ದಸರಾ ಉದ್ಘಾಟನೆ ಪ್ರತಾಪ್ ಸಿಂಹ ತಕರಾರು ಅರ್ಜಿ ವಜಾಗೊಳಿಸಿದ ಹೈಕೋರ್ಟ್

7 months ago

ಪ್ರತಾಪ್ ಸಿಂಹ ಮತ್ತು ಇತರರಿಗೆ ತೀವ್ರ ಮುಖಭಂಗ

ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. 

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠ ಅರ್ಜಿದಾರರು ಹೇಳಿರುವಂತೆ ಸರ್ಕಾರದ ನಿರ್ಧಾರದಿಂದ ಯಾವುದೇ ‘ಹಕ್ಕು ಉಲ್ಲಂಘನೆಯಾಗುತ್ತಿಲ್ಲ ಎಂದು ಹೇಳಿ ಅರ್ಜಿಗಳನ್ನು ವಜಾಗೊಳಿಸಿತು. ಈ ಮೂಲಕ ಬಿಜೆಪಿ ಮತ್ತು ಸಂಘ ಪರಿವಾರ ಬೆಂಬಲಿತ ಅಜೆಂಡಾಕ್ಕೆ ತೀವ್ರ ಹಿನ್ನಡೆ ಆಗಿದೆ.

ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಯಾವುದೇ ನಂಬಿಕೆ ಇಲ್ಲದ ದೇವರ ಆರಾಧನೆಯನ್ನು ಒಪ್ಪದ ಮುಸ್ಲಿಂ ಸಮುದಾಯದ ಮಹಿಳೆ ಒಬ್ಬರಿಂದ ನಾಡಹಬ್ಬ ದಸರಾ ಉದ್ಘಾಟಿಸುವ ಮೂಲಕ ಹಿಂದುಗಳ ಧಾರ್ಮಿಕ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಾಪ್ ಸಿಂಹ ಮತ್ತಿತರರು ರಿಟ್ ಸಲ್ಲಿಸಿದ್ದರು.

ವಿಚಾರಣೆ ವೇಳೆ ಪ್ರತಾಪ್‌ ಸಿಂಹ ಪರ ವಾದಿಸಿದ ಹೈಕೋರ್ಟ್ ವಕೀಲ ಎಸ್‌.ಸುದರ್ಶನ್‌, ಬಾನು ಮುಷ್ತಾಕ್‌ ಅವರು ಹಿಂದೂ ಸಂಪ್ರದಾಯ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ದಸರಾ ಉದ್ಘಾಟನೆಗೆ ಆಯ್ಕೆಯಾದವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಶಿಷ್ಟಾಚಾರ. ಆದರೆ ಅವರು ಇದನ್ನು ಪಾಲನೆ ಮಾಡಿಲ್ಲ. ಬಾನು ಮುಷ್ತಾಕ್‌ ಅವರಿಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಹಿಂದೂ ಹಬ್ಬವಾಗಿದ್ದು, ಜಾತ್ಯತೀತ ಹಬ್ಬವಲ್ಲ ಎಂದು ಪ್ರತಿಪಾದಿಸಿದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ರಾಜ್ಯದ ಹಬ್ಬ. ಸರ್ಕಾರದ ನಿರ್ಧಾರ ಸಂವಿಧಾನದ 15ನೇ ವಿಧಿಗೆ ಪೂರಕವಾಗಿದೆ. ಪ್ರತಾಪ್‌ ಸಂಸದರಾಗಿದ್ದಾಗ ಸಾಹಿತಿ ಕೆ‌.ಎಸ್.ನಿಸಾರ್‌ ಅಹ್ಮದ್‌ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು. ಪ್ರತಾಪ್‌ ಸಿಂಹ ಆಗ ಆಕ್ಷೇಪ ವ್ಯಕ್ತ ಮಾಡಿರಲಿಲ್ಲ. ಈ ವಿಚಾರವನ್ನು ಅವರು ಈಗ ಮುಚ್ಚಿಟ್ಟಿದ್ದಾರೆ. ಬಾನು ಮುಷ್ತಾಕ್‌ ಬೂಕರ್‌ ಪ್ರಶಸ್ತಿ ಪುರಸ್ಕೃತರು. ಹಾಗಾಗಿಯೇ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಆದ್ದರಿಂದ, ಅರ್ಜಿಯನ್ನು ವಜಾ ಮಾಡಿ ಅರ್ಜಿದಾರ ಪ್ರತಾಪ್‌ ಸಿಂಹ ಅವರಿಗೆ ದಂಡ ವಿಧಿಸಬೇಕು ಎಂದು ಕೋರಿದರು.

ಲೇಖಕಿಯನ್ನು ಹಿಂದೂ ವಿರೋಧಿ ಎನ್ನುವುದು ಸರಿಯಲ್ಲ. ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶ ನೀಡಬಾರದು ಎಂದು ಕೂಡ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾರ್ಯಕ್ರಮದಲ್ಲಿ ಅನ್ಯಧರ್ಮದ ವ್ಯಕ್ತಿ ಭಾಗಿಯಾಗುವುದರಿಂದ ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವಾ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ ಎಂಬ ಕಾರಣ ನೀಡಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿತು.

ಒಟ್ಟಿನಲ್ಲಿ ಹಿಂದುತ್ವ ಪರ ಹುಲಿಗಳಂತೆ ಫೋಸ್ ಕೊಟ್ಟು ಹೀರೋ ಆಗಬೇಕು ಎಂದು ದೂರು ನೀಡಿದ್ದವರಿಗೆ ಕೋರ್ಟ್ ತೀರ್ಪಿನಿಂದ ಭಾರೀ ಮುಖಭಂಗ ಉಂಟಾಗಿದೆ.

Leave a Reply