ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣದ ತನಿಖೆ ವಿಸ್ತರಿಸಲು ಎಸ್‌ಐಟಿ ಸಜ್ಜಾಗಿದೆ. ಧರ್ಮಸ್ಥಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಅನುಮಾನಾಸ್ಪದ ಸಾವುಗಳ ಬಗ್ಗೆ ಉಲ್ಲೇಖಿಸಿದ 7 ವರ್ಷಗಳ ಹಿಂದಿನ ಸಮಿತಿಯೊಂದರ ವರದಿಯನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡ ಮುಂದಾಗಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳವನ್ನು ತಡೆಯಲು ಈ ಹಿಂದೆ ರಾಜ್ಯ ಸರ್ಕಾರ ಮಾಜಿ ಶಾಸಕ ವಿ.ಎಸ್.ಉಗ್ರಪ್ಪ ಸಮಿತಿಯ ವರದಿಯನ್ನು ಇಟ್ಟುಕೊಂಡು ತನಿಖೆ ಆರಂಭಿಸಲು ತೀರ್ಮಾನಿಸಿದೆ ಎಂದು ಉನ್ನತ ಮೂಲಗಳಿಂದ ಗೊತ್ತಾಗಿದೆ.
ಉಗ್ರಪ್ಪ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಧರ್ಮಸ್ಥಳದ ಸುತ್ತಮುತ್ತ ಮಹಿಳೆಯರು ನಾಪತ್ತೆಯಾಗಿರುವ ಹಲವು ನಿದರ್ಶನಗಳನ್ನು ತನ್ನ 5,000 ಪುಟಗಳ ವರದಿಯಲ್ಲಿ ಉಲ್ಲೇಖಿಸಿದೆ.
ನಾಪತ್ತೆಯಾಗಿರುವ ಮಹಿಳೆಯರು ಹಾಗೂ ಬಾಲಕಿಯರ ಪತ್ತೆಗೆ ವಿಶೇಷ ಪೊಲೀಸ್ ಪಡೆಯನ್ನು ರಚಿಸಬೇಕು ಹಾಗೂ ಅಸಹಜ ಸಾವುಗಳ ನಿದರ್ಶನಗಳು ಅತಿ ಹೆಚ್ಚಿರುವ ಬೆಳ್ತಂಗಡಿ ತಾಲೂಕಿನಲ್ಲಿ ವಿಶೇಷ ಪೊಲೀಸ್ ಘಟಕವನ್ನು ಸ್ಥಾಪಿಸಬೇಕು ಎಂದು ಈ ಸಮಿತಿ ಶಿಫಾರಸು ಮಾಡಿದೆ.
ಉನ್ನತ ಮೂಲಗಳ ಪ್ರಕಾರ ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿದ್ದಾರೆ ಎಂದು ಹೇಳಲಾದ ಹಲವು ಪ್ರಕರಣಗಳ ಬಗ್ಗೆ ಧರ್ಮಸ್ಥಳ ಪಂಚಾಯಿತಿಯಲ್ಲಿ ದಾಖಲಾಗಿರುವ ಮಾಹಿತಿ ಪಡೆದುಕೊಂಡಿರುವ ಎಸ್ ಐಟಿ ಅವುಗಳ ಪೂರ್ವಾಪರ ಪರಿಶೀಲನೆ ಆರಂಭಿಸಿದೆ.
ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಗೋವಾದಂತಹ ರಾಜ್ಯಗಳಲ್ಲಿ ದಾಖಲಾಗಿರುವ ನಾಪತ್ತೆ ದೂರುಗಳನ್ನು ಆಧರಿಸಿ ದಾಖಲಾಗಿರುವ ಎಫ್‌ಐಆರ್ ಗಳನ್ನೂ ವಿಶೇಷ ತನಿಖಾ ತಂಡ ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ, ಅಸಹಜ ಸಾವುಗಳ ಕುರಿತು ಬುರುಡೆಯೊಂದಿಗೆ ಬಂದ ಸಾಕ್ಷಿ ದೂರುದಾರನ ಬಂಧನವಾಗಿರುವುದರಿಂದ, ವಿಶೇಷ ತನಿಖಾ ತಂಡದ ತನಿಖೆ ಅಂತ್ಯಗೊಳ್ಳಲಿದೆ ಎಂಬ ವರದಿಗಳನ್ನು ಈ ಮೂಲಗಳು ಅಲ್ಲಗಳೆದಿದ್ದು, ತನಿಖಾ ತಂಡ ಮತ್ತಷ್ಟು ಆಳಕ್ಕಿಳಿಯುವ ಸಾಧ್ಯತೆ ಇದೆ.
ಇದಲ್ಲದೆ, 1995ರಿಂದ 2014ರ ನಡುವೆ ಯಾವುದಾದರೂ ಯಾತ್ರಿಕರು ಧರ್ಮಸ್ಥಳದಲ್ಲಿ ಕಣ್ಮರೆಯಾಗಿದ್ದಾರೆಯೇ ಎಂಬ ವರದಿಗಳನ್ನೂ ವಿಶೇಷ ತನಿಖಾ ತಂಡ ಪರಿಶೀಲಿಸಲಿದೆ. ಮೂಲಗಳ ಪ್ರಕಾರ, ಹಾಲಿ ದೂರುದಾರರಲ್ಲದೆ, ಸೂಕ್ತ ಮರಣೋತ್ತರ ಪರೀಕ್ಷೆ ನಡೆಸದೆ ಅನುಮಾನಾಸ್ಪದವಾಗಿ ಹೂಳಲಾಗಿರುವ ಮೃತದೇಹಗಳ ಕುರಿತು ದಾಖಲಾಗಿರುವ ದೂರುಗಳ ಕುರಿತೂ ವಿಶೇಷ ತನಿಖಾ ತಂಡ ಪರಿಶೀಲನೆ ನಡೆಸಲಿದೆ.
ವಿಶೇಷ ತನಿಖಾ ತಂಡದ ಪ್ರಕಾರ, ಧರ್ಮಸ್ಥಳದ ಸುತ್ತಮುತ್ತ ಸಾಮೂಹಿಕ ಹತ್ಯೆಗಳು ಹಾಗೂ ಅಂತ್ಯಕ್ರಿಯೆಗಳು ನಡೆದಿವೆ ಎಂಬ ದೂರುದಾರನ ಪ್ರತಿಪಾದನೆ ಸಂಪೂರ್ಣ ಸುಳ್ಳಲ್ಲ. ಹೀಗಾಗಿ, ಈ ಪ್ರದೇಶದಲ್ಲಿ ಹೂಳಲಾಗಿರುವ ಮೃತದೇಹಗಳಿಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಜೊತೆಗೆ ತನ್ನ ತನಿಖೆಯನ್ನು ವಿಸ್ತರಿಸಲು ವಿಶೇಷ ತನಿಖಾ ತಂಡ ಮುಂದಾಗಿದೆ.




