ಡಬಲ್ ಇಂಜಿನ್ ಸರ್ಕಾರಗಳಿರುವ ರಾಜ್ಯದಿಂದಲೇ ವಲಸೆ ಹೆಚ್ಚಾಗುತ್ತಿದೆ

1 year ago

ದೇಶದಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷವಿದ್ದರೆ ಅಂತಹ ಸರ್ಕಾರಗಳನ್ನು ಡಬಲ್ ಇಂಜಿನ್ ಸರ್ಕಾರವೆಂದು ಕರೆಯುತ್ತಾ, ಡಬ್ಬಲ್ ಇಂಜಿನ್ ಸರ್ಕಾರವಿದ್ದರೆ ಅಭಿವೃದ್ಧಿ ನಾಗಾಲೋಟದಲ್ಲಿ ಸಾಗುತ್ತದೆ ಎಂದು ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಮಾಡುವ ಬಿಜೆಪಿ ನಾಯಕರು ಸ್ವಲ್ಪ ಆಲೋಚನೆಯನ್ನು ಮಾಡಿ ನೋಡಿ.

ಉತ್ತರ ಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಅಸ್ಸಾಮಿನಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಬಿಹಾರದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಈಶಾನ್ಯ ಭಾರತದ ಹಲವಾರು ರಾಜ್ಯಗಳಲ್ಲೂ ಡಬಲ್ ಇಂಜಿನ್ ಸರ್ಕಾರವಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅದರಲ್ಲೂ ವಿಶೇಷವಾಗಿ ಕರ್ನಾಟಕಕ್ಕೆ ಈ ರಾಜ್ಯಗಳಿಂದ ಪ್ರತಿದಿನವೂ ಸಾವಿರಾರು ಮಂದಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ವಲಸೆ ಬರುತ್ತಿದ್ದಾರೆ.

ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಮಾಡಿದ್ದರೆ, ಉದ್ಯೋಗಗಳನ್ನ ಸೃಷ್ಟಿಸಿದ್ದರೆ, ಅವರಿಗೆ ಬದುಕು ಗಟ್ಟಿಯಾಗಿ ಕಲ್ಪಿಸಿ ಕೊಟ್ಟಿದ್ದರೆ, ಅವರೇಕೆ ನಮ್ಮ ರಾಜ್ಯಗಳಿಗೆ ವಲಸೆ ಬರುತ್ತಿದ್ದರು?

ಒಂದು ನೋವಿನ ಸಂಗತಿ ಎಂದರೆ 12 ವರ್ಷದಿಂದ ಹಿಡಿದು 18 ವರ್ಷದ ಯುವಕರು, ಯುವತಿಯರು  ಓದುವ ಮತ್ತು ಆಟವಾಡುವ ಸಂದರ್ಭದಲ್ಲಿ ಹೋಟೆಲ್ ಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಬಾರ್ ಮತ್ತು ಪಬ್ ಗಳಲ್ಲಿ ಶ್ರಮದ ಬದುಕನ್ನ ನಡೆಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿ ಅವರಿಗೆ ಸಿಗುತ್ತಿಲ್ಲ. ಭಾಷೆಯೂ ಬರುವುದಿಲ್ಲ. ಇವರ ನೋವನ್ನು ಹಂಚಿಕೊಳ್ಳಲು ಜನರು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆ ರಾಜ್ಯದ ಜನಗಳು ಇದ್ದಾರೆ ಎಂದರೆ ಅಭಿವೃದ್ಧಿ ಎಂದರೇನು ನಿಜಕ್ಕೂ ಕಾಡುತ್ತಿದೆ.

ಇವರ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ಧರ್ಮದ ಮಾತುಗಳು. ಅನ್ಯ ಧರ್ಮದ ಮೇಲಿನ ದ್ವೇಷದ ಮಾತುಗಳು. ಪ್ರಚೋದನೆಯ ಮಾತುಗಳು. ಧಾರ್ಮಿಕ ಆಚರಣೆಗಳು ಇವುಗಳು ಮಾತ್ರವೇ ಇರಬೇಕು. ಇವರಿಗೆ ಕಾರ್ಖಾನೆಗಳು ಎಂದರೆ ಅಭಿವೃದ್ಧಿಯಲ್ಲ. ಶಾಲೆಗಳು ಇದ್ದರೆ ಅಭಿವೃದ್ಧಿಯಲ್ಲ. ಉದ್ಯೋಗಗಳನ್ನು ಕೊಡುವುದು ಎಂದರೆ ಅಭಿವೃದ್ಧಿಯಲ್ಲ. ಆದುದರಿಂದ ನಿಜವಾದ ಅಭಿವೃದ್ಧಿಗಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಅದರಲ್ಲೂ ಕರ್ನಾಟಕಕ್ಕೆ ಬೆಂಗಳೂರು ಸೇರಿದಂತೆ ಹಲವಾರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ.

ಹಲವಾರು ದಶಕಗಳ ಹಿಂದೆ ಉತ್ತರ ಕರ್ನಾಟಕದ ವಿಶೇಷವಾಗಿ ಹೈದರಾಬಾದ್ ಪ್ರಾಂತ್ಯದ ಜಿಲ್ಲೆಗಳಿಂದ ಜನಗಳು ಬೆಂಗಳೂರು ನಗರ ಮತ್ತು ಇತರೆ ಪಟ್ಟಣ ಪ್ರದೇಶಗಳಿಗೆ ಕೆಲಸವನ್ನ ಹುಡುಕುತ್ತಾ ಬರುತ್ತಿದ್ದರು. ಇಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹೋಟೆಲ್ ಗಳಲ್ಲಿ ದುಡಿಯುತ್ತಿದ್ದರು. ಈಗ ಅವರ ಸಂಖ್ಯೆ ಕಡಿಮೆಯಾಗಿದೆ. ಬಹುಷಃ ಕಾರಣ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಾವರಿ ಸೌಲಭ್ಯಗಳು ಹೆಚ್ಚಾಗಿ ಕೃಷಿ ಕಾರ್ಮಿಕರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಡಾ. ಮನಮೋಹನ್ ಸಿಂಗ್ ರವರು ತಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನತೆ ಉದ್ಯೋಗವನ್ನು ಕಂಡುಕೊಂಡಿದ್ದಾರೆ ಹಾಗೂ ಹೈದರಾಬಾದ್ ಪ್ರಾಂತ್ಯದ ಜಿಲ್ಲೆಯ ಜನರಿಗೆ ಮಲ್ಲಿಕಾರ್ಜುನ ಖರ್ಗೆರವರ ಶ್ರಮದ 371 ಜೆ ಸಂವಿಧಾನ ತಿದ್ದುಪಡಿಯ ಕಾರಣದಿಂದಾಗಿ ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ 30ರಷ್ಟು ದೊರೆಯುತ್ತಿರುವುದರಿಂದ ವಲಸೆ ಬರುವುದು ಕಡಿಮೆಯಾಗಿದೆ.

ಈಗ ನಾವು ಸ್ವಲ್ಪ ಯೋಚಿಸಬೇಕಿದೆ ಡಬ್ಬಲ್ ಇಂಜಿನ್ ಸರ್ಕಾರವಿರುವ ರಾಜ್ಯಗಳ ಪರಿಸ್ಥಿತಿ ಏನಾಗಿದೆ? ಅದೇ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ಸಹಕಾರ ದೊರೆಯದಿದ್ದರೂ ಸ್ವಯಂ ಶಕ್ತಿಯಿಂದ ಅಭಿವೃದ್ಧಿಯನ್ನ ಮಾಡುತ್ತಿರುವ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ನೋಡಬೇಕಿದೆ.

ಅಭಿವೃದ್ಧಿ ಮಾಡಲು ಡಬ್ಬಲ್ ಇಂಜಿನ್ ಸರ್ಕಾರಗಳು ಬೇಕಿಲ್ಲ. ಹೃದಯವಂತಿಕೆ ಇರುವ ಜನರು ಆಡಳಿತ ನಡೆಸುತ್ತಿರಬೇಕು. ಸೂಕ್ಷ್ಮತೆ ಮತ್ತು ಸಂವೇದನೆ ಉಳ್ಳ ಜನರು ಪ್ರತಿನಿಧಿಗಳಾಗಿರಬೇಕು.

ಅಭಿವೃದ್ಧಿಯೆಂದರೆ ಹಸಿದ ಹೊಟ್ಟೆಗೆ ಅನ್ನ, ದುಡಿಯುವ ಕೈಗಳಿಗೆ ಕೆಲಸ, ಶಾಲೆಗಳು, ಆಸ್ಪತ್ರೆಗಳು, ರಸ್ತೆಗಳು, ಸಂಶೋಧನಾ ಸಂಸ್ಥೆಗಳು, ನೀರಾವರಿ ಯೋಜನೆಗಳು ಎಂಬುದನ್ನ ಉತ್ತರ ಭಾರತದ ರಾಜ್ಯದ ನಾಯಕರುಗಳು ಅರಿತು ಆ ನಿಟ್ಟಿನಲ್ಲಿ ಒಂದಷ್ಟು ಕಾರ್ಯಶೀಲರಾಗಿ ತಮ್ಮ ರಾಜ್ಯಗಳನ್ನು ಬಿಟ್ಟು, ತಂದೆ ತಾಯಿಯಿಂದ ದೂರವಾಗಿ, ವಿದ್ಯಾಭ್ಯಾಸಕ್ಕೆ ಪಿಲಾಂಜಲಿ ಇಟ್ಟು ಬರುತ್ತಿರುವವರ ಬದುಕಿನ ಬಗ್ಗೆ ಆಲೋಚಿಸಿ. ಅವರನ್ನು ಅಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲು ಆಲೋಚಿಸಿ.

ಬಾಯಲ್ಲಿ ಹೇಳಿದರೆ ಅಭಿವೃದ್ಧಿ ಆಗುವುದಿಲ್ಲ, ಜಾಹೀರಾತಿನಲ್ಲಿ ಅಭಿವೃದ್ಧಿ ಇಲ್ಲ, ಚುನಾವಣಾ ಭಾಷಣೆಯಲ್ಲಿನ ಘೋಷಣೆಗಳು ಅಭಿವೃದ್ಧಿಯಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply