ್ಯಕ್ಕೆ ಯಾವುದೇ ಯೋಜನೆಗಳೂ ಬರಲಿಲ್ಲ. ಅನುದಾನ ಮತ್ತು ಯೋಜನೆಗಳನ್ನು ರಾಜ್ಯಕ್ಕೆ ತರುವ ವಿಚಾರ ಬಿಡಿ, ನಮ್ಮ ಹಣವನ್ನೇ ವಾಪಸ್ ತರಲು ಬಿಜೆಪಿಯವರಿಗೆ ಸಾಧ್ಯವಾಗಲಿಲ್ಲ ಎಂದು ದೂರಿದರು.
ಬಸವರಾಜ ಬೊಮ್ಮಾಯಿಯವರಿಂದಲೂ ಕೇಂದ್ರದಿಂದ ಹಣಕಾಸಿನ ನೆರವು ತರಲು ಸಾಧ್ಯವಾಗಿಲ್ಲ. ಇದನ್ನೆಲ್ಲಾ ರಾಜ್ಯದ ಜನರು ಮೂಕ ಪ್ರೇಕ್ಷಕರಂತೆ ನೋಡಿಕೊಂಡಿರಬೇಕಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನನಗೆ ವೈಯಕ್ತಿಕವಾಗಿ ಪರಿಚಯವಿದ್ದಾರೆ. ಅವರ ಸಂಪೂರ್ಣ ಜಾತಕ ಹೇಳುವ ಧೈರ್ಯ ಮತ್ತು ಮಾಹಿತಿ ನನಗೆ ಇದೆ. ಬಿಜೆಪಿಗೆ ಆ ಧೈರ್ಯ ಇಲ್ಲ. ಗುಜರಾತ್ನಲ್ಲಿ ಮತ್ತು ಕೇಂದ್ರ ಸರ್ಕಾರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಹೇಳುವ ಧೈರ್ಯ ಬಿಜೆಪಿಗೆ ಇಲ್ಲ ಎಂದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಅಭಿವೃದ್ಧಿ ವಿಷಯದಲ್ಲಿ ನಡೆಯುವುದಿಲ್ಲ. ಮಹಾತ್ಮ ಗಾಂಧಿ ಮತ್ತು ನಾಥೋರಾಮ್ ಗೋಡ್ಸೆ ವಿಚಾರಗಳ ನಡುವೆ ಚುನಾವಣೆ ನಡೆಯಲಿದೆ. ಜನತೆ ಗಾಂಧಿ ವಿಚಾರಧಾರೆ ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.




