ನಿರೀಕ್ಷಣಾ ಜಾಮೀನು ವಿಚಾರದಲ್ಲಿ ನ್ಯಾಯಾಲಯಗಳು ಕಾನೂನನ್ನು ಬಿಗಿಗೊಳಿಸಲಿ

4 months ago

ಇತ್ತೀಚಿನ ದಿನಗಳಲ್ಲಿ ದೊಡ್ಡ, ದೊಡ್ಡ ವ್ಯಕ್ತಿಗಳು ಎಂದು ಅಂದುಕೊಂಡಿರುವವರು ಅಪರಾಧಗಳನ್ನು ಮಾಡಿ ಎಫ್ಐಆರ್ ದಾಖಲಾದ ತಕ್ಷಣವೇ ಬಂಧನದ ಭೀತಿಯಿಂದ ಯಾರಿಗೂ ಸಿಗದಂತೆ ವ್ಯವಸ್ಥಿತವಾಗಿ ಮಾಯವಾಗುತ್ತಾರೆ. ತಮ್ಮಲ್ಲಿರುವ ಹಣವನ್ನ ಮತ್ತು ಪ್ರಭಾವವನ್ನು ಬಳಸಿಕೊಂಡು ಸಂತೋಷವಾಗಿಯೇ ಕಣ್ಣಿಗೆ ಕಾಣದಂತೆ ಬದುಕುತ್ತಾರೆ. ಕೂಡಲೇ ಇವರ ವಕೀಲರುಗಳು ನ್ಯಾಯಾಲಯಗಳಲ್ಲಿ ನಿರೀಕ್ಷಣಾ ಜಾಮೀನುಗಳನ್ನು ಕೋರಿ ಅರ್ಜಿಗಳನ್ನ ಸಲ್ಲಿಸುತ್ತಾರೆ. ವಾದ ವಿವಾದಗಳಾಗಿ ಇವರಿಗೆ ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ದೊರೆಯುತ್ತಿದ್ದಂತೆ, ಕೆಲವೇ ಗಂಟೆಗಳಲ್ಲಿ ಸಂಬಂಧಪಟ್ಟ  ಅಧಿಕಾರಿಗಳ ಮುಂದೆ ಪ್ರತ್ಯಕ್ಷರಾಗುತ್ತಾರೆ.

ಅಪರಾಧಗಳನ್ನ ಮಾಡಿದವರು ಈ ರೀತಿಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಅಧಿಕಾರಿಗಳ ಕೈಗೆ ಸಿಗದೆ  ತಪ್ಪಿಸಿಕೊಂಡು ನಿರೀಕ್ಷಣ ಜಾಮೀನು ದೊರೆತ ನಂತರವೇ ಕಾಣಿಸಿಕೊಳ್ಳುವುದು ನಾಟಕದಂತೆ ಕಾಣುತ್ತಿದೆ.

ಸಾಮಾನ್ಯ ಜನರು ಈ ರೀತಿಯಲ್ಲಿ ತಪ್ಪಿಸಿಕೊಂಡು ನಿರೀಕ್ಷಣ ಜಾಮೀನು, ದೊರತ ಮೇಲೆ ತನಿಖೆ ನಡೆಸುವ ಅಧಿಕಾರಿಗಳ ಮುಂದೆ ಪ್ರತ್ಯಕ್ಷವಾಗಲು ಅವಕಾಶಗಳು ಇರುವುದಿಲ್ಲ. ಆದರೆ ಉಳ್ಳವರಿಗೆ ಮಾತ್ರ ಇಂತಹ ಅವಕಾಶಗಳು ಸುಲಭವಾಗಿ ಅವರ ಪ್ರಭಾವಗಳಿಂದ ದೊರೆಯುತ್ತದೆ. ಇಂತಹ ಘಟನೆಗಳನ್ನು ಪದೇ,ಪದೇ ಗಮನಿಸುತ್ತಿರುವ ನಾಗರೀಕರ ಮನಸ್ಸಿನಲ್ಲಿ ನಿರೀಕ್ಷಣ ಜಾಮೀನಿನ ವಿಚಾರದಲ್ಲಿ ನ್ಯಾಯಾಲಯಗಳು ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿ.

ಯಾರೇ ಎಷ್ಟೇ ದೊಡ್ಡವರಾದರೂ ಎಷ್ಟೇ ಪ್ರಭಾವಿಶಾಲಿಗಳಾದರು ಎಷ್ಟೇ ಜನಪ್ರಿಯರಾದರು  ಸಹ ತಪ್ಪಿಸಿಕೊಂಡು ತಿರುಗಾಡಲು ಹಾಗೂ ನಿರೀಕ್ಷಣ ಜಾಮೀನು ಸಿಗುವ ತನಕ ಹಾಜರಾಗದೆ ಇರುವ ರೀತಿಯಲ್ಲಿ ಕಾನೂನು ಇರುವುದು ಸರಿಯಲ್ಲ ಎಂದು ಅನಿಸುತ್ತಿದೆ. ಆ ಹಿನ್ನೆಲೆಯಲ್ಲಿ ಕಾನೂನನ್ನು ಬಿಗಿಗೊಳಿಸಿ ಅಪರಾಧಿಗಳು ಯಾರೇ ಆದರೂ ಸರಿಯೇ ಸಂಬಂಧ ಪಟ್ಟ ವಿಚಾರಣಾಧಿಕಾರಿ ಮುಂದೆ ಹಾಜರಾಗದ ಹೊರತು ಜಾಮೀನಿಗೆ ಅವಕಾಶವನ್ನು ನೀಡದಂತೆ ಬಿಗಿಗೊಳಿಸಿದರೆ ಒಳ್ಳೆಯದು . ಇಲ್ಲದಿದ್ದರೆ ಇದೊಂದು ರೀತಿಯಲ್ಲಿ ಉಳ್ಳವರ ಅನುಕೂಲದ ಕಾನೂನಿನ ದಾರಿ ಎಂದು ಅನಿಸುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply