ಬೆಂಗಳೂರು: ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂರಕ್ಷಿಸಿ, ಸಂಗ್ರಹಿಸಿ, ವೈಜ್ಞಾನಿಕವಾಗಿ ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ನೀಡಲು ಸಹಾಯ ಮಾಡುವ ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಇಲಾಖೆಗೆ ನೇಮಕ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಥಮ ಬಾರಿಗೆ 206 ಮಂದಿ ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದು, ಇವರು ವಿಧಿ ವಿಜ್ಞಾನ ವಿಷಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಎಂದರು.
ಅಪರಾಧ ಪ್ರಕರಣಗಳನ್ನು ತ್ವರಿತಗತಿಯಲ್ಲಿ ತನಿಖೆ ಮಾಡುವ ದೃಷ್ಟಿಯಿಂದ ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂರಕ್ಷಿಸಿ, ಸಂಗ್ರಹಿಸಿ, ವೈಜ್ಞಾನಿಕವಾಗಿ ಪ್ಯಾಕ್ ಮಾಡಲು ತನಿಖಾಧಿಕಾರಿಗಳಿಗೆ ನೇಮಕಗೊಂಡಿರುವ ಅಧಿಕಾರಿಗಳು ಸಹಾಯ ಮಾಡಲಿದ್ದಾರೆ ಎಂದರು.
ಸೀನ್ ಆಫ್ ಕ್ರೈಂ ಅಧಿಕಾರಿಗಳಿಗೆ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ ಎಸ್ ಎಲ್ ) ಎನ್ ಎಫ್ ಎಸ್ ಯು ಗುಜರಾತ್, ಕೆಪಿಎ ಬಾಂಬ್ ಪತ್ತೆ ದಳ, ಶ್ವಾನದಳ, ಸಿ.ಐ.ಡಿ, ಪೊರೆನ್ಸಿಕ್ ಮೆಡಿಸಿನ್ ಮುಂತಾದ ಕಡೆಗಳಲ್ಲಿ ತರಬೇತಿ ನೀಡಲಾಗಿದೆ. ಸೀನ್ ಆಫ್ ಕ್ರೈಂ ಅಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿದ್ದು ಜಿಲ್ಲೆಯ ಡಿಪಿಒ. ಕಛೇರಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೃತ್ಯ ನಡೆದ ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡುತ್ತಾರೆ ಎಂದರು.
ರಾಜ್ಯದಲ್ಲಿ 13 ಮೊಬೈಲ್ ಫೋರೆನ್ಸಿಕ್ ವ್ಯಾನ್ಗಳಿದ್ದು ವಿಶೇಷವಾಗಿ ಪ್ರಯೋಗಾಲಯದಂತಹ ಪರಿಸರವನ್ನಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 16 ಬಗೆಯ ಕಿಟ್ಗಳು ಇದ್ದು ಅವುಗಳನ್ನು ವಿವಿಧ ರೀತಿಯ ಕ್ರೈಂ ಸೀನ್ಗಳಾದ ಕೊಲೆ, ಅತ್ಯಾಚಾರ, ಸ್ಪೋಟ, ಬೆಂಕಿ ಅವಘಡ, ಅಪಘಾತ, ಮಾದಕ ವಸ್ತುಗಳ ಕೇಸುಗಳಲ್ಲಿ ಬಳಸಬಹುದಾಗಿದೆ. ಇದಲ್ಲದೆ ಕೆನೋಪಿ, ಜೆನರೇಟರ್, ಲೈಟ್ಗಳು, ಇರುವುದರಿಂದ ಹೊರಾಂಗಣದ ಕ್ರೈಂ ಸೀನ್ಗಳಲ್ಲಿ ಹೆಚ್ಚಿನ ಅವಧಿಯವರಗೆ ಕೆಲಸಮಾಡಲು ಸಹಾಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಉತ್ತರಕನ್ನಡ ಕ್ಷೇತ್ರದ ಅನಂತಕುಮಾರ್ ಹೆಗಡೆ ವಿರುದ್ಧ ಕುಮಟಾದಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ದಾಖಲಾಗಿರುವ ಪ್ರಕರಣದ ಆಧಾರದ ಮೇಲೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಬಂಧಿಸಬೇಕೋ, ಬೇಡವೋ ಎಂಬುದನ್ನು ಸ್ಥಳೀಯವಾಗಿ ನಿರ್ಧರಿಸುತ್ತಾರೆ. ನಾವು ಸ್ಥಳೀಯ ಪೊಲೀಸರಿಗೆ ಯಾವುದೇ ರೀತಿಯ ನಿರ್ದೇಶನಗಳನ್ನು ನೀಡುವುದಿಲ್ಲ. ಅವರನ್ನು ಬಂಧಿಸಿ ಅಥವಾ ಬಿಟ್ಟುಬಿಡಿ ಎಂದು ನಾವು ಯಾರಿಗೂ ಹೇಳುವುದಿಲ್ಲ. ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು, ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಸ್ಥಳೀಯ ಪೊಲೀಸರೇ ನಿರ್ಧರಿಸುತ್ತಾರೆ ಎಂದರು.
ವಿಪಕ್ಷಗಳು ಪ್ರತಿಯೊಂದು ಪ್ರಕರಣಕ್ಕೂ ಎಸ್ಐಟಿ ರಚಿಸಿ ಸಿಬಿಐ, ಸಿಐಡಿ ತನಿಖೆ ಮಾಡಿ ಎಂದು ಹೇಳುತ್ತಿರುತ್ತಾರೆ. ಅವರು ಹೇಳಿದಂತೆಲ್ಲಾ ಕೇಳುತ್ತಾ ಕುಳಿತರೆ ನಾವು ಆಡಳಿತ ಮಾಡಲಾಗುವುದಿಲ್ಲ. ಹಿಂದೆ ನಾವು ವಿರೋಧಪಕ್ಷದಲ್ಲಿದ್ದಾಗ ಸಾಕಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅದನ್ನೆಲ್ಲಾ ಅವರು ಕೇಳಿದರೆ, ವಿರೋಧ ಪಕ್ಷದವರು ಹೇಳಿದಂತೆಲ್ಲಾ ಕೇಳುತ್ತಾ ಕೂರಲಾಗುವುದಿಲ್ಲ. ಜನಪರವಾಗಿ ಆಡಳಿತ ನೀಡುವುದಷ್ಟೇ ನಮ್ಮ ಆದ್ಯತೆ ಎಂದರು.




