ಕಾಂಗ್ರೆಸ್ ನಿರ್ಮಿಸಿದ ಇನ್ನೂ ಹಲವು ಯೋಜನೆಗಳನ್ನು ಬಿಜೆಪಿ ಮರು ಉದ್ಘಾಟನೆ ಮಾಡಿದರೂ ಆಶ್ಚರ್ಯವಿಲ್ಲ!: ಕೆಪಿಸಿಸಿ
ಬೆಂಗಳೂರು: ಸ್ವತಂತ್ರವಾಗಿ ಯಾವುದೇ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುವ ಇಚ್ಛಾಶಕ್ತಿ ಬಿಜೆಪಿಗೆ ಇಲ್ಲ. ಈ ಕಾರಣಕ್ಕಾಗಿ ತಾನು ಜನಪರ ಸರ್ಕಾರ ಎಂದು ತೋರಿಸಿಕೊಳ್ಳಲು ಹಳೆ ಬಾಟಲ್ ಗೆ ಹೊಸ ಲೇಬಲ್ ಅಂಟಿಸುವಂತೆ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಉದ್ಘಾಟನೆ ಮಾಡಿಕೊಂಡು ಇದು ತಮ್ಮದೇ ಸರ್ಕಾರದ ಯೋಜನೆ ಎಂದು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡು ಓಡಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಹೈಜಾಕ್ ಮಾಡಲು ಇಂತಹ ದಿನಕ್ಕೊಂದು ತಂತ್ರಗಳನ್ನು ಹುಡುಕುತ್ತದೆ ಎಂದು ಕೆಪಿಸಿಸಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ಕೃಷಿಯನ್ನು ಅಧುನಿಕರಣ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರು ರೈತ ವಿರೋಧಿ ಕೃಷಿ ಕಪ್ಪು ಕಾಯಿದೆಗಳನ್ನು ತಂದು ಒಂದು ವರ್ಷಗಳ ಕಾಲ ರೈತರು ದೆಹಲಿ ಗಡಿಯ ಬೀದಿಯಲ್ಲಿ ಕೂರುವಂತೆ ಮಾಡಿತು. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ನಡುವೆ ರೈತರು ಬಳಸುವ ಕೃಷಿ ಉಪಕರಣಗಳ ಮೇಲೆ ಜಿಎಸ್ಟಿ ಹೇರಿ ಅನ್ನದಾತರನ್ನು ತೀವ್ರ ಸಂಕಷ್ಟಕ್ಕೆ ದೂಡಿತು ಎಂದಿದೆ.
ರಾಜ್ಯದಲ್ಲಿ ನೆರೆ, ಬರ ಬಂದತಹ ಸಂದರ್ಭದಲ್ಲೂ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡಲಿಲ್ಲ, ಅಳಿದುಳಿದ ಬೆಳೆಗೆ ಮಾರುಕಟ್ಟೆ ಕಲ್ಪಿಸಲಿಲ್ಲ. ರೈತರ ಕೈಗೆಟುವ ಬೆಲೆಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಲಿಲ್ಲ, ಕಾಳಸಂತೆ ಮಾರಾಟದ ದಂಧೆಕೋರರಿಗೂ ಕಡಿವಾಣ ಹಾಕಲಿಲ್ಲ. ಅನ್ನದಾತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರೂ ಇವರ ಹೃದಯ ಕರಗಲಿಲ್ಲ. ನೀರಿಗೆ ಬಾಯ್ತೆರೆದು ಕಾದಿರುವ ಭೂಮಿಗಳಿಗೆ ನೀರಾವರಿಯ ಕಾಯಕಲ್ಪ ಕಲ್ಪಿಸಲಿಲ್ಲ. ಕನ್ನಡಿಗರ ಬಹುದಿನಗಳ ಬೇಡಿಕೆಯಾದ ಮೇಕೆದಾಟು, ಮಹದಾಯಿಯಂತ ಯೋಜನೆಗಳಿಗೂ ಈ ಡಬಲ್ ಇಂಜಿನ್ ಸರ್ಕಾರ ಅಡ್ಡಗಾಲು ಹಾಕಿಕೊಂಡು ಕೂತಿದೆ ಎಂದಿದೆ.
ಇಂತಹ ರೈತ ವಿರೋಧಿ ಡಬಲ್ ಇಂಜಿನ್ ಸರ್ಕಾರ ಕಾಂಗ್ರೆಸ್ ಸರ್ಕಾರದ ಕೆಲಸಗಳನ್ನು ಉದ್ಘಾಟಿಸುವುದನ್ನೇ ತಮ್ಮ ಸಾಧನೆ ಎಂದು ಭಾವಿಸಿದ್ದಾರೆ. ಇದೇ ಕಾರಣದಿಂದಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅವರು ಕಾಂಗ್ರೆಸ್ ಸರ್ಕಾರದ ಯೋಜನೆಯಾಗಿರುವ ನಾರಾಯಣಪುರ ಎಡದಂಡೆ ಕಾಲುವೆಯ ‘ಸ್ಕಾಡಾ ಯೋಜನೆ’ಯನ್ನು ತಮ್ಮದೇ ಸಾಧನೆ ಎಂದು ಬಿಂಬಿಸಿಕೊಂಡು ಉದ್ಘಾಟನೆ ಮಾಡಲಿದ್ದಾರೆ. ಅಲ್ಲದೇ ಕಾಂಗ್ರೆಸ್ ನಿರ್ಮಿಸಿದ ಇನ್ನೂ ಹಲವು ಯೋಜನೆಗಳಿದ್ದು, ಬಿಜೆಪಿ ಅವುಗಳನ್ನೂ ಮರು ಉದ್ಘಾಟನೆ ಮಾಡಿದರೂ ಆಶ್ಚರ್ಯವಿಲ್ಲ! ಎಂದಿದೆ.




