ಬೆಂಗಳೂರು: ಶ್ರೀ ನಿಜಗುಣಾನಂದ ಸ್ವಾಮೀಜಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್, ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆ, ಯಕ್ಷಗಾನದಲ್ಲಿ ಕೆ.ಲೀಲಾವತಿ ಬೈಪಾಡಿತ್ತಾಯ, ಸಿನಿಮಾ ಕ್ಷೇತ್ರದಲ್ಲಿ ಡಿಂಗ್ರಿ ನಾಗರಾಜ್ ಹಾಗೂ ಬ್ಯಾಂಕ್ ಜನಾರ್ಧನ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ.ನಾಗಣ್ಣ, ಸುಬ್ಬು ಹೊಲೆಯಾರ್, ಪತ್ರಿಕೋದ್ಯಮದಲ್ಲಿ ದಿನೇಶ ಅಮೀನ್‌ಮಟ್ಟು, ಮಾಯಾ ಶರ್ಮ ಸೇರಿದಂತೆ 68 ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.

ಸಾಹಿತಿ ಪ್ರೊ.ಸಿ.ನಾಗಣ್ಣ, ಖ್ಯಾತ ವೈದ್ಯ ಡಾ.ಸಿ.ರಾಮಚಂದ್ರ, ಪತ್ರಕರ್ತರಾದ ದಿನೇಶ್ ಅಮೀನ್‍ಮಟ್ಟು, ಜವರಪ್ಪ ಹಾಗೂ 10 ಸಂಘ ಸಂಸ್ಥೆಗಳಿಗೆ ಈ ಬಾರಿಯ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ನಾಡು-ನುಡಿ,ಇತಿಹಾಸ, ಕ್ರೀಡೆ, ವಿಜ್ಞಾನ, ವೈದ್ಯಕೀಯ, ರಂಗಭೂಮಿ, ಯಕ್ಷಗಾನ, ಆಡಳಿತ, ಜಾನಪದ, ಸಾಹಿತ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶಿವಮೊಗ್ಗದ ಕರ್ನಾಟಕ ಸಂಘ, ಬೆಂಗಳೂರಿನ ಮಿಥಿಕ್ ಸೊಸೈಟಿ, ದಾವಣಗೆರೆಯ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ಸೇರಿದಂತೆ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆಯಾಗಿದೆ.

ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳಿಸುತ್ತಿರುವ ಶುಭ ಸಂದರ್ಭದಲ್ಲಿ ಕರ್ನಾಟಕ 50ರ ಸಂಭ್ರಮದ ಅಂಗವಾಗಿ ಇದೇ ಮೊದಲ ಬಾರಿಗೆ 10 ಸಂಘ ಸಂಸ್ಥೆಗಳಿಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ನಾಳೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತ್ತಿತರ ಗಣ್ಯರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಪ್ರಶಸ್ತಿಯು 5 ಲಕ್ಷ ನಗದು, 25 ಗ್ರಾಂ ಬಂಗಾರ ಪದಕ, ನಾಡದೇವಿ ಭುವನೇಶ್ವರಿ ಪ್ರತಿಮೆಯನ್ನು ಒಳಗೊಂಡಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದರು.
ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಪುರಸ್ಕೃತರಲ್ಲಿ ಶತಕ ದಾಟಿದ ಇಬ್ಬರು ಇದ್ದಾರೆ. 13 ಮಹಿಳೆಯರು, 54 ಪುರುಷರು ಮತ್ತು ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದರು.




