ಇವರೆಲ್ಲ ತಮ್ಮ ಪಾಡಿಗೆ ತಾವು ಇದ್ದಿದ್ದರೆ

1 year ago

ಸಹಸ್ರಾರು ವರ್ಷಗಳ ಹಿಂದೆಯೇ ಬುದ್ದ ಮಾನವೀಯತೆಯ ಬೀಜ ಬಿತ್ತದಿದ್ದರೆ, ಧರ್ಮದ ಸಂದೇಶ ನೀಡದೆ ಅರಮನೆಯಲ್ಲಿ ರಾಜನಾಗಿ ಉಳಿದುಕೊಂಡಿದ್ದರೆ ಏನಾಗುತ್ತಿತ್ತು ?

ಹಲವಾರು ಶತಮಾನಗಳ ಹಿಂದೆಯೇ ಬಸವಣ್ಣ ಸಮಸಮಾಜದ ಕನಸನ್ನು ಕಾಣುತ್ತಾ ಸಮಾನತೆಯನ್ನು ಸಾಕಾರಗೊಳಿಸಲು ಕ್ರಾಂತಿ ಮಾಡದೆ ಅನುಭವ ಮಂಟಪವ ನಿರ್ಮಿಸದೆ ತಮ್ಮ ಪಾಡಿಗೆ ತಾವು ಬದುಕಿದ್ದರೆ ಏನಾಗುತ್ತಿತ್ತು ?

ನೊಂದವರ, ಅವಮಾನಿತರ, ಶೋಷಿತರ, ತಿರಸ್ಕರಿಸಲ್ಪಟ್ಟವರ ಪರವಾಗಿ ಬದುಕಿನ ಪ್ರತೀ ಕ್ಷಣವನ್ನು ಮೀಸಲಿಡದೆ, ಅಂಬೇಡ್ಕರ್ ರವರು ಸಂವಿಧಾನದ ಎಂಬ ರಕ್ಷಾ ಕವಚವ ನೀಡದಿದ್ದರೆ ಏನಾಗುತ್ತಿತ್ತು ?

ಆಹಾರ ಪದಾರ್ಥಗಳ ಉತ್ಪಾದನೆಗೆ ನೆರವಾಗುವ ಹಸಿರು ಕ್ರಾಂತಿಯನ್ನು ಸ್ವಾಮಿನಾಥನ್ ಮಾಡದೆ ತಮ್ಮ ಪಾಡಿಗೆ ತಾವು ವೈಯಕ್ತಿಕ ಬದುಕಿನ ಚಿಂತನೆಯಲ್ಲಿದ್ದಿದ್ದರೆ ಏನಾಗುತ್ತಿತ್ತು ?

ಕ್ಷೀರ ಕ್ರಾಂತಿಯನ್ನು ಮಾಡದೆ ಹೈನುಗಾರಿಕೆಯ ಕ್ಷೇತ್ರದಲ್ಲಿ ಬದಲಾವಣೆಗಳ ತರದೆ ತಮ್ಮ ಪಾಡಿಗೆ ತಾವು ನಮಗೇಕೆಂದು ವರ್ಗಿಸ್ ಕುರಿಯನ್ ರವರು ಸುಮ್ಮನೆ ಇದ್ದರೆ ಏನಾಗುತ್ತಿತ್ತು ?

ರಾಜಾರಾಮ್ ಮೋಹನ ರಾಯ್ ರವರು, ದಯಾನಂದ ಸರಸ್ವತಿ ರವರು, ನಾರಾಯಣ ಗುರುಗಳು, ಜ್ಯೋತಿ ಬಾ ಫುಲೆರವರು, ಸಮಾಜದ ಚಿಂತನೆಯನ್ನು ನಡೆಸದೆ ಸ್ವಾರ್ಥಿಗಳಾಗಿದ್ದರೆ ಸಮಾಜದಲ್ಲಿ ಏನಾಗುತ್ತಿತ್ತು ?

ಮಹಿಳೆಯರಿಗೆ ಶಿಕ್ಷಣವನ್ನ ಕೊಡುವ ಸಲುವಾಗಿ ಸಾಕಷ್ಟು ಅವಮಾನ ನೋವು ಅನುಭವಿಸಿ ದಿಟ್ಟತನ ತೋರದೆ ಸಾವಿತ್ರಿ ಬಾ ಫುಲೆರವರು ಸುಮ್ಮನಿದ್ದರೆ ಏನಾಗುತ್ತಿತ್ತು. ಸಮಾಜದಲ್ಲಿ ತೀರ ತಿರಸ್ಕಾರದಿಂದ ಕಾಣುವ ಕುಷ್ಟರೋಗಿಗಳ ಬದುಕಿನಲ್ಲಿ ಬೆಳಕಾಗಿ ಬಾಬಾ ಆಮ್ಟೆ, ಮದರ್ ತೆರೇಸಾ ಬರದಿದ್ದರೆ ಏನಾಗುತ್ತಿತ್ತು?

ಮಸೀದಿ, ಮಂದಿರ, ಚರ್ಚುಗಳು ಬಾಗಿಲು ತೆರೆಯದಿದ್ದರೂ ಏನಾಗುವುದಿಲ್ಲ. ಮೌಲಿಗಳು, ಬೋಧಕರು, ಪಾದ್ರಿಗಳು ಮನೆಯಲ್ಲಿದ್ದರೂ ಯಾವ ಬದಲಾವಣೆ ಆಗುವುದಿಲ್ಲ. ಎನ್ನುವುದನ್ನು ಕೊರೋನ ಸಂಕಷ್ಟದ ದಿನಗಳು ಜಗತ್ತಿಗೆ ತೋರಿಸಿಕೊಟ್ಟಿವೆ. ಆಸ್ಪತ್ರೆಗಳು, ಶಾಲೆಗಳು, ವೈದ್ಯರು, ಪೌರಕಾರ್ಮಿಕರು, ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರು, ನರ್ಸ್ಗಳು, ಆಸ್ಪತ್ರೆಯ, ಸೇವಕಿಯರು, ಸದಾಕಾಲ ಅನಿವಾರ್ಯ, ಅವಶ್ಯ ಎಂಬುದನ್ನ ಬದುಕು ತಿಳಿಸಿಕೊಟ್ಟಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply