ಬೆಂಗಳೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ವಿದ್ಯುತ್ ಚಾಲನೆ ಸಿಕ್ಕಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ವಿದ್ಯುಕ್ತ ಪೂಜೆ ಸಲ್ಲಿಸಿ ನಂತರ ನಂದಿಕೋಲಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.
ಅಲ್ಪಸಂಖ್ಯಾತರಾಗಿರುವ ಬಾನು ಮುಷ್ತಾಕ್ ಅವರಿಂದ ಸಾಂಪ್ರದಾಯಿಕ ದಸರಾ ಉತ್ಸವ ಉದ್ಘಾಟನೆಗೆ ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಉದ್ಘಾಟನೆಗೆ ಹಿಂದೆಂದೂ ಕಂಡರಿಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ವಿಚಾರವಾದಿಯೂ ಆಗಿರುವ ಸಾಹಿತಿ ಬಾನು ಮುಷ್ತಾಕ್ ಅವರು ದೇವರ ಪೂಜೆ ಮಾಡುವುದಿಲ್ಲ. ಭುವನೇಶ್ವರಿ ವಿರುದ್ಧ ಮಾತನಾಡಿದ್ದಾರೆ ಎಂಬ ಆರೋಪಗಳು ಸುಳ್ಳು ಎಂಬಂತೆ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಅಪ್ಪಟ ಸಂಪ್ರದಾಯವಾದಿಗಳ ರೀತಿಯಲ್ಲಿಯೇ ಪೂಜೆ ಸಲ್ಲಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮೈಸೂರು ದಸರಾ, ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳವಾಗಿದೆ ಎಂದರು.
ಮೈಸೂರು ದಸರಾದ ಪವಿತ್ರದ ಕ್ಷಣದಲ್ಲಿ ಚಾಮುಂಡಿ ತಾಯಿಯ ಕೃಪೆಯ ನೆರಳಿನಲ್ಲಿ, ಈ ವೇದಿಕೆಯಿಂದ ನಿಮ್ಮೆದುರು ನಿಲ್ಲುವ ಅವಕಾಶ ದೊರೆತಿರುವುದು ನನ್ನ ಜೀವನದ ಅತ್ಯಂತ ಗೌರವದ ಘಳಿಗೆ ಎಂದರು.
ದಸರಾ ಎಂದರೆ ಕೇವಲ ಹಬ್ಬವಲ್ಲ, ಇದು ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಕ್ಕೂ ಈ ಮಣ್ಣಿನ ವಾರಸುದಾರಿಕೆ, ಸ್ಪಂದನೆ ಮತ್ತು ನೆನಪುಗಳಿವೆ ಎಂದರು.
ಮೈಸೂರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು, ಕನ್ನಡ ಭಾಷೆಯ ಅಂತರಾಳದ ಹೃದಯಸ್ಪಂದನದವರೆಗೆ ಈ ಹಬ್ಬವು ನಮಗೆ ಸ್ಮರಿಸುತ್ತದೆ. ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ಮಹಾರಾಜರು ಜಯಚಾಮರಾಜೇಂದ್ರ ಒಡೆಯರು ಮುಸ್ಲಿಂರ ನಂಬಿ, ಅವರನ್ನು ಅನುಮಾನಿಸದೇ, ಅಂಗರಕ್ಷಕರ ಪಡೆಯ ಸದಸ್ಯರಾಗಿದ್ದರು. ಇದು ನಮಗೆ ಬಹಳ ಹೆಮ್ಮೆಯ ಮತ್ತು ಆಪ್ಯಾಯಮಾನವಾದ ವಿಷಯ ಎಂದರು.
ಸಂಸ್ಕೃತಿ ಎಂದರೆ ಹೃದಯದಗಲವನ್ನು ಹುಟ್ಟಿಸುವ ನನ್ನ ಧಾರ್ಮಿಕ ನಂಬಿಕೆ, ಯಾವಾಗಲೂ ಜೀವ ಪರ ಮಾನವೀಯಪರ. ಈ ನೆಲದ ಸಂಸ್ಕೃತಿಯ ಮೂಲ ಎಲ್ಲರನ್ನೊಳಗೊಳ್ಳುವ ಎಲ್ಲರ ಬದುಕನ್ನು ಗೌರವಿಸುವ, ನಮ್ಮೆಲ್ಲರ ಸರ್ವ ಜನಾಂಗದ ಶಾಂತಿಯ ತೋಟ ಎಂದರು.
ಮೈಸೂರು ದಸರಾ ಘೋಷಣೆ ನಮ್ಮೆಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ. ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ, ಇದು ಸರ್ವಜನಾಂಗದ ಶಾಂತಿಯ ತೋಟ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಿ, ಪರಸ್ಪರರ ನಂಬಿಕೆಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದರ ಮೂಲಕ ನಮ್ಮ ಬದುಕನ್ನು ಶ್ರೀಮಂತಗೊಳಿಸಬೇಕಿದೆ ಎಂದರು.
ಈ ನೆಲದ ಸುಗಂಧವನ್ನು ಐಕ್ಯತೆಯಾಗಲಿ, ನೆಲದ ಬಿಸಿಲು ಕೂಡ ಸಾಹಾರ್ದತೆಯಿಂದ ಕೂಡಿದೆ. ಈ ನೆಲದ ಬಿಸಿಲು ಕೂಡ ಮಾನವೀಯ ಪ್ರೀತಿಯ ಪ್ರತೀಕವಾಗಿದೆ. ಈ ಸಂದರ್ಭದಲ್ಲಿ ಚಾಮುಂಡಿ ತಾಯಿಯ ಮಹಿಮೆ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಕವಾಗಿರಲಿ ಎಂದರು.
ತಾಯಿ ಚಾಮುಂಡಿ ಸತ್ಯ, ಧೈರ್ಯ ಹಾಗೂ ರಕ್ಷಕತ್ವದ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಗಳನ್ನು ನಾಶವಾಗಲೆಂದು ಬಯಸುತ್ತೇನೆ. ಈ ದಸರಾ ಹಬ್ಬ ಕೇವಲ ಮೈಸೂರು ನಗರಕ್ಕೆ ಸೀಮಿತವಾಗದೇ, ನಮ್ಮ ನಾಡಿಗೆ ಮಾತ್ರ , ದೇಶಕ್ಕೆ ಮಾತ್ರ ಸೀಮಿತವಾಗದೇ, ಇಡೀ ಜಗಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ ಸಹಾನುಭೂತಿ, ಪ್ರೀತಿ ಮತ್ತು ನ್ಯಾಯದ ದೀಪವನ್ನು ಬೆಳೆಗಿಸಲೆಂದು ಹಾರೈಸುತ್ತೇನೆ ಎಂದರು.
ಇಂದು ಬೆಳೆಗಿಸಿದ ದೀಪ ಈ ಸಂದೇಶದೊಂದಿಗೆ ಇಡೀ ಪ್ರಪಂಚದಾದ್ಯಂತ ತನ್ನ ನೆಲೆಯನ್ನು ಕಂಡುಕೊಳ್ಳಲಿ ಎಂದು ಆಶಿಸುತ್ತೇನೆ. ನನ್ನ ಬದುಕು ನನಗೆ ಅನೇಕ ಪಾಠಗಳನ್ನು ಕಲಿಸಿದೆ. ಅದರಲ್ಲಿ ಮುಖ್ಯಪಾಠವೆಂದರೆ, ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವ ದಾರಿ ಮಾತ್ರ ನಿಜವಾದ ದಾರಿ ಎಂದರು.
ನನ್ನ ಧಾರ್ಮಿಕ ನಂಬಿಕೆಗಳು, ನನ್ನ ಜೀವನ ದರ್ಶನ ಎಂದಿಗೂ ಜೀವಪರ. ಅವು ಮರದ ನೆರಳಿನಂತೆ, ತಂಪಾದ ನದಿಯಂತೆ, ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ಇಂದು ಮನುಕುಲ ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗಿರುವಾಗ, ದಸರಾ ಘೋಷಣೆಯು ಎಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ, ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ. ಇದು ಸರ್ವಜನಾಂಗದ ಶಾಂತಿಯ ತೋಟ. ನನ್ನ ಜೀವನದ ದರ್ಶನ ಯಾವತ್ತಿಗೂ ಜೀವಪರ. ಅಸ್ತ್ರಗಳಿಂದಲ್ಲ, ಅಕ್ಷರದಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು ಎಂದರು.
ಈ ನೆಲದ ಪರಂಪರೆಯೇ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ತೋಟದಲ್ಲಿ ಪ್ರತಿ ಹೂವು ತನ್ನ ಬಣ್ಣದಲ್ಲೇ ಅರಳಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ, ಆದರೆ ಒಟ್ಟಿಗೆ ಸೇರಿದಾಗ ಅದು ಸೌಹಾರ್ದ ಸಿಂಫನಿಯಾಗಲಿ. ಪ್ರಜಾಪ್ರಭುತ್ವವು ಕೇವಲ ವ್ಯವಸ್ಥೆಯಲ್ಲ, ಅದು ಮೌಲ್ಯ. ಅದು ಪ್ರತಿಯೊಬ್ಬರ ಧ್ವನಿಯನ್ನು ಗೌರವಿಸುವ ಮನೋಭಾವ. ಅದು ಬೇರೆಯವರ ಬದುಕಿನಲ್ಲಿ ಅರ್ಥಪೂರ್ಣವಾಗಿ ನಡೆದುಕೊಳ್ಳುವ ಜವಾಬ್ದಾರಿ. ಅದನ್ನು ಗೌರವಿಸುವು ನಮ್ಮೆಲ್ಲರ ಕರ್ತವ್ಯ ಎಂದರು.
ನಾವು ಎಲ್ಲರೂ ಒಂದೇ ಗಗನದಡಿಯ ಪಯಣಿಗರು. ಆಕಾಶವು ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ತಳ್ಳುವುದಿಲ್ಲ. ಮನುಷ್ಯನು ಮಾತ್ರ ಗಡಿ ಹಾಕುತ್ತಾನೆ. ಆ ಗಡಿಗಳನ್ನು ನಾವೇ ಅಳಿಸಬೇಕು. ಇಂದು ಈ ಹಬ್ಬ ಮೈಸೂರಿನ ಬೀದಿಗಳಲ್ಲಿ ಮಾತ್ರವತ್ತ. ಇಡೀ ಜಗತ್ತಿನ ಹೃದಯಗಳಲ್ಲಿ ಬೆಳಗಲಿ ಎಂದರು.
ಇತಿಹಾಸದತ್ತ ನೋಡಿದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದೆಂದಿಗೂ ಪ್ರಸ್ತುತವಾಗುತ್ತಾರೆ. ಅವರು ಹಂಚಿಕೊಳ್ಳುವ ಮನದ ಅರಸ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯದ ಔದಾರ್ಯದ ದೊರೆಯಾಗಿದ್ದರು. ಭೇದ ಭಾವಕ್ಕಿಂತ ವಿಶಾಲ ಮನಸ್ಸಿಗೆ ಗೌರವವಿತ್ತು. ಅವರು ನೀಡಿದ ಸಂದೇಶ ಸಂಪತ್ತನ್ನು ಹಂಚಿದಾದ ಮಾತ್ರ ಅದು ಬೆಳೆಯುತ್ತದೆ. ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕತ್ತದೆ ಎಂದರು.
ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ , ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ. ತಾನೊಬ್ಬ ಕವಿಯತ್ರಿಯಾಗಿದ್ದು, ಕವಿತೆಯ ಮೂಲಕ ನನ್ನ ಸಂದೇಶವನ್ನು ತಿಳಿಸಲು ಬಯಸಿದ್ದು, ಮುಸ್ಲಿಂ ಹೆಣ್ಣುಮಗಳು ಬಾಗಿನವನ್ನು ಪಡೆದಾಗಿನ ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯನ್ನು ಓದಿದರು.




