ಡಾ. ಎಂ ಎಂ ಕಲಬುರ್ಗಿ: ಎಂದೂ ಖಾಲಿಯಾಗದ ಕಣಜ

3 years ago

Dr. MM Kalaburgi: The never-ending wasp
ಗೆಳೆಯರೆ, ಅಗಷ್ಟ್ ೩೦ ೨೦೧೫ರಂದು ಕಲಬುರ್ಗಿಯವರನ್ನು ಅವರ ಮನೆಯ ಹೊಸ್ತಿಲಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ಅವರು ಕೊಲೆಗೀಡಾಗಿ ಇಂದಿಗೆ ಎಂಟು ವರ್ಷಗಳಾಗುತ್ತವೆ. ಯಾರಿಗೂ ಕೇಡು ಮಾಡದ, ಸದಾ ಸತ್ಯದ ಹುಡುಕಾಟದಲ್ಲಿದ್ದ ಕಲಬುರ್ಗಿಯವರು ಕನ್ನಡದ ವೈಚಾರಿಕ ವಲಯವನ್ನು ವಿಸ್ತರಿಸಿದವರು. ಇಂತಹ ಗಟ್ಟಿ ಜೀವ ನಮ್ಮನ್ನಗಲಿದೆ. ಇವರ ನಂತರ ಗೌರಿ ಲಂಕೇಶರನ್ನು ಹೀಗೆಯೇ ಹತ್ಯೆ ಮಾಡಲಾಯಿತು. ಕನ್ನಡದ ವೈಚಾರಿಕ ವಲಯವು ಇನ್ನೂ ಆತಂಕದಲ್ಲಿ ಬದುಕುವಂತಾಗಿದೆ. ಎಂಟು ವರ್ಷಗಳ ಹಿಂದೆ ಗೌರಿ ಲಂಕೇಶ್ ವಾರಪತ್ರಿಕೆಯಲ್ಲಿ ಪ್ರಕಟವಾದ ಈ ಬರಹವನ್ನು ಮತ್ತೆ ಹಂಚಿಕೊಳ್ಳುತ್ತಿದ್ದೇನೆ

‘ಇಟ್ಟುಕೊಂಡ ಗುರಿಗಳು ಮತ್ತು ಆಶಯಗಳ ಕುರಿತು ನಾನು ಸ್ಪಷ್ಟವಾಗಿದ್ದೇನೆ. ಈ ಆಶಯಗಳು ನನ್ನ ಜನರಿಂದ ಸಕಾರಗೊಳ್ಳುತ್ತವೆ ಎಂಬ ನಂಬಿಕೆ ನನಗಿದೆ. ನಿಮ್ಮ ನ್ಯಾಯಾಲಯದ ವಿಚಾರಣೆಗಳು, ನೀವು ನಮ್ಮ ಜನರಲ್ಲಿ ಹುಟ್ಟು ಹಾಕಿರುವ ತಲ್ಲಣಗಳಾವೂ ನನ್ನ ಜನರ ಗುರಿ ಮತ್ತು ಹೋರಾಟಗಳನ್ನು ದಿಕ್ಕು ತಪ್ಪಿಸಲಾರವು. ನೀವು ನನ್ನನ್ನು ಜೈಲಿಗೆ ತಳ್ಳಿ ಅಥವಾ ಕೊಂದು ಹಾಕಿ. ಆದರೆ ನಮ್ಮಗಳ ವಿರೋಚಿತ ಗೆಲುವನ್ನು ನೀವು ತಡೆಯಲಾರಿರಿ’.

ಕೆನ್ ಸಾರೋವಿವಾ ನೈಜಿರಿಯಾದ ಚಿಂತಕ ಮತ್ತು ಹೋರಾಟಗಾರ ತನ್ನನ್ನು ಗಲ್ಲಿಗೆ ಹಾಕುವ ಮುನ್ನ ಬರೆದ ಕೊನೆಯ ಪತ್ರದ ಸಾಲುಗಳಿವು. ನೈಜೀರಿಯಾದ ಮಿಲಿಟರಿ ಆಡಳಿತ ಮತ್ತು ನ್ಯಾಯಲಯಗಳು ನೆದರ್ಲ್ಯಾಂಡ್ ಮತ್ತು ಬ್ರಿಟನ್ನಿನ ‘ಷೆಲ್’ ಎಂಬ ಬಂಡವಾಳಶಾಹಿ ಕಂಪನಿಯ ವಿರುದ್ಧ ಹೋರಾಡಿದ ಕೆನ್ ಸಾರೋವಿವಾನನ್ನು ಗಲ್ಲಿಗೇರಿಸಿತು. ಕೆನ್ ಸಾರೋವಿವಾ ನೈಜೀರಿಯಾದ ಒಗೋನಿ ಜನಾಂಗದಿಂದ ಬಂದ ಅಪರೂಪದ ಚಿಂತಕ ಮತ್ತು ಹೋರಾಟಗಾರ. ಒಗೋನಿ ಬುಡಕಟ್ಟು ಜನಾಂಗ ಬದುಕುವ ಪರಿಸರದಲ್ಲಿ ದೊರೆಯುತ್ತಿದ್ದ ಬೆಲೆಬಾಳುವ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದ ನೆದರ್ಲ್ಯಾಂಡ್ ಮತ್ತು ಬ್ರಿಟನ್ನಿನ ಸಾಮ್ರಾಜ್ಯಶಾಹಿ ಶಕ್ತಿಗಳನ್ನು ಎದುರು ಹಾಕಿಕೊಂಡು ತನ್ನ ಜನಗಳನ್ನು ಸಂಘಟಿಸಿ ಸಾರೋವಿವಾ ಹೋರಾಟಕ್ಕಿಳಿದ. ಜಾಗತಿಕ ಮಾರುಕಟ್ಟೆಯಲ್ಲಿ ಬಿಕರಿಯಾಗಿ ಹೋಗಿದ್ದ ನೈಜೀರಿಯಾದ ಆಡಳಿತ ಮತ್ತು ನ್ಯಾಯಲಯಗಳು ಸಾರೋವಿವಾನ ಹೋರಾಟವನ್ನು ದೇಶದ್ರೋಹಿ ಚಟುವಟಿಕೆ ಎಂದು ಪರಿಗಣಿಸಿ ಗಲ್ಲಿಗೇರಿಸಿ ಕೊಂದು ಹಾಕಿತು. ಇಟಲಿಯ ಮಾರ್ಕ್ಸ್ವಾದಿ ಚಿಂತಕ, ಹೋರಾಟಗಾರ ಆಂಟೋನಿಯಾ ಗ್ರಾಂಮ್ಷಿಗೆ ಇಪ್ಪತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಮುಸಲೋನಿ ಆಡಳಿತ ವಿಧಿಸಿತು. ಮುಸಲೋನಿಯನ್ನು ಆರಾಧಿಸುತ್ತಿದ್ದ ನ್ಯಾಯಾಧೀಶ ಗ್ರಾಮ್ಷಿಗೆ ಶಿಕ್ಷೆ ವಿಧಿಸುವಾಗ `ಇನ್ನೂ ಇಪ್ಪತ್ತು ವರ್ಷ ಈ ಮೆದುಳು ಚಿಂತನೆ ನಡೆಸುವುದನ್ನು ತಡೆಯಬೇಕು’ ಎಂಬ ತನ್ನ ಉದ್ದೇಶವನ್ನು ತೀರ್ಪಿನಲ್ಲಿ ಬರೆದಿಟ್ಟ. ಇಪ್ಪತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಗ್ರಾಂಮ್ಷಿ ಪೂರೈಸಲಿಲ್ಲ. ಮುಸಲೋನಿಯ ಫ್ಯಾಸಿಸ್ಟ್ ಪಕ್ಷದ ಕ್ರೈರ್ಯ್ ದಿಂದ ಗ್ರಾಮ್ಷಿ ಜೈಲಿನಲ್ಲಿಯೇ ಸತ್ತು ಹೋದ. ಆದರೆ ಕ್ರೂರ ನ್ಯಾಯಾಲಯಗಳಾಗಲಿ, ಫ್ಯಾಸಿಸ್ಟ್ ಖೂಳರಾಗಲಿ ಗ್ರಾಂಮ್ಷಿಯ ಮೆದುಳನ್ನು ನಾಶ ಮಾಡಲಾಗಲಿಲ್ಲ.

ಮೊನ್ನೆ ಇಂತಹದ್ದೇ ಅಸಹಯನೆಗೆ ಬಲಿಯಾದ ಡಾ. ಕಲಬುರ್ಗಿಯವರು ಹಲವು ವಿಷಯಗಳಲ್ಲಿ ಕೆನ್ ಸಾರೋವಿವಾ ಮತ್ತು ಗ್ರಾಂಮ್ಷಿಯನ್ನು ಹೋಲುತ್ತಾರೆ. ಕರ್ನಾಟಕದ ಮಟ್ಟಿಗೆ ಕಲಬುರ್ಗಿಯವರ ಕೊಲೆ ತಲ್ಲಣಗಳನ್ನು ಹುಟ್ಟಿಸಿದೆ. ದೇಶದೆಲ್ಲಡೆ ಹೆಚ್ಚುತ್ತಿರುವ ವಿಚ್ಚಿದ್ರಕಾರಿ ಫ್ಯಾಸಿಸ್ಟ್ ಆಸಹನೆ ನಾಡಿನ ವೈಚಾರಿಕ ವಲಯವನ್ನು ಬುಲೆಟ್‌ಗಳಿಂದ ನಿಷ್ಕ್ರೀಯಗೊಳಿಸಲು ಹೊರಟಿದೆ. ಜನಾಶಯಗಳ ಎಗ್ಗಿಲ್ಲದ ದಮನ ಮತ್ತು ಕ್ರೂರ ಅಸಹನೆಗಳು ಫ್ಯಾಸಿಸ್ಟ್ ವ್ಯವಸ್ಥೆಯ ಮೂಲ ಧಾತುಗಳು. ದೇಶ ಮೆಲ್ಲನೆ ಈ ಶಕ್ತಿಗಳ ವಶವಾಗುತ್ತಾ ಹೋಗುತ್ತಿದೆ. ಈ ದೇಶದಲ್ಲಿ ಜನಪರ ಚಿಂತಕರ ಕಗ್ಗೊಲೆ ಇದೇ ಮೊದಲೇನಲ್ಲ. ಈ ದೇಶದ ಧಾರ್ಮಿಕ ಅಸಹನೆ ತನ್ನ ಚರಿತ್ರೆಯುದ್ದಕ್ಕೂ ಅನೇಕರನ್ನು ಹೀಗೆ ಬಲಿ ತೆಗೆದುಕೊಂಡಿದೆ. ಡಾ. ಕಲಬುರ್ಗಿಯವರು ಕನ್ನಡದ ಒಬ್ಬ ಶ್ರೇಷ್ಟ ಸಂಶೋಧಕ ಮಾತ್ರವಾಗಿರಲಿಲ್ಲ. ತಾನು ಬದುಕುತ್ತಿದ್ದ ವರ್ತಮಾನದ ವಿಷಮತೆಯ ಕುರಿತು ಸದಾ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡು ಅದನ್ನು ಬದಲಿಸುವ ಚಳುವಳಿಗಾರರೂ ಆಗಿದ್ದರು. `ಒಳಗಿನವರಾಗಿ’ದ್ದುಕೊಂಡು ತನ್ನ ಪರಂಪರೆಯ ವಕ್ರತೆಗಳನ್ನು ಖಂಡಿಸುವುದು ಭಾರತದ ಸಂಪ್ರದಾಯಸ್ತ ಸಮಾಜದಲ್ಲಿ ಸುಲಭದ ಕೆಲಸವೇನಲ್ಲ. ಕಲಬುರ್ಗಿಯವರು ಒಳಗಿದ್ದುಕೊಂಡೇ ತನ್ನ ಸುತ್ತಲ ಒಳಗನ್ನು ಬದಲಿಸಲು ಕಾತರಿಸಿದರು. ಸದಾ ತಲ್ಲಣಗಳಲ್ಲಿಯೇ ಬದುಕಿದ ಅವರು ಬೀದಿಗಿಳಿದು ಪ್ರತಿಭಟಿಸಲಿಲ್ಲ ಎಂಬುದನ್ನು ಬಿಟ್ಟರೆ, ಅವರು ಜೀವಮಾನವಿಡೀ ಬರೆದ ಬರಹದಲ್ಲಿ ಪರಂಪರೆಯ ಜೊತೆ ಭಿನ್ನಮತವಿಟ್ಟುಕೊಂಡೇ ಬಂದರು.

೧೯೯೮ನೇ ಇಸ್ವಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಅನೇಕರಿಗೆ ಒಂದು ಆತಂಕವಿತ್ತು. ಕಲಬುರ್ಗಿ ಅವರು ಕುಲಪತಿಗಳಾಗಿ ಬಂದರೆ, ಕಂಬಾರರು ವಿಶ್ವವಿದ್ಯಾಲಯದಲ್ಲಿ ರೂಪಿಸಿದ್ದ ಜಾತ್ಯಾತೀತ ಪರಿಸರ ಹಾಗೆಯೇ ಉಳಿಯಲು ಸಾಧ್ಯವಿಲ್ಲ. ಕಲಬುರ್ಗಿಯವರು ಒಂದು ಬಗೆಯ ಅಧ್ಯಯನಗಳಿಗೆ ಹೆಚ್ಚು ಪ್ರಾಶಸ್ತ್ಯ್ ಕೊಟ್ಟು ವಿಶ್ವವಿದ್ಯಾಲಯದಲ್ಲಿದ್ದ ಮುಕ್ತ ಶೈಕ್ಷಣಿಕ ವಾತಾವರಣವನ್ನು ಬದಲಿಸುತ್ತಾರೆ ಎಂಬ ಪೂರ್ವಾಗ್ರಹಗಳು ಹಲವು ಅಧ್ಯಾಪಕರಲ್ಲಿದ್ದವು. ಜೊತೆಗೆ ಕಲಬುರ್ಗಿಯವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ನಡೆದ ಅನೇಕ ಸೆಮಿನಾರುಗಳಲ್ಲಿ ಈ ಪೂರ್ವಗ್ರಹಗಳೇ ಸತ್ಯ ಎನ್ನುವಂತೆ ಅವರು ಕೆಲ ಮಾತುಗಳನ್ನೂ ಆಡಿದರು. ಆದರೆ ಪೂರ್ವಾಗ್ರಹಗಳು ಬಹುಕಾಲ ನಿಲ್ಲಲಿಲ್ಲ. ಹಂತಹಂತವಾಗಿ ಕಲಬುರ್ಗಿಯವರ ಅಂತರಂಗ ನಿಚ್ಚಳವಾಗುತ್ತಾ ಹೋಯಿತು. ಅವರಲ್ಲಿದ್ದ ಅಪ್ಪಟ ಜಾತ್ಯಾತೀತ ನಿಲುವುಗಳು ನಮಗೆ ಗೋಚರವಾಗತೊಡಗಿದವು. ಕಲಬುರ್ಗಿಯವರು ಜಿಗುಟು ಗುಣ ಮತ್ತು ಜಟಿಲ ಶೈಕ್ಷಣಿಕ ನಿಲುವುಗಳಿಗೆ ಪ್ರಸಿದ್ಧರು ಎಂಬ ನಂಬಿಕೆ ಪ್ರಚಲಿತದಲ್ಲಿತ್ತು. ಆದರೆ ಅವರು ಅತ್ಯಂತ ನಮ್ಯ, ಮುಕ್ತ ಮನಸ್ಸಿನ ಮತ್ತು ಎಲ್ಲವನ್ನೂ ಒಳಗೊಳ್ಳುವ ವ್ಯಕ್ತಿತ್ವದವರಾಗಿದ್ದರು. ಯಾವುದೋ ಒಂದು ಸೆಮಿನಾರಿನಲ್ಲಿ ಕಾಡುಗೊಲ್ಲರ ಸಾಂಸ್ಕೃತಿಕ ನಾಯಕ ಜುಂಜಪ್ಪನ ಹೆಸರಿನ ಶಬ್ದ ನಿಷ್ಪತ್ತಿಯನ್ನು ಜುಂಜ-ಜುಂಚ-ಚುಂಚ ಎಂದು ಒಡೆದು ಅದರಲ್ಲಿ ಅರ್ಥ ಕಂಡುಕೊಳ್ಳಲು ಪ್ರಯತ್ನಿಸಿದರು. ಹೀಗೆ ಅವರು ಸಂಶೋಧನೆಯಲ್ಲಿ ಕೆಲವು ತೀರ್ಮಾನಗಳಿಗೆ ಬರಲು ಶಬ್ದನಿಷ್ಪತ್ತಿಶಾಸ್ತ್ರದ ಮೊರೆ ಹೋಗುತ್ತಿದ್ದರು. ಆಗ ತಾನೇ ಕೆಲಸಕ್ಕೆ ಸೇರಿ ಉತ್ಸಾಹದಲ್ಲಿದ್ದ ನಾವು ಕೆಲವರು ಈ ಕ್ರಮವನ್ನು ತುಸು ಖಾರವಾಗಿಯೇ ಪ್ರಶ್ನಿಸಿಬಿಟ್ಟೆವು. ವೇದಿಕೆಯ ಮೇಲಿಯೇ ಕೆರಳಿದ ಕಲಬುರ್ಗಿಯವರು ನಮ್ಮನ್ನು ಜೋರು ಮಾಡಿ ಸುಮ್ಮನಾಗಿಸಿದ್ದರು. ಮರುದಿನ ಬೆಳಿಗ್ಗೆ ಕಲಬುರ್ಗಿ ಅವರಿಂದ ನಮಗೆ ಬುಲಾವ್. ತುಸು ಹೆದರಿಕೆಯಿಂದಲೇ ಅವರ ಕಛೇರಿ ತಲುಪಿ ‘ರೂಢನಾಮಗಳನ್ನು ಶಬ್ದನಿಷ್ಪತ್ತಿಶಾಸ್ತ್ರದಿಂದ ಒಡೆದು ನೋಡಿದಾಗ ಅಲ್ಲಿ ಅರ್ಥಗಳು ಹೊಮ್ಮುವುದು ಕಷ್ಟ’ ಎಂಬ ನಮ್ಮ ಅಭಿಪ್ರಾಯಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆವು. ಕಲಬುರ್ಗಿಯವರು ಎಷ್ಟು ಪ್ರಸನ್ನರಾದರೆಂದರೆ ಸರಿ ಸುಮಾರು ಅರ್ಧ ಗಂಟೆಗಳ ಕಾಲ ನಮ್ಮ ಜೊತೆ ಹರಟಿ, ಶಬ್ದನಿಷ್ಪತ್ತಿಶಾಸ್ತ್ರದ ಉಪಯುಕ್ತತೆ ಮತ್ತು ಅದರ ಸಾಧ್ಯತೆಗಳನ್ನು ನಮಗೆ ವಿವರಿಸಿದ್ದರು. ಜೊತೆಗೆ ಪ್ರೀತಿಯಿಂದ ಚಹ ಕುಡಿಸಿ ಕಳುಹಿಸಿದರು. ಕಲಬುರ್ಗಿಯವರು ಕನ್ನಡ ವಿಶ್ವವಿದ್ಯಾಲಯದಲ್ಲಿದ್ದಷ್ಟು ದಿನ ಕುಲಪತಿಗಳಾಗಿರದೆ ನಮ್ಮಂತಹ ಕಿರಿಯರಿಗೆ ಗುರುಗಳಾಗಿದ್ದರು. ಯಾವ ಮುಲಾಜು ಇಲ್ಲದೆ ನಮ್ಮನ್ನು ಏಕವಚನದಲ್ಲಿಯೇ ಸಂಬೊಧಿಸುತ್ತಿದ್ದರು. ಈ ಏಕವಚನ ಪ್ರಯೋಗದಲ್ಲಿ ಅವರ ಹಿರಿತನ ಮತ್ತು ಗಣ್ಯತೆಯ ಅಹಂಕಾರವಿರುತ್ತಿರಲಿಲ್ಲ. ಸಮಾಜಮುಖಿ ಮತ್ತು ಪ್ರತಿಭಾವಂತ ಕಿರಿಯರ ಮೇಲಿದ್ದ ಅಪಾರ ಭರವಸೆಗಳು ಅವರಲ್ಲಿ ಬಹುವಚನ ಬಳಸುವ ಕೃತಕತೆಯನ್ನು ಇಲ್ಲವಾಗಿಸಿದ್ದವು. ಅವರು ತೀಕ್ಷ್ಣ್ ವಾಗಿ ನೋಡುತ್ತಲೇ ಮತ್ತು ಕಟುವಾಗಿ ಮಾತನಾಡುತ್ತಲೇ ಅಪಾರ ಪ್ರೀತಿಯನ್ನು ತೋರಿಸುತ್ತಿದ್ದರು. ಕಂಬಾರರು ಮಹತ್ವಾಕಾಂಕ್ಷೆಯಿಂದ ಕಟ್ಟಿದ ವಿಶ್ವವಿದ್ಯಾಲಯದೊಳಗೆ ಕಲಬುರ್ಗಿಯವರು ಒಂದು ಪ್ರಾಂಜಲ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡಿದರು. ಬರೆಯಲು, ಚರ್ಚಿಸಲು, ಹಿಂಜರಿಯುತ್ತಿದ್ದ ನನ್ನಂತಹ ಅನೇಕ ಕಿರಿಯರನ್ನು ಹುರಿದುಂಬಿಸಿದರು. ನಮ್ಮಲ್ಲಿಯ ಸಹಜ ಕೀಳರಿಮೆಗಳನ್ನು ಹೋಗಲಾಡಿಸಲು ವಿಶ್ವವಿದ್ಯಾಲಯದಲ್ಲಿನ ತರುಣ ಅಧ್ಯಾಪಕರನ್ನು ಬರೆಯುವಂತೆ ಮಾಡಿದರು. ನಾವು ಬರೆಯುತ್ತಿದ್ದ ಬರಹಗಳನ್ನು ಸ್ವತಃ ತಾವೇ ಓದಿ ತಿದ್ದುತ್ತಿದ್ದರು. ನನ್ನದೊಂದು ಪುಸ್ತಕ ಮುದ್ರಣಕ್ಕೆ ಹೋಗಬೇಕಿತ್ತು. ಅದು ನನ್ನ ಮೊದಲ ಪುಸ್ತಕ ಬೇರೆ. ಎರಡು ಸಲ ಅಕ್ಷರ ದೋಷಗಳನ್ನು ತಿದ್ದಿದ್ದರು ಇನ್ನೂ ದೋಷಗಳು ಉಳಿದಿದ್ದವು. ಕಲಬುರ್ಗಿಯವರ ಬಳಿ ಅಂತಿಮ ಒಪ್ಪಿಗೆಗಾಗಿ ನನ್ನ ಪುಸ್ತಕದ ನೆರಳಚ್ಚು ಪ್ರತಿಯನ್ನು ಕಳುಹಿಸಲಾಗಿತ್ತು. ಅಂದು ಕಲಬುರ್ಗಿಯವರಿಗೆ ೧೦೨ ಡಿಗ್ರಿ ಜ್ವರ. ಸುಡುವ ಜ್ವರದಲ್ಲೂ ನನ್ನ ೨೦೦ ಪುಟದ ಪುಸ್ತಕವನ್ನು ಓದಿ ಅಕ್ಷರ ದೋಷಗಳನ್ನು ಸರಿಪಡಿಸಿ `ತುಂಬಾ ಚೆನ್ನಾಗಿ ಬರೆದಿದ್ದಿ, ಸಂಶೋಧಕನಾದವನು ಸದಾ ತನ್ನ ತಪ್ಪುಗಳನ್ನು ತಿದ್ದಿಕೊಂಡು ಹೋಗುವುದಕ್ಕೆ ಮುಕ್ತನಾಗಿರಬೇಕು’ ಎಂದು ಹೇಳಿ ಬೆನ್ನು ತಟ್ಟಿ ಕಳುಹಿಸಿದರು. ಆ ಪುಸ್ತಕಕ್ಕೆ ಜಾನಪದ ಅಕಾಡೆಮಿಯ ಪ್ರಶಸ್ತಿ ಸಿಕ್ಕಾಗ ಮೊದಲು ಕರೆ ಮಾಡಿ ಅಂಭಿನಂದಿಸಿದ್ದು ಕಲಬುರ್ಗಿಯವರೆ.

ನಾನು ಅವರ ನೇರ ಶಿಷ್ಯನಲ್ಲ. ಸೈದ್ಧಾಂತಿಕವಾಗಿಯೂ ಅವರಿಗಿಂತ ಬೇರೆಯದೇ ನಿಲುವುಗಳನ್ನು ಹೊಂದಿದ್ದವನು. ಅವರಲ್ಲಿದ್ದ ಶಿಸ್ತುಬದ್ಧ ಅಧ್ಯಯನದ ಜಿಗುಟು ವ್ಯಕ್ತಿತ್ವವೂ ನಮ್ಮಂತವರಲ್ಲಿರಲಿಲ್ಲ. ಆದರೆ ಕಲಬುರ್ಗಿಯವರಲ್ಲಿದ್ದ ತಾಯ್ತನ ನಮ್ಮಂತಹ ಅನೇಕರನ್ನು ಅವರ ಶಿಷ್ಯರನ್ನಾಗಿಸಿತ್ತು. ನಾವು ನಂಬಿಕೊಂಡು ಬಂದ ರಾಜಕೀಯ ಸಿದ್ಧಾಂತವನ್ನು ಅವರೆಂದೂ ಪ್ರಶ್ನಿಸಲಿಲ್ಲ. `ಕನ್ನಡದಲ್ಲಿ ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ತುಂಬಾ ಗಟ್ಟಿ ಕೆಲ್ಸಾ ಮಾಡ್ಯಾರ. ಆದರೆ ಸಮಸ್ಯೆ ಅಂದ್ರ ಅವರು ಬಾವ್ಟಾ ಹಿಡ್ದು ಬೀದಿಗಿಳೀತಾರ’ ಎಂದು ಅರ್ಧ ಪ್ರೀತಿ ಮತ್ತು ಅರ್ಧ ಆಕ್ಷೇಪಗಳ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಕಲಬುರ್ಗಿಯವರು ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಆಯ್ದುಕೊಂಡ ಹಾದಿ ಕಠಿಣವಾದದ್ದು. ಪ್ರಾಚೀನ ಪಠ್ಯಗಳ ಸಂಪಾದನೆ ಮತ್ತು ವಿಶ್ಲೇಷಣೆ, ಶಾಸ್ತ್ರಸಾಹಿತ್ಯ ಕುರಿತ ವಿಮರ್ಶೆ, ಸಂಶೋಧನಾಶಾಸ್ತ್ರ ಕುರಿತ ಬರಹಗಳೆಲ್ಲ ಹೆಚ್ಚು ಶ್ರಮ ಬೇಡುವ ಶೈಕ್ಷಣಿಕ ಚಟುವಟಿಕೆಗಳು.  ಶಾಸನಗಳ ಹುಡುಕಾಟ, ಅವುಗಳ ಓದುವಿಕೆ, ಆಕರ ಗ್ರಂಥಗಳ ನಿರ್ಮಾಣ ಕಾರ್ಯ್ ಮತ್ತು ವಿಶ್ವಕೋಶಗಳ ರಚನೆಯ ಕೆಲಸಗಳೆಲ್ಲ ತುಂಬ ಶ್ರಮದಾಯಕ ಯೋಜನೆಗಳು. ಕಲಬುರ್ಗಿಯವರು ಇಂತಹ ಶ್ರಮಪೂರ್ಣ ಬರಹದ ಕ್ಷೇತ್ರವನ್ನೇ ಆಯ್ದುಕೊಂಡಿದ್ದರು ಮತ್ತು ಇದಕ್ಕಾಗಿ ತಮ್ಮ ವ್ಯಕ್ತಿತ್ವವನ್ನು ಒಗ್ಗಿಸಿಕೊಂಡಿದ್ದರು. ಕಲಬುರ್ಗಿಯವರಿಗಿದ್ದ ಇನ್ನೊಂದು ಆಸೆ, ಕನ್ನಡದ್ದೇ ಆದ ಸಾಹಿತ್ಯ ಮೀಮಾಂಸೆಯನ್ನು ಬೆಳೆಸುವುದಾಗಿತ್ತು. ಕನ್ನಡ ವಿಶ್ವವಿದ್ಯಾಲಯದಲ್ಲಿ ಅದನ್ನು ಆಗು ಮಾಡಲು ಅವರು ಶ್ರಮಿಸಿದರು. ಕನ್ನಡದ ಭಾಷೆಯೊಳಗೆ ಸ್ವತಂತ್ರ ಜ್ಞಾನ ಧಾರೆಗಳಿವೆ ಎಂಬುದನ್ನು ಬಲವಾಗಿ ಪ್ರತಿಪಾದಿಸಲು ಅವರು ಸದಾ ಹೆಣಗುತ್ತಿದ್ದರು.

ಕಲಬುರ್ಗಿಯವರು ಓರಿಯಂಟಲಿಸ್ಟರನ್ನು ಅನುಕರಿಸಿದರು ಎಂಬ ಟೀಕೆ ಇದೆ. ಆದರೆ ಕಲಬುರ್ಗಿಯವರ ಶೈಕ್ಷಣಿಕ ವಿಧಾನ ಮೇಲ್ನೋಟಕ್ಕೆ ಓರಿಯಂಟಲಿಸ್ಟ್ರ ಅಧ್ಯಯನದ ಕ್ರಮದಂತೆ ಕಾಣಬಹುದು. ಆದರೆ ಸೈದ್ಧಾಂತಿಕವಾಗಿ ಕಲಬುರ್ಗಿಯವರು ಓರಿಯಂಟಲಿಸ್ಟರನ್ನು ಮೀರಿದರು. ಧಾರವಾಡ ಸೀಮೆಯ ಇಬ್ಬರು ಬಹುದೊಡ್ಡ ವಿದ್ವಾಂಸರು ಕನ್ನಡ ಸಂಶೋಧನಾ ಕ್ಷೇತ್ರದ ವ್ಯಾಪ್ತಿಯನ್ನು ಹಿಗ್ಗಿಸಿದರು. ಅದು ಒಬ್ಬರು ಶಂಬಾ ಜೋಷಿ, ಇನ್ನೊಬ್ಬರು ಡಾ. ಎಂ ಎಂ ಕಲಬುರ್ಗಿ. ಇಬ್ಬರೂ ಭಿನ್ನ ವ್ಯಕ್ತಿತ್ವದವರಾದರೂ ತುಳಿದ ಹಾದಿ ಮಾತ್ರ ಒಂದೇ. ಇವರಿಬ್ಬರು ನಮ್ಮ ಪರಂಪರೆಯ ಅತ್ಯಂತ ಅಲಕ್ಷಿತ ವಿಷಯಗಳನ್ನು ಮಹತ್ವದ ಚರ್ಚೆಗಳ ಮುಂಚೂಣಿಗೆ ತಂದು ನಿಲ್ಲಿಸಿದರು. ಶಂಬಾ ಯೂರೋಪಿನ ಆಧುನಿಕ ಚಿಂತಕರ ಭಿನ್ನ ಶೈಕ್ಷಣಿಕ ವಿಧಾನಗಳನ್ನು ಅರ್ಥೈಸಿ ತಮ್ಮದೇ ಆದ ವೈಧಾನಿಕತೆಯನ್ನು ರೂಪಿಸಿಕೊಂಡರು. ಕಲಬುರ್ಗಿಯವರು ತಮ್ಮ ಶ್ರಮ ಸಂಸ್ಕೃತಿಯ ಸಮಷ್ಟಿ ಪ್ರಜ್ಞೆಯಲ್ಲಿಯೇ ತನ್ನ ಸಮಕಾಲಿನರಿಗಿಂತ ಭಿನ್ನರಾಗಿ ಬರವಣಿಗೆ ಮಾಡಿದರು. ಕಲಬುರ್ಗಿಯವರನ್ನು ಪರಂಪರೆಗೆ ಅಂಟಿಕೊಂಡ ಬುದ್ಧಿಜೀವಿ ಎಂದು ನೋಡಲಾಗುತ್ತದೆ. ಆದರೆ ಕಲಬುರ್ಗಿ ತಮ್ಮ ಚಿಂತನೆಗಳಿಗೆ ಬಸವಣ್ಣನನ್ನು ಭಿತ್ತಿಯನ್ನಾಗಿಸಿಕೊಂಡ ಕಾರಣಕ್ಕಾಗಿ ಅವರಲ್ಲೊಬ್ಬ ಬಂಡುಕೋರ ಸದಾ ಜಾಗೃತನಾಗಿರುತ್ತಿದ್ದ. ಮಾರ್ಗ ಪುಸ್ತಕ ಮಾಲಿಕೆಯ ಮೊದಲ ಸಂಪುಟ ಪ್ರಕಟವಾದ ಮೇಲೆ ಉಂಟಾದ ವಿವಾದಗಳಿಂದ ಕಲಬುರ್ಗಿಯವರು ವಿಚಲಿತರಾದಂತೆ ಕಾಣುವುದಿಲ್ಲ. ಆನಂತರ ಪ್ರಕಟವಾದ ಅವರ ಬರವಣಿಗೆಯಲ್ಲಿ ಮತ್ತು ಹೇಳಬೇಕಾದದ್ದನ್ನು ಹೇಳುವಲ್ಲಿ ಎಲ್ಲೂ ಅವರು ಸಂದಿಗ್ಧಕ್ಕೆ ಒಳಗಾದಂತೆ ಕಾಣುವುದಿಲ್ಲ. ಪರಂಪರೆಯನ್ನು ಆರಾಧಿಸುತ್ತಲೇ ಅದರ ಗುಮಾಸ್ತಿಕೆಯನ್ನು ಮಾಡುತ್ತಿದ್ದ ತನ್ನ ಸಮಕಾಲೀನರಿಗೆ ಕಲಬುರ್ಗಿಯವರು ಉತ್ತರಗಳನ್ನು ನೀಡುತ್ತಲೆ ತಾವು ಹೇಳಬೇಕಾದದ್ದನ್ನು ಹೇಳೇ ಹೇಳುತ್ತಿದ್ದರು. ಇತ್ತೀಚಿಗೆ ಕೊಪ್ಪಳದಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಸಭಿಕರನ್ನು ಚಕಿತಗೊಳಿಸಿತ್ತು. ಅವರು ಒಬ್ಬ ಆಕ್ಟಿವಿಷ್ಟ್ ತರಹ ಅಷ್ಟೊಂದು ಪ್ರಖರವಾಗಿ ವೇದಿಕೆಯ ಮೇಲೆ ಮಾತನಾಡಿದ್ದನ್ನು ನಾನು ಕೇಳಿರಲಿಲ್ಲ. ಭಾರತದ ಜಾತಿ ವ್ಯವಸ್ಥೆ, ಕ್ರೂರ ಅಸಮಾನತೆ ಮುಂತಾದ ವಿಷಯಗಳ ಕುರಿತು ಅವರು ಅಂದು ಮಾತನಾಡಿದ್ದನ್ನು ನಾನು ಎಂದೂ ಮರೆಯಲಾರೆ. ಒಂದುವರೆ ದಶಕಗಳಿಂದ ಅವರ ಬರಹಗಳನ್ನು ಓದಿದ್ದಲ್ಲದೆ ವ್ಯಕ್ತಿಯಾಗಿ ಅವರನ್ನು ಗಮನಿಸಿದ್ದೇನೆ. ಅವರಲ್ಲಿ ಸಾಮಾಜಿಕ ಬದಲಾವಣೆಗೆ ಸದಾ ತಹತಹಿಸುತ್ತಿದ್ದ ಒಬ್ಬ ಆಕ್ಟಿವಿಷ್ಟ್ ಜಾಗೃತನಾಗಿರುತ್ತಿದ್ದ. ಲೇಖಕನೊಬ್ಬ ತನ್ನ ಸಮಕಾಲೀನ ಬದುಕಿಗೆ ತೀವ್ರವಾಗಿ ಸ್ಪಂದಿಸಿದಾಗ ಮಾತ್ರ ಈ ಬಗೆಯ ಆಕ್ಟಿವಿಷ್ಟ್ ಧೋರಣೆ ಮೈಗೂಡುತ್ತದೆ. ‘ಸತ್ಯ ಹೇಳುವ ಮತ್ತು ಅದನ್ನು ನಿಷ್ಠೂರವಾಗಿ ಹೇಳುವ ಕ್ರಿಯೆ ಪ್ರಖರವಾದಷ್ಟು ಸಮಾಜದ ಮೌಢ್ಯಗಳನ್ನು ತಿದ್ದಬಹುದು’ ಎಂಬ ವಾದಕ್ಕೆ ಕಲಬುರ್ಗಿ ಅಂಟಿಕೊಂಡಿದ್ದರು. ಬಸವಣ್ಣನ ಕ್ರಾಂತಿಕಾರಿ ಆಶಯಗಳನ್ನು ಮೈಗೂಡಿಸಿಕೊಂಡೇ ಮಠಗಳ ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಸಾಮಾಜಿಕ ಬದಲಾವಣೆಗೆ ಮಠಗಳು, ಚರ್ಚುಗಳು, ಸರಕಾರ ಎಲ್ಲವನ್ನು ಬಳಸಿಕೊಳ್ಳಬೇಕೆಂಬ ಆಶಯ ಅವರಲ್ಲಿ ಗಟ್ಟಿಯಾಗಿತ್ತು.

ಕಲಬುರ್ಗಿಯವರ ಶೈಕ್ಷಣಿಕ ವಿಧಾನ ಚರಿತ್ರೆಯನ್ನು ಪುನರ್ ರಚಿಸುವ ಆಶಯದ್ದಲ್ಲ. ಶಂಬಾ ಅವರನ್ನು ಹೀಗೆಯೇ ನಾವು ಅರ್ಥೈಸುತ್ತಾ ಬಂದಿದ್ದೇವೆ. ಆದರೆ ಇಬ್ಬರಲ್ಲೂ ಒಂದು ಬಗೆಯ ಚರಿತ್ರೆ ಭಂಜನೆಯ ಬಂಡುಕೋರ ಗುಣವಿದೆ. ಇದಕ್ಕೆ ಕಲಬುರ್ಗಿಯವರು ಬರವಣಿಗೆ ಮಾಡಲು ಆಯ್ದುಕೊಂಡ ವಿಷಯಗಳು ಮತ್ತು ಅವುಗಳನ್ನು ವಿಶ್ಲೇಷಿಸಲು ಆಯ್ದುಕೊಂಡ ವಿಧಾನಗಳು ಸಾಕ್ಷ್ಯ ಒದಗಿಸುತ್ತವೆ. ವೀರಗಲ್ಲು ಮಾಸ್ತಿಗಲ್ಲು, ಸತಿ ಪದ್ಧತಿ, ಕೊಡೇಕಲ್ಲು ಪರಂಪರೆ, ತಿಂತಿಣಿ ಮೋನಪ್ಪ, ಆದಿಲ್‌ಶಾಹಿ ಸಾಹಿತ್ಯ ಮುಂತಾದ ಅಲಕ್ಷಿತ ವಿಷಯಗಳ ಕುರಿತು ಅವರು ಬರೆಯುವಾಗ ಅಲ್ಲಿ ಚರಿತ್ರೆಯ ಪುನರ್ ರಚನೆಗಿಂತ ನಿರ್ಲಕ್ಷಿಸಲ್ಪಟ್ಟ ಸಂಗತಿಗಳ ಮೂಲಕ ಚರಿತ್ರೆಯನ್ನು ಮರುರೂಪಿಸುವ ತಹತಹ ಅವರಲ್ಲಿ ಎದ್ದುಕಾಣುತ್ತದೆ. ನಮ್ಮ ಸಾಮಾಜಿಕ ಚರಿತ್ರೆಯಲ್ಲಿ ದಾಖಲಾಗಬೇಕಾದ ಶ್ರಮಿಕ ಸಮುದಾಯಗಳ ಅಂತಸ್ಥ ಜಗತ್ತನ್ನು ಅನಾವರಣಗೊಳಿಸಲು ಕಲಬುರ್ಗಿ ಹೆಣಗಿದರು. ಕಲಬುರ್ಗಿಯವರ ಇನ್ನೊಂದು ಮುಖ್ಯವಾದ ಗುಣ ಎಂದರೆ ಅವರು ಎಂದೂ ಜಾತಿವಾದಿಯಾಗಿರಲಿಲ್ಲ ಎಂಬುದು. ಮಾರ್ಗ ಸಂಪುಟ ಮಾಲಿಕೆಯ ಆರಂಭದ ಬರಹಗಳಿಂದ ಇತ್ತೀಚಿನವರೆಗೆ ಅವರ ಎಲ್ಲಾ ಬರವಣಿಗೆಯಲ್ಲಿ ಅವರನ್ನು ಕೈಹಿಡಿದು ನಡೆಸಿರುವುದು ಜನತಾಂತ್ರಿಕ, ಜಾತ್ಯಾತೀತ ಬಸವ ಪ್ರಜ್ಞೆ. ಈ ಕಾರಣದಿಂದಾಗಿ ಕಲಬುರ್ಗಿಯವರು, ಪರಂಪರೆಯನ್ನು ಜನಾಂಗ ದ್ವೇಷಕ್ಕೆ ಬಳಸುವ ಕೋಮುವಾದಿ ವಿದ್ವಾಂಸರಿಗಿಂತ ಭಿನ್ನವಾಗಿಯೇ ಕಾಣುತ್ತಾರೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಇದ್ದಷ್ಟು ದಿನ ಇಲ್ಲಿ ನಡೆಯುತ್ತಿದ್ದ ಅಲಕ್ಷಿತ ವಿಷಯಗಳ ಅಧ್ಯಯನಗಳಿಗೆ ಕಲಬುರ್ಗಿಯವರು ಎಂದೂ ಪ್ರೋತ್ಸಾಹ ಕೊಡುತ್ತಾ ಬಂದರು. ಜೊತೆಗೆ ನಾವು ನಿರ್ವಹಿಸುತ್ತಿದ್ದ ಹಲವು ಯೋಜನೆಗಳಿಗೆ ಪೂರಕವಾಗಿ ಪ್ರಾಚೀನ ಸಾಹಿತ್ಯ ಮತ್ತು ಶಾಸ್ತ್ರಗ್ರಂಥಗಳ ಉಲ್ಲೇಖಗಳನ್ನು ನೆನಪಿಸಿ ಅವುಗಳನ್ನು ಓದುವಂತೆ ಮಾಡುತ್ತಿದ್ದರು. ಯಾವುದೋ ಶಾಸನದ ಉಲ್ಲೇಖಗಳನ್ನು ನೆನಪಿಸಿ ಅದನ್ನು ಗಮನಿಸಲು ಹೇಳುತ್ತಿದ್ದರು. ಅವರು ಕುಲಪತಿಯಾಗಿ ವಿಶ್ವವಿದ್ಯಾಲಯದಲ್ಲಿದ್ದ ಸಂದರ್ಭದಲ್ಲಿ ನಾವು ಬಹುತೇಕರು ಇಪ್ಪತ್ತು ಪ್ಲಸ್ ವಯಸ್ಸಿನವರು. ನಮ್ಮನ್ನು ಅವರು ತಮ್ಮ ಪ್ರೀತಿಯ ಶಿಷ್ಯರನ್ನಾಗಿಯೇ ಸ್ವೀಕರಿಸಿದ್ದರು. ನಮ್ಮನ್ನು ಬಯ್ಯುತ್ತಾ, ತಿದ್ದುತ್ತಾ ತಾವೇ ಹಲವು ಯೋಜನೆಗಳ ಶೀರ್ಷಿಕೆಗಳನ್ನು ನೀಡಿ ಬರೆಯಲು ಪ್ರೇರೇಪಿಸುತ್ತಿದ್ದರು. ಅವರಿಗೆ ಗೌರವ ಪ್ರತಿಗಳೆಂದು ಬರುತ್ತಿದ್ದ ಪುಸ್ತಕಗಳಲ್ಲಿ ನಮ್ಮ ನಮ್ಮ ವಿಷಯಗಳಿಗೆ ಸಂಬಂಧಿಸಿದ್ದರೆ ಆ ಪುಸ್ತಕಗಳನ್ನು ನಮಗೆ ತಲುಪಿಸಿ ಓದಲು ಹೇಳುತ್ತಿದ್ದರು. ಅವರು ನಿವೃತ್ತರಾದ ಮೇಲೂ ಹೀಗೆ ನಮಗೆ ಸಂಬಂಧಿಸಿದ ಪುಸ್ತಕಗಳನ್ನು ಕಲಬುರ್ಗಿಯವರು ಯಾರ ಮೂಲಕವಾದರೂ ನಮಗೆ ಓದಲು ತಲುಪಿಸುತ್ತಿದ್ದರು. ಪ್ರಕಟವಾದ ನಮ್ಮ ಪುಸ್ತಕಗಳನ್ನು ಓದಿ `ನೋಡು ಎಪ್ಪತ್ತೈದನೇ ಪುಟದ ಎಂಟನೇ ಸಾಲಿನಲ್ಲಿ ಅಕ್ಷರ ದೋಷ ಅದ. ಸರಿಯಾಗಿ ಪ್ರೋಫ್ ನೋಡಾಕ್ ಬರಲ್ಲೇನು ನಿನಗ’ ಎಂದು ಬೈಸಿಕೊಂಡ ಹಲವು ಸಂದರ್ಭಗಳಿವೆ. ಯಾವುದೊ ವಿಷಯದ ಕುರಿತು ನಾವು ಬರವಣಿಗೆ ಮಾಡಿದರೂ ಕಲಬುರ್ಗಿಯವರು ತಮ್ಮ ಬೌದ್ಧಿಕ ಕಣಜದಿಂದ ಹೊಸ ವಿಷಯ ಹೆಕ್ಕಿ ನಮ್ಮ ಮುಂದಿಡುತ್ತಿದ್ದರು. ಪ್ರತಿ ಸಲ ಅವರನ್ನು ಭೇಟಿ ಮಾಡಿದಾಗ ಹೊಸ ವಿಷಯಗಳ ಕುರಿತು ಚರ್ಚಿಸಿ ಆ ವಿಷಯದ ಸಾಧ್ಯತೆಯನ್ನು ಹಿಗ್ಗಿಸುತ್ತಿದ್ದರು. ಎಷ್ಟು ಹಂಚಿದರು ಅವರ ಬೌದ್ಧಿಕ ಕಣಜ ಖಾಲಿಯಾಗುವಂತದ್ದಾಗಿರಲಿಲ್ಲ. ಯಾವತ್ತು ತಮ್ಮ ಸುತ್ತ ಒಂದು ಬೌದ್ಧಿಕ ಸಮುದಾಯವನ್ನು ಕಟ್ಟುವ ಸಾಹಸವನ್ನು ಕಲಬುರ್ಗಿಯವರು ಮಾಡುತ್ತಲೇ ಇದ್ದರು.

ನನಗಂತು ಅವರ ಸಂಪರ್ಕ ಮತ್ತು ಸಲಹೆಗಳು ಕಾಲಕಾಲಕ್ಕೆ ಲಭಿಸುತ್ತಿದ್ದವು. ಇತ್ತೀಚೆಗೆ ನಾನು ವಿಭಾಗದಿಂದ ಆಡಳಿತಾಂಗಕ್ಕೆ ಉಪಕುಲಸಚಿವನಾಗಿ ಹೋದಾಗ ಒಂದು ಮಧ್ಯಾಹ್ನ ಅವರ ಫೋನ್ ಕರೆ ಬಂತು ‘ಓದಕ್ ಬರಿಯಾಕ್ ಬಂದಿಯೋ ಅಲ್ಲಿ ಗೌಡ್ಕಿ ಮಾಡಾಕ್ ಬಂದಿಯೋ, ಓದಾದ್ ಬಿಟ್ ಅಲ್ಲಿ ಗೌಡ್ಕಿ ಮಾಡಾಕ್ ಹತ್ತಿಯೇನ್ ನೀನು. ವಿಭಾಗಕ್ಕೆ ವಾಪಾಸ್ಸು ಹೋಗು ನೀನು’ ಎಂದು ಫೋನ್ ಇಟ್ಟು ಬಿಟ್ಟರು. ನಾನು ಒಂದು ಕ್ಷಣ ಮಂಕಾಗಿ ಕುಳಿತೆ. ಸಂಜೆ ಮತ್ತೆ ಅವರದ್ದೇ ಫೋನ್ ಬಂತು ‘ಬೇಜಾರಾದೇನು, ನೀನು ಓದು ಬರಹ ಮಾಡಾಕ್ ಬಂದಾವ, ಅಲ್ಲಿ ಫೈಲ್ ನೋಡ್ತ ಕೂತ್ರಾ ನಿನ್ನ ಭವಿಷ್ಯೇನು? ನಿನಗಿಷ್ಟ ಇದ್ರ ಅಲ್ಲಿದ್ದೂ ಕೆಲಸ ಮಾಡು’ ಎಂದು ಸಮಾಧಾನಿಸಿದರು. ಇತ್ತೀಚೆಗೆ ನಾವು ಹೊರತಂದ  ‘ಬುಡಕಟ್ಟು ಚಿತ್ರ ಸಂಪುಟ’ ಪುಸ್ತಕ ನೋಡಿ ತುಂಬಾ ಖುಷಿಯಾಗಿದ್ದರು. `ತುಂಬಾ ಗಟ್ಟಿ ಕೆಲ್ಸ ಮಾಡೀರಿ. ಹಿಂಗ ಗಟ್ಟಿ ಕೆಲ್ಸ ಮಾಡಬೇಕು. ಇನ್ನೂ ನೀನು ಬರೆಯೊದು ಬಾಳ ಅದ’ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಳೆದ ವರ್ಷ ನನ್ನ ತಂದೆ ತೀರಿಕೊಂಡಾಗ ತುಂಬಾ ಮಂಕಾಗಿದ್ದ ನನ್ನನ್ನು ಅವರು ಹುರಿದುಂಬಿಸಿದ್ದನ್ನು ನಾನು ಎಂದಿಗೂ ಮರೆಯಲಾರೆ. ಯಾರಿಂದಲೋ ವಿಷಯ ತಿಳಿದ ಅವರು ನನಗೆ ಧೈರ್ಯ ಹೇಳಿದರು. ‘ನಿಮ್ಮ ತಂದೆಯವರ ಋಣ ತೀರಿಸಬೇಕೆಂದ್ರೆ ನೀನು ಇನ್ನೂ ತೀವ್ರವಾಗಿ ಓದು ಬರಹ ಮಾಡೆಂದು’ ಪ್ರೇರೇಪಿಸಿದರು. ಬೌದ್ಧಿಕವಾಗಿ ಮಾತ್ರವಲ್ಲದೆ ನಮ್ಮ  ನಮ್ಮ ವೈಯುಕ್ತಿಕ ವಿಷಯಗಳನ್ನು ಅವರು ತಿಳಿದುಕೊಂಡು ನನ್ನಂತವರಿಗೆ ಕಲಬುರ್ಗಿಯವರು ಪ್ರೇರಣೆ ನೀಡಿದ್ದಾರೆ.

`ಕಲಬುರ್ಗಿ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕುತ್ತಿದ್ದರು’ ಎಂದು ಹಲವರು ಅಭಿಪ್ರಾಯಿಸುತ್ತಿದ್ದಾರೆ. ಮುಕ್ಕಾಲು ಶತಮಾನ ಕಾಲ ನಿರಂತರ ಓದು ಬರಹ ಮಾಡಿದ, ನಾಡಿನ ಉದ್ದಗಲಕ್ಕೂ ತಿರುಗಾಡಿ ಜನರ ಬದುಕನ್ನು ಅರ್ಥೈಸಿಕೊಂಡ ಕಲಬುರ್ಗಿಯವರು ವಾಸ್ತವ ಸಂಗತಿಗಳನ್ನು ಎಲ್ಲರ ಮುಂದಿಡುತ್ತಿದ್ದರು. ಆ ಸತ್ಯಗಳನ್ನು ಕೆಲವು ಮೂಲಭೂತವಾದಿಗಳು ವಿವಾದಾತ್ಮಕಗೊಳಿಸುತ್ತಿದ್ದರು. ಸತ್ಯಗಳನ್ನು ಸುಳ್ಳಾಗಿಸುವ, ಸುಳ್ಳುಗಳನ್ನೆಲ್ಲಾ ಸತ್ಯವಾಗಿಸುವ ಗೋಬೆಲ್ಸ್ ಸಂತತಿಯವರು ಕನ್ನಡದ ಪ್ರಮುಖ ಲೇಖಕರನ್ನು ಘಾಸಿಗೊಳಿಸಿದ್ದಾರೆ. ಅದರಲ್ಲೂ ಕೆಲವೂ ಮಾಧ್ಯಮಗಳು ಹುಟ್ಟು ಹಾಕಿದ ಜನಾಭಿಪ್ರಾಯಗಳಂತೂ ಈ ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಹೊಸಬಗೆಯಲ್ಲಿ ರೂಪಿಸುವ ಪ್ರಯತ್ನಗಳಂತೆ ಕಾಣುತ್ತವೆ. ಮೂಲಭೂತವಾದಿಗಳು ಕಲಬುರ್ಗಿಯವರ ಹಣೆಗೆ ಕಾಡತೂಸು ನುಗ್ಗಿಸಿ ಅದನ್ನು ನಿಷ್ಕ್ರೀಯಗೊಳಿಸಿರಬಹುದು. ಆದರೆ ಕಲಬುರ್ಗಿಯವರು ತಮ್ಮ ಸಾವಿರಾರು ಶಿಷ್ಯರ ಅಂತರಂಗಗಳಲ್ಲಿ ಹಚ್ಚಿದ ಹಣತೆಯನ್ನು ಯಾರೂ ಆರಿಸಲಾರರು. ಅವರಿಂದ ಪ್ರೇರಣೆ ಪಡೆದ ಎಲ್ಲಾ ಲೇಖಕರು ಅವರ ‘ನಿಜ ಬಸವ ಪ್ರಜ್ಞೆ’ಯನ್ನು ವಿಸ್ತರಿಸಿ ಜನ ಹೋರಾಟಗಳಿಗೆ ಪ್ರೇರಣೆ ನೀಡಿದರೆ, ಅಲ್ಲೆಲ್ಲಾ ಕಲಬುರ್ಗಿಯವರು ಬದುಕಿರುತ್ತಾರೆ. ‘ಬಂದೂಕುಗಳು ಕೊಲ್ಲುವುದು ಭೌತಿಕ ದೇಹವನ್ನು ಮಾತ್ರ, ಪ್ರಖರ ವಿಚಾರಗಳನ್ನಲ’್ಲ

ಮಾರ್ಗ ಸಂಪುಟ ಮೂರರಲ್ಲಿ (ಪುಟ ೫೦೧) ಬಸವಣ್ಣನ `ಲಿಂಗವಂತರು ತಾವು ಅಂಜಲೇಕೆ’ ಎಂಬ ವಚನವನ್ನು ಕಲಬುರ್ಗಿಯವರು ಹೀಗೆ ವಿಶ್ಲೇಷಿಸಿದ್ದಾರೆ. `ಬಸವಣ್ಣನವರದು ಜೋಡು ಜವಾಬ್ದಾರಿಯ ಆಂದೋಲನ. ಅದು, ಒಂದು ಕೈಯಿಂದ ಏರಿ ಬರುತ್ತಲಿದ್ದ ಪ್ರತಿಗಾಮಿಗಳನ್ನು ತಡೆಯುವುದು. ಇನ್ನೊಂದು ಕೈಯಿಂದ ಉರುಳಿ ಬೀಳುತ್ತಿದ್ದ ಪತಿತರನ್ನು ಮೇಲೆತ್ತುವುದು, ಅವರಿಗೆ ಧರ‍್ಯ ತುಂಬುವುದು. `ಹೀಗಾಗಿ ಲಿಂಗವಂತರು ತಾವು ಅಂಜಲೇಕೆ?’ ಎಂಬ ಸಾರ್ವತ್ರಿಕ ಸಂದೇಶ ರೂಪದ ಈ ವಚನ ಅವನ ಅನುಯಾಯಿಗಳಿಗೆ ಧೈರ್ಯ, ಉತ್ಸಾಹ ತುಂಬುವ ಸಮಕಾಲೀನ ಸಂದೇಶವೂ ಆಗಿದೆ. ಸಾವಿರ ಸಾವಿರ ವರ್ಷಗಳಿಂದ ಪ್ರಭುವರ್ಗ, ಪುರೋಹಿತವರ್ಗ ಮೊದಲಾದವರ ಸಿಂಹ ಸ್ವಪ್ನದಲ್ಲಿ ಸತ್ತು ಬದುಕುತ್ತಲಿದ್ದ ಪತಿತರಿಗೆ, ಈ ಪ್ರತಿಗಾಮಿಗಳನ್ನು ಎದುರಿಸಲು, ಅದೂ ಪ್ರತ್ಯಕ್ಷವಾಗಿ ಎದುರಿಸಲು ಮೊದಲು ಬೇಕಾದುದು ಧೈರ್ಯ, ಆಮೇಲೆ ಮಿಕ್ಕವು. ಅದು ಬಸವಣ್ಣನವರಿಗೆ ಗೊತ್ತು. ಆದುದರಿಂದಲೇ ಇಂಥ ಮಾತುಗಳನ್ನಾಡಿ ಪರಿಸರವನ್ನು ಹೋರಾಟಕ್ಕೆ ಅಣಿ ಮಾಡುತ್ತಾರೆ.’

ಬಸವಣ್ಣನ ಈ ವಚನ ಕಲಬುರ್ಗಿವರ ಚಿಂತನೆಯ ಮೂಲ ದ್ರವ್ಯ. ಮೂಲಭೂತವಾದಿ ಫ್ಯಾಸಿಸ್ಟರು, ಬಸವಣ್ಣ ಮತ್ತು ಕಲಬುರ್ಗಿ ತರಹದ ಚಿಂತಕರನ್ನು ಭೌತಿಕವಾಗಿ ಇಲ್ಲವಾಗಿಸಿರಬಹುದು. ಆದರೆ ಫ್ಯಾಸಿಸ್ಟರಿಂದ ಮೂಲಭೂತವಾದಿಗಳಿಂದ ಹತರಾದ ವೈಚಾರಿಕರು ಸಮಾಜವಾದಿ ಜನತಂತ್ರವನ್ನು ಕಟ್ಟುವ ಜಾಗೃತ ಸಮುದಾಯವನ್ನು ರೂಪಿಸುತ್ತಲೇ ಇದ್ದಾರೆ. ಇದು ಚಾರ್ವಾಕನಿಂದ ಶುರುವಾದ ಅಭಿಯಾನ, ಕಲಬುರ್ಗಿಯವರು ಕೊನೆಯವರೇನಲ್ಲ. ಹೀಗಾಗಿ ಕೇಡಿನ ವಿರುದ್ಧದ ಹೋರಾಟಕ್ಕೂ ಕೊನೆಯಿರುವುದಿಲ್ಲ.

– ಎ ಎಸ್ ಪ್ರಭಾಕರ, ಬೆಂಗಳೂರು

Leave a Reply