ವಿದೇಶಿ ಸರಕುಗಳನ್ನು ಹೊತ್ತು ಮೆರೆಯುವಾಗ ಕಂಬಳಕ್ಕೆ ವಿರೋಧವೇಕೆ?

2 months ago

ಕರ್ನಾಟಕ ರಾಜ್ಯ ಏಕೀಕರಣವಾಗುವ ಮೊದಲು ಮೈಸೂರು ಪ್ರಾಂತ್ಯದಲ್ಲಿ ಇದ್ದ 13 ಜಿಲ್ಲೆಗಳ ವ್ಯಾಪ್ತಿಗೆ ಮಂಗಳೂರು ಬಂದಿರಲಿಲ್ಲ. ಇದು ಮುಂಬೈ ಪ್ರಾಂತ್ಯದಲ್ಲಿ ಇತ್ತು. 1947ರ ಮೊದಲು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಮೈಸೂರಿನ ರಾಜ್ಯದಲ್ಲಿ ಕರಾವಳಿಯ ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯ ಆಗಿರಲಿಲ್ಲ. ಈಗ ಏಕೀಕರಣವಾಗಿ ಕರಾವಳಿ ಪ್ರದೇಶಗಳು ಕರ್ನಾಟಕದ ಭಾಗವೇ ಆಗಿರುವುದರಿಂದ ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ವಿಚಾರಗಳು ಸಮಸ್ತ ಕರ್ನಾಟಕ ರಾಜ್ಯದ ಭಾಗವೇ ಆಗಿರುತ್ತದೆ.

ಯಾವುದೋ ದೇಶದ ಸಂಸ್ಕೃತಿಯನ್ನು ನಮ್ಮ ದೇಶದಲ್ಲಿ ಬಿತ್ತರಿಸಿ ಆನಂದಿಸುವಾಗ, ಅದೇ ರೀತಿಯಲ್ಲಿ ನಮ್ಮ ದೇಶದ ಸಂಸ್ಕೃತಿಯನ್ನು ಮತ್ತೊಂದು ದೇಶದ ನೆಲದಲ್ಲಿ ಪ್ರದರ್ಶಿಸಿ ಅಲ್ಲಿನ ಜನರಿಗೆ ಸಂತೋಷವನ್ನು ಉಂಟುಮಾಡುವ, ಇಂತಹ ಕಾಲಘಟ್ಟದಲ್ಲಿ ನಮ್ಮ ಕರಾವಳಿಯ ಸಂಸ್ಕೃತಿಯಾದ ಒಂದು ರೀತಿಯ ಕ್ರೀಡೆಯಾಗಿರುವ ಕಂಬಳವನ್ನು ಮೈಸೂರು ದಸರಾ ಸಂದರ್ಭದಲ್ಲಿ ಪ್ರದರ್ಶಿಸಲು ಚರ್ಚೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿರೋಧಗಳು ವ್ಯಕ್ತವಾಗುತ್ತಿರುವುದು ಯಾವ ಕಾರಣದಿಂದ ಎನ್ನುವುದು ಸ್ಪಷ್ಟವಾಗುತ್ತಿಲ್ಲ.

ಕಂಬಳ ನಮ್ಮ ಕರಾವಳಿಯ ಒಂದು ಗ್ರಾಮೀಣ ಕ್ರೀಡೆಯಾಗಿದೆ. ಇದನ್ನು ದಸರಾ ಸಂದರ್ಭದಲ್ಲಿ ಪ್ರದರ್ಶಿಸುವುದರಿಂದ ಪರಸ್ಪರ ಸಂಸ್ಕೃತಿಯ ವಿನಿಮಯವಾಗುತ್ತದೆ. ನಮ್ಮ ಹಳೆ ಮೈಸೂರಿನ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕಲೆಗಳು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಪ್ರದರ್ಶನವಾಗುತ್ತಿವೆ. ಅಲ್ಲಿನ ಜನರು ಇವುಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದ ಬೇರೆಬೇರೆ ಭಾಗದ ಅಲ್ಲಿನ ಜನರ ಪ್ರಾದೇಶಿಕ ಸಾಂಸ್ಕೃತಿಕ ಸಂಗತಿಗಳು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರದರ್ಶನವಾದಾಗ ಪರಸ್ಪರ ವಿನಿಮಯವಾಗುತ್ತದೆ.

ಕಂಬಳ ಯಾವುದೋ ದೇಶದ ಅಥವಾ ನೋಡಬಾರದಂತಹ ಸಾಂಸ್ಕೃತಿಕ ಸಂಗತಿಯಲ್ಲ. ಇದೊಂದು ಕರಾವಳಿ ಭಾಗದ ಜನರ ಬಹು ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಮೈಸೂರು ದಸರಾ ಸಮಸ್ತ ಕರ್ನಾಟಕ ರಾಜ್ಯದ ಒಂದು ಉತ್ಸವವಾಗಿದೆ. ಇಂತಹ ಉತ್ಸವದಲ್ಲಿ ರಾಜ್ಯದ ಬೇರೆಬೇರೆ ಭಾಗದ ಜನರ ಪ್ರಾದೇಶಿಕ ಸಂಸ್ಕೃತಿ ಅನಾವರಣವಾಗುವುದರಿಂದ ಯಾವ ಅಪರಾಧವು ಆಗುವುದಿಲ್ಲ. ಸಕಾರಣವಿಲ್ಲದೆ ವಿರೋಧ ಮಾಡುವುದು ಸರಿಯಲ್ಲ. ಇತ್ತೀಚಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳವನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಸಂತೋಷಪಟ್ಟಿದ್ದಾರೆ.  ಈ ವಿಚಾರದಲ್ಲಿ ದಸರಾ ಮಹೋತ್ಸವದ ಉಸ್ತುವಾರಿ ಪ್ರಮುಖರು ಚರ್ಚೆಯನ್ನ ಮಾಡಿ ಅಂತಿಮ ತೀರ್ಮಾನಕ್ಕೆ ಬರುವುದು ಸೂಕ್ತ.

ಕೆ.ಎಸ್.ನಾಗರಾಜ್‌, ಬೆಂಗಳೂರು

Leave a Reply