ನಿಘಂಟು ಬ್ರಹ್ಮ ಜಿ.ವೆಂಕಟಸುಬ್ಬಯ್ಯ ಜನ್ಮದಿನ
1913ರ ಆಗಸ್ಟ್ 23 ರಂದು ಹುಟ್ಟಿದ ನಿಘಂಟು ಬ್ರಹ್ಮ ಜಿ.ವೆಂಕಟಸುಬ್ಬಯ್ಯ, 2021ರ ಏಪ್ರಿಲ್ 19ರಂದು ತಮ್ಮ 108 ವರ್ಷಗಳ ಸಾರ್ಥಕ ಬದುಕು ನಡೆಸಿ ನಮ್ಮನ್ನು ಅಗಲಿದ್ದಾರೆ. ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ನಮ್ಮೆಲ್ಲರ ನಾಯಕರಾಗಿದ್ದ ಶ್ರೀ ವಿ ಎಸ್ ಕೃಷ್ಣ ಅಯ್ಯರ್ ರವರು ಇದ್ದಾಗ ಒಂದು ಸಂಪ್ರದಾಯವನ್ನು ಅವರು ಹಾಕಿಕೊಟ್ಟಿದ್ದರು. ಕವಿ ನಿಸಾರ್ ಅಹಮದ್, ಜಿ ಎಸ್ ಶಿವರುದ್ರಪ್ಪ, ಲೇಖಕರಾದ ಬರಗೂರು ರಾಮಚಂದ್ರಪ್ಪ, ಸಾಹಿತಿ ಎಲ್ ಎಸ್ ಶೇಷಗಿರಿರಾಯರು ಮುಂತಾದವರ ಹುಟ್ಟು ಹಬ್ಬದ ದಿನಗಳಂದು ನಮ್ಮಂತಹ ಅನೇಕ ಜನರನ್ನು ತಮ್ಮೊಂದಿಗೆ ಕರೆದುಕೊಂಡು ಅವರ ಮನೆಗಳಿಗೆ ಹೋಗಿ, ಅವರಿಗೆ ಶುಭವನ್ನ ಕೋರುವಂತಹ ಕೆಲಸವನ್ನು ಮಾಡುವುದರ ಜೊತೆಗೆ, ಯಾವುದಾದರೂ ಸಾಹಿತಿಗಳು, ಕಲಾವಿದರು ಮುಂತಾದವರಿಗೆ ವಿಶೇಷವಾದ ಪ್ರಶಸ್ತಿ ಪುರಸ್ಕಾರಗಳು ದೊರೆತಾಕಾಗಲು ಅವರ ಮನೆಗಳಿಗೆ ಹೋಗಿ ಗೌರವಿಸುವಂತಹ ಸಂಪ್ರದಾಯವನ್ನು ಹಾಕಿಕೊಟ್ಟಿದ್ದರು. ಹೀಗಾಗಿ ವೆಂಕಟಸುಬ್ಬಯ್ಯನವರ ಮನೆಗೆ ಹಲವಾರು ವರ್ಷಗಳ ಕಾಲ ಅವರ ಹುಟ್ಟು ಹಬ್ಬದ ದಿನದಂದು ಹೋಗಿ ಅವರನ್ನು ಹತ್ತಿರದಿಂದ ನೋಡಿ, ಅವರ ಮಾತುಗಳನ್ನು ಕೇಳುವ ಅವಕಾಶ ನಮಗೆಲ್ಲ ದೊರೆತಿತ್ತು.
- ಸ್ಕಾಲರ್ಶಿಪ್ ಪಡೆಯಲು ಆದಾಯ ಪ್ರಮಾಣ ಪತ್ರದ ವಿಚಾರದ ಗೊಂದಲ ಸರಿಪಡಿಸಿ
- ನಿಘಂಟು ಬ್ರಹ್ಮ ಜಿ.ವೆಂಕಟಸುಬ್ಬಯ್ಯ
- ದಾವಣಗೆರೆ ನಗರದ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ
- ಸೋಮನಾಥ ದೇಗುಲದ ಲೂಟಿಯಿಂದ ಅಯೋಧ್ಯೆಯ ‘ಚಂದಾಗಳವು’ವರೆಗೆ
- ಶಿವಾನಂದ ತಗಡೂರು; ಅಕಾಡೆಮಿ ಪ್ರಶಸ್ತಿ ಮೀರಿದ ವ್ಯಕ್ತಿತ್ವ
ಬಸವನಗುಡಿಯಲ್ಲಿ ಇರುವಂತಹ ಬಸವನಗುಡಿ ಸೊಸೈಟಿಯ ಶತಮಾನೋತ್ಸವ ಸಮಾರಂಭವನ್ನು ನ್ಯಾಷನಲ್ ಹೈಸ್ಕೂಲ್, ಮೈದಾನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉದ್ಘಾಟಕರಾಗಿ ವೆಂಕಟಸುಬ್ಬಯ್ಯನವರು ವೇದಿಕೆ ಮೇಲಿದ್ದರು. ಮುಖ್ಯಮಂತ್ರಿಗಳು ವೆಂಕಟಸುಬ್ಬಯ್ಯನವರನ್ನು ನಿಮ್ಮ ಕಣ್ಣಿನ ದೃಷ್ಟಿ ಹೇಗಿದೆ ಎಂದು ಪ್ರಶ್ನಿಸಿ ಕುತೂಹಲದಿಂದ ಅವರ ಉತ್ತರಕ್ಕೆ ಕಾಯುತ್ತಿದ್ದರು. ಅದಕ್ಕೆ ವೆಂಕಟಸುಬ್ಬಯ್ಯನವರ ಉತ್ತರವನ್ನು ಕೇಳಿ ಸಿದ್ದರಾಮಯ್ಯನವರು ಆಶ್ಚರ್ಯಗೊಂಡರು. ಸಣ್ಣ ಅಕ್ಷರಗಳಷ್ಟೇ ಕಾಣುತ್ತಿಲ್ಲ, ಉಳಿದಂತೆ ತೊಂದರೆ ಇಲ್ಲ ಎಂದರು. ಆಗ ಸಿದ್ದರಾಮಯ್ಯನವರು ಈ ವಯಸ್ಸಿನಲ್ಲೂ ಇಷ್ಟೊಂದು ಕಣ್ಣಿನ ದೃಷ್ಟಿ ನಿಮಗೆ ಚೆನ್ನಾಗಿರುವ ನೀವೇ ಧನ್ಯರು ಎಂದು ನಗುತ್ತಾ ಹೇಳಿದರು. ತಮ್ಮ 102 ವಯಸ್ಸಿನಲ್ಲಿ ಅವರು ಹೇಳಿದ ಮಾತು ಅವರ ಆರೋಗ್ಯವಂತ ಮನಸ್ಸು ಮತ್ತು ದೇಹಕ್ಕೆ ಸಾಕ್ಷಿಯಾಗಿತ್ತು. ನೂರು ವರ್ಷ ದಾಟಿದ ಮೇಲು ಹಲವಾರು ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ವೇದಿಕೆಗಳಲ್ಲಿ ನಿಂತು ಭಾಷಣ ಮಾಡುತ್ತಿದ್ದರು.
ತಮ್ಮ ಆರೋಗ್ಯದ ಗುಟ್ಟು ಏನು ಎಂದು ಒಮ್ಮೆ ವಿ ಎಸ್ ಕೃಷ್ಣ ಅಯ್ಯರ್ ಕೇಳಿದಾಗ, ಅವರು ಹೇಳಿದ ಮಾತು ಹೀಗಿತ್ತು: ನಮ್ಮ ತಂದೆ, ತಾಯಿ, ಕೊಟ್ಟ ರಕ್ತವನ್ನು ಕೆಡಿಸಿಕೊಳ್ಳದೆ ಉಳಿಸಿಕೊಂಡಿರುವುದೇ ಆರೋಗ್ಯದ ಗುಟ್ಟು ಎಂದರು.
ಕನ್ನಡ ಸಾಹಿತ್ಯಕ್ಕೆ ಹತ್ತಾರು ಸಂಪುಟಗಳ ನಿಘಂಟುಗಳನ್ನು ನೀಡಿರುವ ಇವರ ಕೊಡುಗೆ ಅಪಾರ. ಪ್ರಜಾವಾಣಿ ಪತ್ರಿಕೆಯಲ್ಲಿ ಇಗೋ ಕನ್ನಡ ಎಂಬ ಇವರ ಕನ್ನಡ ಪದಗಳ ಅರ್ಥ ತಿಳಿಸುವ ಭಾಗವನ್ನು ಪ್ರತಿಯೊಬ್ಬರೂ ಓದುತ್ತಲೇ ಇದ್ದರು.
ನಾಡೋಜ ಪ್ರಶಸ್ತಿಯನ್ನು ಪಡೆದಿರುವ ಇವರಿಗೆ, ಕೇಂದ್ರ ಸರ್ಕಾರ 2017ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೊತೆಗೆ 2011ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪ್ರಾಚೀನ ಸಾಹಿತ್ಯ ಅಧ್ಯಯನಾಕಾರರು ಸಹ ಆಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ರಾಜ್ಯ ಕಂಡಂತಹ ಅತ್ಯುತ್ತಮ ಅನುವಾದಕರು ಎಂಬ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಇವರು ಬದುಕಿನ ಅಂತಿಮ ಕ್ಷಣದ ತನಕ ಅತ್ಯಂತ ಲವಲವಿಕೆಯಿಂದ, ಆರೋಗ್ಯಪೂರ್ಣವಾಗಿ, ಸಾರ್ಥಕತೆಯ ಬದುಕನ್ನು ನಡೆಸಿದ್ದಾರೆ. ಇವರ ಮುಖದಲ್ಲಿ ಸದಾಕಾಲ ನಗು ತುಂಬಿರುತ್ತಿತ್ತು. ಇವರನ್ನು ಕಂಡವರಿಗೆ ಇವರೊಂದಿಗೆ ಮಾತನಾಡಿದವರಿಗೆ ಇವರು ಸ್ಪೂರ್ತಿಯ ಚಿಲುಮೆಯಾಗುತ್ತಿದ್ದರು.
– ಕೆ.ಎಸ್.ನಾಗರಾಜ್, ಬೆಂಗಳೂರು
