ಬರ ಪರಿಹಾರ ಹಣ ದುರ್ಬಳಕೆ ತಡೆಯುವ ಸಲುವಾಗಿ ‘ಫ್ರೂಟ್ಸ್’ ತಂತ್ರಾಂಶ ಅಭಿವೃದ್ಧಿ: ಕೃಷ್ಣ ಬೈರೇಗೌಡ

2 years ago

ಫ್ರೂಟ್ಸ್ ಮೂಲಕ ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ

ಮುಂದಿನ ಒಂದು ವಾರದಲ್ಲಿ 25 ಲಕ್ಷ ರೈತರಿಗೆ ಹಣ ವರ್ಗಾವಣೆ

ರಾಯಚೂರಿನ ಇಲಾಖೆ ಪರಿಶೀಲನಾ ಸಭೆಯಲ್ಲಿ ಸಚಿವರ ಮಾಹಿತಿ

ರೈತರ ಆರ್ಟಿಸಿ – ಆಧಾರ್ ಲಿಂಕ್ಗೂ ಸೂಚನೆ

ರಾಯಚೂರು: ಸರ್ಕಾರ ರೈತರಿಗೆ ನೀಡುವ ಬರ ಪರಿಹಾರ ಹಣ ದುರ್ಬಳಕೆಯಾಗುವುದನ್ನು ತಡೆಯುವ ಸಲುವಾಗಿ ಈ ವರ್ಷಪರಿಹಾರದ ಹಣವನ್ನು ‘ಫ್ರೂಟ್ಸ್’ ತಂತ್ರಾಂಶದ ಮೂಲಕ ನೇರವಾಗಿ ರೈತರಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ರಾಯಚೂರಿನಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರ ಈ ಹಿಂದೆ ರೈತರ ಬರ ಪರಿಹಾರ ಹಣವನ್ನು ಅಧಿಕಾರಿಗಳ ಮೂಲಕ ತಲುಪಿಸುತ್ತಿತ್ತು. ಆದರೆ, ಈ ವೇಳೆ ಸಾಕಷ್ಟು ಹಣ ದುರ್ಬಳಕೆ ಪ್ರಕರಣಗಳೂ ಕಂಡು ಬರುತ್ತಿತ್ತು. ಪರಿಹಾರದ ಹಣವೂ ಸಿಗದೆ ರೈತರು ಪರಿತಪಿಸುವ ಸ್ಥಿತಿ ಇತ್ತು. ಹೀಗಾಗಿ ಈ ಎಲ್ಲಾ ಅಕ್ರಮಗಳಿಗೆ ತಡೆಯೊಡ್ಡುವ ಸಲುವಾಗಿ ‘ಫ್ರೂಟ್ಸ್’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಇದೀಗ ರಾಜ್ಯಾದ್ಯಂತ ಎಲ್ಲಾ ರೈತರ ಒಟ್ಟು ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ಹಾನಿ ಕುರಿತ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಮೊದಲ ಕಂತಿನ ಪರಿಹಾರವನ್ನು ಯಾವುದೇ ತಾಂತ್ರಿಕ ದೋಷವಿಲ್ಲದೆ, ಹಣ ದುರುಪಯೋಗವಾಗದೆ ನೇರವಾಗಿ ರೈತರಿಗೆ ತಲುಪಿಸಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಇನ್ನೂ ಒಂದು ವಾರದೊಳಗೆ ರಾಜ್ಯದ 25 ಲಕ್ಷ ರೈತರು ಪರಿಹಾರ ಹಣ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಲ್ಲದೆ, ರಾಯಚೂರು ಜಿಲ್ಲೆಯಲ್ಲಿ 1.4 ಲಕ್ಷ ರೈತರ ಆಧಾರ್ ಹಾಗೂ ಆರ್ಟಿಸಿ ಹೊಂದಾಣಿಕೆಯಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ತಹಶೀಲ್ದಾರ್ ಗಳು ಇದನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ನಂತರ ರಾಯಚೂರಿನ ಎಲ್ಲಾ ರೈತರಿಗೆ ಪರಿಹಾರದ ಹಣವನ್ನು ಆನ್ಲೈನ್ ಮೂಲಕ ಬ್ಯಾಂಕ್ ಖಾತೆಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ರೈತರ ಆಧಾರ್ ಲಿಂಕ್ ನಮ್ಮ ಆದ್ಯತೆ: ರೈತರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಈ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಪರಿಣಾಮ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಆ ಮೂಲಕ ಪರಿಹಾರದ ಹಣ ತಲುಪಿಸುವ ಜೊತೆಗೆ ರಾಜ್ಯದ ರೈತರ ನಿಖರ ಅಂಕಿಅಂಶ ಪಡೆಯಬಹುದು ಎಂದರು.

ಕುಡಿಯುವ ನೀರು ಪೂರೈಸಿ: ರಾಯಚೂರಿನ ಯಾವುದೇ ಭಾಗದಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಸೂಚಿಸಿದರು.

ಈ ವರ್ಷ ಬರಗಾಲ ಎದುರಾಗಿದೆ. ಮುಂದಿನ ಬೇಸಿಗೆ ಅಥವಾ ಅದಕ್ಕೂ ಮುನ್ನವೇ ರಾಯಚೂರು ಭಾಗದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ರಾಯಚೂರಿನ 374 ಗ್ರಾಮಗಳಲ್ಲಿ ಹಾಗೂ ನಗರ ಭಾಗದ 269 ವಾರ್ಡ್ಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ ಎಂದರು.

ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ನಡೆಸಿ ನೀರಿನ ಸಮಸ್ಯೆ ಕಂಡುಬರುವ ಕಡೆಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು. ಈಗಾಗಲೇ 59 ಖಾಸಗಿ ಬೋರ್ ವೆಲ್ಗಳನ್ನು ಗುರುತಿಸಲಾಗಿರುವುದು ಉತ್ತಮ ಬೆಳವಣಿಗೆ. ಅಧಿಕಾರಿಗಳು ಯಾವ ಭಾಗದಲ್ಲೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ, ಈ ಖರ್ಚಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಎಸ್ ಡಿ ಆರ್ ಎಫ್ ಹಣವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ಮಾನಪ್ಪ ವಜ್ಜಲ್ ಮತ್ತು ಬಸನಗೌಡ ದದ್ದಲ್ ಮಾತನಾಡಿ, ಪ್ರತಿಯೊಂದು ಕ್ಷೇತ್ರಕ್ಕೂ ಸರ್ಕಾರ ಸ್ವಂತ ಟ್ಯಾಂಕರ್ ಖರೀದಿಸಬೇಕು. ಇದಕ್ಕೆ ಕೆಕೆಆರ್ಡಿಬಿ ಹಣ ಬಳಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಮೇವು ಪೂರೈಕೆಗೆ ಸೂಚನೆ: ಜನವರಿ, ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಅನುಕೂಲವಾಗುವಂತೆ ರಾಜ್ಯಾದ್ಯಂತ 7,63,000 ಮೇವಿನ ಬೀಜದ ಕಿಟ್ಗಳನ್ನು ವಿತರಿಸಲಾಗಿದೆ. ರಾಯಚೂರಿನಲ್ಲಿ 2846 ರೈತರಿಗೆ 12680 ಮೇವಿನ ಕಿಟ್ಗಳನ್ನು ನೀಡಲಾಗಿದೆ. ಈ ಕಿಟ್ಗಳನ್ನು ಗ್ರಾಮಪಂಚಾಯತಿ ಮಟ್ಟದಲ್ಲಿ ಪಾರದರ್ಶಕವಾಗಿ ವಿತರಿಸಬೇಕು. ಈ ಕೆಲಸಕ್ಕೆ ಹಾಲು ಉತ್ಪಾಕರ ಸಹಕಾರ ಸಂಘದ ಸಹಾಯ ಪಡೆದುಕೊಳ್ಳಿ ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಮೇವನ್ನು ಬೇರೆಡೆ ಸಾಗಿಸದಂತೆ ನವೆಂಬರ್ 22ರಂದೇ ನಿರ್ಬಂಧ ಆದೇಶ ಹೊರಡಿಸಲಾಗಿದೆ. ನೀರು ಸರಬರಾಜು, ಮೇವು ಖರೀದಿ ಸೇರಿದಂತೆ ಬರ ನಿರ್ವಹಣೆಗಾಗಿ ಜಿಲ್ಲಾ ಹಂತದಲ್ಲಿ ಈಗಾಗಲೇ 895 ಕೋಟಿ ರೂ.ಗಳನ್ನು ಇಟ್ಟಿದ್ದೇವೆ. ಜಿಲ್ಲಾಧಿಕಾರಿಯ ಖಾತೆಯಲ್ಲೂ 35 ಕೋಟಿ ರೂ. ಹಣ ಇದೆ ಎಂದು ಮಾಹಿತಿ ನೀಡಿದರು.

Leave a Reply