ವೀರ ವನಿತೆ ಒನಕೆ ಓಬವ್ವ ಜಯಂತಿ ಅರ್ಥಪೂರ್ಣವಾಗಿ ಆಚರಣೆಗೆ ಕರೆ

6 months ago

ಚಿತ್ರದುರ್ಗ: ಕೋಟೆ ನಾಡಿನ ರಕ್ಷಕಿ, ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ನವೆಂಬರ್ 11 ರಂದು ಜಿಲ್ಲಾ ಕೇಂದ್ರದಲ್ಲಿ ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ ಸಂಬಂಧ ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒನಕೆ ಓಬವ್ವ ಜಯಂತಿಯನ್ನು ನ. 11ರಂದು ಬೆಳಿಗ್ಗೆ 11.30ಕ್ಕೆ ಚಿತ್ರದುರ್ಗ ನಗರದ ವಾಲ್ಮೀಕಿ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.

ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9.30 ಗಂಟೆಗೆ ಒನಕೆ ಓಬವ್ವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆಯನ್ನು ನಗರದ ಕೋಟೆಯ ಮುಂಭಾಗದಿಂದ ಪ್ರಾರಂಭಿಸಲಾಗುವುದು.  ಮೆರವಣಿಗೆಯು ಕೋಟೆ ಆವರಣದಿಂದ ಆರಂಭಗೊಂಡು, ಗಾಂಧಿ ವೃತ್ತ, ಪ್ರವಾಸಿ ಮಂದಿರ, ಒನಕೆ ಓಬವ್ವ ಪುತ್ಥಳಿ ಇರುವ ವೃತ್ತ, ಮದಕರ ನಾಯಕ ವೃತ್ತ ಮೂಲಕ ಸಾಗಿ, ವಾಲ್ಮೀಕಿ ಭವನದವರೆಗೆ ನೆರವೇರಲಿದೆ.  ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದರು

ಸಮಾಜದವರ ಆಶಯದಂತೆ ನಟರಾಜ್ ಅವರನ್ನು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಲಾಗುವುದು.  ಅಧಿಕಾರಿಗಳು ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ, ಜನಪ್ರತಿನಿಧಿಗಳು, ಗಣ್ಯರಿಗೆ ತಲುಪಿಸಿ ಆಹ್ವಾನಿಸಬೇಕು. ಎಲ್ಲ ಶಾಲೆ, ಕಾಲೇಜುಗಳು, ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಆಚರಿಸಬೇಕು. ಎಲ್ಲ ಸಂಘ ಸಂಸ್ಥೆಗಳು, ಸಮಾಜದವರು, ನಾಗರಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಸೂಚನೆ ನೀಡಿದರು.

ರಾಜ್ಯ ಸಭೆ ಮಾಜಿ ಸದಸ್ಯ ಹೆಚ್. ಹನುಮಂತಪ್ಪ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ನವರ ಧೈರ್ಯ ಸಾಹಸ ಇಡೀ ಜಗತ್ತಿಗೆ ತಿಳಿದಿದೆ. ಒನಕೆ ಓಬವ್ವರನ್ನು ಕೇವಲ ಛಲವಾದಿ ಸಮಾಜಕ್ಕೆ ಮಾತ್ರ ಸೀಮಿತ ಮಾಡುವುದು ಸರಿಯಲ್ಲ. ಕೇವಲ ಒಂದು ಜಾತಿಗೆ ಕಟ್ಟಿಹಾಕುವ ಕೆಲಸ ಆಗಬಾರದು. ಮದಕರಿ ನಾಯಕರ ರಾಜ್ಯಕ್ಕೆ ಜೀವ ಕೊಟ್ಟವರೇ ಒನಕೆ ಓಬವ್ವ. ಹೀಗಾಗಿ ಮದಕರಿ ನಾಯಕ ಜಯಂತಿ ಆಚರಣೆ ಸಂದರ್ಭದಲ್ಲಿ ಒನಕೆ ಓಬವ್ವರನ್ನು ಸ್ಮರಿಸಬೇಕಾದ್ದು ಎಲ್ಲರ ಕರ್ತವ್ಯ. ಎಲ್ಲ ಸಮುದಾಯದವರು ಒನಕೆ ಓಬವ್ವ ಜಯಂತಿಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಡಿಡಿಪಿಐ ಮಂಜುನಾಥ್, ವಿವಿಧ ಇಲಾಖೆಗಳ ಅಧಿಕಾರಿಗಲು, ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಛಲವಾದಿ ಮಹಾಸಭಾದ ಅಧ್ಯಕ್ಷ ಹೆಚ್. ಶೇಷಣ್ಣ, ಸಮಾಜದ ಮುಖಂಡರುಗಳಾದ ಹೆಚ್.ಸಿ. ನಿರಂಜನಮೂರ್ತಿ, ಎಸ್.ವಿ. ಗುರುಮೂರ್ತಿ, ವೆಂಕಟೇಶ್, ರವಿಕುಮಾರ್ ಪೂಜಾರ್, ದೇವರಾಜ್, ಜಯರಾಂ, ಅಣ್ಣಪ್ಪ, ದಯಾನಂದ್, ಪ್ರಹ್ಲಾದ್, ನವೀನ್, ಧರ್ಮರಾಜ್ ಸೇರಿದಂತೆ ಹಲವರು ಹಾಜರಿದ್ದರು.

Leave a Reply