ಶಿವಾನಂದ ತಗಡೂರು; ಅಕಾಡೆಮಿ ಪ್ರಶಸ್ತಿ ಮೀರಿದ ವ್ಯಕ್ತಿತ್ವ

49 minutes ago

ಪ್ರತಿ ಸಲದಂತೆ ಈ ಬಾರಿಯೂ ನಾಟಕ ಅಕಾಡೆಮಿ ಪ್ರಕಟಿಸಿದ ಪ್ರಶಸ್ತಿ ಪಟ್ಟಿಗೆ ಆಕ್ಷೇಪಗಳು ವ್ಯಕ್ತವಾಗಿವೆ. ಬಲಪಂಥೀಯ ಆರೆಸ್ಸೆಸ್ ಬಿಜೆಪಿ ಬೆಂಬಲಿಗರಿಗೂ ಪ್ರಶಸ್ತಿ ಕೊಡಲಾಗಿದೆ ಎಂಬುದು ಮೊದಲ ಆಕ್ಷೇಪ. ಪತ್ರಕರ್ತ ಶಿವಾನಂದ ತಗಡೂರರವರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಎರಡನೇ ತಕರಾರು. ಬಲಪಂಥೀಯ ಸಿದ್ಧಾಂತದ ಪ್ರತಿಪಾದಕರಿಗೆ ಪ್ರಶಸ್ತಿ ಕೊಡಬಾರದಿತ್ತು ಎನ್ನುವ ಅಸಮಾಧಾನದ ನಡುವೆಯೂ ಹಾಗೆ ಪ್ರಶಸ್ತಿ ಪಡೆದವರು ರಂಗಭೂಮಿಯಲ್ಲಿ ತೊಡಗಿಸಿಕೊಂಡವರೇ ಎಂಬುದು ಸಣ್ಣ ಸಮಾಧಾನ.

ಶಿವಾನಂದ ತಗಡೂರುರವರು ಕರ್ನಾಟಕ ಕಾರ್ಯನಿರತ ಪರ್ತಕರ್ತ ಸಂಘದ (KUWJ) ಅಧ್ಯಕ್ಷರಾಗಿದ್ದು, ಪಾರ್ಟ್ ಟೈಂ ರಂಗಸಂಘಟಕ ಹಾಗೂ ಪುಲ್ ಟೈಂ ಪರ್ತಕರ್ತ ಎಂಬುದು ಸತ್ಯ.  ಪತ್ರಿಕೋದ್ಯಮದ  ಕಾರ್ಯಚಟುವಟಿಕೆಗಳಲ್ಲಿ ತಗಡೂರುರವರು ಹೆಚ್ಚು ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದರಿಂದ ಅವರು ಮಾಡಿದ್ದರು ಎನ್ನಲಾದ ರಂಗಕೈಂಕರ್ಯಗಳು ಹಿನ್ನೆಲೆಗೆ ಸರಿದಿವೆ. ಹೀಗಾಗಿ ಪತ್ರಕರ್ತರಿಗೇಕೆ ರಂಗಪ್ರಶಸ್ತಿ ಎನ್ನುವ ಪ್ರಶ್ನೆ ಕೇಳಲ್ಪಡುತ್ತಿದೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ತಗಡೂರು ಗ್ರಾಮದ ಶಿವಾನಂದ ತಗಡೂರುರವರು ಎಪ್ಪತ್ತರ ದಶಕದಲ್ಲಿ ಆರಂಭವಾಗಿದ್ದ ಸಾಕ್ಷರತಾ ಆಂದೋಲನದಲ್ಲಿ ಹಾಸನ ಜಿಲ್ಲಾ ಸಾಕ್ಷರತಾ ಆಂದೋಲನ ಸಮಿತಿ ಸಂಚಾಲಕರಾಗಿದ್ದರು. ಆಗ ಬೀದಿ ನಾಟಕಗಳ ಮೂಲಕ 800ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಕ್ಷರ ಜಾಗೃತಿ ಮಾಡಿದ್ದರು. ಬಾಗೂರು ನವಿಲೆ ಸುರಂಗ ಸಂತ್ರಸ್ತರ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಹಾಸನ ಜಿಲ್ಲಾ ನೀರಾವರಿ ಹೋರಾಟ ಸಮಿತಿ, ರೈತ ಹಿತರಕ್ಷಣಾ ಸಮಿತಿಯಲ್ಲಿ ಸಂಚಾಲಕರಾಗಿದ್ದರು. ಹಾಸನದಲ್ಲಿ ‘ರಂಗಸಿರಿ’ ತಂಡವನ್ನು ಕಟ್ಟಿಕೊಂಡು ರಂಗಸಂಘಟನೆಯನ್ನೂ ಮಾಡಿದ್ದರು. ಈಗಲೂ ಈ ತಂಡ ಹಾಸನದಲ್ಲಿ ಯಾವಾಗಾದರೊಮ್ಮೆ ಷಾಡ್ರಾಕ್ ಮತ್ತು ಸ್ವಾಮಿ ಎನ್ನುವವರ ನಾಯಕತ್ವದಲ್ಲಿ ಕಾಲೇಜು ರಂಗೋತ್ಸವ ಆಯೋಜಿಸುತ್ತದೆ. ಅದಕ್ಕೆ ತಗಡೂರುರವರ ಬೆಂಬಲವೂ ಇರುತ್ತದೆ.

ಆದರೆ ತಗಡೂರರಿಗೆ ರಾಜ್ಯಾದ್ಯಂತ ಐಡೆಂಟಿಟಿ ತಂದುಕೊಟ್ಟಿದ್ದು ಕನ್ನಡ ಪತ್ರಿಕೋದ್ಯಮ. ಅದರಲ್ಲೂ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾದ ನಂತರ ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಹೆಚ್ಚು ಪರಿಶ್ರಮವಹಿಸಿದ್ದಾರೆ.

2004ರಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾಗ ಸುಸಜ್ಜಿತವಾದ ಪತ್ರಕರ್ತರ ಭವನ ನಿರ್ಮಾಣ ಮಾಡಿದ್ದರು. ಬೆಂಗಳೂರಿನಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮೂರು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೃತ ಪತ್ರಕರ್ತರ ಕುಟುಂಬಗಳಿಗೆ ಸರಕಾರದಿಂದ ತಲಾ 5 ಲಕ್ಷ ಪರಿಹಾರವನ್ನು ಒದಗಿಸಿಕೊಟ್ಟಿದ್ದರು. ಪತ್ರಕರ್ತರ ಕ್ಷೇಮ ನಿಧಿಯನ್ನು 1 ಕೋಟಿಗೆ ಹೆಚ್ಚಿಸುವಂತೆ ಮಾಡಿದರು. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡಿಸಲು ಶ್ರಮವಹಿಸಿದರು. ರಾಜ್ಯ ಪತ್ರಕರ್ತರ ಸಮ್ಮೇಳನಗಳಿಗೆ ಹೊಸ ರೂಪ ಕೊಟ್ಟರು. ಹಿರಿಯ ಪತ್ರಕರ್ತರನ್ನು ಮನೆಯಂಗಳದಲ್ಲಿ ಗೌರವಿಸುವ ‘ಮನೆಯಂಗಳ’ ಕಾರ್ಯಕ್ರಮ ರೂಪಿಸಿದರು. ಕೋವಿಡ್ ಘಟನೆಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದರು. ಜೊತೆಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಿದ್ಧರೂ ಆಗಿದ್ದಾರೆ.

ಇಷ್ಟೆಲ್ಲಾ ಸ್ತುತ್ಯರ್ಹ ಕೆಲಸಗಳನ್ನು ಪತ್ರಿಕೋದ್ಯಮದಲ್ಲಿ ಮಾಡಿ, ತಮ್ಮದೇ ಆದ ವಿಶೇಷ ಐಡೆಂಟಿಟಿ ಹೊಂದಿರುವ ತಗಡೂರುರವರಿಗೆ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯ ಅಗತ್ಯವಿರಲಿಲ್ಲ. ಯಾಕೆಂದರೆ ತಗಡೂರರವರು ಆ ಪ್ರಶಸ್ತಿಯನ್ನೂ ಮೀರಿ ಬೆಳೆದಿದ್ದಾರೆ. ಈ ಕುರಿತು ಎರಡು ಸನ್ನಿವೇಶಗಳನ್ನು ಅವರ ಆತ್ಮೀಯರು ನೆನಪಿಸಿಕೊಳ್ಳುತ್ತಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಮಾನ್ಯ ಸಿ.ಟಿ.ರವಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ಆಗ ಅವರನ್ನು ಭೇಟಿಯಾದ ತಗಡೂರುರವರು ತಮ್ಮ ರಂಗಸಿರಿ ತಂಡದ ಸದಸ್ಯರಾದ ಷಾಡ್ರಾಕ್ ಎನ್ನುವ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಕೊಡಿಸಬೇಕೆಂಬ ಬೇಡಿಕೆ ಮುಂದಿಟ್ಟರು. ಅಲ್ಪಸಂಖ್ಯಾತ ಸಮುದಾಯವನ್ನು ತಮ್ಮ ಸೈದ್ದಾಂತಿಕ ಕಾರಣಕ್ಕೆ ದ್ವೇಷಿಸುವ ಸಿ.ಟಿ.ರವಿಯವರು “ಬೇಕಾದರೆ ನಿಮಗೆ ಪ್ರಶಸ್ತಿ ಕೊಡಿಸುವೆ ಆದರೆ ಕ್ರಿಶ್ಚಿಯನ್ ವ್ಯಕ್ತಿಗೆ ಸಾಧ್ಯವಿಲ್ಲ” ಎಂದಿದ್ದರಂತೆ. ‘ಕೊಟ್ಟರೆ ಅವರಿಗೆ ಕೊಡಿ ಇಲ್ಲವಾದರೆ ನನಗೂ ಬೇಡ’ ಎಂದ ತಗಡೂಋರವರು ಪಡೆಯಬಹುದಾಗಿದ್ದ ಪ್ರಶಸ್ತಿಯನ್ನು ನಿರಾಕರಿಸಿದರಂತೆ. ಕಳೆದ ಸಲವೂ ಸಹ ನಾಟಕ ಅಕಾಡೆಮಿಯ ಪ್ರಶಸ್ತಿ ಲಿಸ್ಟಲ್ಲಿ ತಗಡೂರುರವರ ಹೆಸರಿತ್ತಂತೆ. ಅದು ಗೊತ್ತಾದ ತಕ್ಷಣ ಪ್ರಶಸ್ತಿಯನ್ನು ನಿರಾಕರಿಸಿದರಂತೆ. ಇದು ಶಿವಾನಂದ ತಗಡೂರುರವರ ನಿಲುವು. ಇನ್ನೊಬ್ಬ ಅರ್ಹ ರಂಗಕರ್ಮಿಗೆ ಪ್ರಶಸ್ತಿ ದೊರೆಯಲಿ ಎಂಬುದು ಆಗ ಅವರ ಆಶಯವಾಗಿತ್ತು.

ಅಂತಹ ತಗಡೂರುರವರು ಈ ವರ್ಷದ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಯಾಕೆ ಒಪ್ಪಿಕೊಂಡರು? ಮಾನ್ಯ ಜಿ.ಎನ್.ಮೋಹನ್‌ ರವರ ಆಗ್ರಹಕ್ಕೋ ಇಲ್ಲಾ ನಾಗರಾಜಮೂರ್ತಿಯವರ ಒತ್ತಾಸೆಗೋ? ಗೊತ್ತಿಲ್ಲ. ಅಂತೂ ಪ್ರಶಸ್ತಿ ಪಟ್ಟಿಯಲ್ಲಿ ತಗಡೂರರ ಹೆಸರಂತೂ ಇದೆ.

ಶಿವಾನಂದ ತಗಡೂರುರವರಂತೆಯೇ ಸಾಕ್ಷರತಾ ಆಂದೋಲನದಲ್ಲಿ ಹಾಡು, ಬೀದಿನಾಟಕಗಳಿಂದ ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಕ್ರಿಯಾಶೀಲರಾಗಿದ್ದವರು ಕಾಮ್ರೇಡ್ ಸಿದ್ದನಗೌಡ ಪಾಟೀಲರವರು. ಸಾಂಸ್ಕೃತಿಕ ಕ್ಷೇತ್ರಕ್ಕೆ ಯುವಜನರನ್ನು ಆಕರ್ಷಿಸಿ ‘ಇಪ್ಟಾ’ ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟಿ ರಾಜ್ಯಾದ್ಯಂತ ಜಾಗೃತಿ ಮೂಡಿಸಿದವರು ಪಾಟೀಲರವರು. ನಾನು ನಾಟಕ ಅಕಾಡೆಮಿಯ ಸದಸ್ಯನಾಗಿದ್ದಾಗ ಆತ್ಮೀಯರಾದ ಸಿದ್ದನಗೌಡರಿಗೆ ಪೋನ್ ಮಾಡಿ “ನಿಮ್ಮ ಹೆಸರನ್ನು ನಾಟಕ ಅಕಾಡೆಮಿ ಪ್ರಶಸ್ತಿಗೆ ಸೂಚಿಸುತ್ತೇನೆ” ಎಂದು ಹೇಳಿದೆ. ಆಗ “ತನಗಿಂತಲೂ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು ಹಾಗೂ ರಂಗಭೂಮಿಯನ್ನೇ ಬದುಕಾಗಿಸಿಕೊಂಡವರಿಗೆ ಪ್ರಶಸ್ತಿ ದೊರಕಲಿ. ನನಗೆ ಬೇಡ” ಎಂದ ಪಾಟೀಲರು ನಯವಾಗಿಯೇ ನಿರಾಕರಿಸಿದ್ದರು. ಮತ್ತೊಬ್ಬ ರಂಗಕರ್ಮಿಗೆ ಪ್ರಶಸ್ತಿ ದೊರೆಯಲಿ ಎಂಬುದು ಅವರ ಸದಾಶಯವಾಗಿತ್ತು. ಹಾಗೂ ಸಿದ್ದನಗೌಡರು ಅಕಾಡೆಮಿ ಪ್ರಶಸ್ತಿಯನ್ನೂ ಮೀರಿದ ಗೌರವ ಸಂಪಾದಿಸಿದ್ದವರಾಗಿದ್ದರು.

ಅದೇ ರೀತಿ ಕಳೆದ ಬಾರಿ ಬಹುಭಾಷಾ ಕಲಾವಿದ ಪ್ರಕಾಶ್ ರೈರವರಿಗೆ ನಾಟಕ ಅಕಾಡೆಮಿ ಅಧ್ಯಕ್ಷರಾಗಿರುವ ನಾಗರಾಜಮೂರ್ತಿಯವರು ಅವರನ್ನು ಕೇಳದೇ ವಾರ್ಷಿಕ ಪ್ರಶಸ್ತಿ ಘೋಷಿಸಿದರು. “ಪ್ರಶಸ್ತಿ ಬೇರೆ ಅರ್ಹರಿಗೆ ದೊರೆಯಲಿ ನನಗೆ ಬೇಡ” ಎಂದು ಪ್ರಕಾಶ್ ರೈರವರು ನಿರಾಕರಿಸಿದರು.

ಅಂತಹ ಮಹನೀಯರ ಸಾಲಿಗೆ ಸೇರಬಹುದಾಗಿದ್ದ ಶಿವಾನಂದ ತಗಡೂರರವರು ಎರಡು ಬಾರಿ ಪ್ರಶಸ್ತಿಯನ್ನು ನಿರಾಕರಿಸಿ ಈ ಸಲ ಒಪ್ಪಿದ್ದು ಅಚ್ಚರಿಯ ಸಂಗತಿಯಾಗಿದೆ. ಈ ಬಾರಿ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆಯಲು ತಗಡೂರುರವರು ಒಪ್ಪಿದ್ದು ದೊಡ್ಡ ಪ್ರಮಾದವೇನೂ ಅಲ್ಲಾ. ಎಂತೆಂಥವರಿಗೋ ಯಾವುದ್ಯಾವುದೊ ಕಾರಣಗಳಿಗೆ ಪ್ರಶಸ್ತಿ ಕೊಡಲಾಗುತ್ತಿದೆ. ತಗಡೂರುರವರಿಗೆ ಕೊಟ್ಟಿದ್ದರಲ್ಲಿ ತಪ್ಪೇನಿಲ್ಲ. ಆದರೆ ಈಗ ರಂಗಭೂಮಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರದ ತಗಡೂರರವರು ಪತ್ರಿಕೋದ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. 2025ರಲ್ಲಿ ಪ್ರತಿಷ್ಠಿತ ಲೋಹಿಯಾ ಪ್ರಶಸ್ತಿಗೂ ಭಾಜನರಾಗಿದ್ದಾರೆ.  ಪ್ರೆಸ್ ಕ್ಲಬ್ ಆದಿಯಾಗಿ ಪರ್ತಿಕೋದ್ಯಮದ ಎಲ್ಲಾ ಪ್ರಶಸ್ತಿಗಳಿಗೂ ಅರ್ಹರಾಗಿದ್ದಾರೆ.

ಹೀಗಿರುವಾಗ, ‘ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ತಗಡೂರುರವರ ಬದಲಾಗಿ ರಂಗಭೂಮಿಯನ್ಹು ವೃತ್ತಿಯನ್ನಾಗಿಸಿಕೊಂಡ ಅರ್ಹ ವ್ಯಕ್ತಿಗೆ ಕೊಡಬೇಕಾಗಿತ್ತು’ ಎಂಬುದು ಹಲವಾರು ರಂಗಕರ್ಮಿಗಳ ಅನಿಸಿಕೆಯಾಗಿದೆ. ನಾಟಕ ಅಕಾಡೆಮಿಯ ಪ್ರಶಸ್ತಿಯ ಐಡೆಂಟಿಟಿ ಹಾಗೂ ಅದರ ಜೊತೆ ಕೊಡಮಾಡುವ 25 ಸಾವಿರ ನಗದು ತಗಡೂರರವರಿಗೆ ಅಗತ್ಯವೇನಿಲ್ಲ. ಆದರೆ ರಂಗಭೂಮಿಯನ್ನೇ ನಂಬಿ ಬದುಕುವ ರಂಗಕರ್ಮಿಗಳಿಗೆ ಅದರ ಅವಶ್ಯಕತೆ ಇದೆ.

ಈಗ ಘೋಷಿತವಾದ ಅಕಾಡೆಮಿ ಪ್ರಶಸ್ತಿಯನ್ನು ಈ ಹಿಂದಿನಂತೆ ನಿರಾಕರಿಸಿ ಅರ್ಹರಿಗೆ ದೊರಕುವಂತೆ ಮಾಡಿದ್ದೇ ಆದರೆ ಶಿವಾನಂದ ತಗಡೂರುರವರು ದೊಡ್ಡವರಾಗುತ್ತಾರೆ. ಸಿದ್ದನಗೌಡ ಪಾಟೀಲರು ಹಾಗೂ ಪ್ರಕಾಶ ರೈರವರಂತವರ ಸಾಲಿಗೆ ಸೇರುತ್ತಾರೆ. ರಂಗಭೂಮಿಯಲ್ಲಿ ಆದರ್ಶಪ್ರಾಯರೂ ಆಗುತ್ತಾರೆ.

  • ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿಗಳು

Leave a Reply