ಅಸಹಜ ಸಾವುಗಳ ಬಗ್ಗೆ ನಡೆದಿರುವ ಎಸ್ ಐ ಟಿ ತನಿಖೆಯನ್ನು ನಿಲ್ಲಿಸುವುದಿಲ್ಲ: ಜಿ ಪರಮೇಶ್ವರ್

8 months ago

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಬಗ್ಗೆ ನಡೆದಿರುವ ಎಸ್ ಐ ಟಿ ತನಿಖೆಯನ್ನು ನಿಲ್ಲಿಸುವುದಿಲ್ಲ ಎಂದು ಘೋಷಿಸಿರುವ ಗೃಹಸಚಿವ ಡಾ. ಜಿ ಪರಮೇಶ್ವರ್, ಸದ್ಯ ಲಭ್ಯವಾಗಿರುವ ಅಸ್ತಿಪಂಜರ ಮೂಳೆ ಮತ್ತು ಮಣ್ಣಿನ ಮಾದರಿ ಪರೀಕ್ಷೆಗಳ ವರದಿ ಬರುವವರೆಗೆ ಉತ್ಖನನ ಕಾರ್ಯ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಧರ್ಮಸ್ಥಳದ ವಿದ್ಯಮಾನಗಳ ಕುರಿತಾಗಿ ನಡೆದ ಚರ್ಚೆಗೆ ಸುಧೀರ್ಘ ಉತ್ತರ ನೀಡಿದ ಅವರು, ಆರೋಪಗಳ ಕುರಿತಂತೆ ಇಲ್ಲಿಯವರೆಗೆ ತನಿಖೆ ಆರಂಭವಾಗಿಲ್ಲ. ದೂರು ನೀಡಿದ ವ್ಯಕ್ತಿ ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆ ಆಧರಿಸಿ ಉತ್ಖನನ ಕಾರ್ಯ ನಡೆಸಲಾಗಿದೆ ಎಂದರು.

ರಾಜ್ಯ ಸರ್ಕಾರ ಯಾವುದೋ ಒತ್ತಡ ಅಥವಾ ಪೂರ್ವಗ್ರಹ ಪೀಡಿತವಾಗಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿಲ್ಲ. ಸಮೂಹ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ, ಮಹಿಳಾ ಆಯೋಗದ ಅಧ್ಯಕ್ಷರು ಮಾಡಿದ ಮನವಿಯನ್ನು ಆಧರಿಸಿ ಎಸ್ ಐಟಿ ರಚಿಸಲಾಗಿದೆ ಎಂದರು.

ಧರ್ಮಸ್ಥಳ  ದೇವಸ್ಥಾನಕ್ಕೆ ಕೋಟಿ ಭಕ್ತರು ಇದ್ದಾರೆ. ಸಮಾಜದಲ್ಲಿ ಅದಕ್ಕೇ ಆದ ಸ್ಥಾನ ಇದೆ. 2025ರ ಜು.3 ರಂದು ಒಬ್ಬ ವ್ಯಕ್ತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಅದರಲ್ಲಿ ನನಗೆ ನಿರಂತರ ಪ್ರಾಣ ಬೆದರಿಕೆ ಹಾಕಿ ಧರ್ಮಸ್ಥಳ ಹಾಗೂ ಸುತ್ತಮುತ್ತ ಕೊಲೆಯಾದ ಅನೇಕ ಹೆಣ್ಣುಮಕ್ಕಳ ಶವಗಳನ್ನು ನನ್ನಿಂದ ಹೂಳಿಸಲಾಗಿದೆ ಅಂತ ವ್ಯಕ್ತಿ ದೂರು ಕೊಟ್ಟಿದ್ದಾರೆ. ಪಶ್ಚಾತ್ತಾಪದಿಂದ ದೂರು ಕೊಡುತ್ತಿರುವುದಾಗಿ ಹೇಳಿದರು. 

ಕೊಲೆಯಾದ ಅನೇಕ ಪುರುಷರು, ಅತ್ಯಾಚಾರಕ್ಕೊಳಗಾದ ಅನೇಕ ಹೆಣ್ಣುಮಕ್ಕಳ ಬಗ್ಗೆ ತನಿಖೆ ಮಾಡಿ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ದೂರು ಆಧರಿಸಿ ಎಫ್‌ಐಆರ್ ದಾಖಲಾಯಿತು ಎಂದರು.

ಆ ಬಳಿಕ ಕೋರ್ಟಿನಲ್ಲೂ ಆ ವ್ಯಕ್ತಿಯಿಂದ ಹೇಳಿಕೆ ನೀಡಲಾಯಿತು. ಮ್ಯಾಜಿಸ್ಟ್ರೇಟ್ ಅವರು ತನಿಖೆಗೆ ಆದೇಶ ಮಾಡಿದರು. ಇದರ ಬಳಿಕ ಪೊಲೀಸರಿಂದ ತನಿಖೆ ಆರಂಭಿಸಲಾಯಿತು. ಈ ಮಧ್ಯೆ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ ಬಂದಿತು. ಇದಾದ ನಂತರ ಸಿಎಂ ಚರ್ಚಿಸಿ ನಂತರ ಎಸ್‌ಐಟಿಗೆ ಆದೇಶ ಮಾಡಿದೆವು ಎಂದರು.

ಜು.19 ರಂದು ಎಸ್‌ಐಟಿ ರಚಿಸಲಾಗಿದೆ. ಧರ್ಮಸ್ಥಳ ಪೊಲೀಸರ ವ್ಯಾಪ್ತಿಯಲ್ಲಿ ಇದ್ದ ಕೇಸ್ ಎಸ್‌ಐಟಿಗೆ ವರ್ಗಾವಣೆಯಾಗಿದೆ. ಎಸ್‌ಐಟಿಯವರು ಮತ್ತೆ ಆ ವ್ಯಕ್ತಿ ಕರೆದು ಹೇಳಿಕೆ ಪಡೆಯುತ್ತಾರೆ. ಅದರಲ್ಲಿ ಎಲ್ಲೆಲ್ಲಿ ಶವ ಹೂತು ಹಾಕಿದ್ದ ಅಂತ ಹೇಳುತ್ತಾರೆ. ಆತ ಹೇಳಿದ ಪಾಯಿಂಟ್‌ಗಳ ಮ್ಯಾಪ್ ಹಾಕಿಕೊಳ್ತಾರೆ. ಅಸ್ಥಿಪಂಜರಗಳನ್ನು ತೆಗೆಯಲು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯುತ್ತದೆ. ಎರಡು ಜಾಗಗಳಲ್ಲಿ ಅಸ್ಥಿಪಂಜರ ಸಿಗುತ್ತದೆ. ಒಂದರಲ್ಲಿ ಅಸ್ಥಿಪಂಜರ ಸಿಗುತ್ತೆ, ಅದನ್ನು ಎಫ್‌ಎಸ್‌ಎಲ್‌ಗೆ ಕಳಿಸಿಕೊಡ್ತಾರೆ. ಎರಡನೇ ಜಾಗದಲ್ಲೂ ಒಂದಷ್ಟು ಮೂಳೆಗಳು ಸಿಗ್ತವೆ, ಅದನ್ನೂ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ ಎಂದು ಸದನಕ್ಕೆ ವಿವರ ನೀಡಿದರು.

ಇನ್ನೊಂದಷ್ಟು ಕಡೆಯೂ ಮಣ್ಣು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿದೆ. ಅಸ್ಥಿಪಂಜರದ ಪರಿಶೀಲನೆ ಆಗಬೇಕು, ಸ್ಯಾಂಪಲ್‌ಗಳ ಅನಾಲಿಸಿಸ್ ಆಗಬೇಕು. ಆಗ ಮಾತ್ರ ತನಿಖೆ ಪ್ರಾರಂಭ ಆಗಿದೆ ಅಂತ ಹೇಳಬಹುದು. ಇನ್ನೂ ಎಫ್‌ಎಸ್‌ಎಲ್ ವರದಿ ಬಂದಿಲ್ಲ, ವರದಿ ಬಂದನಂತರ ಮುಂದಿನ ತನಿಖೆ. ಇಲ್ಲಿಯವರೆಗೆ ಆಗಿರೋದು ಉತ್ಖನನ ಅಷ್ಟೇ, ತನಿಖೆ ಅಲ್ಲ ಎಂದರು.

ಇದರ ಜೊತೆಗೆ ಇತರ ಕಡೆ ನಡೆದಿರುವ ಉತ್ಖನನದ ಮಣ್ಣಿನ ಮಾದರಿಯ ಪರಿಶೀಲನೆಗೆ ಕಳುಹಿಸಲಾಗಿದೆ. ಅದರ ವಿಶ್ಲೇಷಣೆ ಬರುವವರೆಗೆ ಉತ್ಖನನ ಮಾಡುವುದಿಲ್ಲ. ವರದಿ ಬಂದ ನಂತರ ತನಿಖೆ ನಡೆಯಲಿದೆ ಎಂದರು.

ತನಿಖೆಯ ನಂತರ ಸತ್ಯಾಂಶ ಹೊರಬೀಳಲಿದೆ. ಯಾವುದೇ ಕೊಲೆ ಅತ್ಯಾಚಾರ ನಡೆದಿಲ್ಲ ಎಂಬ ವರದಿ ಬಂದರೆ ಧರ್ಮಸ್ಥಳದ ಬಗ್ಗೆ ಇರುವ ಎಲ್ಲಾ ಅಪನಂಬಿಕೆಗಳು ದೂರಾಗಲಿವೆ. ಒಂದು ವೇಳೆ ನಡೆದಿದೆ ಎಂದಾದರೆ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಲಿದೆ. ಸರ್ಕಾರ ಈ ವಿಷಯದಲ್ಲಿ ಪೂರ್ವಗ್ರಹ ಪೀಡಿತವಾಗಿಲ್ಲ. ಯಾವುದೇ ಒತ್ತಡಗಳಿಗೆ ಮಣಿದಿಲ್ಲ. ತನಿಖಾ ತಂಡಕ್ಕೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ ಎಂದರು.

Leave a Reply