ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ – ಬಿಜೆಪಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಕುತೂಹಲ ಕೆರಳಿವೆ. ಎರಡೂ ಪಕ್ಷಗಳು ಈ ಬಾರಿ ಕರ್ನಾಟಕದಿಂದ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಗುರಿಹೊಂದಿವೆ. ಇದಕ್ಕಾಗಿ ಹಠಕ್ಕೆ ಬಿದ್ದು ಗೆಲುವಿಗೆ ತಂತ್ರಗಳನ್ನು ಹೆಣೆಯುತ್ತಿವೆ.
ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮೆಚ್ಚಿಸಲು ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸಕ್ರಿಯವಾಗಿದ್ದು, ಗೆಲ್ಲುವ ಕುದುರೆಗಳಿಗಾಗಿ ಎರಡೂ ಪಕ್ಷಗಳು ತೀರ್ವ ಹುಡುಕಾಟದಲ್ಲಿ ನಿರತವಾಗಿವೆ. ಇವೆಲ್ಲ ಬೆಳವಣಿಗೆಗಳ ನಡುವೆ ಉತ್ತರಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕುತೂಹಲ ಕೆರಳಿಸಿದೆ.
2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಸೋಲಿಗೆ ಹಾಲಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಕಾರಣ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಶಿರಸಿ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದ ಕಾಗೇರಿ ಅವರಿಗೆ ದೊಡ್ಡ ಹೊಡೆತ ನೀಡಿದೆ. ಇಡೀ ರಾಜ್ಯದಲ್ಲಿ ಶಿರಸಿ ಕ್ಷೇತ್ರ ಬ್ರಾಹ್ಮಣ ಸಮುದಾಯದ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಇಲ್ಲಿ ಈ ಸಮುದಾಯಕ್ಕೆ ಸೇರಿದ ಮತದಾರರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಆದರೆ ಇದೇ ಮೊದಲ ಬಾರಿಗೆ ಹಿಂದುಳಿದ ಸಮುದಾಯಕ್ಕೆ ಸೇರಿದ ಭೀಮಣ್ಣ ನಾಯಕ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಅಚ್ಚರಿಯ ಫಲಿತಾಂಶ ಹೊರಬಿದ್ದಿತ್ತು.
ಪಕ್ಷದ ಈ ಸೋಲಿಗೆ ಪ್ರಮುಖ ಕಾರಣ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಎನ್ನಲಾಗುತ್ತಿದೆ. ಜಿಲ್ಲೆಯ ಬಿಜೆಪಿ ರಾಜಕಾರಣದಲ್ಲಿ ಈ ಇಬ್ಬರು ನಾಯಕರು ಹಲವಾರು ಕಾರಣಗಳಿಂದ ಬದ್ಧವೈರಿಗಳಾಗಿದ್ದಾರೆ. ಇಬ್ಬರೂ ಶಿರಸಿ ನಿವಾಸಿಗಳಾಗಿದ್ದು, ಎಬಿವಿಪಿ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. ಮೊದಲಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಇಬ್ಬರೂ ಕಾಲಕ್ರಮೇಣ ಪರಸ್ಪರ ಬದ್ಧವೈರಿಗಳಾಗಿ ಬದಲಾದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದ ಅನಂತಕುಮಾರ್ ಹೆಗಡೆ ರಾಜ್ಯ ರಾಜಕಾರಣ ಪ್ರವೇಶಿಸಲು ಬಯಸಿದ್ದರು. ಆದರೆ ಅದಕ್ಕೆ ತಡೆಗೋಡೆಯಾಗಿ ಕೆಲಸ ಮಾಡಿದವರು ವಿಶ್ವೇಶ್ವರ ಹೆಗಡೆ ಕಾಗೇರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಈ ನಡುವೆ ಅನಂತ್ ಕುಮಾರ್ ಹೆಗಡೆಯವರ ಆರೋಗದಲ್ಲಿ ಏರುಪೇರಾಗಿ ಅವರು ಸಕ್ರಿಯ ರಾಜಕಾರಣದಿಂದ ದೂರ ವಿಮುಖರಾಗುವ ಸುದ್ದಿಗಳಿಗು ವರದಿಯಾಗಿದ್ದವು.
ಆದರೆ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗೇರಿ ವಿರುದ್ಧ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯಕ್ ಅವರ ಗೆಲುವಿಗೆ ಕಾರಣರಾದರು ಎನ್ನುವುದು ಕಾಗೇರಿ ಮತ್ತು ಅವರ ಬೆಂಬಲಿಗರ ನಂಬಿಕೆ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಕಾಗೇರಿ ತಮ್ಮ ಸೋಲಿಗೆ ಪಕ್ಷದ ಕೆಲ ನಾಯಕರೆ ಕಾರಣ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ಇಬ್ಬರ ನಡುವಿನ ಮುನಿಸು ದೊಡ್ಡದಾಗಲು ಮತ್ತೊಂದು ಕಾರಣವಾಗಿದೆ.
ಜೊತೆಗೆ ಕಾಗೇರಿ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಸ್ಪರ್ಧಿಸುವುದಿಲ್ಲ. ಇದಕ್ಕೆ ಕಾರಣ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ. ಅಲ್ಲದೆ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಚುನಾವಣೆಗೆ ತಯಾರಿ ನಡೆಸಿದ್ದಾರೆ. ಯಾವಾಗ ಕಾಗೇರಿ ಅವರು ಲೋಕಸಭೆ ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿತ್ತೋ ಆ ಕ್ಷಣ ಸಾರ್ವಜನಿಕ ಜೀವನದಿಂದ ನಾಪತ್ತೆಯಾಗಿದ್ದ ಅನಂತಕುಮಾರ್ ಹೆಗಡೆ ಸಕ್ರಿಯರಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳತೊಡಗಿದರು.
ಏಕಾಏಕಿ ಕ್ಷೇತ್ರಾದ್ಯಂತ ಬಿರುಸಿನ ಪ್ರವಾಸ, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಾನಿನ್ನೂ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ಚುನಾವಣೆ ಸ್ಪರ್ಧಿಸುವ ಹುಮ್ಮಸ್ಸು ಮತ್ತು ತಾಕತ್ತು ಇದೆ ಎಂದು ತೋರಿಸಿಕೊಳ್ಳುತ್ತಾ ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸತೊಡಗಿದರು. ಜೊತೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದ ವಾಗ್ದಾಳಿ, ಮಸೀದಿಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಏಕಕಾಲಕ್ಕೆ ಸುದ್ದಿಯಲ್ಲೂ ಮತ್ತು ಹೈಕಮಾಂಡ್ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಈ ನಡುವೆ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರನ್ನು ಕೂಡ ದಾಖಲಿಸಿಕೊಂಡಿದ್ದಾರೆ.
ಇನ್ನು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸುವ ದೃಷ್ಟಿಯಿಂದ ತಾವು ಈ ಚುನಾವಣೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳುತ್ತಾ ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣ ಮತ್ತೊಮ್ಮೆ ಕುತೂಹಲ ಕೆರಳಿಸಿದೆ.
ಇನ್ನು ಮತ್ತೊಂದಡೆ ತಾವು ರಾಜ್ಯ ರಾಜಕಾರಣದಿಂದ ನಿರ್ಗಮಿಸುತ್ತಿದ್ದು ರಾಷ್ಟ್ರೀಯ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಬಯಸಿದ್ದೇನೆ. ಹೀಗಾಗಿ ಈ ಬಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೊಂದು ಕಡೆಯಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.
ಇವೆಲ್ಲ ಬೆಳವಣಿಗೆಗಳ ನಡುವೆ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಘ ಪರಿವಾರ ನಾಯಕರ ಬೆಂಬಲ ತಮಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ವಪಕ್ಷೀಯರ ಪಿತೂರಿಯಿಂದ ತನಗೆ ಸೋಲಾಗಿದೆ ಎಂಬ ಭಾವನೆ ಪರಿವಾರದ ನಾಯಕರಲ್ಲಿದೆ. ಹೀಗಾಗಿ ಅವರೆಲ್ಲಾ ತಮ್ಮ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ತಮಗೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಈ ಇಬ್ಬರೂ ಸಂಘ ಪರಿವಾರ ಮೂಲದ ಬಿಜೆಪಿ ನಾಯಕರ ಜಗಳದಿಂದಾಗಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಕುತೂಹಲ ಕೆರಳಿಸಿದೆ.




