ಬೆಂಗಳೂರು: ಸಾಂಕ್ರಾಮಿಕ ಕೋವಿಡ್ ನಿಯಂತ್ರಿಸಲು ನಡೆಸಲಾದ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಆಯೋಗ ನೀಡಿರುವ ವರದಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಬಿ ಶ್ರೀರಾಮುಲು ಮತ್ತು ಡಾ ಕೆ ಸುಧಾಕರ್ ಅವರಿಗೆ ಮುಳ್ಳಾಗುವ ಸಾಧ್ಯತೆಗಳಿವೆ.
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು ಸಭೆಯ ನಂತರ ಕಾನೂನು ಸಚಿವ ಎಚ್ ಕೆ ಪಾಟೀಲ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ನ್ಯಾಯಾಂಗ ಆಯೋಗದ ವರದಿಯ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ವರದಿಯಲ್ಲಿನ ಆಧಾರಗಳು, ವಿಷಯ, ಮಾಹಿತಿಯನ್ನು ಆಧಾರವಾಗಿಸಿ ಮುಂದಿನ ತನಿಖೆ ಹಾಗೂ ಕ್ರಮಕ್ಕಾಗಿ ಎಸ್ಐಟಿ ರಚನೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.
ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗುತ್ತದೆ. ಆಯೋಗದ ಮಾಹಿತಿ ಆಧಾರದಲ್ಲಿ ತನಿಖೆ ಮಾಡಲಾಗುವುದು. ಎಸ್ಐಟಿ ಆರ್ಥಿಕ ಅಂಶಗಳು ಸೇರಿದಂತೆ ಅಪರಾಧ ಪ್ರಕರಣಗಳನ್ನು ದಾಖಲಿಸಿ ಕ್ರಮ ತೆಗದುಕೊಳ್ಳಲಿದೆ. ಅಗತ್ಯಬಿದ್ದರೆ ವರದಿಯ ಮಾಹಿತಿ ಹೊರತಾಗಿ ಮತ್ತೆ ತನಿಖೆ ಮಾಡಿ, ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
‘ಕೋವಿಡ್ ವೇಳೆ ರಾಜ್ಯದಲ್ಲಿ ಯಾರು ಅಕ್ರಮ ಮಾಡಿದ್ದಾರೆಯೋ ಅವರ ಮೇಲೆ ಎಫ್ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಸತ್ಯಾನ್ವೇಷಣೆ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದುವರೆದ ಕ್ರಮವಾಗಿ ಎಸ್ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ವೇಳೆ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ, ಬೇಜವಾಬ್ದಾರಿತನ, ವಂಚನೆ ನಡೆದಿತ್ತು. ಮಾಹಿತಿಗಳನ್ನು ಅದುಮಿಟ್ಟುಕೊಂಡು, ಕಡತ ಸಿಗದಂತೆ ಮಾಡಲಾಗಿತ್ತು. ಪಿಎಸಿ ಕೆಲಸ ಮಾಡದಂತೆ ನಿಯಂತ್ರಣ ಮಾಡಿದ್ದರು. ಎಲ್ಲಾ ವಿಧಾನಮಂಡಲ ಸಮಿತಿಗಳು ಸಭೆ ಸೇರುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಪಿಪಿಇ ಕಿಟ್ 330-440 ರೂ. ಲಭ್ಯವಿದ್ದರೆ ಅದನ್ನು ಬಿಟ್ಟು 2,017 ರೂ.ಗೆ ಲಕ್ಷಾಂತರ ಕಿಟ್ ಖರೀದಿ ಮಾಡಲಾಗಿದೆ. ದುಪ್ಪಟ್ಟು ದರದಲ್ಲಿ ಹಾಗೂ ಬ್ಲ್ಯಾಕ್ ಲಿಸ್ಟ್ನಲ್ಲಿರುವ ಕಂಪನಿಗಳಿಂದ ಖರೀದಿ ಔಷಧಿ ಮಾಡಲಾಗಿದೆ” ಎಂಬ ಮಾಹಿತಿ ಇದೆ ಹೀಗಾಗಿ ಈ ಕುರಿತಂತೆ ರಾಜ್ಯ ಸರ್ಕಾರ ವಿಚಾರಣಾ ಆಯೋಗಗಳ ಕಾಯ್ದೆ 1952ರನ್ವಯ ಕೋವಿಡ್ ಭ್ರಷ್ಟಾಚಾರದ ಕುರಿತು ಸತ್ಯ ಶೋಧನೆಗಾಗಿ ನ್ಯಾಯಮೂರ್ತಿ ಕುನ್ಹಾ ಆಯೋಗ ರಚಿಸಲಾಗಿತ್ತು ಎಂದರು.
ಈ ಆಯೋಗ ತನ್ನ ಕಾರ್ಯ ಅವಧಿಯಲ್ಲಿ ತನಖೆ ನಡೆಸಿ 2 ಮಧ್ಯಂತರ ವರದಿಗಳನ್ನು ನೀಡಿ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು, ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಈ ಬ್ರಹ್ಮಾಂಡ ಭ್ರಷ್ಟಾಚಾರ, ಜನರ ಜೀವಗಳ ಜೊತೆ ಚೆಲ್ಲಾಟವಾಡಿದ ಅಮಾನವೀಯ ಘಟನೆಗಳ ಬಗ್ಗೆ ಸತ್ಯ ಸಂಶೋಧನೆ ನಡೆಸಿರುವ ಆಯೋಗದ ವರದಿಯ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಎಸ್.ಐ.ಟಿ.ರಚನೆಗೆ ತೀರ್ಮಾನಿಸಲಾಗಿದೆ ಎಂದರು.
ಮೈಕಲ್ ಡಿ ಕುನ್ಹಾ ಅವರು ಸಲ್ಲಿಸಿದ್ದ ಮಧ್ಯಂತರ ವರದಿಯಲ್ಲಿ ಅಕ್ರಮದ ಉಲ್ಲೇಖವಾಗಿದ್ದು, ನಿಯಮ ಬಾಹಿರವಾಗಿ ಖಾಸಗಿ ಲ್ಯಾಬ್ ಗಳಿಗೆ 6.93 ಕೋಟಿ ರೂ. ಸಂದಾಯದ ಪ್ರಸ್ತಾಪ, ಖಾಸಗಿ ಲ್ಯಾಬ್ ಗಳಿಗೆ ನಿಯಮ ಬಾಹಿರವಾಗಿ ಹಣ ಸಂದಾಯವಾದ ಆರೋಪ, ಐಸಿಎಂಆರ್ ಮಾನ್ಯತೆ ಇಲ್ಲದ ಲ್ಯಾಬ್ ಗಳಿಗೆ ಹಣ ಸಂದಾಯ ಮಾಡಿದ ಉಲ್ಲೇಖ, ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಹಣ ಸಂದಾಯ ಮಾಡಿರುವುದಕ್ಕೆ ಆಕ್ಷೇಪ, 8 ಲ್ಯಾಬ್ ಗಳಿಗೆ 4 ಕೋಟಿ 28 ಲಕ್ಷ ರೂ.ಸಂದಾಯ ಮಾಡಲಾಗಿದೆ ಅಂತ ವರದಿಯಲ್ಲಿ ಪ್ರಸ್ತಾಪವಾಗಿದೆ.
ಒಪ್ಪಂದ ಮಾಡಿಕೊಳ್ಳದೆ ಲ್ಯಾಬ್ ಗಳಿಗೆ ಬೇಕಾಬಿಟ್ಟಿ ಹಣ ಸಂದಾಯ ಮಾಡಿರುವುದಕ್ಕೆ ಆಯೋಗ, ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಪ್ರಚಾರಕ್ಕಾಗಿ ಇಟ್ಟಿದ್ದ 7 ಕೋಟಿ 3 ಲಕ್ಷ ಹಣದಲ್ಲೂ ಸಾಕಷ್ಟು ಅಕ್ರಮ ನಡೆದಿರುವ ಬಗ್ಗೆ ಉಲ್ಲೇಖವಾಗಿದೆ. ಚುಕ್ಕಿ ಟಾಕೀಸ್ ಎಂಬ ಸಂಸ್ಥೆಗೆ 8 ಲಕ್ಷ 85 ಸಾವಿರ ನಿಯಮ ಬಾಹಿರವಾಗಿ ಪಾವತಿಸಲಾಗಿದೆ. ಕೆಲವು ಏಜೆನ್ಸಿಗಳಿಗೆ ಹಣ ಪಾವತಿಸಿದ್ದ ಬಗ್ಗೆ ದಾಖಲೆಯೇ ಇಡದ ಆರೋಗ್ಯ ಇಲಾಖೆ 5 ಕೋಟಿ ರೂ. ಹಣದ ಬಗ್ಗೆ ದಾಖಲೆ ಒದಗಿಸಲಿಲ್ಲ ಎಂದರು.
ಸಾವಿನ ಬಗ್ಗೆ ಸರಿಯಾಗಿ ಲೆಕ್ಕ ಕೊಡದೇ ಸಾವಿನ ಲೆಕ್ಕ ಪರಿಶೋಧನೆ ನಡೆಸದೇ ನೈಜವಾದ ಸಾವಿನ ಸಂಖ್ಯೆಗಳನ್ನು ಬಚ್ಚಿಟ್ಟ ಆಗಿನ ಸರ್ಕಾರ, ನ್ಯಾಯಯುತವಾದ ಯಾವುದೇ ಕ್ರಮ ಕೈಗೊಳ್ಳದೇ ಜನರಿಗೆ ಮೋಸ ಎಸಗಿ, ಅವ್ಯವಹಾರದಲ್ಲಿ ತೊಡಗಿತ್ತು ಎಂದು ವಿವರಿಸಿದರು.
ಈ ಎಲ್ಲಾ ಅವ್ಯವಹಾರಗಳಲ್ಲಿನ ಅಂಶಗಳನ್ನು ತನಿಖೆ ಮಾಡಿ ಎಫ್.ಐ.ಆರ್, ದೋಷಾರೋಪ ಪಟ್ಟಿ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಸೂಕ್ತ ಶಿಕ್ಷೆಗೆ ಅಭಿಯೋಜನೆಗೆ ಒಳಪಡಿಸುವ ಮೂಲಕ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.




