ಬೆಂಗಳೂರು: ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಪಟ್ಟು ಹಿಡಿದಿದೆ.
ಈ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, ಸಚಿವ ಪ್ರಲ್ಹಾದ ಜೋಷಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ತಮ್ಮ ಹುದ್ದೆಯ ಘನತೆ ಮತ್ತು ಜವಾಬ್ದಾರಿ ಮರೆತು ನ್ಯಾಯಮೂರ್ತಿಯೊಬ್ಬರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಇವರ ಈ ಹೇಳಿಕೆ ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆದೂರು ನೀಡಿದ್ದೇವೆ ಎಂದರು.
ಕೋವಿಡ್ ಹಗರಣದ ನ್ಯಾಯಾಂಗ ತನಿಖಾ ಆಯೋಗದ ಬಗ್ಗೆ ಮತ್ತು ನ್ಯಾಯಮೂರ್ತಿ ಕುನ್ಹಾ ಬಗ್ಗೆ ನಿಂದಿಸಿ ಕೆಟ್ಟದಾಗಿ ಜೋಷಿ ಮಾತನಾಡಿದ್ದಾರೆ ಎಂದರು.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಕುನ್ಹಾ ಅವರನ್ನು ಜೋಷಿ ಪೊಲಿಟಿಕಲ್ ಏಜೆಂಟ್ ಅಂದಿದ್ದಾರೆ. ದುರುದ್ದೇಶದಿಂದ, ಚುನಾವಣಾ ದೃಷ್ಟಿಯಿಂದ ಕುನ್ಹಾ ವರದಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ ಇದು ಖಂಡನೀಯ ಎಂದರು.
ಪ್ರಹ್ಲಾದ ಜೋಷಿ ಸಾಮಾನ್ಯ ವ್ಯಕ್ತಿಯಲ್ಲ, ಕೇಂದ್ರ ಸಚಿವರು.ಇಂತಹವರು ಸಂವಿಧಾನದ ಸ್ವಾಯತ್ತ ಸಂಸ್ಥೆಗಳು, ನ್ಯಾಯಾಂಗ ಆಯೋಗಗಳ ಬಗ್ಗೆ ವೈಯುಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದದ್ದು. ಕಾನೂನು ಬಾಹಿರವೂ ಹೌದು ಎಂದರು.
ನ್ಯಾಯಾಂಗ ತನಿಖಾ ಆಯೋಗದ ವಿರುದ್ಧ ಸಂಶಯ ಪಡುವಂತಿಲ್ಲ. ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿ, ಆದರೆ ನ್ಯಾಯಾಧೀಶರ ಬಗ್ಗೆ ಟೀಕಿಸಬಾರದು. ಡಿ. ಕುನ್ಹಾ ಅವರು ಆಗಸ್ಟ್ನಲ್ಲಿ ಮಧ್ಯಂತರ ವರದಿ ಕೊಟ್ಟಿದ್ದಾರೆ. ಈಗ ಉಪಚುನಾವಣೆ ನಡೆಯುತ್ತಿದೆ. ಅದಕ್ಕೂ ಚುನಾವಣೆಗೂ ಏನು ಸಂಬಂಧ? ನಿಂದನೆ, ಗೌರವಕ್ಕೆ ಚ್ಯುತಿ ಬರುವ ಹೇಳಿಕೆ ಒತ್ತಡ ಹೇರುವ ಕೆಲಸ ಇದು. ಆಯೋಗದ ಮೇಲೆ ಭಯ ಹುಟ್ಟಿಸುವ ಕೆಲಸ ಇದು. ತನಿಖಾ ಹಂತದಲ್ಲಿ ಯಾರೂ ಈ ರೀತಿ ಮಾತನಾಡಬಾರದು ಎಂದರು
ರಾಜ್ಯಪಾಲರಿಗೆ ಇವೆಲ್ಲ ವಿವರಿಸಿ ಕ್ರಮಕ್ಕೆ ಒತ್ತಾಯಿಸಿದ್ದೇವೆ. ನ್ಯಾಯಮೂರ್ತಿಯ ಮಾನಹರಣ ಮಾಡಿದ ಜೋಷಿ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಷ್ಟ್ರಪತಿ ಅವರ ಗಮನಕ್ಕೂ ಇದನ್ನು ತರಬೇಕು. ಕೇಂದ್ರ ಸರ್ಕಾರ ನಮ್ಮದೇ ಇದೆ ಎಂದು ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ. ಕೂಡಲೇ ಜೋಷಿ ಕ್ಷಮೆ ಯಾಚಿಸಬೇಕು ಎಂದರು.




