ಯಾರಿಗೆ ಬೇಕು ಗಾಂಧಿ?

3 years ago

#Whoneeds #Gandhi #cglakshmipathi

ಪ್ರಪಂಚದಲ್ಲಿ ಯಾರಾದರು ಗಾಂಧಿಯಂತಹ ಸಂಕೀರ್ಣ ವ್ಯಕ್ತಿತ್ವದ ನಾಯಕರು ಇದ್ದಾರೆಯೇ? ಎಂಬ ಪ್ರಶ್ನೆಯು ಸದಾಕಾಲವೂ ಇರಬಹುದೇನೋ ಎನಿಸುತ್ತದೆ. ಏಕೆಂದರೆ ಗಾಂಧಿಯಷ್ಟು ಮೆಚ್ಚುಗೆಗೆ, ತಿರಸ್ಕಾರಕ್ಕೆ, ಸಂವಾದಕ್ಕೆ, ವಾಗ್ವಾದಕ್ಕೆ ಒಳಗಾದ ವ್ಯಕ್ತಿ ಮತ್ತೊಬ್ಬರಿಲ್ಲ. ಗಾಂಧಿ ಕೇವಲ ವ್ಯಕ್ತಿ ಅಲ್ಲ, ಸಿದ್ಧಾಂತವೂ ಅಲ್ಲ. ಅವರೊಂದು ಸಾಮಾಜಿಕ ವಿದ್ಯಮಾನ ಎಂಬ ಮಾತನ್ನು ಕ್ಲೀಷೆಯಾದರೂ ಹೇಳಲೆಬೇಕು. ಏಕೆಂದರೆ ಈ ವಾಕ್ಯವು ಗಾಂಧಿಯನ್ನು ವಿವರಿಸುವಷ್ಟು ಸಮರ್ಥವಾಗಿ ಮತ್ಯಾವುದೂ ವಿವರಿಸುವುದಿಲ್ಲ. ಕಳೆದ ಎರಡು ವರ್ಷಗಳಿಂದ ಆಫ್ರಿಕಾ ಖಂಡದ ಘಾನಾ ದೇಶದಲ್ಲಿ ಚಳವಳಿಯೊಂದು ನಡೆಯುತ್ತಿದೆ. ಚಳವಳಿಯ ಉದ್ದೇಶವೇನೆಂದರೆ ಘಾನಾದ ಪ್ರಮುಖ ವಿಶ್ವವಿದ್ಯಾನಿಲಯದ ಮುಂದೆ ನಿಲ್ಲಿಸಿರುವ ಗಾಂಧಿಯ ಪ್ರತಿಮೆಯನ್ನು ತೆಗೆಸುವುದು. ಅವರ ಪ್ರಕಾರ ಗಾಂಧೀಜಿಯು ವರ್ಣಭೇದ ನೀತಿಯ ಪ್ರತಿಪಾದಕರಾಗಿದ್ದು, ಅವರು ಸಾಮ್ರಾಜ್ಯ ಶಾಹಿಯ ಸಂಕೇತವಾಗಿದ್ದಾರೆ ಎನ್ನುವುದು. ವೈರುಧ್ಯವೆಂದರೆ ಎಲ್ಲ ಆಫ್ರಿಕನ್ನರಿಗೆ ಸ್ಫೂರ್ತಿ ಯಾಗಿರುವ ನೆಲ್ಸನ್ ಮಂಡೇಲ, ಗಾಂಧಿಯನ್ನು ತಮ್ಮ ಗುರುವೆಂದು ಭಾವಿಸಿದ್ದರು.

ಭಾರತದಲ್ಲಿ ಮಾರ್ಕ್ಸ್‌ವಾದಿಗಳು ಗಾಂಧೀಜಿಯನ್ನೇ ಬಂಡವಾಳಶಾಹಿಗಳ ಪ್ರತಿನಿಧಿ ಎಂದು ಪರಿಗಣಿಸುತ್ತಾರೆ. ಜೊತೆಗೆ ಗಾಂಧಿಯಿಂದ ಕಲಿಯಬಹುದಾದ ಯಾವ ಅಂಶವೂ ಇಲ್ಲವೆಂದು ಭಾವಿಸುತ್ತಾರೆ. ಯಾವುದೇ ಕಾರಣಕ್ಕೂ ಗಾಂಧೀಜಿಯವರ ವಿಚಾರಗಳು ಭಾರತದ ಸಾಮಾಜಿಕ ಬದಲಾವಣೆಗೆ ನೆರವಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕೆಲವರು ಗಾಂಧಿ ಮತ್ತು ಮಾರ್ಕ್ಸ್, ಗಾಂಧಿ ಮತ್ತು ಮಾವೋ ಇವರ ನಡುವೆ ಇರುವ ಸಾಮ್ಯತೆಗಳನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ಆದರೆ ಇಂತಹ ಪ್ರಯತ್ನಗಳು ಮಾರ್ಕ್ಸ್‌ವಾದಿಗಳನ್ನು ಪ್ರಭಾವಿಸಿಲ್ಲ.

ಅಂಬೇಡ್ಕರ್‌ವಾದಿಗಳು, ಬಹುಜನ ಸಮಾಜ ಪಕ್ಷದವರು ಗಾಂಧಿಯನ್ನು ಹೀನಾ- ಮಾನವಾಗಿ ಟೀಕಿಸುತ್ತಾರೆ. ಅವರೊಬ್ಬ ಬನಿಯ, ವರ್ಣಾಶ್ರಮ ಧರ್ಮವನ್ನು ಸಮರ್ಥಿಸುವ ವ್ಯಕ್ತಿ, ಜಾತಿ ಪದ್ಧತಿಯನ್ನು ಬೆಂಬಲಿಸುವವರು, ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್‌ರವರನ್ನು ತಮ್ಮ ಆಣತಿಗೆ ತಕ್ಕಂತೆ ಬಗ್ಗಿಸಿ ಪೂನಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡವರು, ದಲಿತರನ್ನು ಹರಿಜನರೆಂದು ಕರೆದು ಅವಮಾನ ಮಾಡಿದವರು ಹೀಗೆ ನೂರಾರು ಬಗೆಯ ದೋಷಾರೋಪಣಾ ಪಟ್ಟಿಯನ್ನು ಮಾಡುತ್ತಾರೆ.

ಸಾಮಾನ್ಯ ಜನರು ಮತ್ತು ಯುವಜನತೆಗೆ ಗಾಂಧೀಜಿಯವರ ಬಗೆಗೆ ಸಿನಿಕತನದ ಮನೋಭಾವವಿದೆ. ಗಾಂಧಿ ಎಂದರೆ ಯಾರೂ ಅನುಸರಿಸಲಾಗದ ಅಸಾಧ್ಯ ಆದರ್ಶಗಳನ್ನು ಬೋಧಿಸುವ ವ್ಯಕ್ತಿ, ಮುಸ್ಲಿಮರನ್ನು ಬೆಂಬಲಿಸಿದವರು, ಹಿಂದೂಗಳಿಗೆ ಅನ್ಯಾಯ ಮಾಡಿದವರು, ಯಾವುದೇ ರೀತಿಯಲ್ಲೂ ದೇಶಕ್ಕೆ ಅವರ ವಿಚಾರಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ಭಾವಿಸಿದ್ದಾರೆ. ಮುಗ್ಧರನ್ನು ಲೇವಡಿ ಮಾಡಲು ಅವರ ಹೆಸರನ್ನು ಬಳಸಿಕೊಳ್ಳುತ್ತಾರೆ. ಗಾಂಧಿ ಎಂಬ ಹೆಸರನ್ನು ಚಲಾವಣೆ ಇಲ್ಲದ ಸವಕಲು ನಾಣ್ಯದಂತೆ ಕಾಣುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿರುವ ಉನ್ನತ ವರ್ಗದ ಟೆಕ್ಕಿಗಳು ಗಾಂಧೀಜಿಯವರು ನೆಹರೂ ಮತ್ತು ಪಟೇಲರ ಜೊತೆ ಇರುವ ಫೋಟೊವನ್ನು ಕತ್ತರಿಸಿ ಆ ಜಾಗದಲ್ಲಿ ಮಹಿಳೆಯರ ಫೊಟೋವನ್ನು ಅಂಟಿಸಿ ಗಾಂಧೀಜಿಯವರನ್ನು ಸ್ತ್ರೀಲೋಲನಂತೆ ಲೈಂಗಿಕ ಪ್ರಲೋಭಿಯಂತೆ ಪ್ರತಿನಿಧಿಸುವ ಸತತ ಪ್ರಯತ್ನವನ್ನು ಮಾಡುತ್ತಾರೆ. ಭಾರತೀಯ ಮೇಲ್ಜಾತಿಗಳಂತೂ ಅದರಲ್ಲೂ ಬ್ರಾಹ್ಮಣ ಜಾತಿವಾದಿಗಳು ಗಾಂಧಿಯನ್ನು ತೀವ್ರವಾಗಿ ದ್ವೇಷಿಸುತ್ತಾರೆ. ಹಾಗಾಗಿ ಗಾಂಧಿಯವರ ವಿರುದ್ಧ ಇಲ್ಲಸಲ್ಲದ ಸುಳ್ಳು ಟೀಕೆಗಳನ್ನು ಮಾಡುತ್ತಾರೆ. ಇದರಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಜನರು ಗಾಂಧಿಯನ್ನು ದ್ವೇಷಿಸದಿದ್ದರೂ ಅವರನ್ನು ಪ್ರೀತಿಸುವ, ಅಧ್ಯಯನ ಮಾಡುವ ಅವಕಾಶವನ್ನು ತಪ್ಪಿಸಿಬಿಟ್ಟಿದ್ದಾರೆ.

ವಿಚಿತ್ರ ಆದರೂ ಸತ್ಯವೆಂದರೆ ಈಗ ಕೇಂದ್ರ ಸರಕಾರದಲ್ಲಿ ಅಧಿಕಾರದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತು ಅವರ ಪಕ್ಷ ಗಾಂಧಿಯನ್ನು ಬಳಸಿಕೊಳ್ಳುತ್ತಿರುವ ರೀತಿ. ಇದೇ ಎನ್‌ಡಿಎ ಸರಕಾರವು ವೀರ ಸಾವರ್ಕರ್‌ರವರ ಫೋಟೊವನ್ನು ಪಾರ್ಲಿ ಮೆಂಟಿನಲ್ಲಿ ಹಾಕಿದೆ.

ಮಹಾರಾಷ್ಟ್ರದ ಚಿತ್‌ಪಾವನ್ ಬ್ರಾಹ್ಮಣರಾದ ಸಾವರ್ಕರ್‌ರವರು ಮತ್ತಿತರ ತಮ್ಮ ಜಾತಿಯ ಜನರೊಡನೆ ಸೇರಿಕೊಂಡು ನಾಥೂರಾಮ್ ಗೋಡ್ಸೆಯ ಕೈಯಿಂದ ಗಾಂಧೀಜಿಯನ್ನು ಕೊಲ್ಲಿಸಿದರು ಎಂಬ ಆರೋಪವಿದೆ. ಜೊತೆಗೆ ಮಾನ್ಯ ಪ್ರಧಾನಿಯವರು ಗಾಂಧೀಜಿಯ ಕೊಲೆಗೆ ಸಂಚು ಮಾಡಿದ ಆರೋಪವನ್ನು ಹೊತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಹಿಂದೂ ಮಹಾ ಸಭಾ ಮೊದಲಾದ ಸಂಘಟನೆಗಳ ಸದಸ್ಯತ್ವವನ್ನು ಹೊಂದಿದ್ದಾರೆ ಮತ್ತು ಅವರಿಗೆ ಅದರ ಬಗ್ಗೆ ಅಪಾರ ಹೆಮ್ಮೆ ಇದೆ. ತಮ್ಮ ಬಾಲ್ಯದಿಂದಲೂ ಗಾಂಧೀಜಿಯ ವಿಚಾರಧಾರೆಗಳಿಗೆ ವಿರುದ್ಧವಾದ ವಿಷಯಗಳನ್ನು ಪ್ರತಿಪಾದಿಸುತ್ತಾ ಅವುಗಳನ್ನು ಆಚರಣೆಗೆ ತಂದಿದ್ದಾರೆ. ಆದರೆ ಪ್ರತೀ ಬಾರಿಯೂ ಗಾಂಧೀಜಿಯವರ ಬಗ್ಗೆ ಗೌರವಾದರ ತೋರಿಸಿದ್ದಾರೆ. ಅವರ ಕನ್ನಡಕವನ್ನು ಸ್ವಚ್ಛ ಭಾರತದ ಸಂಕೇತವಾಗಿ ಬಳಸಿದ್ದಾರೆ. ಮಾನ್ಯ ಪ್ರಧಾನಿಯವರು ಮಾತ್ರವಲ್ಲದೇ ಅವರ ಪಕ್ಷ ಜನ ಮತ್ತು ಅವರನ್ನು ಮೆಚ್ಚುವ ಎಲ್ಲರೂ ಇದೇ ತಂತ್ರವನ್ನು ಅನುಸರಿಸುತ್ತಾರೆ. ಇದರಿಂದಾಗಿ ಭಾರತದ ಒಂದು ದೊಡ್ಡ ಪಕ್ಷ, ಅದರ ನಾಯಕ, ನಾಯಕನ ಅಭಿಮಾನಿಗಳು ಸ್ಕ್ರಿಜೋಫಿನೀಯಕ್ಕೆ ತುತ್ತಾದವರಂತೆ ಏಕ ಕಾಲದಲ್ಲಿ ಗಾಂಧೀಜಿಯವರನ್ನು ತೆಗಳುವ, ಅವಮಾನಿಸುವ, ಚಾರಿತ್ರ ವಧೆ ಮಾಡುವ ಕೆಲಸ ಮಾಡುತ್ತ ಅದರ ಬಗ್ಗೆ ಕಿಂಚ್ಚಿತ್ತೂ ಪಾಪ ಪ್ರಜ್ಞೆ ಇಲ್ಲದೇ ಏನೂ ಆಗಿಯೇ ಇಲ್ಲವೆಂಬಂತೆ ಗಾಂಧಿಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಇಂತಹ ಆತ್ಮವಂಚಕ ವಿದ್ಯಮಾನ ಜಾಗತಿಕ ಚರಿತ್ರೆಯಲ್ಲಿ ಅಪರೂಪ ಮತ್ತು ಭಾರತದ ಬಹುಸಂಖ್ಯಾತ ಜನತೆ ಇದೇ ರೀತಿ ಒಡಕು ವ್ಯಕ್ತಿತ್ವ ಹಾಗೂ ಮನಸ್ಸು ಉಳ್ಳವರಾಗಿ ಇದನ್ನು ಯಾವ ಭಾವನೆಯೂ ಇಲ್ಲದೇ ಮೌನವಾಗಿ ವೀಕ್ಷಿಸುತ್ತಿರುತ್ತಾರೆ.

ಮುಸಲ್ಮಾನರು ಮುಹಮ್ಮದ್ ಆಲಿ ಜಿನ್ನಾರ ಕಾಲದಿಂದಲೂ ಗಾಂಧೀಜಿಯವರನ್ನು ಹಿಂದೂಗಳ ನಾಯಕ ಎಂದೇ ಬಿಂಬಿಸುತ್ತಾರೆ ಮತ್ತು ಮುಸಲ್ಮಾನರನ್ನು ಬದಿಗೊತ್ತಲು ಪ್ರಯತ್ನಿಸಿದವರು ಎಂಬ ಮಾತನ್ನು ನಂಬುತ್ತಾರೆ. ಪಾಕಿಸ್ತಾನದ ಪಠ್ಯಪುಸ್ತಕದಲ್ಲಿ ಗಾಂಧೀಜಿಯವರನ್ನು ನಕರಾತ್ಮಕವಾಗಿ ಚಿತ್ರಿಸಲಾಗಿದೆ. ನಮ್ಮದೇ ದೇಶದ ಬಿಜೆಪಿ ಆಳುತ್ತಿರುವ ರಾಜ್ಯದಲ್ಲಿ ಗಾಂಧೀಜಿಯವರ ಬಗ್ಗೆ ಹೆಚ್ಚು ಬರೆಯಲು ಸಂಕೋಚ ಪಟ್ಟುಕೊಳ್ಳಲಾಗುತ್ತದೆ. ಅವರನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂಬ ಒಂದೇ ವಾಕ್ಯದಲ್ಲಿ ಮುಗಿಸಲಾಗುತ್ತದೆ.

ಇಷ್ಟೆಲ್ಲದರ ನಡುವೆಯೂ ಅಲ್ಲೊಬ್ಬ ಇಲ್ಲೊಬ್ಬ ಕವಿ, ಕಲಾವಿದ, ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು, ಮುಕ್ತ ಮನಸ್ಸಿನ ಚಿಂತಕರು, ಗಾಂಧೀಜಿಯವರನ್ನು ಗೌರವ ಮತ್ತು ಪ್ರೀತಿಯಿಂದ ನೆನೆಯುತ್ತಾರೆ. ಕೆಲವು ಜನಸಾಮಾನ್ಯರು ಆತನೊಬ್ಬ ಒಳ್ಳೆಯ ವ್ಯಕ್ತಿ ಇರಬಹುದೆಂದು ನಂಬುತ್ತಾರೆ. ಬಹುಪಾಲು ಜನರಿಂದ ತಿರಸ್ಕರಿಸಲ್ಪಟ್ಟಿರುವ, ಆಳವಾಗಿ ದ್ವೇಷಿಸಲ್ಪಡುವ, ಉಪೇಕ್ಷೆಗೆ ಒಳಗಾಗಿರುವ ಗಾಂಧೀಜಿಯವರನ್ನು ಪ್ರಸ್ತುತ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳುವುದು ಹೇಗೆ? ಅವರ ಪ್ರಸ್ತುತತೆ ಏನಾದರು ಇದ್ದರೆ ಜಗತ್ತಿನ ಮುಂದಿಡುವುದು ಹೇಗೆ? ಅವರ ವಿಚಾರಗಳಲ್ಲಿರುವ ಶಕ್ತಿ ಹಾಗೂ ಮೌಲ್ಯವನ್ನು ವಿಸ್ತರಿಸುವುದು ಹೇಗೆ? ಎಂಬ ಪ್ರಶ್ನೆಯು ನಮ್ಮ ಮುಖಕ್ಕೆ ರಾಚುತ್ತಿದೆ.

– ಡಾ.ಸಿ.ಜಿ.ಲಕ್ಷ್ಮೀಪತಿ, ಪ್ರಾಧ್ಯಾಪಕರು

Leave a Reply