ರಾಮ ಮಂದಿರ ಚಳವಳಿ ಅಥವಾ ಬಾಬರಿ ಮಸೀದಿ ಕೆಡವಿದ್ದರಿಂದ ಬಿಜೆಪಿ ಮತ್ತು ಅದರ ಮೂಲ ಸಂಘಟನೆ ಆರ್‌ಎಸ್‌ಎಸ್‌ಗೆ ಚುನಾವಣೆಗಳಲ್ಲಿ ದೊಡ್ಡ ಲಾಭ ಸಿಕ್ಕಿತು. ಇದೀಗ ಕಾಶಿ ಮತ್ತು ಮಥುರಾದ ಸರದಿ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಈ ನಡುವೆ ‘ಸೋಮನಾಥ ಸ್ವಾಭಿಮಾನ ಪರ್ವ’ ಎಂಬ ಹೊಸ ರಂಗವನ್ನು ತೆರೆದಿದ್ದಾರೆ. ಈ ಸಂದರ್ಭದಲ್ಲಿ ಧಾರ್ಮಿಕ ವೇಷಭೂಷಣಗಳಲ್ಲಿ ಸಜ್ಜಾದ ನಮ್ಮ ನಾನ್-ಬಯಾಲಾಜಿಕಲ್ ಪ್ರಧಾನಮಂತ್ರಿ ಎರಡು ಮಾತುಗಳನ್ನು ಹೇಳಿದರು. ಒಂದು ನೇರವಾಗಿ ಮತ್ತು ಇನ್ನೊಂದು ಸುತ್ತುಬಳಸು ದಾರಿಮೂಲಕ. ಮೊದಲ ಮಾತು: ಸೋಮನಾಥ ದೇವಾಲಯ ಭಾರತದ ಗೌರವದ ಪ್ರತೀಕವಾಗಿದೆ. ಮುಸ್ಲಿಂ ರಾಜರು ಅದರ ಮೇಲೆ ಪದೇಪದೇ ದಾಳಿ ಮಾಡಿದರು. ಆದರೆ ಅದು ಪ್ರತಿಬಾರಿ ಹೆಚ್ಚು ಹೆಮ್ಮೆಯೊಂದಿಗೆ ಎದ್ದು ನಿಂತಿತು. ಮಹಮದ್ ಘಜನಿ 1026ರಲ್ಲಿ ಅದನ್ನು ನಾಶಗೊಳಿಸಿ 17 ಬಾರಿ ದೋಚಿದನು. ಎರಡನೇ ಮಾತು: ಕಾಂಗ್ರೆಸ್ ಮತ್ತು ವಿಶೇಷವಾಗಿ ಜವಾಹರಲಾಲ್ ನೆಹರು ಮೇಲೆ ಪರೋಕ್ಷ ದಾಳಿಯಾಗಿತ್ತು. ಮೋದಿ ನೆಹರು ಅವರ ಮೇಲೆ (ತಮಗೆ ಅತ್ಯಂತ ಹೆಚ್ಚು ದ್ವೇಷವಿರುವ ವ್ಯಕ್ತಿ) ದೇವಾಲಯದ ಪುನರ್ನಿರ್ಮಾಣಕ್ಕೆ ವಿರೋಧಿಸಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಪೂಜಾ ಸ್ಥಳ ದೇಶ ಅಥವಾ ಅದರ ಗೌರವದ ಪ್ರತೀಕವಾಗಬಹುದು ಎಂಬುದು ಅತ್ಯಂತ ಸಂದೇಹಾಸ್ಪದ. ಧರ್ಮದ ಅತಿ ಮುಖ್ಯ ಅಂಶವೆಂದರೆ ಅದರ ನೈತಿಕ ಮೌಲ್ಯಗಳು – ಇದನ್ನು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ್ದರು.
ಮಹಮೂದ್ ಘಜನಿ ವಿಷಯಕ್ಕೆ ಬಂದರೆ, ಅವನು ಖಂಡಿತವಾಗಿಯೂ ದೇವಾಲಯವನ್ನು ದೋಚಿದ. ಅವನ ದರಬಾರಿನ ಇತಿಹಾಸಕಾರರ ಪ್ರಕಾರ ಇಸ್ಲಾಂನಲ್ಲಿ ಮೂರ್ತಿಪೂಜೆಗೆ ಅನುಮತಿ ಇಲ್ಲದ ಕಾರಣ ಅವನು ಹೀಗೆ ಮಾಡಿದ. ಆದರೆ ಫಾರ್ಸಿ ವಿದ್ವಾಂಸರು ಅಲ್ ಉತಾಬಿ ಮತ್ತು ಅಲ್ ಬರೂನಿಯವರು ಅನುಸಾರ, ಸೋಮನಾಥದಲ್ಲಿ ಭಾರೀ ಸಂಪತ್ತು ಇತ್ತು. ಮೂರ್ತಿಪೂಜೆ ಒಡೆಯುವ ಹೇಳಿಕೆ ಅತ್ಯಂತ ಸಂದೇಹಾಸ್ಪದ ಅಂಶ – ಒಂದು ವೇಳೆ ಘಜನಿಯ ಗುರಿ ಮೂರ್ತಿಗಳನ್ನು ಒಡೆಯುವುದೇ ಆಗಿದ್ದರೆ, ಘಜನಿಯಿಂದ ಸೋಮನಾಥಕ್ಕೆ ಹೋಗುವ ದಾರಿಯಲ್ಲಿರುವ ಅಸಂಖ್ಯ ಮೂರ್ತಿಗಳನ್ನು ಅವನು ಏಕೆ ಉಳಿಸಿದ?
ಘಜನಿಯ ದಾಳಿಗೆ ಹಲವು ಕಾರಣಗಳಿದ್ದವು. ಅತಿ ದೊಡ್ಡ ಕಾರಣ – ಹಣ ಮತ್ತು ಸಂಪತ್ತು. ಏಕೆಂದರೆ ಅದು ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿತ್ತು. ರೊಮಿಲಾ ಥಾಪರ್ (ಹಿಸ್ಟರಿ ಆಫ್ ಏನ್ಷಿಯಂಟ್ ಇಂಡಿಯಾ, ಪೆಂಗ್ವಿನ್) ಪ್ರಕಾರ ಅಲ್ಲಿ 20,000 ದೀನಾರ್‌ಗಳಷ್ಟು ಚಿನ್ನದ ಸಂಪತ್ತು ಇತ್ತು. ಯಾವುದೇ ವಿಶ್ವಾಸಾರ್ಹ ಮೂಲದಿಂದ ಘಜನಿ 17 ಬಾರಿ ದೋಚಿದ ಎಂಬ ಮಾಹಿತಿ ಇಲ್ಲ – ಇದು ಒಂದು ಪ್ರಚಲಿತ ಸುಳ್ಳು. ಲೂಟಿ ಮಾಡಿದ ಸಂಪತ್ತನ್ನು ಅವನು ಹಲವು ಆನೆಗಳ ಮೇಲೆ ಘಜ್ನಾಗೆ ಕೊಂಡೊಯ್ದ. ತಾರಿಖ್-ಇ-ಬೈಕಿಯ ಪ್ರಕಾರ, ಘಜ್ನಿಯ ಸೈನ್ಯದಲ್ಲಿ ತಿಲಕ್, ಸೋಂಧಿ, ಹರ್ಜನ್ ಮತ್ತು ಹಿಂದ್ ಸೇರಿದಂತೆ ಹಲವು ಹಿಂದೂ ಸೇನಾಧಿಪತಿಗಳು ಇದ್ದರು. ಘಜ್ನಿಯ ಉತ್ತರಾಧಿಕಾರಿ ಮಸೂದ್, ಮಧ್ಯ ಏಷ್ಯಾದಲ್ಲಿ ಮಸೀದಿಯನ್ನು ಲೂಟಿ ಮಾಡಲು ತನ್ನ ಜನರಲ್ ತಿಲಕ್ ನೇತೃತ್ವದಲ್ಲಿ ಸೈನ್ಯ ಕಳುಹಿಸಿದ್ದ.
ಘಜನಿ ಸೋಮನಾಥದಿಂದ ತೆರಳುವಾಗ ಸ್ಥಳೀಯ ಹಿಂದೂ ರಾಜನಿಗೆ ಅಲ್ಲಿನ ಆಡಳಿತವನ್ನು ಒಪ್ಪಿಸಿದ. ಅವನು ಸಂಸ್ಕೃತದಲ್ಲಿ ಕೆಲವು ಪದಗಳಿರುವ ನಾಣ್ಯಗಳನ್ನೂ ಬಿಡುಗಡೆ ಮಾಡಿದ. ಇಷ್ಟೇ ಅಲ್ಲದೇ ಥಾನೇಶ್ವರದ ರಾಜ ಆನಂದಪಾಲ್ ಘಜನಿಗೆ ಆನೆಗಳು ಮತ್ತು ಸೈನಿಕರನ್ನು ಕಳುಹಿಸಿ ನೆರವು ಮಾಡಿದ್ದ.
ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದಲ್ಲಿ ದೇವಾಲಯಗಳನ್ನು ನಾಶ ಮಾಡುವುದಕ್ಕೆ ಸಾಮಾನ್ಯವಾಗಿ ಧಾರ್ಮಿಕ ಕಾರಣಗಳಿರಲಿಲ್ಲ. ರಿಚರ್ಡ್ ಈಟನ್ ಅವರ ಸಂಶೋಧನೆಯ ಪ್ರಕಾರ, ಮುಗಲ್ ಪೂರ್ವ ಭಾರತದಲ್ಲಿ ರಾಜರು ಯುದ್ಧದಲ್ಲಿ ಗೆದ್ದವರು ಸೋತವರ ಕುಲದೇವತೆಯ ಮೂರ್ತಿಯನ್ನು ಒಡೆದು ಅದೇ ಸ್ಥಳದಲ್ಲಿ ತಮ್ಮ ಕುಲದೇವತೆಯನ್ನು ಸ್ಥಾಪಿಸುತ್ತಿದ್ದರು. ಮುಲ್ತಾನ್‌ನ ಅಬ್ದುಲ್ ಫತಹ್ ದಾವೂದ್ ಮತ್ತು ಖಿಲ್ಜಿ ನಡುವಿನ ಯುದ್ಧದಲ್ಲಿ ಒಂದು ಮಸೀದಿಯನ್ನು ನಾಶ ಮಾಡಲಾಯಿತು.
ರಾಜರನ್ನು ಧರ್ಮದ ಕನ್ನಡಕದಿಂದ ನೋಡುವ ಕ್ರಮ ಬ್ರಿಟಿಷರು ಭಾರತಕ್ಕೆ ಬಂದ ನಂತರ ಆರಂಭವಾಯಿತು. ಅವರು ‘ವಿಭಜಿಸಿ ಅಧಿಕಾರ ವಶಪಡಿಸಿಕೊಳ್ಳಿ’ ಕೋಮುವಾದದ ನೀತಿಯಡಿಯಲ್ಲಿ, ಭಾರತೀಯ ಇತಿಹಾಸದ ಬರವಣಿಗೆಯನ್ನು ಪ್ರಾರಂಭಿಸಿದರು. ಜೇಮ್ಸ್ ಮಿಲ್ ಅವರ ಭಾರತೀಯ ಇತಿಹಾಸದ ಕುರಿತ ಗ್ರಂಥದಿಂದ ಹಿಡಿದು ಎಲಿಯಟ್ ಮತ್ತು ಡೌಸನ್ ಅವರ ಬಹುಸಂಪುಟಗಳ ಭಾರತದ ಇತಿಹಾಸ ಆಸ್ ಟೋಲ್ಡ್ ಬೈ ಹರ್ ಹಿಸ್ಟೋರಿಯನ್ಸ್ ವರೆಗೆ, ರಾಜರ ಆಡಳಿತ ಮತ್ತು ಕಾರ್ಯಗಳನ್ನು ಅವರ ಧರ್ಮದ ಆಧಾರದ ಮೇಲೆ ನಿರ್ಣಯಿಸಲಾಯಿತು.
ಮೋದಿ ಅವರ ರಾಜಕೀಯ ಸೋಮನಾಥದ ಹೆಸರಿನಲ್ಲಿ ಹೊಸ ವಿಭಜನಾ ರಂಗವನ್ನು ತೆರೆಯುತ್ತಿದೆ. ಇದರಲ್ಲಿ ನೆಹರೂ ಅವರನ್ನು ಒಳಗೊಳ್ಳುವ ಪ್ರಯತ್ನ ನಡೆಯುತ್ತಿದೆ. ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ ನೆಹರೂ ವಿರುದ್ಧವಾಗಿದ್ದರು ಎಂದು ಮೋದಿ ನಮಗೆ ಹೇಳುತ್ತಿದ್ದಾರೆ. ಇದು ಸುಳ್ಳು. ಈ ವಿಷಯ ಮೊದಲು ಉದ್ಭವವಾದಾಗ ಗಾಂಧೀಜಿ ಜೀವಂತವಾಗಿದ್ದರು. ದೇವಾಲಯ ನಿರ್ಮಾಣಕ್ಕೆ ಸರ್ಕಾರಿ ಹಣವನ್ನು ಬಳಸಬಾರದು ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ರಾಮ ಮಂದಿರ ನಿರ್ಮಾಣದ ವಿಷಯವನ್ನು ಪರಿಗಣಿಸುವಾಗ ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ಗಾಂಧಿ, ನೆಹರೂ ಮತ್ತು ಪಟೇಲ್ ಈ ವಿಷಯದ ಬಗ್ಗೆ ಸರ್ವಾನುಮತದ ಒಪ್ಪಿಗೆಯಲ್ಲಿದ್ದರು. ನವೆಂಬರ್ 28, 1947ರಂದು ನಡೆದ ತಮ್ಮ ಪ್ರಾರ್ಥನಾ ಸಭೆಯಲ್ಲಿ, ಜುನಾಗಢ ಸರ್ಕಾರ ದೇವಾಲಯ ನಿರ್ಮಾಣಕ್ಕೆ ಯಾವುದೇ ಸರ್ಕಾರಿ ಹಣ ನೀಡಲು ಸಾಧ್ಯವಿಲ್ಲ ಎಂದು ಗಾಂಧೀಜಿ ಹೇಳಿದ್ದಾರೆ.
ಸೋಮನಾಥ ದೇವಾಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ ಯಾವುದೇ ಹಣವನ್ನು ಒದಗಿಸಲಾಗುತ್ತಿದೆಯೇ ಎಂದು ಗಾಂಧಿಯವರು ಸರ್ದಾರ್ ಪಟೇಲ್ ಅವರನ್ನು ಕೇಳಿದರು. ಪಟೇಲ್ ಅವರು ನಾನು ಜೀವಂತವಾಗಿರುವವರೆಗೂ ಅಂತಹ ಯಾವುದೇ ಹಣವನ್ನು ನೀಡಲಾಗುವುದಿಲ್ಲ ಮತ್ತು ದೇವಾಲಯವನ್ನು ಪುನರ್ನಿರ್ಮಿಸಲು ಸಾರ್ವಜನಿಕ ದೇಣಿಗೆಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಉತ್ತರಿಸಿದರು. ಅದರಂತೆ, ಸರ್ದಾರ್ ಪಟೇಲ್ ಅವರ ಅಧ್ಯಕ್ಷ್ಯತೆಯಲ್ಲಿ ಒಂದು ಟ್ರಸ್ಟ್ ಅನ್ನು ರಚಿಸಲಾಯಿತು. ಕೆ.ಎಂ.ಮುನ್ಷಿ ಮತ್ತು ಗಾಡ್ಗೀಳ್ ಅವರನ್ನು ಟ್ರಸ್ಟಿಗಳಾಗಿ ನೇಮಿಸಲಾಯಿತು. ಈ ಟ್ರಸ್ಟ್ ದೇವಾಲಯವನ್ನು ಪುನರ್ನಿಮಾಣಮಾಡಿತು.
ಈ ಸುಳ್ಳು ಪ್ರಚಾರ ಇಲ್ಲಿಗೇ ನಿಲ್ಲಲಿಲ್ಲ. ಉದ್ಘಾಟನೆಯ ವಿಷಯ ಬಂದಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರನ್ನು ಆಹ್ವಾನಿಸಲಾಯಿತು. ಅವರು ನೆಹರು ಅವರ ಅಭಿಪ್ರಾಯ ಕೋರಿದರು. 1951 ಮಾರ್ಚ್ 2ರಂದು ರಾಜೇಂದ್ರ ಪ್ರಸಾದ್ ನೆಹರು ಅವರಿಗೆ ಪತ್ರ ಬರೆದು – ವೈಯಕ್ತಿಕವಾಗಿ ಉದ್ಘಾಟನೆಗೆ ಹೋಗಲು ಬಯಸುತ್ತೇನೆ ಎಂದರು. ಅವರು ಹೋಗಲು ಬಯಸಿದರೆ ಹೋಗಲಿ ಎಂದು ನೆಹರು ಹೇಳಿದರು; ಅವರ ಆಕ್ಷೇಪಣೆ ಇರಲಿಲ್ಲ. ಮಾರ್ಚ್ 11, 1951ರಂದು ನೆಹರು ಸಿ. ರಾಜಗೋಪಾಲಾಚಾರಿಯವರಿಗೆ ಕೂಡ ಅದೇ ವಿಷಯವನ್ನು ಹೇಳಿದರು (ಪಿಯೂಷ್ ಬಬೆಲೆ ಪ್ರಕಾರ).
ಈ ಎಲ್ಲ ಮಾತುಗಳು ಸಾಕ್ಷಿಗಳನ್ನು ಆಧರಿಸಿವೆ ಎಂದು ಪಿಯೂಷ್ ಬಬೆಲೆ ಸ್ಪಷ್ಟಪಡಿಸುತ್ತಾರೆ. ಅವರು ಪ್ರಸ್ತುತ ಪ್ರಧಾನಿಯನ್ನು ಟೀಕಿಸುತ್ತಾ, ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಸ್ತುತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಮ ಮಂದಿರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಏಕೆ ಆಹ್ವಾನಿಸಲಿಲ್ಲ ಎಂದು ಪ್ರಶ್ನಿಸುತ್ತಾರೆ. ರಾಮ ಮಂದಿರದ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭಗಳಿಗೆ ಅವರನ್ನು ಆಹ್ವಾನಿಸದಿರಲು ಸ್ಪಷ್ಟ ಕಾರಣವೆಂದರೆ ಅವರಲ್ಲಿ ಒಬ್ಬರು ದಲಿತರು ಮತ್ತು ಇನ್ನೊಬ್ಬರು ಬುಡಕಟ್ಟು ಜನಾಂಗದವರು!
ಜನವರಿ 11, 2025 ರಂದು ದೆಹಲಿಯಲ್ಲಿ ನಡೆದ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಉನ್ನತ ಹುದ್ದೆಯಲ್ಲಿರುವ ಅಜಿತ್ ದೋವಲ್ ಯುವಕರಿಗೆ ನೀಡಿದ ಸಲಹೆ ತೀವ್ರ ಪ್ರತಿಗಾಮಿ ಸ್ವರೂಪದಲ್ಲಿದೆ. ಅವರ ಪ್ರಕಾರ, ನಮ್ಮ ದೇವಾಲಯಗಳನ್ನು ಲೂಟಿ ಮಾಡಲಾಯಿತು, ನಮ್ಮ ಹಳ್ಳಿಗಳನ್ನು ನಾಶಪಡಿಸಲಾಯಿತು ಮತ್ತು ಈಗ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ! ಸೇಡು ತೀರಿಸಿಕೊಳ್ಳುವುದು ಆಧುನಿಕ ನ್ಯಾಯ ವ್ಯವಸ್ಥೆಯ ಭಾಗವಲ್ಲ. ಇದು ಮಧ್ಯಕಾಲೀನ ವಿಷಯ. ಪ್ರತಿಯೊಂದು ಅಪರಾಧಕ್ಕೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ನಿರಪರಾಧಿಗಳನ್ನು ರಕ್ಷಿಸಬೇಕು. ಅಜಿತ್ ದೋವಲ್ ಉಲ್ಲೇಖಿಸುತ್ತಿರುವ ಆರೋಪಿತ ಅಪರಾಧಗಳಿಗೆ ಯಾರಿಗೆ ಯಾರು ಸೇಡು ತೀರಿಸಿಕೊಳ್ಳಬೇಕು? ಮುಸ್ಲಿಂ ಮತ್ತು ಹಿಂದೂ ರಾಜರು ನಾಶಪಡಿಸಿದ ದೇವಾಲಯಗಳಿಗೆ ಯಾರಿಗೆ ಯಾರು ಸೇಡು ತೀರಿಸಿಕೊಳ್ಳಬೇಕು? ಹಿಂದೆ ನಡೆದ ಅನೇಕ ದೌರ್ಜನ್ಯಗಳ ಬಗ್ಗೆ ಅವರು ಉಲ್ಲೇಖಿಸುವುದಿಲ್ಲ. ಬೌದ್ಧ ವಿಹಾರಗಳನ್ನು ನಾಶಪಡಿಸಲಾಯಿತು, ಜೈನ ದೇವಾಲಯಗಳನ್ನು ಧ್ವಂಸ ಮಾಡಲಾಯಿತು ಮತ್ತು ದಲಿತರು ಮತ್ತು ಮಹಿಳೆಯರನ್ನು ಕ್ರೂರವಾಗಿ ಹಿಂಸಿಸಲಾಯಿತು. ಪತಿಯ ಅಂತ್ಯಕ್ರಿಯೆಯ ಸಮಯದಲ್ಲಿ ಮಹಿಳೆಯನ್ನು ಜೀವಂತವಾಗಿ ಸುಟ್ಟುಹಾಕುವ ಸತಿ ಪದ್ಧತಿಯೂ ಪ್ರಚಲಿತವಾಗಿತ್ತು. ಇದೆಲ್ಲದಕ್ಕೂ ಯಾರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು?
ಇತಿಹಾಸ ಸಮಾಜವನ್ನು ವಿಭಜಿಸುವ ಮತ್ತು ಹಿಂದಿನ ಅನ್ಯಾಯಗಳನ್ನು ಶಾಶ್ವತಗೊಳಿಸುವ ಸಾಧನವಲ್ಲ. ಇತಿಹಾಸ ಹಿಂದೆ ಏನು ತಪ್ಪಾಗಿದೆ ಎಂಬುದನ್ನು ನಮಗೆ ಹೇಳುತ್ತದೆ ಮತ್ತು ಅದನ್ನು ಪುನರಾವರ್ತಿಸಬಾರದು. ಎಲ್ಲರೂ ಗೌರವ ಮತ್ತು ಘನತೆಯಿಂದ ವಾಸಿಸುವ ಸ್ಥಳ – ಪ್ರತಿಯೊಬ್ಬರೂ ನಾಗರಿಕರಾಗಿ ಸಮಾನ ಹಕ್ಕುಗಳನ್ನು ಹೊಂದಿರುವ ಸಮಾಜ ಎಲ್ಲರೂ ಗೌರವ ಮತ್ತು ಘನತೆಯಿಂದ ಬದುಕುವ ನ್ಯಾಯಯುತ ಸಮಾಜ ಸ್ಥಾಪಿಸುವತ್ತ ನಾವು ಮುನ್ನಡೆಯಬೇಕು.
ಇಂಗ್ಲಿಷ್ ಮೂಲ: ರಾಮ್ ಪುನಿಯಾನಿ
ಕನ್ನಡ ಅನುವಾದ: ಡಾ.ಪ್ರದೀಪ್ ಮಾಲ್ಗುಡಿ




