ʼಗ್ಲೋರಿಯಾ ಜೀನ್ ವಾಟ್ಕಿನ್ಸ್ʼ ಎಂಬ ಹೆಸರಿನ ‘ಬೆಲ್ ಹುಕ್ಸ್’ ತನ್ನ ಕಾವ್ಯನಾಮವನ್ನು ಅಜ್ಜಿ ಬೆಲ್ ಬ್ಲೇರ್ ಹುಕ್ಸ್ ಇಂದ ಪಡೆದುಕೊಂಡವರು. ರೇಸ್, ಜೆಂಡರ್ ಮತ್ತು ವರ್ಗಗಳಿಗಿರುವ ಅವಿಭಜಿತ ಸಂಬಂಧವನ್ನು ಜಗತ್ತಿಗೆ ತಿಳಿಸಿದವರು. ಮೊದಲ ಪುಸ್ತಕವನ್ನು 1981ರಲ್ಲಿ ತಮ್ಮ 24 ನೇ ವಯಸ್ಸಲ್ಲಿ Ain’t I woman: Black Women and Feminism ಅನ್ನು ಪ್ರಕಟಪಡಿಸಿದಾಗಲೇ ಅಮೆರಿಕನ್ ಸಾಹಿತ್ಯ ಲೋಕ ನಿಬ್ಬೆರಗಾಗಿ ನೋಡಿತ್ತು. ಹೀಗೆ 40ಕ್ಕೂ ಹೆಚ್ಚು ಪುಸ್ತಕಗಳ ಮೂಲಕ ಮನುಷ್ಯರೊಳಗೆ ಪ್ರೀತಿ ಮತ್ತು ಶಾಂತಿಯನ್ನು ಬಿತ್ತಲು ಪ್ರಯತ್ನಿಸಿದ ಬೆಲ್ ಹುಕ್ಸ್ ಅಮೆರಿಕಾದ ಮೊದಲ ಪೀಳಿಗೆಯ ಕಪ್ಪು ಬೌದ್ಧರಲ್ಲಿ ಒಬ್ಬರು. ಹೌದು, ಹುಕ್ಸ್ ಕ್ರಿಶ್ಚಿಯಾನಿಟಿಯೊಂದಿಗೆ ಬೌದ್ಧ ಧಮ್ಮವನ್ನು ಅಭ್ಯಾಸ ಮಾಡಿದವರು. ಬುದ್ಧಗುರುವಿನ ಮಧ್ಯಮ ಮಾರ್ಗವನ್ನು ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡು ʼಗಂಡಾಳ್ವಿಕೆಯನ್ನು ಕೊನೆಗಾಣಿಸುವಲ್ಲಿ ಗಂಡಸಿನ ಪಾತ್ರವೂ ಇದೆʼ ಎಂಬುದನ್ನು ಕಂಡುಕೊಂಡವರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಅಮೆರಿಕಾದ ದಕ್ಷಿಣ ರಾಜ್ಯ ಒಂದರಲ್ಲಿ ಬಿಳಿಯರ ಎಸ್ಟೇಟ್ ಕಾಯುವ ಕಾವಲುಗಾರ ಅಪ್ಪ ಹಾಗೂ ಬಿಳಿಯರ ಮನೆಯ ಕೆಲಸ ಮಾಡುವ ಅಮ್ಮನಿಗೆ ಜನಿಸಿದ ಗ್ಲೋರಿಯಾ (ಹುಕ್ಸ್) ಅಮೆರಿಕನ್ ಕಪ್ಪು ಕುಟುಂಬದ ಮಗಳು. ಹುಟ್ಟುತ್ತಲೇ ಜನಾಂಗೀಯವಾದದ ಬಿಳಿನೆರಳಿನಲ್ಲಿ ನಲುಗಿಹೋದ ತನ್ನ ಜನರ ಮೇಲಿನ ದಬ್ಬಾಳಿಕೆಯನ್ನು ಕಂಡವಳು. “ಬಿಳಿ ಮೇಲರಿಮೆಯು ಒಂದು ರೋಗ. ಘನ ಮತ್ತು ಗಂಭೀರವಾದ ಒಂದು ಮಾನಸಿಕ ರೋಗ. ಈ ರೋಗವು ಬಿಳಿಯರು ಕಣ್ಮುಚ್ಚಿಕೊಂಡು ಪಾಪಕೃತ್ಯಗಳನ್ನು ಎಸಗಲು ಕಾರಣವಾಗುತ್ತದೆ” ಎಂದು ಬಿಳಿಯರ ದಬ್ಬಾಳಿಕೆಯನ್ನು ಪ್ರಶ್ನಿಸಿದ ಬೆಲ್ ಹುಕ್ಸ್ ಕಳೆದೆರಡು ದಶಕಗಳಿಂದ ಗಂಭೀರವಾಗಿ ಜನಾಂಗೀಯತೆ, ಜೆಂಡರ್ ಮತ್ತು ವರ್ಗಗಳಿಗಿರುವ ಸಂಬಂಧವನ್ನು ಅಡ್ರೆಸ್ ಮಾಡಿದರು.
“ಯಾವಾಗ ಕಪ್ಪು ಮಹಿಳೆ, ಸ್ತ್ರೀವಾದದ ಬಗ್ಗೆ ಮಾತನಾಡಲು ಆರಂಭಿಸುತ್ತಾಳೋ, ಬಿಳಿಯ ಸ್ತ್ರೀವಾದಿಗಳು ತಮ್ಮ ಮನಸ್ಸನ್ನು ಮುಕ್ತಗೊಳಿಸಿಕೊಂಡು ಸ್ತ್ರೀವಾದಿ ಚಿಂತನೆ, ಬರೆಹ ಮತ್ತು ಕ್ರಿಯೆಯ ಧಿಕ್ಕನ್ನು ಸಂಫೂರ್ಣವಾಗಿ ಬದಲಾಯಿಸಿಕೊಳ್ಳಬೇಕು” ಎಂದು ನಿರ್ಭಿಡೆಯಿಂದ ತಮ್ಮ ಸ್ನೇಹಿತೆಯರಾದ ಬಿಳಿಯ ಸ್ತ್ರೀವಾದಿಗಳನ್ನು ಉದ್ದೇಶಿಸಿ ಹೇಳಿದ್ದರು.
ಜನಾಂಗೀಯವಾದದೊಂದಿಗೆ ಬಂಡವಾಳಶಾಹಿಯು ಕೈಜೋಡಿಸಿ ಹೇಗೆಲ್ಲಾ ಕರಿಯರನ್ನು ಹಾಗೂ ಮಹಿಳೆಯರನ್ನು ಶೋಷಿಸುತ್ತಿದೆ ಎಂದು ಸಾಲು ಸಾಲು ಪ್ರಬಂಧಗಳನ್ನು ಬರೆದ ಹುಕ್ಸ್, ಈ ಯಾಜಮಾನ್ಯಕ್ಕೆ ʼಸಾಮ್ರಾಜ್ಯಶಾಹಿ ಬಿಳಿ ಮೇಲರಿಮೆಯ ಬಂಡವಾಳಶಾಹಿ ಗಂಡಾಳ್ವಿಕೆʼ ಎಂದು ಕರೆದರು. ಈ ವಿದ್ಯಮಾನದ ಮೂಲಕ ಬಿಳಿಯರ ಮೇಲರಿಮೆಯು ಬಂಡವಾಳಶಾಹಿಯೊಂದಿಗೆ ಅಮೆರಿಕನ್ ಕಪ್ಪು ಜನರನ್ನು ಮಾತ್ರವಲ್ಲ, ತಳವರ್ಗದ ಬಿಳಿಯರನ್ನು ಹಾಗೂ ತೃತೀಯ ದೇಶಗಳ ಜನರನ್ನು ಹೇಗೆ ಶೋಷಿಸುತ್ತಿದೆ ಎಂದು ವಿವರಿಸಿದರು. ಬಹುಶಃ ಅವರು ತಮ್ಮ 69ನೇ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯದಿಂದ ಕೊನೆಯುಸಿರು ಎಳೆಯದಿದ್ದರೆ, ಬೌದ್ಧ ಧಮ್ಮ ಹಾಗೂ ಮಹಿಳಾವಾದಕ್ಕೆ ಇರುವ ನಿಕಟ ಸಂಬಂಧವನ್ನು ಎದೆಗಿಳಿಯುವ ರೀತಿಯಲ್ಲಿ ಅರ್ಥ ಮಾಡಿಸುತ್ತಿದ್ದರೋ ಏನೋ? ಗಂಡಸೇ ನೀನೂ ಮನುಷ್ಯನೇ ಎಂಬುದನ್ನು ಇನ್ನೂ ಗಟ್ಟಿಯಾಗಿ ಹೇಳುತ್ತಿದ್ದರೋ ಏನೋ?
ತಿಚ್ ನಾತ್ ಹಾನರನ್ನು ಖುದ್ದು ಭೇಟಿಯಾಗಿ, ದಲೈಲಾಮಾರೊಂದಿಗೆ ಮಾತಾಡಿ, ಭಾರತ, ನೇಪಾಳ, ಶ್ರೀಲಂಕಾ ದೇಶಗಳನ್ನು ಭೇಟಿಯಾಗಬೇಕೆಂಬ ಕನಸನ್ನು ಕನಸಾಗಿಯೇ ಹೊತ್ತುಕೊಂಡು ಹೋದರು. ತಾನು queer-not-gay ಎಂದು ತಣ್ಣಗೆ ತನ್ನ ಲಿಂಗತ್ವದ ಬಗ್ಗೆ ಹೇಳಿಕೊಳ್ಳುತ್ತಿದ್ದ, ಸಂಗಾತಿ ಬೇಕೆಂದು ಅನಿಸಿತಾದರೂ ಸಂಗಾತಿ ಇಲ್ಲದೆ ನಾನು ಖುಷಿಯಾಗಿಯೇ ಜೀವನ ಕಳೆದೆ ಎಂದು ಹೇಳಿದ್ದ ಬೆಲ್ ಹುಕ್ಸ್ ʼಲಿಂಗತ್ವ ಸಮಾನತೆʼ ಬಗ್ಗೆ ಅಷ್ಟು ಕರಾರುವಕ್ಕಾಗಿ ಮಂಡಿಸಿದ ಪರಿಯಂತೂ ಅದ್ಭುತ.
ಬೆಲ್ ಹುಕ್ಸ್ ಅವರ Salvation : Black people and Love ಪುಸ್ತಕವನ್ನು ʼಬಂಧಮುಕ್ತʼವಾಗಿ ಸ್ತ್ರೀವಾದಿ ಚಿಂತಕಿ ಶ್ರೀಮತಿ ಎಚ್.ಎಸ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಂಬೇಡ್ಕರ್ ಜಗತ್ತು ಪುಸ್ತಕವನ್ನು ಕನ್ನಡ ಜಗತ್ತಿಗೆ ಪರಿಚಯಿಸಿದ ಜೀರುಂಡೆ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ದಿನಾಂಕ: 26.10.2024 ರಂದು ಪುಸ್ತಕ ಬಿಡುಗಡೆಯಾಗುತ್ತಿದೆ. ಬನ್ನಿ, ಕಪ್ಪು ಸ್ತ್ರೀವಾದಿಯೊಬ್ಬಳು ಹೇಗೆ ಮನುಷ್ಯತ್ವದ ಪಾಠ ಮಾಡಿದ್ದಾರೆ ನೋಡೋಣ, ಕೇಳೋಣ, ಓದೋಣ.
– ವಿಕಾಸ್ ಆರ್ ಮೌರ್ಯ, ಸಾಮಾಜಿಕ ಹೋರಾಟಗಾರರು




