ಬೆಂಗಳೂರು: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬುದ್ಧನ ಪ್ರೇರಣೆ ಮತ್ತು ಬಸವಣ್ಣನ ಸಮಾನತೆಯ ಮೌಲ್ಯಗಳನ್ನು ಒಳಗೊಂಡ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತಕ್ಕೆ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ ಮಹಾನಾಯಕರು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
- ತಮ್ಮ ಮಕ್ಕಳ ಭವಿಷ್ಯದ ಮೇಲೆ ಇರುವ ಬಿಜೆಪಿಯವರ ಕಾಳಜಿ ಬಡವರ ಮಕ್ಕಳ ಮೇಲೇಕಿಲ್ಲ?: ಪ್ರಿಯಾಂಕ್ ಖರ್ಗೆ
- ಅಂಬೇಡ್ಕರ್ ಸಮಾನತೆ, ನ್ಯಾಯ, ಮಾನವ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ: ಪಾಟೀಲ್
ಬಿಜೆಪಿ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ, ನಮ್ಮ ಸಂವಿಧಾನ ಸರ್ವಸ್ಪರ್ಶಿ ಮತ್ತು ಸರ್ವವ್ಯಾಪಕವಾಗುತ್ತಿರಲಿಲ್ಲ, ಎಲ್ಲರ ಒಪ್ಪಿಗೆಯೂ ದೊರೆಯುತ್ತಿರಲಿಲ್ಲ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಸಾಮಾನ್ಯವಾಗಿ ಆಚರಿಸುವಂತಿಲ್ಲ. ಅವರು ಇತರ ಚಿಂತಕರು ಮತ್ತು ನಾಯಕರಿಗಿಂತ ವಿಭಿನ್ನರಾಗಿದ್ದಾರೆ. ಇಂದಿನ ಹಾಗೂ ಭವಿಷ್ಯದ ಭಾರತದ ಪ್ರಜೆಗಳಿಗೆ ನ್ಯಾಯ, ಸ್ವಾತಂತ್ರ್ಯ, ದೇಶಭಕ್ತಿ ಮತ್ತು ನಾಗರಿಕ ಹಕ್ಕುಗಳನ್ನು ಶಾಶ್ವತವಾಗಿ ನೀಡಿದವರು ಅಂಬೇಡ್ಕರ್. ಕೆಲ ನಾಯಕರು ಕಾಲಕ್ಕೆ ಸೀಮಿತವಾಗುತ್ತಾರೆ, ಆದರೆ ಅಂಬೇಡ್ಕರ್ ಅವರಂತಹ ಮಹಾನ್ ಚಿಂತಕರು ಕಾಲಾತೀತರಾಗಿರುತ್ತಾರೆ ಎಂದರು.
ಜಗತ್ತಿನ ಮಹಾನ್ ಚಿಂತಕರಾದ ಪ್ಲೇಟೊ ಮತ್ತು ಕಾರ್ಲ್ ಮಾರ್ಕ್ಸ್ ಅವರಂತೆ ಅಂಬೇಡ್ಕರ್ ಅವರೂ ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಪ್ಲೇಟೊ ಮಹಾನ್ ತತ್ತ್ವಜ್ಞಾನಿ; ಕಾರ್ಲ್ ಮಾರ್ಕ್ಸ್ ಮಾನವನ ಗೌರವ, ಹಕ್ಕುಗಳು ಮತ್ತು ಶ್ರಮದ ಕುರಿತು ಮಹತ್ವದ ಚಿಂತನೆಗಳನ್ನು ನೀಡಿದವರು. ಅದೇ ರೀತಿ ಅಂಬೇಡ್ಕರ್ ಅವರು ಬುದ್ಧನ ಪ್ರೇರಣೆ ಮತ್ತು ಬಸವಣ್ಣನ ಸಮಾನತೆಯ ತತ್ವಗಳನ್ನು ಸಂಯೋಜಿಸಿದ ವ್ಯಕ್ತಿ ಎಂದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ “ಸ್ವಾತಂತ್ರ್ಯ ಯಾರಿಗಾಗಿ?” ಎಂಬ ಪ್ರಶ್ನೆಯನ್ನು ಅವರು ಎತ್ತಿದರು. ಸ್ವಾತಂತ್ರ್ಯ ಮೇಲ್ವರ್ಗದವರಿಗೆ ಮಾತ್ರವೇ ಅಥವಾ ತಳ ಸಮುದಾಯಕ್ಕೂ ಇದೆಯೇ ಎಂದು ಪ್ರಶ್ನಿಸಿ, ತಳ ಸಮುದಾಯಗಳಿಗೆ ಹಕ್ಕು ಮತ್ತು ಸ್ವಾತಂತ್ರ್ಯ ಒದಗಿಸಲು ಅವರು ಹೋರಾಡಿದರು ಎಂದರು.
ಜಗತ್ತಿನಲ್ಲಿ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರಗಳು ಇದ್ದರೂ, ಮಾನವೀಯ ಮೌಲ್ಯಗಳನ್ನು ಕಾಪಾಡುವ ಸಂವಿಧಾನ ಭಾರತದಲ್ಲಿರುವಂತೆ ಇನ್ನೆಡೆ ವಿರಳ. ಕೆಲವು ರಾಷ್ಟ್ರಗಳು ಆರ್ಥಿಕತೆಯನ್ನು ಆಧಾರವಾಗಿ ತೆಗೆದುಕೊಂಡು ಸಂವಿಧಾನ ರಚಿಸಿವೆ, ಇನ್ನೂ ಕೆಲವು ಸಮಾಜವಾದದ ಆಧಾರದ ಮೇಲೆ ರಚಿಸಿವೆ. ಆದರೆ ನಮ್ಮ ಸಂವಿಧಾನ ಮಾನವೀಯತೆಯ ಮೇಲೆ ನಿರ್ಮಿತವಾಗಿದೆ. ಅದನ್ನು ಮನಸಾರೆ ಓದಿದಾಗ ಅದರ ಮಹತ್ವ ಅರಿವಾಗುತ್ತದೆ ಎಂದರು.
ಕೆಲವರು ಸಂವಿಧಾನವನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗುತ್ತಾರೆ. ಆದರೆ ಅದನ್ನು ಓದಿರುವುದಿಲ್ಲ. ಈ ದೇಶದಲ್ಲಿ ಸಂವಿಧಾನವನ್ನು ಹೆಚ್ಚು ಸ್ವಾರ್ಥಕ್ಕಾಗಿ ಬಳಸಿರುವುದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರನ್ನು ಸೋಲಿಸಿದುದು, ಅವರ ನಿಧನದ ಸಂದರ್ಭದಲ್ಲಿ ಸೂಕ್ತ ಗೌರವ ನೀಡದಿರುವುದು ಇತ್ಯಾದಿ ಘಟನೆಗಳು ದುಃಖಕರ ಎಂದರು.
ಅಂಬೇಡ್ಕರ್ ಅವರು ರಾಜ್ಯಕ್ಕೆ ಭೇಟಿ ನೀಡಿದ ಹತ್ತು ಸ್ಥಳಗಳ ಅಭಿವೃದ್ಧಿಗಾಗಿ “ಅಂಬೇಡ್ಕರ್ ಹೆಜ್ಜೆಗುರುತು” ಯೋಜನೆಯಡಿ ಹತ್ತು ಕೋಟಿ ರೂಪಾಯಿ ನೀಡಿದ್ದೇನೆ. ಆದರೆ ಕಾಂಗ್ರೆಸ್ ಸರ್ಕಾರ ಬಿಜೆಪಿ ವಿರೋಧದಿಂದ ಈ ಸ್ಥಳಗಳ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿರುವುದು ಅವರಿಗೆ ಮಾಡುವ ಅವಮಾನ. ಸರ್ಕಾರ ಅಗತ್ಯ ಹಣವನ್ನು ನೀಡಬೇಕು ಮತ್ತು ಈ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.
ಅಹಿಂದ ಚಳವಳಿ ರೂಪುಗೊಳಿಸುವಲ್ಲಿ ನಾನು ಸಹ ಒಂದು ಕಾರಣಕರ್ತನಾಗಿದ್ದೇನೆ. ಆದರೆ ಅದು ಕೆಲವರ ವೈಯಕ್ತಿಕ ಲಾಭಕ್ಕೆ ಬಳಕೆಯಾಗುತ್ತಿರುವುದು ದುಃಖಕರ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಹಣವನ್ನು ಸರಿಯಾಗಿ ಬಳಸಲಾಗುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಗೂ ಸಮರ್ಪಕ ಹಣ ನೀಡಲಾಗುತ್ತಿಲ್ಲ. ಅಂಬೇಡ್ಕರ್ ಅವರ ವಿಚಾರಧಾರೆ ಅನುಸರಿಸಿದರೆ ಸಮಾಜದಲ್ಲಿ ಮಹತ್ತರ ಬದಲಾವಣೆ ಸಾಧ್ಯ ಎಂದರು.
ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಅಂಬೇಡ್ಕರ್ ಅವರ ತತ್ವಗಳು ಮಾರ್ಗದರ್ಶಕವಾಗಿವೆ. ದಲಿತ ಸಮುದಾಯಕ್ಕೆ ನ್ಯಾಯ ದೊರಕಿಸಲು ನಾವು ನಿರಂತರ ಹೋರಾಟ ನಡೆಸಬೇಕು. ಕೇವಲ ಮಾತುಗಳಲ್ಲ, ಕಾರ್ಯರೂಪದಲ್ಲಿ ಜಾಗೃತಿ ಮೂಡಿಸುವ ಚಳವಳಿಯಂತೆ ಕೆಲಸ ಮಾಡಬೇಕು ಎಂದರು.
ಸ್ವಾಮಿ ವಿವೇಕಾನಂದರು ಹೇಳಿದಂತೆ, ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನೇ ನಿಜವಾದ ಸಾಧಕ. ಅಂಬೇಡ್ಕರ್ ಅವರು ನಮ್ಮೊಂದಿಗಿಲ್ಲದಿದ್ದರೂ, ಅವರ ಚಿಂತನೆಗಳು ಸದಾ ನಮ್ಮೊಂದಿಗೆ ಜೀವಂತವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ರವಿಕುಮಾರ್, ಶಾಸಕ ಹಾಗೂ ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು, ಮಾಜಿ ಸದಸ್ಯ ಮಹಾಂತೇಶ ಕವಠಗಿಮಠ, ಜಗದೀಶ್ ಹಿರೇಮನಿ ಸೇರಿದಂತೆ ಅನೇಕರು ಹಾಜರಿದ್ದರು.




