ಕನ್ನಡ ಸಾಹಿತ್ಯ ಕೃಷಿಕರಿಗೆ ಹೊಸ ಪದಗಳನ್ನು ಕೊಟ್ಟ ನಿಘಂಟು ಬ್ರಹ್ಮ ವೆಂಕಟಸುಬ್ಬಯ್ಯ

10 months ago

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲಾ ಕಾಲದಲ್ಲೂ ನೆನಪಿನಲ್ಲಿ ಉಳಿಯುವುದು ಕನ್ನಡದ ನಿಘಂಟುಗಳು. ಹತ್ತಕ್ಕೂ ಹೆಚ್ಚು ಕನ್ನಡದ ನಿಘಂಟು ಪುಸ್ತಕಗಳ ಮೂಲಕ ಸಹಸ್ರಾರು ಕನ್ನಡದ ಪದಗಳಿಗೆ ಅರ್ಥವನ್ನು ನೀಡುವುದರ ಜೊತೆಗೆ, ಕನ್ನಡದ ಸಾಹಿತ್ಯ ಕೃಷಿ ಮಾಡುವವರಿಗೆ ಕನ್ನಡದಲ್ಲಿ ತಮ್ಮ ಬರವಣಿಗೆಗಳಿಗೆ ಹೊಸಹೊಸ ಪದಗಳನ್ನು ನೀಡಿದಂತಹ ನಿಘಂಟು ಬ್ರಹ್ಮ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಉಳಿಯುವಂತಹ ಹೆಸರಾಗಿರುತ್ತದೆ.

ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯನವರು 107 ವರ್ಷಗಳ ಕಾಲ ಬದುಕಿದ್ದರು, ಜೊತೆಗೆ ಅಷ್ಟೇ ಆರೋಗ್ಯವಂತರಾಗಿ 107 ವರ್ಷದಲ್ಲೂ ಕ್ರಿಯಾಶೀಲರಾಗಿ ಬದುಕನ್ನ ಅರ್ಥಪೂರ್ಣವಾಗಿ ನಡೆಸಿದಂತಹ ವಿಶೇಷವಾದ ವ್ಯಕ್ತಿತ್ವ.

ವಯಸ್ಸು ದಯಪಾಲಿಸಿದರೆ ಸಾಲದು, ಆರೋಗ್ಯವು ಬೇಕು, ಜೊತೆಗೆ ದೇಹದಲ್ಲಿ ಚೈತನ್ಯವೂ ಇರಬೇಕು, ಜೊತೆಜೊತೆಗೆ ಕ್ರಿಯಾಶೀಲತೆಯು ಇರಬೇಕು, ಇವೆಲ್ಲವೂ  ವೆಂಕಟಸುಬ್ಬಯ್ಯನವರಿಗೆ ದೊರೆತ ಭಾಗ್ಯ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಿಘಂಟು ಕೊಡುವುದರ ಜೊತೆಗೆ, ಪ್ರಜಾವಾಣಿ ಪತ್ರಿಕೆಯಲ್ಲಿ ಇಗೋ ಕನ್ನಡ ಎಂಬ ವಿಭಾಗದಲ್ಲಿ ಅನೇಕ ಕನ್ನಡ ಪದಗಳಿಗೆ ಅರ್ಥಗಳನ್ನು ತಿಳಿಸಿಕೊಡುತ್ತಾ ಕನ್ನಡದ ಲಕ್ಷಾಂತರ ಸಾಹಿತ್ಯ ಆಸಕ್ತರಿಗೆ ದೊಡ್ಡ ಉಪಕಾರವನ್ನು ಮಾಡಿರುತ್ತಾರೆ. ಇಂತಹ ಪದಗಳ ಸಂಗ್ರಹದ ಪುಸ್ತಕವೇ ಹಲವಾರು ಸಂಪುಟಗಳಲ್ಲಿ ಬಂದಿದೆ.

ವಿಜಯ ಕಾಲೇಜಿನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಂತಿಮವಾಗಿ ಕನ್ನಡದ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಇವರಿಗೆ, ಕುವೆಂಪುರವರ ಸಂಪರ್ಕ, ಟಿಎಸ್ ವೆಂಕಣ್ಣಯ್ಯನವರ, ಡಿಎಲ್ ನರಸಿಂಹಾಚಾರ್ ರವರ ಮಾರ್ಗದರ್ಶನ, ಕನ್ನಡ ಸಾಹಿತ್ಯದಲ್ಲಿ ದೊಡ್ಡ ಕೆಲಸವನ್ನು ಮಾಡಲು ಸಾಧ್ಯವಾಯಿತು.

ಇವರು ಹಲವಾರು ವಿಭಾಗದಲ್ಲಿ ಕೆಲಸವನ್ನು ಮಾಡಿದ್ದಾರೆ ಪುಸ್ತಕಗಳನ್ನ ಸಂಗ್ರಹಿಸಿದ್ದಾರೆ. ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇವರು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಅಪಾರವಾದ ಆಳವಾದ ಪಾಂಡಿತ್ಯವನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಹಲವಾರು ಪುಸ್ತಕಗಳನ್ನು ಭಾಷಾಂತರವನ್ನು ಮಾಡಿದ್ದಾರೆ.

ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ .77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿ ದೊಡ್ಡ ಗೌರವವನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡಿದೆ. ಪಂಪ ಪ್ರಶಸ್ತಿಯು ಇವರ ಸೇವೆಗೆ ಲಭಿಸಿದೆ.

1913ರ ಆಗಸ್ಟ್ 23ರಂದು ಹುಟ್ಟಿದ ಇವರು ತಮ್ಮ 107ನೇ ವಯಸ್ಸಿನಲ್ಲಿ 2021 ರಲ್ಲಿ ನಮ್ಮನ್ನು ಅಗಲಿರುತ್ತಾರೆ.

ನಿಘಂಟು ಬ್ರಹ್ಮ ಎಂಬ ಗೌರವದಿಂದ ಸದಾ ಕಾಲ ಕನ್ನಡ ಜನತೆ ಇವರನ್ನು ಸ್ಮರಿಸಿಕೊಳ್ಳುತ್ತದೆ. ಒಂದು ಭಾಷೆಯ ಬೆಳವಣಿಗೆಗೆ ಹೊಸ ಹೊಸ ಪದಗಳು ಎಷ್ಟು ಮುಖ್ಯ ಎನ್ನುವುದು ಇವರ ಸೇವೆಯಿಂದ ತಿಳಿಯುತ್ತದೆ. ವೆಂಕಟಸುಬ್ಬಯ್ಯನವರು ದೈಹಿಕವಾಗಿ ನಮ್ಮೊಂದಿಗೆ ಇರದಿದ್ದರೂ ಕನ್ನಡಿಗರ ಅನೇಕರ ಮನೆಯಲ್ಲಿ ಇವರ ನಿಘಂಟುಗಳ ಮೂಲಕ ಇವರು ಸದಾ ನಮ್ಮೊಂದಿಗೆ ಉಳಿದುಕೊಂಡಿದ್ದಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply