ಮೊನ್ನೆ ನನ್ನ ಗೆಳೆಯರೊಬ್ಬರ ಭಾಷಣ ಕೇಳಿದೆ. ಅವರು ಹೇಳಿದರು- ರಾಮಾಯಣದಲ್ಲಿ ಶೂದ್ರನು ತಪಸ್ಸು ಮಾಡಿದ್ದಕ್ಕಾಗಿ ರಾಮನು ಕೊಲ್ಲುತ್ತಾನೆ, ಅಂಥ ರಾಮನನ್ನು ಧಿಕ್ಕರಿಸಬೇಕು, ಆ ರಾಮನಿಗೆ ಮಂದಿರ ಕಟ್ಟಲು ಬೆಂಬಲಿಸಬಾರದು ಇತ್ಯಾದಿ ಹೇಳಿದರು. ಇದು ನನ್ನ ಮನಸ್ಸಿನಲ್ಲಿ ಸಿಕ್ಕಿಕೊಂಡಿತು. ಇದೇನು ಅಂತ? ರಾಮಾಯಣ ಬರೆದವನು ವಾಲ್ಮೀಕಿ. ವಾಲ್ಮೀಕಿ ಬೇಡರವನು, ಶೂದ್ರ ತಪಸ್ವಿ. ಭಾರತದ ಪ್ರತಿಭೆಗೆ ದೇಹವಾಗಿ ಮೂಡಿದವನು. ಇಂಥವನು ಸ್ವಯಂ ಶೂದ್ರನಾಗಿ ತನ್ನ ಕೃತಿಯಲ್ಲಿ ಶೂದ್ರನು ತಪಸ್ಸು ಮಾಡಿದ್ದಕ್ಕಾಗಿ ಹೇಗೆ ಕೊಲ್ಲಿಸಲು ಸಾಧ್ಯ? ಇದು ತನ್ನನ್ನೇ ಕೊಂದುಕೊಂಡಂತಲ್ಲವೇ? ಇಷ್ಟು ಸರಳವಾದುದನ್ನೂ ನಾವು ತಿಳಿಯದೆ ಒದ್ದಾಡುತ್ತೇವೆ ಯಾಕೆ? ಅಥವಾ ಹೀಗಿರಬಹುದು- ದಲಿತ ವಿದ್ಯಾರ್ಥಿ ಒಕ್ಕೂಟದ ನಾಯಕ ದೇವೇಂದ್ರ ಹೆಗ್ಗಡೆ ಒಂದು ಪ್ರಸಂಗವನ್ನು ಹೇಳಿದರು. ಏನೆಂದರೆ ಮಂಡಲ್ ವರದಿ ವಿರೋಧಿ ಮೆರವಣಿಗೆಯೊಂದು ಹೋಗ್ತಾ ಇತ್ತಂತೆ. ನೋಡಿದರೆ ಆ ಮೆರವಣಿಗೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳೂ ಇದ್ದರಂತೆ. ಇವರು ಗಾಬರಿಯಾಗಿ ಅವರನ್ನು ಕರೆದು ಕೇಳಿದ್ದಕ್ಕೆ ಆ ಹುಡುಗರು ‘ಕೆಲವು ಹುಡುಗಿಯರು ಹಾಸ್ಟೆಲ್‍ಗೆ ವ್ಯಾನ್‍ನಲ್ಲಿ ಬಂದು- ಡಿಯರ್ ಫ್ರೆಂಡ್ಸ್, ಮೆರವಣಿಗೆ ಹೋಗ್ತಾ ಇದೆ, ವ್ಯಾನ್ ಹತ್ತಿ’ ಅಂದರು. ಅದಕ್ಕೆ ನಾವು ವ್ಯಾನ್ ಹತ್ತಿದೊ. ಇನ್ನೇನು ಮಾಡೋಣ?’ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರಂತೆ! ಹೇಳಿ ಏನು ಮಾಡೋಣ?
ಆ ವ್ಯಾನ್‍ಗೆ ನಾವೂ ನೀವೂ ಹತ್ತಿರಲಿಲ್ಲ, ಆ ಮೆರವಣಿಗೆಯಲ್ಲಿ ನಾವೆಲ್ಲರೂ ಇರಲಿಲ್ಲ ಎನ್ನುವುದಕ್ಕೆ ನಮಗೆ ಗ್ಯಾರಂಟಿ ಇದೆಯೇ? ಯಾವುದೇ ಸಮಸ್ಯೆಯ ಮೂಲ ಗುರುತಿಸದಿದ್ದರೆ ನಾವೂ, ನಮ್ಮ ಚಿಂತನೆಗಳೂ ದಿಕ್ಕಾಪಾಲಾಗುತ್ತವೆ. ವ್ಯಾನ್ ಹತ್ತಿದ ಹುಡುಗರ ಕತೆಯೇ ನಮ್ಮದೂ ಆಗುತ್ತದೆ. ಈಗ ಆಗಿರುವುದೂ ಅದೇ. ಇಲ್ಲದಿದ್ದರೆ, ರಾಮಾಯಣದಲ್ಲಿ ರಾಮನು ಶೂದ್ರನೊಬ್ಬ ತಪಸ್ಸು ಮಾಡಿದ್ದಕ್ಕಾಗಿ ಕೊಂದ ಪ್ರಸಂಗವು ‘ಸೇರ್ಪಡೆ’ಯಾಗಿ ನಮಗೆ ಕಾಣಬೇಕಾಗಿತ್ತು. ಅದು ಸಂಚು ಎಂದು ಅನ್ನಿಸಬೇಕಿತ್ತು. ಆ ತ್ರೇತಾಯುಗದ ಸಂಚೇ ಈ ಕಲಿಯುಗದಲ್ಲಿ ರೂಪಾಂತರ ಪಡೆದುಕೊಂಡು ಅವತರಿಸಿರುವುದು ಗೋಚರಿಸುತ್ತಿತ್ತು.
ಹೇಳಿ, ಮಂಡಲ್ ವರದಿ ಪ್ರಸ್ತಾಪವಾದಾಗೆಲ್ಲ ಬಾಬರಿಮಸೀದಿ-ರಾಮಮಂದಿರಗಳ ಪ್ರಶ್ನೆ ಭುಗಿಲೇಳುತ್ತದೆ ಯಾಕೆ? ಈ ಬಾಬರಿಮಸೀದಿ-ರಾಮಮಂದಿರಗಳ ಪ್ರಶ್ನೆ ಭುಗಿಲೆದ್ದಾಗೆಲ್ಲಾ ಮಂಡಲ್ ವರದಿಯ ಪ್ರಶ್ನೆ ತಳ ಸೇರುತ್ತದೆ ಯಾಕೆ? ಹಾಗಾದರೆ ಬಾಬರಿಮಸೀದಿ, ರಾಮಮಂದಿರಗಳ ವಿವಾದದ ಮೂಲ ಎಲ್ಲಿದೆ? ಮಂಡಲ್ ವರದಿಯನ್ನು ತುಳಿಯುತ್ತಿರುವುದು ಹಾಗೂ ಅಧಿಕಾರ ಗಳಿಸಲು ನಡೆಸುತ್ತಿರುವ ಹುನ್ನಾರವಲ್ಲದೆ ಇದು ಮತ್ತೇನು? ಹಿಂದೆ ತ್ರೇತಾಯುಗದಲ್ಲಿ ರಾಮನ ಬಾಣ ಮಾತ್ರ ದುರುಪಯೋಗವಾಗಿತ್ತು. ಈಗ ಕಲಿಯುಗ ನೋಡಿ! ಆದ್ದರಿಂದ ಪಾಪ ರಾಮನನ್ನೇ ಬಾಣ ಮಾಡಿ, ಬಾಬರಿಮಸೀದಿ ನೆಪ ತೋರಿಸುತ್ತ ಮಂಡಲ್ ವರದಿ ಧ್ವಂಸ ಮಾಡಲು ಬಿಟ್ಟಿದ್ದಾರೆ. ಅದು ಇಂದು ದೇಶದ ಉದ್ದಗಲಕ್ಕೂ ಸುತ್ತಾಡುತ್ತಿದೆ. ಬಲಿಪೀಠಕ್ಕೆ ಸಂಭ್ರಮಿಸಿ ಹೋಗುವ ಕುರಿಮರಿಯಂತೆ ನಾವು ಮೆರವಣಿಗೆಯಲ್ಲಿದ್ದೇವೆ. ಇಲ್ಲದಿದ್ದರೆ ಬಾಬರಿಮಸೀದಿ ನೆಲಸಮವಾಗುತ್ತಿರಲಿಲ್ಲ.
ಶ್ರೀ ಕುವೆಂಪು ಅವರ ‘ಶೂದ್ರ ತಪಸ್ವಿ’ಯಲ್ಲಿನ ಬಾಣವು ಬಿಟ್ಟವರ ಕಡೆಗೇ ಹೋಗುವಂತೆ ತಿರುಗೇಟು ಹೊಡೆಯುತ್ತಿತ್ತು. ಆ ಬಾಣವು ಇದಕ್ಕೆಲ್ಲಾ ಮೂಲ ಕಾರಣರಾದ ಆರ್‍ಎಸ್‍ಎಸ್, ಬಿಜೆಪಿಗಳನ್ನು ಅಟ್ಟಾಡಿಸಿಕೊಂಡು ಓಡಾಡುತ್ತಿತ್ತು. ಆರ್‍ಎಸ್‍ಎಸ್, ಬಿಜೆಪಿಗಳು ನೆಲಸಮವಾಗುತ್ತಿತ್ತು. ಅಥವಾ ವೇಷ ಬದಲಿಸಿಕೊಂಡು ಅಧಿಕಾರ ಗಳಿಸಿ ಆಮೇಲೆ ಸದೆಬಡೆಯಲು ಮಂಡಲ್ ವರದಿಯನ್ನೇ ಮುಂದಿಟ್ಟುಕೊಂಡು ಹೊಸತಾಗಿ ತಮ್ಮ ಆಟಾಟೋಪ ಆರಂಭಿಸುತ್ತಿತ್ತು.
ಹೀಗಿರುವಾಗ ಬಿಜೆಪಿ, ಆರ್‍ಎಸ್‍ಎಸ್‍ಗಳಿಗೆ ಒಂದೇ ಒಂದು ಪ್ರಾರ್ಥನೆ ಮಾಡುವ- ಏನಂತ? ನಮಗೆ ಈ ಮೀಸಲಾತಿಯ ಸಹವಾಸವೇ ಬೇಡ. ಬಡತನ ನಮಗೆ ರೂಢಿಯಾಗಿದೆ. ನಮಗೆ ಒಂದಾದರೆ ಸಾಕು. ಏನೆಂದರೆ- ‘ಹಿಂದೂ ಒಂದು’ ಎನ್ನುವ ನಿಮ್ಮ ನುಡಿಯನ್ನು ನಡೆಯಲ್ಲಿ ತನ್ನಿ. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ- ‘ಹಿಂದೂ ಒಂದು’ ಮಾಡುವುದಕ್ಕಾಗಿ ‘ಸ್ವಜಾತಿ ಮದುವೆ ಕಾನೂನುಬಾಹಿರ’ ಎಂಬುದನ್ನು ಜಾರಿಗೆ ತರುತ್ತೇವೆ’ ಎಂದು ಬಿಜೆಪಿ ಘೋಷಿಸಬೇಕು. ಆರ್‍ಎಸ್‍ಎಸ್ ಇದಕ್ಕಾಗಿ ಪ್ರಚಾರ ಮಾಡಬೇಕು. ಇಂದು ಜಾತಿಯ ಒಳಗೆ ಮದುವೆ ಆಗಿ ಆಗಿ, ಜಾತಿ ಎನ್ನುವುದು ಕುಲದ ಸ್ಥಿತಿಗೆ ಇಳಿದಿದೆ. ಒಂದೇ ಕುಲದೊಳಗೆ ಮದುವೆ ಧರ್ಮಬಾಹಿರ, ಹಿಂದೂ ಪದ ಉಚ್ಛಾರ ಮಾಡುವ ಶ್ರೀ ಪೇಜಾವರ ಮಠಾಧಿಪತಿಗಳು ಇತರ ಮಠಾಧಿಪತಿಗಳನ್ನು ಕಟ್ಟಿಕೊಂಡು ‘ಸ್ವಜಾತಿ ಮದುವೆ ಧರ್ಮ ನಿಷಿದ್ಧ’ ಎಂದು ಮನೆಮನೆಗೂ ಹೋಗಿ ಮನ ಒಲಿಸಿದರೆ ಆಗ ‘ಹಿಂದೂ ಒಂದು’ ಎನ್ನುವುದೂ ಒಂದು ಧರ್ಮ ಆಗುತ್ತದೆ. ಆಗ ಹಿಂದೂ ಒಂದಾಗಲು ಪ್ರಾರಂಭಿಸುತ್ತದೆ. ಆಗ ಈ ಹುಳುಗಳಂತಿರುವ ಮಠಾಧಿಪತಿಗಳು ಚಿಟ್ಟೆಗಳಾಗುತ್ತಾರೆ. ನಾನು ಅವರಿಗೆ ಕೈಜೋಡಿಸಿ ನಮಸ್ಕರಿಸುತ್ತೇನೆ. ಇಂತಹ ಐಕ್ಯತೆಯ ಭಾವನೆಯ ವಾತಾವರಣದಲ್ಲಿ ಬಾಬರಿ ಮಸೀದಿಯೂ ನೆಲಸಮವಾಗುವುದಿಲ್ಲ.
ಈ ದಿಕ್ಕಿನಲ್ಲಿ ಚಲಿಸಲು ಆರ್‍ಎಸ್‍ಎಸ್, ಬಿಜೆಪಿ, ಮಠಾಧಿಪತಿಗಳಿಗೆ ಸಾಧ್ಯವಾಗುತ್ತದೋ ಇಲ್ಲವೋ ಊಹಿಸಿ ಹೇಳಲು ನನಗೆ ಕಷ್ಟವಾಗುತ್ತಿದೆ. ಆದರೆ ಒಂದಂತೂ ಆಗಬಹುದು. ಇದನ್ನು ನೆನೆಸಿಕೊಂಡರೇನೇ ‘ಹಿಂದೂ ಒಂದು’ ಎನ್ನುವ ಕೆಲವರು ಗೊಟಕ್ ಎನ್ನುತ್ತಾರೆ. ಅನೇಕರಿಗೆ ಹೃದಯಾಘಾತವಾಗುತ್ತದೆ. ಕೆಲವು ಗಟ್ಟಿಪಿಂಡಗಳು ಇದು ನೆನಪಾದಾಗಲೆಲ್ಲಾ ಸ್ನಾನ ಮಾಡಿಕೊಂಡು ಹಾಗೂ ಹೀಗೂ ಉಳಿಯುವುವು. ಪರಿಸ್ಥಿತಿ ಹೀಗಿದೆ.
ಕೊನೆಯದಾಗಿ ಮಂಡಲ್ ವರದಿ ವಿವರಗಳ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲ. ಆದರೆ ಮೀಸಲಾತಿಯ ಬಗ್ಗೆ ಯಾವ ಧೋರಣೆ ನಮಗಿದ್ದರೆ ಒಳ್ಳೆಯದು? ಮೀಸಲಾತಿ ಎಂಬುದು ಇದ್ದುದ್ದರಲ್ಲೇ ಹಂಚಿಕೊಂಡು ತಿನ್ನುವ ವ್ಯವಸ್ಥೆ. ವಂಚಿತರಿಗೂ ಸ್ವಲ್ಪ ದಕ್ಕುವಂತೆ ಮಾಡುವ ಸಮಾಜದ ಋಣ ಪರಿಹಾರ. ಆದರೆ ಇದನ್ನೆ ಶಾಶ್ವತಗೊಳಿಸುವತ್ತ ನಾವೂ ಯೋಚಿಸಬಾರದು. ಇದೊಂದು ಪ್ರೀತಿಯ ಕ್ರಿಯೆಯಾಗಿ ಜಾತಿಯ ವಿಷದ ಕಟ್ಟುಗಳನ್ನು ಸಡಿಲಗೊಳಿಸಿ ಮಾನವೀಯ ದಾರದ ಮೂಲಕ ಸಂಬಂಧ ಕೂಡಿಸುವ ಎಳೆಯಾಗಬೇಕು. ಇಂದು ಭಾರತವನ್ನು ಬಡತನ ಕಿತ್ತು ತಿನ್ನುತ್ತಿರುವುದರಿಂದ ಸಣ್ಣದೂ ದೊಡ್ಡದಾಗಿ ಕಾಣಿಸತೊಡಗುತ್ತದೆ. ಮೀಸಲಾತಿ ಒಳಗೆ ಕಣ್ಣಿಗೆ ರಾಚುವಂಥವು ಇದ್ದರೆ ಅವುಗಳನ್ನು ಮೀಸಲಾತಿ ಪಡೆಯುವವರೇ ಕಿತ್ತು ಹಾಕಬೇಕು. ಹಾಗೂ ಮೀಸಲಾತಿ ಪಡೆಯುವ ಗುಂಪುಗಳು ತಂತಮ್ಮ ಕೆಟಗರಿಯೊಳಗೇನೇ ಅಂತರ್ಜಾತೀಯ-ಅಂತರ್ಮತೀಯ ವಿವಾಹಿತರಿಗೆ ಉದ್ಯೋಗದಲ್ಲಿ ಆದ್ಯತೆಗೆ ಒತ್ತಾಯಿಸುವಂತಾದರೆ ಅದು ಮೀಸಲಾತಿಗೆ ಹೆಚ್ಚು ಅರ್ಥ ತಂದುಕೊಡುತ್ತದೆ.
[‘ಎದೆಗೆ ಬಿದ್ದ ಅಕ್ಷರ’ ಸಂಕಲನದಿಂದ ಆಯ್ದ ಈ ಬರಹವು ಎರಡೂವರೆ ದಶಕಗಳ ಹಿಂದೆ ಅಯೋಧ್ಯೆ ವಿವಾದ ನಡೆದ ಸಂದರ್ಭದಲ್ಲಿ ಬರೆದದ್ದು]
– ದೇವನೂರ ಮಹಾದೇವ, ಹಿರಿಯ ಸಾಹಿತಿ




