ರಸ್ತೆಯ ಬದಿಗಳಲ್ಲಿರುವ ಮಳೆ ನೀರು ಹರಿಯುವ ರಂಧ್ರಗಳನ್ನು ಸ್ವಚ್ಛಗೊಳಿಸಿ

2 years ago

ಬೆಂಗಳೂರು ನಗರದಲ್ಲಿ ರಸ್ತೆಗಳ ಮೇಲೆ ಹರಿಯುವ ಮಳೆ ನೀರು ಮೋರಿಗೆ ಸೇರಲು ಹಲವಾರು ಕಡೆಗಳಲ್ಲಿ ರಸ್ತೆಯ ಎರಡು ಕಡೆಗಳಲ್ಲಿ ರಂದ್ರಗಳನ್ನು ನಿರ್ಮಿಸಿರುತ್ತೀರಿ. ಇವುಗಳಿಗೆ ಜಾಲರಿಯನ್ನು ಅಳವಡಿಸಲಾಗಿರುತ್ತದೆ. ಕೆಲವು ಕಡೆ ಈ ಜಾಲರಿಗಳು ಕಿತ್ತು ಬಂದಿರುತ್ತವೆ. ಈ ಜಾಲರಿಗಳ ಹಿಂದೆ ಇರುವ ಮಣ್ಣನ್ನು ತೆಗೆದು ಹಾಕಿದರೆ ಅಥವಾ ಈ ರಂಧ್ರಗಳಲ್ಲಿ ಸೇರಿರುವ ಕಸ ಮಣ್ಣುಗಳನ್ನು ತೆಗೆದು ಮಳೆಯ ನೀರು ಹರಿಯಲು ದಾರಿಯನ್ನು ಸುಗಮ ಮಾಡಿಕೊಟ್ಟರೆ, ರಸ್ತೆಯ ಮೇಲೆ ಮಳೆಯ ನೀರು ಹರಿದು ನದಿಗಳಾಗಿ ಬದಲಾಗುವುದು ತಪ್ಪಿಸಬಹುದು.

ಕನಿಷ್ಠ ಪಕ್ಷ ತಿಂಗಳಿಗೆ ಒಮ್ಮೆಯಾದರೂ ಬಿಬಿಎಂಪಿಯ ಆರೋಗ್ಯ ಇಲಾಖೆಯ ಅಥವಾ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ರಸ್ತೆ ಎರಡು ಬದಿಯಲ್ಲಿರುವ ಮಳೆ ನೀರು ಹರಿಯುವ ರಂಧ್ರಗಳನ್ನು ಸ್ವಚ್ಛಗೊಳಿಸುವಂತಹ ಕೆಲಸವನ್ನು ನಿರ್ವಹಿಸಿದರೆ ಮಳೆ ಬಂದ ಸಂದರ್ಭದಲ್ಲಿ ಆಗುವ ಹಲವಾರು ರೀತಿಯ ಸಮಸ್ಯೆಗಳನ್ನು ತಪ್ಪಿಸಬಹುದು ಈ ನಿಟ್ಟಿನಲ್ಲಿ ಮಾನ್ಯ ಆಯುಕ್ತರು ಗಮನವನ್ನು ಹರಿಸಬೇಕಾಗಿದೆ.

ಪ್ರತೀ ವರ್ಷವೂ ಮಳೆ ಬಂದ ಸಂದರ್ಭದಲ್ಲಿ ರಾಜ ಕಾಲುವೆಗಳ ಒತ್ತುವರಿಯ ತೆರವಿನ ವಿಚಾರ ಪ್ರಸ್ತಾಪವಾಗುತ್ತಲೇ ಇರುತ್ತದೆ. ಕಳೆದ ಹತ್ತಾರು ವರ್ಷದಿಂದ ಇಂತಹ ಮಾತುಗಳನ್ನು ಕೇಳುತ್ತಲೇ ಇದ್ದೇವೆ. ಆದರೆ ಇಷ್ಟು ವರ್ಷವಾದರೂ ಸಂಪೂರ್ಣವಾಗಿ ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವು ಕಾರ್ಯಾಚರಣೆ ಪೂರ್ಣಗೊಂಡಿರುವುದಿಲ್ಲ.

ಜೊತೆಗೆ ಮಳೆ ನೀರು ಚರಂಡಿ ನೀರು ಸರಾಗವಾಗಿ ಹರಿಯಲು ಇರುವ ಈ ದೊಡ್ಡ ದೊಡ್ಡ ಮೋರಿಗಳಲ್ಲಿ ಹೂಳು ತುಂಬಿರುತ್ತದೆ. ಹೂಗಳು ತೆಗೆಯುವ ಕಾರ್ಯ ಆಗುವುದಿಲ್ಲ ಹೀಗಾಗಿ ಸಾಧಾರಣ ಮಳೆ ಬಂದಾಗ ಯಾವ ಸಮಸ್ಯೆಯೂ ಆಗುವುದಿಲ್ಲ. ಆದರೆ ಪ್ರಕೃತಿ ಮುನಿದು ಮಳೆಯ ಪ್ರಮಾಣ ಹೆಚ್ಚಾದರೆ ಬೆಂಗಳೂರು ನಗರದ ಜನರಿಗೆ ಸಮಸ್ಯೆಗಳು ಉಲ್ಬಣವಾಗುತ್ತದೆ. ನೀರು ಹರಿಯಲು ಸಾಧ್ಯವಾಗದೆ ಕರೆಯದೆ ಬಂದ ಅತಿಥಿಯಂತೆ ಮನೆಯ ಒಳಗೆ ರಸ್ತೆಯ ನೀರು ನುಗ್ಗುತ್ತಿದೆ.

ಪದೇ ಪದೇ ರಸ್ತೆಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಆದರೆ ಪ್ರತಿಯೊಂದು ವಾರ್ಡಿನಲ್ಲಿರುವ ಸಹಾಯಕ ಅಭಿಯಂತರರುಗಳಿಗೆ ತಮ್ಮ ವಾರ್ಡಿನ ಕೆಲವೇ ಕೆಲವು ಕಿಲೋಮೀಟರ್ ಗಳ ಅಂತರದ ವಾರ್ಡನ್ನು ಪದೇ ಪದೇ ಸುತ್ತಿ ರಸ್ತೆಯ ಮೇಲಿನ ಗುಂಡಿಗಳನ್ನು ರಿಪೇರಿ ಮಾಡುವ ಕೆಲಸ ಮಾಡಲು ತೊಂದರೆ ಆದರೂ ಏನಿದೆಯೋ ಅರ್ಥವಾಗುತ್ತಿಲ್ಲ.

ಬೆಂಗಳೂರಿನಲ್ಲಿ ಕಸದ ನಿರ್ವಹಣೆಗೂ ಸಹ ಸಮರ್ಪಕವಾಗಿ ಆಗುತ್ತಿಲ್ಲ. ಈ ಸಮಸ್ಯೆಯ ಮೂಲವನ್ನು ಹುಡುಕಿ ಪರಿಹಾರವನ್ನು ಮಾಡಬೇಕಾಗಿದೆ. ಮಳೆ ಬಂದಾಗ ಕಸದ ರಾಶಿಗಳು ಕೊಳೆತು ತಿಪ್ಪೆಯಾಗಿ ವಾಹನ ಸವಾರರಿಗೆ ಮತ್ತು ನಾಗರಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಪಾಯಗಳು ಆಗುತ್ತಿವೆ.

ರಸ್ತೆಯ ಮೇಲಿನ ಗುಂಡಿಗಳು ಇಲ್ಲದಿದ್ದರೆ, ಬೀದಿ ದೀಪಗಳು ಉರಿಯುತ್ತಿದ್ದರೆ, ಮಳೆಯ ನೀರು ಸರಿಯಾಗಿ ಹರಿದರೆ, ಬೆಂಗಳೂರು ನಗರದ ಜನರಿಗೆ ಇದಕ್ಕಿಂತ ಉತ್ತಮವಾದಂತಹ ಸಹಕಾರ ಬಿಬಿಎಂಪಿಯಿಂದ ಹೆಚ್ಚಿನದೇನು ಬೇಕಾಗಿರುವುದಿಲ್ಲ, ಇಂತಹ ಪರಿಹರಿಸಬಹುದಾದಂತಹ ಮೂಲಭೂತ ಸಮಸ್ಯೆಗಳ ಕಡೆಗೆ ಗಮನವನ್ನು ಮೊದಲು ಕೊಡಿ.

ಬಿಬಿಎಂಪಿಯ ಅಧಿಕಾರಿಗಳು ಇಂಜಿನಿಯರಿಂಗ್ ಮತ್ತು ಆರೋಗ್ಯ ಇಲಾಖೆ ಎಲ್ಲರೂ ಸಹ ದಯಮಾಡಿ ಕಚೇರಿಗಳಲ್ಲಿ ನಿಮ್ಮ ಚೇರುಗಳಿಗೆ ಅಂಟಿಕೊಳ್ಳದೆ ಕನಿಷ್ಠ ದಿನಕ್ಕೆ ಒಂದೆರಡು ಗಂಟೆಯಾದರೂ ನಿಮ್ಮ ಸರಹದ್ದುಗಳಲ್ಲಿ ಸುತ್ತಾಡುವ ಕೆಲಸವನ್ನು ನಿಮ್ಮ ವಾಹನಗಳಲ್ಲಿ ಆದರೂ ಮಾಡಿದರೆ ಎಲ್ಲ ಸಮಸ್ಯೆಗಳು ತಾನಾಗಿಯೇ ಪರಿಹಾರವಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಅಥವಾ ಉಪಮುಖ್ಯಮಂತ್ರಿಗಳು ಪರಿಹರಿಸಿ ಕೊಡಬೇಕೆಂದು ಕಾಯುವುದು ತಪ್ಪು. ಅಧಿಕಾರಿ ವರ್ಗ ಸರಿಯಾದ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುವಂತೆ ಸರ್ಕಾರ ಗಮನವನ್ನು ಹರಿಸಿದರೆ ಸಾಕು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply