ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಐವತ್ತು ವರ್ಷಗಳ ರಾಜಕೀಯ ಜೀವನದ ಸಾಧಕ ಬಾಧಕಗಳು, ಮುಖ್ಯಮಂತ್ರಿಯಾಗಿ ಮೊದಲ ಮತ್ತು ಎರಡನೇ ಅವಧಿಯ ಸಾಧನೆ ಮತ್ತು ವೈಫಲ್ಯ ಎಲ್ಲವನ್ನೂ ಮುಂದಿನ ದಿನಗಳಲ್ಲಿ ತೌಲನಿಕವಾಗಿ ಚರ್ಚಿಸಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಂಬಿಕೆ ಇರುವ ಸಿದ್ದರಾಮಯ್ಯ ಇದರಲ್ಲಿ ಸ್ವತಃ ಮುಕ್ತವಾಗಿ ಭಾಗವಹಿಸುತ್ತಾರೆ ಎನ್ನುವ ನಂಬಿಕೆಯಿದೆ.
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
- ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು: ಸಿದ್ದರಾಮಯ್ಯ
ಜನಪರ ಕಾಳಜಿಯನ್ನು ಮೈಗೂಡಿಸಿಕೊಂಡಿದ್ದ ಸಿದ್ದರಾಮಯ್ಯ ಕರ್ನಾಟಕದ ಸೋಶಿಯಲ್ ಇಂಜಿನಿಯರಿಂಗ್ ನ ಆಳ ಅಗಲ ಬಲ್ಲವರಾಗಿದ್ದರು. ಆದರೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಇಲ್ಲಿ ಆರಕ್ಕೇರಬಹುದಾಗಿತ್ತು, ಆದರೆ ಮೂರಕ್ಕೆ ಇಳಿಯುವಂತಹ ವಾತಾವರಣ ಸೃಷ್ಟಿಯಾಗಿದ್ದು ನಿಜ. ಇದು ಬೇಸರದ ಸಂಗತಿ.
ಹಣಕಾಸು ಮಂತ್ರಿಗಳಾಗಿ ಅವರು ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ. ಬಡಜನರ ಕುರಿತು ಅವರು ಜಾರಿಗೊಳಿಸಿದ ಕಲ್ಯಾಣ ಯೋಜನೆಗಳು ತೋರಿಕೆಯದಾಗಿರಲಿಲ್ಲ. ‘ಯಾರೊಬ್ಬರೂ ಹಸಿವಿನಿಂದ ಮಲಗಬಾರದು’ ಎನ್ನುವ ಅವರ ಕಾಳಜಿ ಪ್ರಾಮಾಣಿಕವಾಗಿತ್ತು. ಆದರೆ ಅಲೆಮಾರಿ ಸಮುದಾಯ ಮತ್ತು ಅತಿ ಹಿಂದುಳಿದ ಜಾತಿಗಳನ್ನು ಒಳಗೊಂಡಂತೆ ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯ ಮತ್ತು ಸಬಲೀಕರಣ ಕಲ್ಪಿಸುವ ದೂರದೃಷ್ಟಿ, ಸಾಮರ್ಥ್ಯವಿದ್ದರೂ ಸಹ ಅದನ್ನು ಸಾಧಿಸಲು ಆಗಲಿಲ್ಲ. ಇದು ಸಹ ಬೇಸರದ ಸಂಗತಿ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿತ್ತು. ಆದರೂ ಸಹ ದೇವರಾಜ ಅರಸು ನಂತರ ಸಿದ್ದರಾಮಯ್ಯನವರು ಕರ್ನಾಟಕ ರಾಜಕಾರಣದ ಮೇಲೆ ಬ್ರಾಹ್ಮಣ-ಲಿಂಗಾಯತ-ಒಕ್ಕಲಿಗರ ಹಿಡಿತದ ಬಿಗಿಯನ್ನು ಸಡಿಲಗೊಳಿಸಿದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಡೆಗೂ ದೇಶ ಮತ್ತು ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ.
ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರು ಸಾಮಾಜಿಕ -ರಾಜಕೀಯ-ಆರ್ಥಿಕತೆಯ ‘ಕರ್ನಾಟಕ ಚಿಂತಕರ ಚಾವಡಿ’ಯನ್ನು ಕಟ್ಟಿ ಅದರ ಹೆಡ್ ಮೇಸ್ಟ್ರು ಆಗುವರೇ ಎಂದು ಆಶಿಸಬಹುದೇ?
ಹಾಗೆಯೇ ಮುಂದಿನ ಎರಡು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿರುವ, ರಾಜ್ಯದ ಸರ್ವತೋಮುಖ ಅಭಿವೃದ್ಧಿ ರೂಪಿಸಲು ಅಧಿಕಾರ ಪಡೆದಿರುವ ಡಿಕೆಶಿಯವರ ಕಾಳಜಿ ಬಗ್ಗೆ ಮತ್ತು ಅವರ ಮುಂದಿರುವ ಸವಾಲುಗಳ ಕುರಿತು ಯೋಚಿಸುವಾಗ ಯಾಕೆ ಒಂದು ಬಗೆಯ ಖಿನ್ನತೆ, ಆತಂಕ ಮೂಡುತ್ತದೆ?
ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಮೇಲಿನ ವಿಚಾರಗಳು ಕುರಿತು ನಿರೀಕ್ಷೆ, ಭರವಸೆ ಮೂಡಿಸಿದ್ದರು ಎಂಬುದು ಏನನ್ನು ಸೂಚಿಸುತ್ತದೆ? (ನಿರ್ಣಾಯಕ ಸಂದರ್ಭಗಳಲ್ಲಿ ನಿರಾಶೆಗೊಳಿಸಿದರು ಎನ್ನುವುದು ವಾಸ್ತವ) ಆದರೂ ದೇಶ ಮತ್ತು ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತದೆ ಎಂಬುದೂ ನಿಜ.
ಎಷ್ಟೇ ಅನುಮಾನಗಳಿದ್ದರೂ ಸಹ ಡಿಕೆಶಿಯವರ ಮುಂದಿನ ಆಡಳಿತದ ಕುರಿತು ನಾವು ಕಾದು ನೋಡಬೇಕು, ನಿರೀಕ್ಷೆಗಳು ಇದ್ದೇ ಇರಬೇಕು. ಆದರೆ ಉಳಿದಿರುವುದೇ ಒಂದೂವರೆ ವರ್ಷ(2028ರ ಮೊದಲ ನಾಲ್ಕು ತಿಂಗಳು ಲೆಕ್ಕಕ್ಕಿಲ್ಲ) ಎನ್ನುವುದು ಡಿಕೆಶಿಯವರಿಗೆ ಅನುಕೂಲವೋ? ಅನಾನುಕೂಲವೋ? ಎರಡೂ ಸಂದರ್ಭಗಳಲ್ಲಿ ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಡಿಕೆಶಿಯವರಿಗೆ ಕನಸಿನಲ್ಲೂ ಕಾಡುತ್ತದೆಯೇ ಎಂಬುದೇ ಯಕ್ಷಪ್ರಶ್ನೆ. ಇದು ಎಲ್ಲಾ ಕಾಲದ ಯುಗಧರ್ಮ.
– ಬಿ ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




