ಸಾಮರಸ್ಯದ ಸಾರದೊಂದಿಗೆ ಹಿಂದೂ ಸಂಸ್ಕೃತಿ ಜನರಲ್ಲಿ ರಕ್ತಗತವಾಗಿದೆ
ಬಿ.ಜೆ.ಪಿ.ಯ ಸಿದ್ಧಾಂತವನ್ನು ಒಪ್ಪುವವರು ಮಾತ್ರವೇ ಹಿಂದೂಗಳು. ಬಿ.ಜೆ.ಪಿ.ಯ ವಿಚಾರಧಾರೆಗಳನ್ನು ವಿರೋಧಿಸುವವರೆಲ್ಲಾ ಹಿಂದೂ ವಿರೋಧಿಗಳು ಎಂಬ ಅಭಿಪ್ರಾಯವನ್ನು ಬಹತೇಕ ಬಿ.ಜೆ.ಪಿ. ನಾಯಕರು ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ದೇಶದಲ್ಲಿ ಸಾಮರಸ್ಯದ ಸಾರದೊಂದಿಗೆ ಹಿಂದೂ ಸಂಸ್ಕೃತಿ ಜನರಲ್ಲಿ ಶತ ಶತಮಾನಗಳ ಹಿಂದೆಯೇ ರಕ್ತಗತವಾಗಿದೆ. ಬಿ.ಜೆ.ಪಿ. ಅಥವಾ ಜನಸಂಘ ಹುಟ್ಟುವ ಮೊದಲೇ ಈ ದೇಶದಲ್ಲಿ ಹಿಂದೂ ಸಂಸ್ಕೃತಿ ಎಲ್ಲರ ಮನದಲ್ಲಿ ಮತ್ತು ಮನೆಯಲ್ಲಿ ವಿಜೃಂಭಿಸುತ್ತಲೇ ಇದೆ.
ಹಲವಾರು ಶತಮಾನಗಳ ಹಿಂದೆಯೇ ಈ ದೇಶದ ಪ್ರತಿಯೊಂದು ಹಳ್ಳಿ ಮತ್ತು ಬಡಾವಣೆಗಳಲ್ಲಿ ರಾಮ ಮಂದಿರಗಳಿತ್ತು. ಅಲ್ಲಿ ಆಂಜನೇಯ ಮತ್ತು ಸೀತಾರಾಮರ ಭಾವಚಿತ್ರಗಳು ಮತ್ತು ವಿಗ್ರಹಗಳು ಶ್ರದ್ಧೆಯಿಂದ ಪೂಜಿಸಲ್ಪಡುತ್ತಿದ್ದವು. ಯಾವುದೇ ತಾರತಮ್ಯವಿಲ್ಲದೆ ಎಲ್ಲ ವರ್ಗದ ಜನರೂ ಸೇರಿ ಭಜನೆ ಮಂದಿರದಲ್ಲಿ ಭಜನೆಯನ್ನು ಮಾಡುವುದು, ಪೂಜೆಯನ್ನು ಮಾಡುವುದು ಸಾಮಾನ್ಯವಾಗಿತ್ತು. ಇಲ್ಲಿ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳ ತರಬೇತಿಯನ್ನು ಪಡೆಯುವ ಸಾಂಸ್ಕೃತಿಕ ಕೇಂದ್ರಗಳು ಆಗಿತ್ತು. ರಾಮನವಮಿಯ ದಿನ ಪ್ರತಿಯೊಂದು ಪ್ರದೇಶದಲ್ಲೂ ಪಾನಕ, ಕೊಸಂಬರಿಗಳನ್ನು ಹಂಚುವ ಸಂಪ್ರದಾಯ ಮೊದಲಿನಿಂದಲ್ಲೂ ಇತ್ತು. ಇವೆಲ್ಲವೂ ಬಿ.ಜೆ.ಪಿ.ಯವರು ಹೇಳಿಕೊಟ್ಟಂತಹ ಸಂಸ್ಕೃತಿಯು ಅಲ್ಲ, ಅವರು ತೋರಿಸಿಕೊಟ್ಟಂತಹ ಮಾರ್ಗವೂ ಅಲ್ಲ. ಎಲ್ಲ ವರ್ಗದ ಜನ ಸಾಮರಸ್ಯದ ಸಾರದೊಂದಿಗೆ ಈ ಸಂಸ್ಕೃತಿಯನ್ನು ತಮ್ಮ ರಕ್ತಗಳಲ್ಲಿ ಅಡಕಮಾಡಿಕೊಂಡಿದ್ದಾರೆ.
‘ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ರಾಜ ಮಹಾರಾಜರ ಕಾಲದಿಂದ ಇಲ್ಲಿಯ ತನಕ ಯಾವುದೇ ಸರ್ಕಾರಗಳು ಬಂದರು ಸಹ ಒಂದು ಕಟ್ಟಡದ ಶಂಕಸ್ಥಾಪನೆ ಅಥವಾ ಉದ್ಘಾಟನೆ ಹಿಂದೂ ಸಂಪ್ರದಾಯದ ಅಡಿಯಲ್ಲಿಯೇ ನಡೆಯುತ್ತದೆ ಹೊರತು ಅಲ್ಲಿ ಯಾರು ಅನ್ಯಧರ್ಮದ ಪದ್ಧತಿಯನ್ನು ಅನುಸರಿಸುವುದೇ ಇಲ್ಲ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಾರಿಗೆ ಸಚಿವರು, ವಿಮಾನ ಯಾನ ಸಚಿವರು, ರಕ್ಷಣಾ ಸಚಿವರು ಹೀಗೆ ಎಲ್ಲ ವಿಭಾಗಗಳಲ್ಲಿ ಮಂತ್ರಿಗಳು ಅನ್ಯಧರ್ಮದವರಾದರೂ ಸಹ ಬಸ್‌ಗಳಿಗೆ, ವಿಮಾನಗಳಿಗೆ, ಹಡುಗುಗಳಿಗೆ, ನೌಕೆಗಳಿಗೆ ಪೂಜೆಯನ್ನು ಮಾಡುವುದು ಹಿಂದೂ ಸಂಪ್ರದಾಯದಲ್ಲಿಯೇ ಆಗಿರುತ್ತದೆ.
ದೇಶದಲ್ಲಿ ಅಥವಾ ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮಗಳು ಸರ್ಕಾರದಿಂದ ನಡೆಯಲಿ ಇಲ್ಲಿ ಹಿಂದೂ ಸಂಸ್ಕೃತಿಯಾದ ದೀಪ ಹಚ್ಚುವುದು, ಪ್ರಾರ್ಥನೆ ಮಾಡುವುದು ಇದ್ದೇ ಇರುತ್ತದೆ. ಇವುಗಳು ಎಂದೂ ಬದಲಾಗಿರುವುದಿಲ್ಲ. ಇದೇ ರೀತಿಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ಹಿಂದೂ ದೇವತೆಗಳ ಭಾವಚಿತ್ರಗಳು ಪ್ರತಿದಿನವೂ ವಿಶೇಷವಾಗಿ ಶುಕ್ರವಾರದ ದಿನಗಳಲ್ಲಿ ಶ್ರದ್ಧೆಯಿಂದ ಪೂಜೆಯನ್ನು ಮಾಡಿ, ಕಡಲೆಪುರಿಯನ್ನು ಹಂಚಿ, ತೆಂಗಿನಕಾಯಿಯ ಚೂರುಗಳನ್ನು ಹಂಚುತ್ತಾರೆ. ಆಯುಧಪೂಜೆಯ ದಿನ ದೇಶದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಇದರ ಆಚರಣೆ ಇದ್ದೇ ಇರುತ್ತದೆ. ವಾಹನಗಳ ಪೂಜೆ ನಡೆದೆ ನಡೆಯುತ್ತದೆ.
ಈ ದೇಶವನ್ನು ಹಲವಾರು ಶತಮಾನಗಳ ಕಾಲ ಮುಸ್ಲಿಂ ದೊರೆಗಳು ಆಳಿದರೂ ಸಹ ಇಡೀ ದೇಶದ ಜನತೆ ಮುಸ್ಲಿಂರಾಗಿ ಪರಿವರ್ತನೆಯಾಗಲೇ ಇಲ್ಲ. ಇಂದಿಗೂ ಅವರ ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆ ಶೇಕಡಾ 15ರಷ್ಟನ್ನು ಮೀರಿರುವುದಿಲ್ಲ. ಇನ್ನು ಇನ್ನೂರು ಐವತ್ತು ವರ್ಷಗಳ ಕಾಲ ಈ ದೇಶವನ್ನಾಳಿದ ಬ್ರಿಟಿಷರಿಂದಲೂ ಈ ದೇಶದ ಎಲ್ಲರನ್ನೂ ಕ್ರಿಶ್ಚಿಯನ್‌ರನ್ನಾಗಿ ಪರಿವರ್ತಿಸಲಾಗಲಿಲ್ಲ ಅಥವಾ ದೇಶದ ತುಂಬೆಲ್ಲಾ ಚರ್ಚುಗಳನ್ನು ಕಟ್ಟಲಿಲ್ಲ. ದೇಶದಲ್ಲಿ ಯಾವುದೇ ಸರ್ಕಾರಗಳಿದ್ದರೂ ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ಪೂಜೆ, ಪುನಸ್ಕಾರ ಸರ್ಕಾರದ ವತಿಯಿಂದ ಅಥವಾ ಸಾರ್ವಜನಿಕರ ವತಿಯಿಂದ ನಡೆಯುತ್ತಲೇ ಇರುತ್ತದೆ. ಮನೆ ಮನೆಗಳ ಮುಂದೆ ರಂಗೋಲಿ ಹಾಕುವ ಸಂಪ್ರದಾಯ, ಮನೆಗೆ ಹಸಿರುತೋರಣ ಕಟ್ಟುವ ಸಂಪ್ರದಾಯ, ಶುಭ ಕಾರ್ಯಗಳು, ಹಿರಿಯರ ಶ್ರಾದ್ಧ ಕಾರ್ಯಗಳು ಎಲ್ಲವೂ ಸಹ ನಿರಂತರವಾಗಿ ನಡೆಯುತ್ತಲೇ ಇದೆ. ದಿನದಿಂದ ದಿನಕ್ಕೆ ಇದರಲ್ಲಿನ ಆಸಕ್ತಿಯೂ ಹೆಚ್ಚಾಗುತ್ತಿದೆ. ಹೀಗಿದ್ದ ಮೇಲೆ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಅಬ್ಬರಿಸುವವರ ಮಾತಿನಲ್ಲಿ ಯಾವುದೇ ಅರ್ಥವಿಲ್ಲ.
ಸಹಸ್ರಾರು ವರ್ಷಗಳಿಂದ ಈ ದೇಶದ ಮಣ್ಣಿನ ಗುಣ ಹಿಂದೂ ಸಂಸ್ಕೃತಿಯನ್ನು ತನ್ನದಾಗಿಸಿಕೊಂಡು ತಲಾತಲಾಂತರದಿಂದ ರಕ್ತಗತವಾಗಿ ಆಚರಿಸಿಕೊಂಡು ಬಂದಿರುವುದರಿಂದ ಈ ರಾಷ್ಟ್ರ ಎಂದು ಬೇರೆ ಧರ್ಮದವರ ರಾಷ್ಟ್ರವಾಗಿತ್ತು. ಈ ರಾಷ್ಟ್ರದ ಹೆಗ್ಗುರುತೇ ಎಲ್ಲರನ್ನೂ ಒಳಗೊಂಡ, ಎಲ್ಲರನ್ನೂ ಪ್ರೀತಿಸುವ ಸಾಮರಸ್ಯದ ಸಾರವುಳ್ಳ ಹಿಂದೂ ಸಂಸ್ಕೃತಿಯೇ ಆಗಿರುವುದರಿಂದ ಇಂದು ಬಂದು ಈ ದೇಶವನ್ನು ನಮ್ಮಿಂದ ಪರಿವರ್ತನೆ ಮಾಡುತ್ತೇವೆ ಎನ್ನುವ ಮಾತಿನಲ್ಲಿ ಅರ್ಥವಿಲ್ಲ. ಈ ಮಾತುಗಳನ್ನಾಡುವವರು ಕೇವಲ ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು, ತಮ್ಮ ನೆಲೆಯನ್ನು ಗಟ್ಟಿ ಮಾಡಿಕೊಳ್ಳಲು ಆಡುವ ರಾಜಕಾರಣದ ಮಾತಾಗಿರುತ್ತದೆ.
ರಾಮ, ಕೃಷ್ಣ, ಈಶ್ವರ ಭಾವಚಿತ್ರಗಳಿಲ್ಲದ ಮನೆಗಳಿಲ್ಲ. ಗಣೇಶ, ಆಂಜನೇಯನ ದೇವರುಗಳಲ್ಲಿದ್ದ ಗ್ರಾಮಗಳಿಲ್ಲ, ಹಳ್ಳಿಗಳಿಲ್ಲ. ಭಗವದ್ಗೀತೆಯನ್ನು ಕೇಳದ ಅಥವಾ ಪಠಿಸದ ಕಿವಿಗಳಿಲ್ಲ. ಅದೇ ರೀತಿಯಲ್ಲಿ ಈ ದೇಶದಲ್ಲಿ ಜಾತ್ರೆಗಳು, ಊರ ಹಬ್ಬಗಳು ಇವೆಲ್ಲವೂ ಸಹ ನಮ್ಮ ಸಂಸ್ಕೃತಿಯ ಹೆಮ್ಮೆಯಾಗಿದ್ದು, ಇವುಗಳು ನಡೆಯುತ್ತಲೇ ಇದೆ. ರಾಮ, ಕೃಷ್ಣ ಯಾರೊಬ್ಬರ ಆಸ್ತಿಯೂ ಅಲ್ಲ, ಯಾರೊಬ್ಬರ ಗುತ್ತಿಗೆಗೂ ಒಳಗಾಗಿಲ್ಲ. ಬಿ.ಜೆ.ಪಿ.ಯನ್ನು ವಿರೋಧಿಸುವವರು ಹಿಂದೂ ವಿರೋಧಿಗಳಲ್ಲ, ಬಿ.ಜೆ.ಪಿ.ಯನ್ನು ವಿರೋಧಿಸುವವರ ರಾಷ್ಟ್ರದ್ರೋಹಿಗಳು ಅಲ್ಲ. ಹಿಂದೂ ಆಗಬೇಕಾದರೆ ಕೇವಲ ಬಿ.ಜೆ.ಪಿಯವರಾಗಬೇಕಿಲ್ಲ. ದೇಶಪ್ರೇಮಿ ಆಗಬೇಕಾದರೂ ಬಿ.ಜೆ.ಪಿ.ಯ ಬೆಂಬಲಿಗನಾಗಬೇಕಾಗಿಲ್ಲ. ಹಿಂದುತ್ವ ಮತ್ತು ದೇಶಭಕ್ತಿ ದೇಶದ ನಾಗರಿಕರ ಮನ ಮನದಲ್ಲಿದೆ. ರಾಜಕೀಯ ಸಿದ್ಧಾಂತಕ್ಕೂ ಇದಕ್ಕೂ ತಾಳೆ ಹಾಕಬಾರದು.
– ಕೆ.ಎಸ್. ನಾಗರಾಜ್, ಬೆಂಗಳೂರು




