ನಿಘಂಟು ಬ್ರಹ್ಮರಿಗೆ 112ನೇ ಜನ್ಮದಿನ

2 years ago

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನೇಕರು ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಿರುತ್ತಾರೆ. ಇವು ಇವರಲ್ಲಿ ಕವಿಗಳು, ಸಾಹಿತಿಗಳು, ವಿಮರ್ಶಕರು, ನಾಟಕಕಾರರು, ಕಾದಂಬರಿಕಾರರು ಇವರೆಲ್ಲರೂ ಸೇರಿ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಇಂತಹ ಕನ್ನಡ ನಾಡಿನ ಶ್ರೇಷ್ಠರ ಸಾಲಿಗೆ ಸೇರಿದ ಮತ್ತೊಬ್ಬ ಮಹಾನ್ ವ್ಯಕ್ತಿ ಪ್ರೊಫೆಸರ್ ವೆಂಕಟಸುಬ್ಬಯ್ಯ‌.

1913ರ ಆಗಸ್ಟ್ 23ರಂದು ಮೈಸೂರಿನಲ್ಲಿ ಸಂಸ್ಕೃತ ವಿದ್ವಾಂಸರಾದ ತಿರುಮಲಯ್ಯನವರ ಪುತ್ರರಾಗಿ ಜನಿಸಿರುತ್ತಾರೆ. ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ, ಮಹಾರಾಜ ಕಾಲೇಜಿನಲ್ಲಿ ಪದವಿಯನ್ನು ಪಡೆದು, ನಂತರ ಅಲ್ಲಿಗೆ ಉನ್ನತ ಶಿಕ್ಷಣವನ್ನು ಮಾಡಿ, ಕನ್ನಡದ ಶ್ರೇಷ್ಠ ಸಾಹಿತಿಗಳು ಬರಹಗಾರರಾಗಿ ರೂಪಗೊಂಡಿರುತ್ತಾರೆ.

ಇವರ ಮೇಲೆ ಕುವೆಂಪುರವರ ಪ್ರಭಾವ ಹೆಚ್ಚಾಗಿ ಬೀರಿರುತ್ತದೆ. ಬಿ ಎಂ ಶ್ರೀಕಂಠಯ್ಯನವರು ಇವರ ಮಾರ್ಗದರ್ಶಕರಾಗಿದ್ದರು. 1932ರಲ್ಲಿ ಪದವಿ ಪಡೆದ ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿಯೇ ಪ್ರಾಧ್ಯಾಪಕರಾಗಿ ಕನ್ನಡ ಭಾಷೆಯನ್ನ ಬೋಧಿಸಲು ಆರಂಭಿಸಿದರು. ನಂತರ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತಿಯಾದರು.

ಇವರಿಗೆ ಬಿಎಂ ಶ್ರೀಕಂಠಯ್ಯ, ಟಿಎಸ್ ವೆಂಕಣ್ಣಯ್ಯ, ನರಸಿಂಹಾಚಾರ್ ಹೀಗೆ ದೊಡ್ಡ ಗುರು ಪರಂಪರೆ ದೊರೆತಿತು. ಇದರಿಂದಾಗಿ ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ಮಾರ್ಗದಲ್ಲಿ ಸಾಗಿ ದೊಡ್ಡ ಹೆಸರನ್ನು ಮಾಡಿದರು.

ಇವರನ್ನು ನಿಘಂಟು ಬ್ರಹ್ಮ ಎಂದು ಕರೆಯಲು ಹಲವಾರು ಕಾರಣಗಳಿವೆ. ಇವರು ಹತ್ತಕ್ಕೂ ಹೆಚ್ಚು ನಿಘಂಟು ಸಂಪುಟ, ಹೊರಬರಲು ಶ್ರಮಿಸಿರುತ್ತಾರೆ. ಇದಲ್ಲದೆ ನಾಡಿನ ಹೆಸರಾಂತ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಇಗೋ ಕನ್ನಡ ಎಂಬ ಶೀರ್ಷಿಕೆ ಅಡಿಯಲ್ಲಿ ಕಠಿಣವಾದ ಪದಗಳಿಗೆ ಅರ್ಥವನ್ನು ನೀಡಿರುತ್ತಾರೆ.

1974ರ ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ತದನಂತರ 2011ರಲ್ಲಿ ಬೆಂಗಳೂರಿನಲ್ಲಿ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಇವರ ಅಮೋಘವಾದ ಅಧ್ಯಕ್ಷೀಯ ಭಾಷಣದ ಮೂಲಕ ಕನ್ನಡ ಬೆಳವಣಿಗೆಗೆ ಹೊಸ ಬೆಳಕನ್ನು ಚೆಲ್ಲಿರುತ್ತಾರೆ.

ಇವರ ಸೇವೆಯನ್ನು ಗುರುತಿಸಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು, ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ,ಪದ್ಮಭೂಷಣ ಹೀಗೆ ಅನೇಕ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿ ಪಂಪ ಪ್ರಶಸ್ತಿಯನ್ನು ಸಹ ಇವರಿಗೆ ನೀಡಿ ಇವರ ಸಾಧನೆಯನ್ನ ಕೃತಜ್ಞತಾ ಭಾವದಿಂದ ಸರ್ಕಾರಗಳು ನೆನಪಿಸಿಕೊಂಡಿವೆ.

ನೂರು ವರ್ಷಗಳ ಮೇಲೆಯೂ ಸಹ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗುವುದು, ಹಾಜರಾಗುವುದಲ್ಲದೆ ನಿಂತು, ಭಾಷಣವನ್ನು ಮಾಡುವುದು ಅದು ಅರ್ಥ ತುಂಬಿದ ಮಾತುಗಳಿಂದ ಇವರ ಭಾಷಣಗಳು ಎಲ್ಲರನ್ನೂ ಆಕರ್ಷಿಸುತ್ತಿದ್ದು, ಇವರ 102ನೇ ವರ್ಷದ ಸಂದರ್ಭದಲ್ಲಿ ಬಸವನಗುಡಿಯ ಸಹಕಾರಿ ಸಂಸ್ಥೆ ಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಇವರನ್ನ ಕರೆಸಿ ಗೌರವಿಸಿದೆ. ಈ ಸಂದರ್ಭದಲ್ಲಿ ಅಂದು ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಇವರ ಲವಲವಿಕೆ ಮತ್ತು ಆರೋಗ್ಯವನ್ನು ಅತ್ಯಂತ ಕುತೂಹಲದಿಂದ ಗಮನಿಸಿ ಇವರಲ್ಲಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ, ನಿಮ್ಮ ಆರೋಗ್ಯ ಹೇಗಿದೆ ಎಂದು. ಅದಕ್ಕೆ ವೆಂಕಟಸುಬ್ಬಯ್ಯನವರು ಹೇಳಿದ ಉತ್ತರ ಕೇಳಿ ಸಿದ್ದರಾಮಯ್ಯನವರಿಗೆ ನಗು ಬಂದಿತು. ಅದೇನೆಂದರೆ ನನಗೆ ಸಣ್ಣ ಅಕ್ಷರಗಳು ಅಷ್ಟೇ ಕಾಣುತ್ತಿಲ್ಲ, ಎಂದು ನೂರು ದಾಟಿದ ಮೇಲೆ ಹೇಳುತ್ತಿದ್ದಾರೆ. ಆಗ ಸಿದ್ದರಾಮಯ್ಯನವರು ನಿಮಗೆ ಸಣ್ಣ ಅಕ್ಷರ ಕಾಣುವುದಿಲ್ಲ. ಈ ವಯಸ್ಸಿನಲ್ಲಿ ನಮಗೆ ದೊಡ್ಡ ಅಕ್ಷರವೇ ಕಾಣುವುದಿಲ್ಲ. ನೀವೇ ಪುಣ್ಯಾತ್ಮರು ಎಂದು ಸಂತೋಷದಿಂದ ಇವರ ಕಡೆ ತಿರುಗಿ ಮಾತನಾಡಿದರು.

ನೂರು ವರ್ಷ ದಾಟಿದ ಮೇಲೂ ಸಹ ಅನೇಕ ಕಾರ್ಯಕ್ರಮಗಳಿಗೆ ಹೋಗಿ ಅವರೊಂದಿಗೆ ಬೆರೆತು ತೃಪ್ತಿಯಾಗುವಷ್ಟು ಊಟವನ್ನು ಮಾಡಿ ಬದುಕನ್ನ ಆನಂದಿಸುತ್ತಿದ್ದರು. ಇವರ ಉತ್ಸಾಹವನ್ನು ಕಂಡು ಅನೇಕ ಮಂದಿ ಅಚ್ಚರಿ ಪಡುತ್ತಿದ್ದರು.

ವಿಶೇಷವಾಗಿ ಕನ್ನಡದ ನಿಘಂಟು ಕ್ಷೇತ್ರದಲ್ಲಿ ಇವರು ಆಡಳಿತಗಾರರಿಗೆ ಬೇಕಾದ ಪದಗಳಿಗೆ ಅರ್ಥ, ವೈಜ್ಞಾನಿಕ ಪದಗಳಿಗೆ ಅರ್ಥ ಹೀಗೆ ಅನೇಕ ಪ್ರಕಾರದಲ್ಲಿ ನಿಘಂಟುಗಳನ್ನ ಒದಗಿಸಿಕೊಟ್ಟಿರುತ್ತಾರೆ. ಇಂದಿಗೂ ಸಹ ಕನ್ನಡ ಭಾಷೆಯಲ್ಲಿ ಯಾವುದಾದರೂ ಕಠಿಣವಾದ ಪದಗಳು ಇದ್ದು ಅದಕ್ಕೆ ಅರ್ಥವನ್ನು ಹುಡುಕುವುದು ಪ್ರೊಫೆಸರ್ ವೆಂಕಟಸುಬ್ಬಯ್ಯನವರು ಸಂಪಾದಿಸಿರುವ ನಿಘಂಟುಗಳ ಮೂಲಕವೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಇವರ ಸಾಧನೆ ದೊಡ್ಡದು. ಅತ್ಯುತ್ತಮ ವಿಮರ್ಶಕರು ಆಗಿದ್ದ ಇವರು ಹಲವಾರು ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಹಲವಾರು ಪುಸ್ತಕಗಳಿಗೆ ಸಂಪಾದಕರಾಗಿ ದುಡಿದಿದ್ದಾರೆ.

ಏಪ್ರಿಲ್ 19 2021 ರಂದು ರಂದು ರಂದು ನಿಧನರಾಗಿರುತ್ತಾರೆ. ಇವರ ಸುದೀರ್ಘವಾದ ಆರೋಗ್ಯ ಪೂರ್ಣವಾದ ಬದುಕಿಗೆ ಇವರು ಕೊಡುತ್ತಿದ್ದ ಕಾರಣ ಯಾವ ಮನುಷ್ಯ ರಾಗ, ದ್ವೇಷ, ಅಸೂಯೆಗಳಿಲ್ಲದೆ ಬದುಕುತ್ತಾರೋ ಅವರು ಹೆಚ್ಚು ವರ್ಷಗಳ ಕಾಲ ಆರೋಗ್ಯ ಪೂರ್ಣವಾಗಿ ಬದುಕಬಹುದು. ಜೊತೆಗೆ ತಂದೆ ಕೊಟ್ಟ ರಕ್ತವನ್ನ ಕೆಡಿಸಿಕೊಳ್ಳದ ಹಾಗೆ ಕಾಪಾಡಿಕೊಂಡರೆ, ತಮ್ಮಂತೆ, ಆರೋಗ್ಯಪೂರ್ಣವಾಗಿ ನೆಮ್ಮದಿಯಿಂದ ಬದುಕಬಹುದೆಂದು ಅನೇಕ ಬಾರಿ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಆರೋಗ್ಯದ ಗುಟ್ಟು ಕೇಳಿದವರಿಗೆ ಇವರು ನೀಡಿದ ಉತ್ತರಗಳಾಗಿರುತ್ತಿತ್ತು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply