ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಮಿಷ: ರಾಜಕೀಯ ನಾಯಕರು ಹೇಳಿದ್ದೇನು?
ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸಿರುವ ಬಿಜೆಪಿ ಪಕ್ಷಾಂತರ ಮಾಡಲು ಕಾಂಗ್ರೆಸ್ ನ ಪ್ರತಿ ಶಾಸಕರಿಗೆ 50 ಕೋಟಿ ರೂಪಾಯಿವರೆಗೆ ಆಮಿಷ ಒಡ್ಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಡಿಸಿಎಂ ಡಿ ಕೆ ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾನೂನು ಸಚಿವ ಎಚ್ ಕೆ ಪಾಟೀಲ್ ಮೊದಲಾದವರು, ಮುಖ್ಯಮಂತ್ರಿ ಮಾಡಿರುವ ಆರೋಪ ಸತ್ಯವಾಗಿದೆ ಕಳೆದ ಕೆಲವು ತಿಂಗಳಿನಿಂದ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂದು ಹೇಳಿದ್ದಾರೆ.
ಈ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು ಖರೀದಿಸಲು ಕಾಂಗ್ರೆಸ್ ಶಾಸಕರೇನು ಕತ್ತೆ ಕುದುರೆಗಳೇ ಎಂದು ಪ್ರಶ್ನಿಸಿದೆ. ಅಲ್ಲದೆ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪ ಸಮರ್ಥಿಸಿರುವ ಡಿ ಕೆ ಶಿವಕುಮಾರ್, ನಮ್ಮ ಎಂಎಲ್ಎ ಗಳಿಗೆ ಬಿಜೆಪಿಯವರು 50 ಕೋಟಿ ಆಮಿಷ ಒಡ್ಡಿರುವುದು ನಿಜ ಎಂದರು.
ಬಿಜೆಪಿಯ ಕೆಲವು ನಾಯಕರು ನಡೆಸಿರುವ ಆಪರೇಷನ್ ಕಮಲದ ಬಗ್ಗೆ ನಮ್ಮ ಶಾಸಕರ ಬಳಿ ಮಾತನಾಡಿದ್ದಾರೆ. ಈ ವಿಚಾರವನ್ನು ಕೆಲವರು ಬಂದು ಮುಖ್ಯಮಂತ್ರಿಯ ಬಳಿ ತಿಳಿಸಿದ್ದಾರೆ. ಈ ಸಂಗತಿಯನ್ನು ಮುಖ್ಯಮಂತ್ರಿಗಳು ಮಾಧ್ಯಮದ ಮುಂದೆ ಹೇಳಿದ್ದಾರೆ. ಮಿಕ್ಕ ವಿಚಾರಗಳನ್ನು ಅನಂತರ ನಿಮಗೆ ತಿಳಿಸುತ್ತೇನೆ ಎಂದರು.
ಸರ್ಕಾರ ಅಸ್ಥಿರ ಯತ್ನ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಾತನಾಡಿ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಸತ್ಯ. ಆದರೆ ಅದಕ್ಕೆ ಎಷ್ಟು ಹಣ ಆಮಿಷ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.
ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಇದೇನು ಹೊಸತಲ್ಲ. ಈ ಹಿಂದೆಯೂ ಇಂತಹ ಪ್ರಯತ್ನ ನಡೆದಿತ್ತು, ಈ ಸರ್ಕಾರ ಇರುವವರೆಗೂ ಅದು ನಡೆಯಲಿದೆ ಎಂದರು.
ಗೃಹ ಸಚಿವ ಡಾ. ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ಮಹಾರಾಷ್ಟ್ರದಲ್ಲಿ 42 ಶಾಸಕರನ್ನು ಹಣ ಕೊಟ್ಟು ಕರೆತಂದು ಸರ್ಕಾರ ರಚಿಸಿದ್ದರು. ಇಲ್ಲಿಯೂ ಅಂತಹುದೇ ಪ್ರಯತ್ನ ಮೊದಲು ನಡೆಸಿ ಯಶಸ್ವಿಯಾಗಿದ್ದರು. ಈಗಲೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ತಮಗಿರುವ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಾರೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಸತತವಾಗಿ ನಡೆಸುತ್ತಿವೆ. ಮುಡಾ ಪ್ರಕರಣದ ಆರೋಪ ಸೇರಿದಂತೆ ಎಲ್ಲಾ ಯತ್ನಗಳೂ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿಯೇ ನಡೆಯುತ್ತಿವೆ ಎಂದರು.
ಇ.ಡಿ.ತನಿಖೆ ಆಗಲಿ: ಸಿಎಂ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಅವರೇ ಈ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಈ ಬಗ್ಗೆ ಕೂಡಲೇ ಇಡಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವುದು ತುರ್ತು ಅಗತ್ಯವಿದೆ ಎಂದಿದ್ದಾರೆ.
ಇದೊಂದು ಗಂಭೀರ ಸ್ವರೂಪದ ಆರೋಪವಾಗಿದೆ. ಹೀಗಾಗಿ ರಾಜ್ಯದ ಜನತೆಗೆ ಸತ್ಯ ತಿಳಿಯಬೇಕು. ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿದ ಬಿಜೆಪಿ ನಾಯಕರು ಯಾರು ಎಂದು ಸಿಎಂ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿಜರು.
ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ. ಅದಕ್ಕಾಗಿಯೇ 50 ಕೋಟಿಗೆ ಅವರು ಮಾರಾಟವಾಗುತ್ತಿದ್ದಾರೆ ಎಂಬ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದೀರಿ. ಇದು ನೀವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದರು.
ಶಾಸಕರನ್ನು ಖರೀದಿಸಲು ಸಾಧ್ಯವೇ?: ಸಿಟಿ ರವಿ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಿಮ್ಮ ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೇನಾ? ಕುದುರೇನಾ? ದನನಾ? ಎಂದು ಪ್ರಶ್ನಿಸಿದರು.
ನಿಮ್ಮ ಪಕ್ಷದ ಶಾಸಕರು ಅಷ್ಟು ದುರ್ಬಲರಾ? ಬದ್ಧತೆ ಇರುವ ಯಾವುದೇ ಶಾಸಕರನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನಿಮ್ಮ ಆರೋಪ ಆಧಾರ ರಹಿತ ಎಂದರು.
ಯಾರು, ಯಾವಾಗ, ಯಾರನ್ನ ಖರೀದಿ ಮಾಡಲು ಪ್ರಯತ್ನ ಪಟ್ಟಿದ್ದಾರೆ? ಆಧಾರ ಇದ್ದರೆ ದೂರು ನೀಡಿ. ಸಾಕ್ಷಿ ಇದ್ದರೆ ಆಧಾರ ಸಹಿತವಾಗಿ ನ್ಯಾಯಾಲಯದಲ್ಲಿ ನಿರೂಪಿಸಿ. ಸಿಎಂ ಸ್ಥಾನದಲ್ಲಿ ಇದ್ದು, ಆ ಸ್ಥಾನದ ಜವಾಬ್ದಾರಿ ಮರೆತು ಕೇವಲ ಆರೋಪ ಮಾಡೋದು ರಾಜಕೀಯ ಪ್ರೇರಿತ. ಬಿಜೆಪಿ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲು ಮಾಡುತ್ತಿರುವ ಆರೋಪ ಎಂದರು.




