ಕೊರೋನ ಹರಡದಂತೆ ತಡೆಯಲು ಜಾರಿಯಾದ ಲಾಕ್ಡೌನ್ ದೇಶದ ಬಹುಸಂಖ್ಯಾತರನ್ನು ಉಸಿರುಗಟ್ಟಿಸಿದರೆ, ಕೆಲವರಿಗೆ ವಿರಾಮವಾಗಿತ್ತು. ಈ ಸಂದರ್ಭದಲ್ಲಿ ದೈಹಿಕ ಶ್ರಮದ ಕೆಲಸ ನಿಲುಗಡೆಯಾಗಿ, ತಂತ್ರಜ್ಞಾನ ಆಧರಿತ ಕೆಲಸ ಮನೆಯಿಂದಲೆ ನಡೆಯತೊಡಗಿದವು. ಹೀಗಾಗಿ ಸಂಚಾರದ ವೇಗ ಶೂನ್ಯಕ್ಕೆ ಬಂದಿತ್ತು. ಬಿಡುವಿನ ವೇಳೆ ಹೆಚ್ಚಾಗಿತ್ತು. ಈ ಕಾರಣಕ್ಕೆ ಸ್ವವಲಂಬನೆ ಅಭ್ಯಾಸವಾಗುತ್ತಿತ್ತು. ಹೀಗಿರುವಾಗ ಗಾಂಧಿ ಚಿಂತನೆಗಳನ್ನು ಪರಿಶೀಲಿಸಲು ಈ ಲಾಕ್ಡೌನ್ ಪ್ರಯೋಗಶಾಲೆಯಂತೆ ಕಂಡಿತು.
ಗಾಂಧಿ 1908 ರಲ್ಲಿ ಬರೆದ ಬಹುಚರ್ಚಿತ `ಹಿಂದ್ ಸ್ವರಾಜ್ಯ’ ಪುಸ್ತಕವನ್ನು ಈಗ ಓದಿದರೆ, ಈ ಆಲೋಚನೆಯ ಕೆಲವು ಎಳೆಗಳು `ಭಾರತ್ ಸ್ವಮನೆ’ ಎನ್ನುವ ಕಲ್ಪನೆಯನ್ನು ಮೂಡಿಸುತ್ತವೆ. `ತನ್ನ ಕೈಕಾಲು ಎಷ್ಟು ದೂರ ಒಯ್ಯಬಲ್ಲವೋ ಅದೇ ಮನುಷ್ಯನ ಓಡಾಟದ ಮಿತಿಯಾಗಬೇಕು. ಈ ರೈಲು ಮುಂತಾದ ಉನ್ಮತ್ತ ವೇಗದ ವಾಹನಗಳಲ್ಲಿ ನಮ್ಮ ಓಟ, ಅಲೆದಾಟ ಅತಿಯಾಗಿರದಿದ್ದರೆ ಎಷ್ಟೋ ಗೊಂದಲ ಕಡಿಮೆಯಾಗುತ್ತಿತ್ತು ನಮ್ಮ ಕಷ್ಟಗಳೆಲ್ಲಾ ನಾವೇ ಮಾಡಿಕೊಂಡವು, ಮನುಷ್ಯನ ಶರೀರರದ ರಚನೆಯಲ್ಲಿಯೇ ಅವನ ಓಡಾಟದ ಮಿತಿಯೂ ಇದೆ’ ಎನ್ನುತ್ತಾರೆ. ಕೊರೋನ ಹರಡದಂತೆ ತಡೆಯಲು ಸರಕಾರ ನಿರ್ಧರಿಸಿದ್ದು ನಿಸರ್ಗದ ಓಡಾಟದ ಮಿತಿಗೆ ಜನರನ್ನು ಒಳಪಡಿಸುವ ಲಾಕ್ಡೌನ್ ಜಾರಿ.
`ಈ ರೈಲುಗಳು ಇರದಿದ್ದರೆ, ಇಂಗ್ಲೀಷರು ಹಿಂದೂಸ್ಥಾನವನ್ನು ಇಷ್ಟರ ಮಟ್ಟಿಗೆ ಅಧೀನದಲ್ಲಿಟ್ಟುಕೊಳ್ಳುತ್ತಿರಲಿಲ್ಲ. ರೈಲು ನಮ್ಮ ದೇಶದಲ್ಲಿ ಪ್ಲೇಗನ್ನು ಹರಡಿತು. ರೈಲು ಇರದಿದ್ದರೆ ನಮ್ಮ ಜನಕೋಟಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿರಲಿಲ್ಲ. ಈ ಅಂಟು ರೋಗಗಳೂ ಹರಡುತ್ತಿರಲಿಲ್ಲ. ಇದಕ್ಕೂ ಮೊದಲು ನಮ್ಮಲ್ಲಿ ಸ್ವಾಭಾವಿಕ ಪ್ರತ್ಯೇಕತೆಯಿತ್ತು’ ಎನ್ನುತ್ತಾರೆ. ಒಂದು ಶತಮಾನ ಪೂರೈಸಿದ ಗಾಂಧಿಯವರ ಈ ಮಾತಲ್ಲಿ ರೈಲಿನ ಜಾಗದಲ್ಲಿ ವಿಮಾನ ಎಂದೂ, ಪ್ಲೇಗ್ ಬದಲಿಗೆ ಕೊರೋನ ಎಂದು ಬದಲಿಸಿದರೆ ಈ ಮಾತು ನಮ್ಮ ಕಾಲಕ್ಕೂ ಕನ್ನಡಿಯಾಗುತ್ತದೆ. ಗಾಂಧಿ ಅಂದು ಸ್ವಾಭಾವಿಕ ಪ್ರತ್ಯೇಕತೆ ಇತ್ತು ಎನ್ನುತ್ತಾರೆ. ಅಂದರೆ ಯಾವುದೇ ದೀರ್ಘ ಸಂಚಾರವಿಲ್ಲದೆ ಎಲ್ಲವೂ ಕಾಲಳತೆಯಲ್ಲಿ ಸಿಗುವಂತಿರಬೇಕು. ಸ್ವಾಭಾವಿಕ ಪ್ರತ್ಯೇಕತೆ ಎಂದರೆ, ಬಹುತೇಕ ಜೀವನಾವಶ್ಯಕ ವಸ್ತು ಸಂಗತಿಗಳ ಸ್ವಾವಲಂಬನೆ.
ಈಗಿನ ಕೊರೋನ ಕಾರಣಕ್ಕೆ ಅನಿವಾರ್ಯವಾದ ಪ್ರತ್ಯೇಕತೆ `ಅಸ್ವಾಭಾವಿಕ ಪ್ರತ್ಯೇಕತೆ’ ಯಾಕೆಂದರೆ ಈ ಪ್ರತ್ಯೇಕತೆಯಲ್ಲಿ ಮನೆ ಅಥವಾ ಸುತ್ತಮುತ್ತಣ ಪರಿಸರದಲ್ಲಿ ಅಗತ್ಯ ವಸ್ತುಗಳನ್ನು ಉತ್ಪಾದಿಸಿಕೊಳ್ಳಲು ಸಾಧ್ಯವಿಲ್ಲ. ನಾವಿಂದು ಗಾಂಧಿ ಹೇಳುವ ಸ್ವಾಭಾವಿಕ ಪ್ರತ್ಯೇಕತೆಯಿಂದ ಬಹುದೂರ ಪಯಣಿಸಿದ್ದೇವೆ. ಇದೀಗ ಸಿದ್ಧವಸ್ತುಗಳ ಅವಲಂಬನೆ ಚೂರು ಕಡಿಮೆಯಾಗಿ, ಎರಡು ಅಥವಾ ಮೂರನೆ ಹಂತದ ಪರಿಷ್ಕೃತಗೊಂಡ ಕಚ್ಚಾ ವಸ್ತುಗಳಿಂದ ಸಿದ್ಧವಸ್ತು ಮಾಡಿಕೊಳ್ಳುವ ಮಟ್ಟಕ್ಕೆ ಈ ಪ್ರತ್ಯೇಕತೆ ಇದೆ. ಚಿಕ್ಕ ಉದಾಹರಣೆಯೆಂದರೆ, ಪಾನಿಪೂರಿಗೆ ಬೇಕಾದ ಪರಿಕರಗಳ ತಂದು, ಮನೆಯಲ್ಲಿ ಪಾನಿಪೂರಿ ಮಾಡಿಕೊಳ್ಳುತ್ತಿರುವುದು.
ತಂತ್ರಜ್ಞಾನ ಕೆಲವರಿಗೆ ಸಮೃದ್ಧಿಯನ್ನೂ, ಬಹುತೇಕರಿಗೆ ದಾರಿದ್ರ್ಯವನ್ನೂ ತರುತ್ತದೆ. ತಂತ್ರಜ್ಞಾನದ ಸೃಷ್ಟಿ ಮತ್ತು ನಾಶದಲ್ಲಿ ಹಿಂಸೆಯಿದೆ ಎನ್ನುತ್ತ ಗಾಂಧಿ ಅಹಿಂಸಾವಾದ ಈ ಹಿಂಸೆಯನ್ನು ಮೀರುವ ಬಗ್ಗೆ ಎಚ್ಚರಿಸುತ್ತದೆ. ಲಾಕ್ಡೌನ್ ಕಾರಣಕ್ಕೆ ತ್ರಂತ್ರಜ್ಞಾನವನ್ನು ಆಧರಿಸಿದ ಕೆಲಸಗಾರರು ವರ್ಕ್ ಪ್ರಂ ಹೋಮ್ ಎಂದರೆ, ದೈಹಿಕ ಶ್ರಮವನ್ನಾಧರಿಸಿದ ಬಹುಸಂಖ್ಯಾತ ಕೆಲಸಗಾರರು ಒಂದೊತ್ತಿನ ಊಟಕ್ಕೆ ಪರದಾಡುವಂತಾಯ್ತು. ಇಂತಹವರನ್ನು ತಂತ್ರಜ್ಞಾನ ದಾರಿದ್ರ್ಯಕ್ಕೆ ದೂಡಿ, ಹಿಂಸೆಯನ್ನು ಹೆಚ್ಚಿಸಿತು.
ಗಾಂಧಿಯು `ಯಂತ್ರದ ಚಲನೆ ಕೋಟ್ಯಾಂತರ ಜನರನ್ನು ನಗರ ಕೇಂದ್ರಗಳಿಗೆ ವಲಸೆ ಬರುವಂತೆ ಮಾಡುತ್ತದೆ. ಹಾಗೆಯೇ ಅದರ ನಿಲುಗಡೆ ಅದೇ ವಲಸಿಗರನ್ನು ನಿರ್ಧಯವಾಗಿ ಹಳ್ಳಿಗಳಿಗೆ ನೂಕುತ್ತವೆ’ ಎಂದಿದ್ದರು. ಲಾಕ್ಡೌನ್ ನಿಂದ ಲಕ್ಷಾಂತರ ಜನರು ರಸ್ತೆಗಳಲ್ಲಿ ನಡೆದು ಹಳ್ಳಿಗೆ ಮರಳಿದ್ದನ್ನು ನೋಡಿದರೆ ಈ ವಾಸ್ತವ ಕಣ್ಣಿಗೆ ರಾಚುತ್ತದೆ. ಗಾಂಧಿ ಮನುಷ್ಯನ ಮಿದುಳಿನ ಜ್ಞಾನವನ್ನು ಯಂತ್ರಗಳು ಮುಚ್ಚಿಹಾಕಿವೆ ಎನ್ನುತ್ತಿದ್ದರು. ಇದೀಗ ಯಂತ್ರಗಳ ನಿಲುಗಡೆಯಿಂದ ಮನುಷ್ಯನ ಬುದ್ಧಿಮತ್ತೆ ಚೂರು ಕ್ರಿಯಾಶೀಲವಾಗಿತ್ತು. ಮನೆ ಹೊರಗಣ ಕ್ರೀಡೆಗಳ ಗೈರುಹಾಜರಿ ಮನೆ ಒಳಗಣ ಕ್ರೀಡೆಗಳಿಗೆ ಜೀವದಾನ ಮಾಡಿದರೆ, ಹೊರಗಿನ ದುಡಿಮೆಯಿಂದ ಕಮರಿದ್ದ ಸ್ವಂತದ ಹವ್ಯಾಸ, ಆಸಕ್ತಿಗಳಿಗೆ ಮರು ಜೀವ ಬಂದಿತು.
ಯಂತ್ರವು ಮಾನವನ ಬಿಡುವಿನ ವೇಳೆಯನ್ನು ಕಸಿದುಕೊಂಡಿದೆ. ವಿರಾಮವು ಮಾನವನ ಸೃಜನಶೀಲತೆ, ಶ್ರೇಷ್ಠತೆ, ಸೊಗಸು, ಸಂವೇದನೆಯನ್ನು ಪೋಷಿಸುತ್ತದೆ, ಮನುಷ್ಯ ಬಿಡುವಿನ ವೇಳೆಯಲ್ಲಿ ಚಿಂತಿಸುತ್ತಾ, ಕಲ್ಪನಾ ಲಹರಿಯಲ್ಲಿ ತೇಲುತ್ತಾ ತನ್ನ ಜೊತೆಯಲ್ಲೆ ತಾನು ಆಟವಾಡುತ್ತ ಕನಸು ಕಾಣುತ್ತಾ ಪರರ ಹಿತಚಿಂತನೆ ಮಾಡುತ್ತ ಸಮಸ್ಯೆಗಳಿಗೆ ಸ್ಪಂದಿಸುತ್ತಾನೆ ಎನ್ನುವುದು ಗಾಂಧಿಯ ಕನಸಾಗಿತ್ತು. ಇದೀಗ ಕೆಲಸದ ನಿಲುಗಡೆಯು ಮಾನವನ ಬಿಡುವಿನ ವೇಳೆಯನ್ನೇನೋ ಕೊಟ್ಟಿದೆ. ಈ ವೇಳೆಯಲ್ಲಿ ಮಧ್ಯಮವರ್ಗ ಮತ್ತು ಮೇಲ್ವರ್ಗಗಳು ಅಂತರ್ಜಾಲದಲ್ಲಿ ಬಿಡುವಿಲ್ಲದೆ ತೊಡಗಿದ್ದರೆ, ದುರ್ಬಲರು ಬದುಕಿನ ನಿರ್ವಹಣೆಯ ಚಿಂತೆಯಲ್ಲಿ ಹೈರಾಣಾಗಿದ್ದರು. ಈ ದೇಶ ಇಂತಹ ಬಹುರೂಪಿ ವೈರುಧ್ಯಗಳಿಗೆ ಸಾಕ್ಷಿಯಾಯಿತು.
– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು




