ಬೆಳಗಾವಿಯಲ್ಲಿ ತಿರುಪತಿ ವೆಂಕಟೇಶ್ವರನ ದೇವಾಲಯ ನಿರ್ಮಾಣ

11 months ago

ಬೆಂಗಳೂರು: ಕಿತ್ತೂರು ಕರ್ನಾಟಕದ ಬೆಳಗಾವಿಯಲ್ಲಿ ಪುರಾಣ ಪ್ರಸಿದ್ಧ ತಿರುಪತಿ ವೆಂಕಟೇಶ್ವರನ ದೇವಾಲಯ ನಿರ್ಮಾಣವಾಗಲಿದೆ.

ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ವೆಂಕಟೇಶ್ವರನ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಬೆಳಗಾವಿಯಲ್ಲಿ ತಿರುಪತಿ – ತಿರುಮಲ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಟಿಟಿಡಿ ಸದಸ್ಯ ಎಸ್‌ ನರೇಶ್‌ ಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿಯಲ್ಲಿ ಸೆಪ್ಟೆಂಬರ್ 16ರಂದು ನಡೆದ ತಿರುಮಲ ತಿರುಪತಿ ಆಡಳಿತ ಮಂಡಳಿ ಸಭೆಯಲ್ಲಿ ಉತ್ತರ ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರ ರಾಜ್ಯದ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಇದಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದರು.

ಬೆಂಗಳೂರು ಹಾಗೂ ದೇಶದ ಇತರೆ ಭಾಗಗಳಲ್ಲಿ ಇರುವಂತೆ ಬೆಳಗಾವಿಯಲ್ಲೂ ದೇವಸ್ಥಾನ ನಿರ್ಮಿಸುವುದರಿಂದ ಆಭಾಗದ ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಪ್ರತಿ ಬಾರಿಯೂ ತಿರುಪತಿ-ತಿರುಮಲಕ್ಕೆ ಭೇಟಿ ನೀಡುವ ಬದಲಾಗಿ, ಸ್ಥಳೀಯವಾಗಿಯೇ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಭಾಗ್ಯ ಲಭಿಸಲಿದೆ ಎಂದರು.

ಬೆಳಗಾವಿ ಸುವರ್ಣಸೌಧದ ಹತ್ತಿರ ಈ ದೇವಸ್ಥಾನಕ್ಕೆ ಜಾಗ ಗುರುತಿಸಲಾಗಿದ್ದು ಅಲ್ಲಿಯೇ ಭವ್ಯವಾದ ವೆಂಕಟೇಶ್ವರ ದೇವಾಲಯ ನಿರ್ಮಾಣವಾಗಲಿದೆ. ಶ್ರೀವಾಣಿ ಟ್ರಸ್ಟ್‌ ಮುಖಾಂತರ ಈ ದೇವಸ್ಥಾನ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಟಿಟಿಡಿ ಅಧ್ಯಕ್ಷರಾದ ಬಿ ಆರ್‌ ನಾಯ್ಡು ಅವರು ಬೆಳಗಾವಿಗೆ ಭೇಟಿ ನೀಡಿ ಮುಂದಿನ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದರು.

ಸಾಲಕಟ್ಲ ಬ್ರಹ್ಮೋತ್ಸವ: ತಿರುಮಲದ ಪಾವಿತ್ರ್ಯತೆಯನ್ನು ಕಾಪಾಡುವುದು ಮತ್ತು ಸಾಮಾನ್ಯ ಭಕ್ತರಿಗೆ ಸುಲಭ ದರ್ಶನ ಒದಗಿಸುವುದು ಆಂಧ್ರಪ್ರದೇಶದ ಸಿಎಂ  ಎನ್. ಚಂದ್ರಬಾಬು ನಾಯ್ಡು ಅವರ ಮುಖ್ಯ ಆದ್ಯತೆಯಾಗಿದೆ. ಬ್ರಹ್ಮೋತ್ಸವದ ಸಮಯದಲ್ಲಿ ಈ ನಿಟ್ಟಿನಲ್ಲಿ ನಾವು ವಿಶೇಷ ಗಮನ ಹರಿಸುತ್ತಿದ್ದೇವೆ.  ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವವು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2, 2025 ರವರೆಗೆ ನಡೆಯಲಿದೆ ಎಂದರು.

ಪ್ರಮುಖ ಧಾರ್ಮಿಕ ವಿಧಿಗಳು: ಬ್ರಹ್ಮೋತ್ಸವ ಸೆಪ್ಟೆಂಬರ್ 23 ರಂದು ಅಂಕುರಾರ್ಪಣಂ (ಬೀಜ ಬಿತ್ತುವುದು) ಎಂಬ ಪವಿತ್ರ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ. ಇದು ಹಬ್ಬವು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆಯುವಂತೆ ಮಾಡುವ ಧಾರ್ಮಿಕ ವಿಧಿಯಾಗಿದೆ. ಸೆಪ್ಟೆಂಬರ್ 24 ರಂದು ನಡೆಯುವ ಧ್ವಜಾರೋಹಣಂ (ಧ್ವಜಾರೋಹಣ) ಪ್ರಮುಖ ಆಕರ್ಷಣೆಯಾಗಿದ್ದು, ಗರುಡ ಧ್ವಜವನ್ನು ದೇಗುಲದ ಧ್ವಜಸ್ತಂಭದ ಮೇಲೆ ಹಾರಿಸುವುದರ ಮೂಲಕ ದೇವತೆಗಳನ್ನು ಮತ್ತು ಋಷಿಮುನಿಗಳನ್ನು ಹಬ್ಬಕ್ಕೆ ಆಹ್ವಾನಿಸಲಾಗುತ್ತದೆ.

ಪ್ರಮುಖ ದಿನಗಳು ಮತ್ತು ವಾಹನ ಸೇವೆಗಳು

– ಸೆಪ್ಟೆಂಬರ್ 24 (ಬುಧವಾರ): ಧ್ವಜಾರೋಹಣಂ, ರಾತ್ರಿ ಪೆದ್ದ ಶೇಷ ವಾಹನಂ.
– ಸೆಪ್ಟೆಂಬರ್ 28 (ಭಾನುವಾರ): ಇದು ಅತಿ ಪ್ರಮುಖ ದಿನವಾಗಿದ್ದು, ಅದ್ದೂರಿಯಾಗಿ ನಡೆಯುವ ಗರುಡ ಸೇವೆ ಭಕ್ತರ ಪ್ರಮುಖ ಆಕರ್ಷಣೆಯಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಆಗಮಿಸಲಿದ್ದಾರೆ
– ಅಕ್ಟೋಬರ್ 1 (ಬುಧವಾರ): ಬೆಳಗ್ಗೆ ರಥೋತ್ಸವಂ.
– ಅಕ್ಟೋಬರ್ 2 (ಗುರುವಾರ): ಕೊನೆಯ ದಿನ, ಚಕ್ರ ಸ್ನಾನಂ ಮತ್ತು ಧ್ವಜಾವರೋಹಣಂ (ಧ್ವಜವನ್ನು ಕೆಳಗಿಳಿಸುವುದು) ವಿಧಿಗಳೊಂದಿಗೆ ಬ್ರಹ್ಮೋತ್ಸವ ಮುಕ್ತಾಯವಾಗುತ್ತದೆ.

ಸಾಲಕಟ್ಲ ಬ್ರಹ್ಮೋತ್ಸವವನ್ನು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಟಿಟಿಡಿಯ ಎಲ್ಲಾ ಇಲಾಖೆಗಳು ಸೂಕ್ಷ್ಮ ಮಟ್ಟದ ಯೋಜನೆಗಳನ್ನು ಸಿದ್ಧಪಡಿಸಿವೆ. ಭಕ್ತರಿಗೆ ಯಾವುದೇ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

Leave a Reply