ಬಾನು ಮುಷ್ತಾಕ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸಿ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುವುದಾಗಿ ಜೋಶಿ ಹೇಳಿದ ಕಥೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕನ್ನಡ ಸಾಹಿತ್ಯ ಪರಿಷತ್ತಿಗೆ ವಿಶೇಷವಾಗಿ ಗೌರವ ಹೆಚ್ಚಾಗಲು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಸಾಹಿತ್ಯ ಸಮ್ಮೇಳನಗಳು ಜನರ ಮನದಲ್ಲಿ ಉಳಿದು ಅದೊಂದು ಅಕ್ಷರ ಜಾತ್ರೆಯಾಗಿ, ಜನಂದೋಲನವಾಗಿ ಜನಸಾಮಾನ್ಯರು ಸಹ ಪರಿಷತ್ತಿನ ಸಮ್ಮೇಳನಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ ಸಂತೋಷ ಪಟ್ಟ, ಸಂಭ್ರಮ ಪಟ್ಟ ದಾಖಲೆಗಳು ಉಳಿದಿವೆ ಆರಂಭದಲ್ಲಿ ನೂರಾರು, ಸಾವಿರಾರು, ಪ್ರಸ್ತುತ ಲಕ್ಷಾಂತರ ಮಂದಿ ಭಾಗವಹಿಸುವ ಕನ್ನಡಮ್ಮನ ಈ ಉತ್ಸವದಲ್ಲಿ ನಾಡಿನ ಮಹಾಜನತೆ ಭಾಗವಹಿಸುತ್ತಾರೆ.
ನಾಡಿನ ಹಿರಿಯ ಸಾಹಿತಿಯೊಬ್ಬರು ಸಮ್ಮೇಳನದ ಅಧ್ಯಕ್ಷರಾಗಿ ತಮ್ಮ ಅಮೂಲ್ಯವಾದ ಮಾತುಗಳ ಮೂಲಕ ನಾಡಿನ ಜನತೆಗೆ ಸಂದೇಶವನ್ನು ನೀಡಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ, ತಮ್ಮ ಮಾತುಗಳ ಮೂಲಕ ಉತ್ತೇಜನ ನೀಡುತ್ತಾ ಬಂದ ಪರಂಪರೆ ಇದೆ.
ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದುಕೊಟ್ಟ ಸಾಹಿತಿಗಳಾದ ಭಾನು ಮಸ್ತಾಕ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತ್ತು. ನಾನು ಮತ್ತು ಡಾ. ಪದ್ಮಿನಿ ನಾಗರಾಜು ಅವರು ಜೋಶಿಯವರ ಗಮನಕ್ಕೆ ತಂದು ನಾವು ಸಹ ಕಸಾಪದಿಂದ ಅಭಿನಂದನಾ ಕಾರ್ಯಕ್ರಮವನ್ನು ಮಾಡೋಣವೆಂದು ಒತ್ತಾಯಿಸಿದಾಗ ನಮ್ಮ ಒತ್ತಡಕ್ಕೆ ಮಣಿದು ಪತ್ರ ಒಂದನ್ನು ಅವರಿಗೆ ನೀಡಿ ದಿನಾಂಕವನ್ನು ನಿಗದಿ ಮಾಡಿಕೊಂಡು ಬನ್ನಿ ಎಂದು ತಿಳಿಸಿದರು.

ನಾನು ಜೋಶಿಯವರಿಗೆ ಬಾನು ಮುಷ್ತಾಕ್ ಅವರಿಗೆ ಪರಿಷತ್ತಿನಿಂದ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ ನೀಡಲು ಸಲಹೆ ನೀಡಿದ್ದೆ. ಅಭಿನಂದನಾ ಕಾರ್ಯಕ್ರಮಕ್ಕೆ ಹೋಗಿ ಅವರನ್ನು ಅಭಿನಂದಿಸಿ ದಿನಾಂಕವನ್ನು ನೀಡಲು ಕೇಳಿ ಬಂದೆವು.
ನಂತರದಲ್ಲಿ ನಡೆದ ಬೈಲಾದಲ್ಲಿ ಇಲ್ಲದ ಶಿಸ್ತು ಪಾಲನಾ ಸಮಿತಿ (ತನಗೆ ಆಗದವರ ಮೇಲೆ ಸೇಡು ತೀರಿಸಿಕೊಳ್ಳಲು ಶೋಷಿಸಲು ಮತ್ತು ಮಾನಸಿಕ ಕಿರುಕುಳ ನೀಡಲು ಇರುವ ಸಮಿತಿ) ಮತ್ತು ಬೈಲಾ ತಿದ್ದುಪಡಿ ಸಮಿತಿಯ ಸಭೆಯಲ್ಲಿ ಜೋಶಿ ಅನಧಿಕೃತವಾಗಿ ಸಭೆಯಲ್ಲಿ ಮಾತಾನಾಡುತ್ತಾ, ಇಲ್ಲಿ ನೋಡ್ರಿ ನಾನು ಮಂಡ್ಯಕ್ಕೆ ಹೇಗೆ ಸಮ್ಮೇಳನ ಅಧ್ಯಕ್ಷರ ಆಯ್ಕೆ ಬಗ್ಗೆ ರಾಜ್ಯದ ಎಲ್ಲರ ಗಮನ ಬೇರೆಡೆ ಸೆಳೆದು ವಾದ ವಿವಾದ ಸೃಷ್ಟಿಸಿ ಕೊನೆಗೆ ಏನು ಮಾಡಿದೆ ಅದೇ ರೀತಿ ಮುಂದಿನ ಸಮ್ಮೇಳನದ ಸಂದರ್ಭದಲ್ಲಿ ಮಾಡುತ್ತೇನೆ ನೋಡಿ ಎಂದರು. ಆಗ ಸಭೆಯಲ್ಲಿದ್ದವರು ಯಾರನ್ನು ಮಾಡ್ತೀರಿ ಸರ್ ಎಂದು ಕುತೂಹಲದಿಂದ ಕೇಳಿದಾಗ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುತ್ತೇನೆ ನೋಡ್ತಾ ಇರಿ ಎಂದರು.
ಆಗ ಕೆಲವರು ಈತನ ಭಾವನೆ ತಿಳಿದು ಬಾನು ಮುಷ್ತಾಕ್ ಏನ್ ಸರ್, ಇಂದು ಕೇಳಿದಾಗ ಹೌದು ಎಂದು ನಗುತ್ತಾ ತಲೆಯಾಡಿಸಿದರು. ಈತನ ಧೋರಣೆಯನ್ನು ನಾನು ಮತ್ತು ಪದ್ಮಿನಿ ಮೇಡಂ ಮೊದಲೇ ತಿಳಿದಿದ್ದೆವು. ಇದ್ದಕ್ಕಿದ್ದಂತೆ ಎಚ್ಚೆತ್ತು ಇವನು ಕಡತಕ್ಕೆ ಹೋಗಬಾರದು ಎಂದು ಸಿಬ್ಬಂದಿಗೆ ಆದೇಶಿಸಿದರು.
ನಾನು ಯೋಚನೆ ಮಾಡಿದರೆ ಸುಮ್ಮನೆ ಮಾಡಲ್ಲ ನೋಡ್ರಿ ಈಗ ಅಲ್ಪಸಂಖ್ಯಾತರನ್ನು ಓಲೈಸುತ್ತಿರುವ ಸರ್ಕಾರ, ನನ್ನ ವಿರುದ್ಧ ಹೋರಾಟ ಮಾಡುತ್ತಿರುವ ಹೋರಾಟಗಾರರು ಹಾಗೂ ಮುಂದಿನ ಚುನಾವಣೆ ಹೀಗೆ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಯನ್ನು ಹೊಡೆಯುತ್ತೇನೆ ಎಂದು ಬಾನು ಮುಷ್ತಾಕ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ನನ್ನ ವಿರುದ್ಧ ಮಾತನಾಡುವವರೆಲ್ಲರೂ ಮೂಲೆಗುಂಪಾಗಬೇಕು ಎಂದರು ಜೋಶಿ.

ಬಾನು ಮುಷ್ತಾಕ್ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡುವುದು ಅವರ ಮೇಲಿನ ಗೌರವ ಅಥವಾ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಅಲ್ಲ, ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಬಂದಿದೆ ಎನ್ನುವ ಸದುದ್ದೇಶದಿಂದಲೂ ಅಲ್ಲ ಎನ್ನುವುದು ಆತನ ಧೋರಣೆ.
ಬಾನು ಮುಷ್ತಾಕ್ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಿದರೆ ಈತನಿಗೆ ಸುತ್ತಿಕೊಂಡಿರುವ ಎಲ್ಲಾ ವಿವಾದಗಳು ದೂರವಾಗುತ್ತವೆ. ಅಲ್ಪಸಂಖ್ಯಾತ ಮಹಿಳೆಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡವುದರಿಂದ ಸರ್ಕಾರ ತನ್ನ ಬಗ್ಗೆ ಮೃದು ಧೋರಣೆ ತಾಳುತ್ತದೆ. ಹೋರಾಟಗಾರರು ಮತ್ತು ಪತ್ರಿಕೆಯವರು ತನ್ನ ಬಗ್ಗೆ ಮುಂದೆ ಯಾವುದೇ ರೀತಿಯ ಕಿರುಕುಳ ಕೊಡಲಾರರು ಎಂದು ಭಾವಿಸಿ ಬಾನು ಮುಷ್ತಾಕ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ತನ್ನ ಎಲ್ಲಾ ಅಪರಾಧಗಳನ್ನು ಮುಚ್ಚಿ ಹಾಕುವ ಪ್ರಯತ್ನ ಎಂಬುದು ಆತನ ದೂರಾಲೋಚನೆ ಮತ್ತು ದುರಾಲೋಚನೆಯೂ ಆಗಿತ್ತು.
ಸದ್ಯದಲ್ಲಿಯೇ ಪರಿಷತ್ತಿಗೆ ಆಡಳಿತ ಅಧಿಕಾರಿ ಬರುತ್ತಾರೆ ಎಂಬುದು ನಿಚ್ಚಳವಾಗಿದೆ. ಈ ಸತ್ಯವನ್ನು ಜೋಷಿ ಜಿಲ್ಲಾಧ್ಯಕ್ಷರ ಗಮನಕ್ಕೆ ತರುತ್ತಿಲ್ಲ. ಸೆಪ್ಟೆಂಬರ್ ಕೊನೆಯ ವಾರದಲ್ಲಿಯೇ ಸರ್ಕಾರ ಆದೇಶ ಹೊರಡಿಸಿದೆ. ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ವಿಳಂಬವಾಗಿದೆ. ಆದರೆ ಅಕ್ಟೋಬರ್ 5ರಂದು ಜಮಖಂಡಿಯ ಹೋಟೆಲ್ಲಿನಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ಕಾರ್ಯಕಾರಿ ಸಮಿತಿಯ ಗಮನಕ್ಕೆ ತರಲಿಲ್ಲ. ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ ಎಂ ಗಾಯತ್ರಿಯವರು ಆಡಳಿತ ಅಧಿಕಾರಿಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಅವರ ವಿರುದ್ಧ ಲೋಕಾಯುಕ್ತ ತನಿಖೆಗೆ ದೂರು ನೀಡೋಣವೆಂದು ನಿರ್ಣಯ ಕೈಗೊಂಡರು. ಆದರೆ ಸರ್ಕಾರ ಈತನನ್ನು ವಜಾ ಮಾಡಲು ಮುಂದಾಗಿದೆ ಎಂಬ ಸತ್ಯವನ್ನು ಮರೆಮಾಚಿದ್ದು ಏಕೆ?
ಸೂಪರ್ ಸೀಡ್ ಆದರೆ ಚುನಾಯಿತ ಜಿಲ್ಲಾಧ್ಯಕ್ಷರ ಗತಿ ಏನು ಎಂಬುದು ಪ್ರಶ್ನೆಯಾಗಿ ಉಳಿದಿದೆ. ಸೂಪರ್ ಸೀಡ್ ಆಗದಂತೆ ಜಿಲ್ಲಾಧ್ಯಕ್ಷರು ಒಗ್ಗಟ್ಟಾಗಿ ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಟ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಆ ಮೂಲಕ ಉಳಿದಿರುವ ಒಂದು ವರ್ಷವಾದರೂ ನೀವು ನೆಮ್ಮದಿಯಿಂದ ಈತನ ಕಿರುಕುಳ, ಹಿಂಸೆ ಮತ್ತು ಶೋಷಣೆ ಇಲ್ಲದೆ ನಿರಾತಂಕವಾಗಿ ಆಡಳಿತ ಅಧಿಕಾರಿಯ ನೇತೃತ್ವದಲ್ಲಿ ಕನ್ನಡದ ಕೆಲಸವನ್ನು ನಿಮ್ಮ ಜಿಲ್ಲೆಗಳಲ್ಲಿ ಮಾಡಬಹುದು.
ಇನ್ನಾದರೂ ಜಿಲ್ಲಾಧ್ಯಕ್ಷರು ಒಗ್ಗಟ್ಟಾಗಿ ನಿಮ್ಮನ್ನು ಜಿಲ್ಲೆಯ ಜನತೆ 5 ವರ್ಷಕ್ಕೆ ಕನ್ನಡ ಸೇವೆಗಾಗಿ ಚುನಾಯಿಸಿದ್ದಾರೆ. ಮಾಡದ ಅಪರಾಧಕ್ಕೆ ನೀವೇಕೆ ಶಿಕ್ಷೆ ಅನುಭವಿಸಬೇಕು. ಇದುವರೆಗೂ ನಡೆದ ಕಹಿ ಘಟನೆಗಳಿಗೆ ಮತ್ತು ಪರಿಷತ್ತಿನ ಆರ್ಥಿಕ ಅಪರಾಧಿಗಳಿಗೆ, ಪರಿಷತ್ತಿನ ಘನತೆ ಗೌರವ ಕುಂದಿಸುವಲ್ಲಿ ನೀವಾರು ಪಾಲುದಾರರಲ್ಲ.
ಜಿಲ್ಲಾ ತಾಲೂಕು ಸಮ್ಮೇಳನಗಳ ಅನುದಾನವನ್ನು ಮತ್ತು ವಾರ್ಷಿಕ ನಿರ್ವಹಣಾ ವೆಚ್ಚವನ್ನು ಅನೇಕ ಜಿಲ್ಲಾಧ್ಯಕ್ಷರಗಳಿಗೆ ಇದುವರೆಗೂ ನೀಡದೆ ಜೋಶಿ ಸತಾಯಿಸುತ್ತಾ ಬಂದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ಇಂತಹ ಸಂದರ್ಭದಲ್ಲಿ ಆದರೂ ನೀವು ಒಗ್ಗಟ್ಟಾಗಿ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಮತ್ತು ನಿಮ್ಮನ್ನು ಐದು ವರ್ಷಗಳಿಗೆ ಚುನಾಯಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಆದೇಶವನ್ನು ಪಾಲಿಸಿ ನಿಮ್ಮ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ.
ಸೆಪ್ಟೆಂಬರ್ ತಿಂಗಳಲ್ಲಿಯೇ ಸರ್ಕಾರ ಆಡಳಿತ ಅಧಿಕಾರಿ ನೇಮಕಕ್ಕೆ ಹಸಿರು ನಿಶಾನೆ ತೋರಿದೆ. ಇದನ್ನು ಅರಿತು ಕೂಡಾ ನ್ಯಾಯಾಲಯ ಮತ್ತು ನಿಮ್ಮನ್ನು, ನಾಡಿನ ಜನತೆಯನ್ನು ವ್ಯವಸ್ಥಿತವಾಗಿ ದಿಕ್ಕು ತಪ್ಪಿಸುವ ಕಾರ್ಯವನ್ನು ಜೋಷಿ ಮಾಡಿದ್ದಾನೆ. ಪರಿಷತ್ತಿನ ಇಂದಿನ ಈ ಸ್ಥಿತಿಗೆ ಜೋಶಿಯೇ ಕಾರಣನೇ ಹೊರತು ಚುನಾಯಿತ ಜಿಲ್ಲಾಧ್ಯಕ್ಷರುಗಳಾದ ನೀವ್ಯಾರು ಅಲ್ಲ.
ಆಡಳಿತ ಅಧಿಕಾರಿ ಬಂದರೆ ನೀವೆಲ್ಲರೂ ಮನೆಗೆ ಹೋಗುತ್ತೀರಿ ಎಂದು ಅನೇಕ ಸಭೆಗಳಲ್ಲಿ ನಿಮಗೆ ಸುಳ್ಳು ಹೇಳಿದ್ದಾರೆ. ಇವರು ನೇಮಕ ಮಾಡಿಕೊಂಡವರು ಹೋಗುತ್ತಾರೆ ಹೊರತು, ಜಿಲ್ಲಾಧ್ಯಕ್ಷರಾಗಿ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಗೆದ್ದ ನೀವುಗಳು ಹಾಗೆಯೇ ಉಳಿಯುತ್ತೀರಿ. ಜೋಶಿಯ ಬಿ ಫಾರಂ ಪಡೆದಾಗಲಿ ಅಥವಾ ಅವನ ಗುಂಪಿನಲ್ಲಾಗಲಿ ಗೆದ್ದವರಲ್ಲ, ನಿಮ್ಮ ಸ್ವಂತ ಶಕ್ತಿ ಸಾಮರ್ಥ್ಯದ ಮೇಲೆ ಜಿಲ್ಲೆಯ ಕಸಾಪ ಸದಸ್ಯರಿಂದ ಆಯ್ಕೆಯಾದವರು. ಕಾರ್ಯಕಾರಿ ಸಮಿತಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಆದರೂ ಜಿಲ್ಲಾಧ್ಯಕ್ಷರಾಗಿ ನೀವೇ ಮುಂದುವರಿಯುತ್ತೀರಿ. ಅಧ್ಯಕ್ಷನ ಬದಲಿಗೆ ಆಡಳಿತ ಅಧಿಕಾರಿ ಆ ಕಾರ್ಯನಿರ್ವಹಿಸುತ್ತಾರೆ. ನೀವು ಅಧ್ಯಕ್ಷರಾಗಿ ಮುಂದುವರೆಯಲು ಈ ಬಗ್ಗೆ ನಿಮ್ಮ ಹೋರಾಟ ಮತ್ತು ಪ್ರಯತ್ನ ಖಂಡಿತವಾಗಿ ಬೇಕೇ ಬೇಕು.
ಶ್ರೀಧರಮೂರ್ತಿ ಎನ್ನುವ ಅನಧಿಕೃತ ಮಾಧ್ಯಮ ಸಂಚಾಲಕನ ಮೂಲಕ ಶ್ರೀಹರಿ ಕೋಡೆ ಅವರಿಗೆ ಶರೀಫ ಮತ್ತು ಗೋವಿಂದ ಭಟ್ಟರ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡಿರುವುದು ಮತ್ತು ಈ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸದೆ ಅದನ್ನು ಘೋಷಿಸಿರುವುದು ಜೋಶಿ ಮಾಡಿರುವ ಮತ್ತೊಂದು ಅಪರಾಧ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸರ್ವಾಧಿಕಾರಿಯಲ್ಲ. ಪರಿಷತ್ತಿನ ಯಾವುದೇ ಚಟುವಟಿಕೆಗಳು ನಡೆಯಬೇಕಾದರೆ, ನಿರ್ಧಾರಗಳನ್ನು ಕೈಗೊಳ್ಳಬೇಕಾದರೆ ಅದಕ್ಕೆ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಬೇಕು. ಅಧ್ಯಕ್ಷ ಕೇವಲ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ಜಾರಿಗೊಳಿಸುವ ಒಬ್ಬ ವ್ಯವಸ್ಥಾಪಕ ಮಾತ್ರ. ಆತ ಸರ್ವತಂತ್ರ ಸ್ವತಂತ್ರನಲ್ಲ. ಆತನಾಗಲಿ ಆತ ರಚಿಸಿಕೊಂಡ ಉಪಸಮಿತಿಯಾಗಲಿ ಯಾವುದೇ ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುವ ಹಾಗಿಲ್ಲ. ಉಪಸಮಿತಿಯ ನಿರ್ಧಾರವನ್ನು ಕಾರ್ಯಕಾರಿ ಸಮಿತಿಯಲ್ಲಿ ಮಂಡಿಸಿ ಕಾರ್ಯಕಾರಿ ಸಮಿತಿ ಸದಸ್ಯರ ಒಪ್ಪಿಗೆ ಪಡೆದು ಜಾರಿಗೊಳಿಸಬೇಕು. ಕಾರ್ಯಕಾರಿ ಸಮಿತಿ ಅದನ್ನು ವಿರೋಧಿಸಿದರೆ ಅವರ ನಿರ್ಧಾರ ಜಾರಿಗೆ ಬರುವಂತಿಲ್ಲ. ಆದರೆ ಈಗ ಆತನ ಮೇಲೆ ವಿಚಾರಣೆ ಮತ್ತು ತನಿಖೆ ನಡೆಯುವ ಸಂದರ್ಭದಲ್ಲಿ ಮತ್ತು ಈಗಾಗಲೇ ರಾಜ್ಯ ಸರ್ಕಾರ ಆಡಳಿತ ಅಧಿಕಾರಿಯನ್ನು ಸೆಪ್ಟೆಂಬರ್ ತಿಂಗಳಲ್ಲಿಯೇ ನೇಮಕ ಮಾಡಿದ್ದರು ಇದುವರೆಗೂ ಕಾರ್ಯಕಾರಿ ಸಮಿತಿಗೆ ಆ ವಿಷಯವನ್ನು ತಿಳಿಸದೆ ನ್ಯಾಯಾಲಯಗಳನ್ನು ಸುತ್ತುತ್ತಾ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಚುನಾಯಿತ ಜಿಲ್ಲಾಧ್ಯಕ್ಷರನ್ನು ಸಂಪೂರ್ಣವಾಗಿ ಉದ್ದೇಶ ಪೂರಕವಾಗಿ ದಾರಿ ತಪ್ಪಿಸುತ್ತಿದ್ದಾನೆ.
ಪರಿಷತ್ತು ಎಂದರೆ ಕೇವಲ ರಾಜ್ಯ ಅಧ್ಯಕ್ಷ ಮಾತ್ರ ಅಲ್ಲ. 30 ಜನ ಜಿಲ್ಲಾ ಹಾಗೂ ಗಡಿ ಚುನಾಯಿತ ಅಧ್ಯಕ್ಷರುಗಳು ಸೇರಿ ಪರಿಷತ್ತು. ಅನೇಕ ಸಂಘ ಸಂಸ್ಥೆಗಳಲ್ಲಿ ನಗರ ಸಭೆ ನಗರ ಪಾಲಿಕೆಗಳಲ್ಲಿ ನಾಮ ನಿರ್ದೇಶಕರಿಗೆ ಮತದಾನದ ಹಕ್ಕಿಲ್ಲ ಎನ್ನುವುದನ್ನು ನ್ಯಾಯಾಲಯವೇ ಸ್ಪಷ್ಟಪಡಿಸಿದೆ.
ಪ್ರಮುಖವಾಗಿ ತಾನು ಗುರು ಗೋವಿಂದ ಭಟ್ಟರ ವಂಶದವನೆಂದು ಹೇಳಿಕೊಳ್ಳುವ ಜೋಶಿ ತನ್ನ ಪೂರ್ವಜರೆಂದು ಹೇಳುತ್ತಿರುವ ಗೋವಿಂದ ಭಟ್ಟರ ಹೆಸರಿನ ಜೊತೆಗೆ ನಾಮಕಾವಸ್ತೆ ಎಂಬಂತೆ ಶರೀಫರ ಹೆಸರನ್ನು ಸೇರಿಸಿ ಹಾವೇರಿ ಸಮ್ಮೇಳನದಲ್ಲಿ ಉಳಿದ ಹಣದಿಂದ ದತ್ತಿ ಪ್ರಶಸ್ತಿ ಘೋಷಿಸುವುದು ಎಷ್ಟರಮಟ್ಟಿಗೆ ಪಾರದರ್ಶಕತೆ.
ಹಾವೇರಿ ಜಿಲ್ಲೆಯವರಾದ ಸರ್ವಜ್ಞ, ಕನಕದಾಸರು, ಗಳಗನಾಥರು, ಮಾಜಿ ಮುಖ್ಯಮಂತ್ರಿಗಳಾದ ಎಸ್ ಆರ್ ಬೊಮ್ಮಾಯಿಯವರು, ಸ್ವಾತಂತ್ರ್ಯ ಹೋರಾಟದ ಹುತಾತ್ಮ ಮೈಲಾರ ಮಹಾದೇವರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ. ಚಂಪಾ ಅವರು ಈ ಜೋಷಿಯ ನೆನಪಿಗೆ ಬರಲಿಲ್ಲವೇಕೆ? ಇವರುಗಳ ಹೆಸರಲ್ಲಿ ಏಕೆ ಜೋಷಿ ದತ್ತಿ ಸ್ಥಾಪಿಸಲಿಲ್ಲ.
ಮಾನ್ಯ ಜಿಲ್ಲಾ ಹಾಗೂ ಗಡಿ ಘಟಕಗಳ ಅಧ್ಯಕ್ಷರುಗಳೆ, ನಾನು ಇಷ್ಟೆಲ್ಲಾ ಬರೆಯುತ್ತಿರುವುದು ಪರಿಷತ್ತಿನ ಉಳಿವಿಗಾಗಿಯೇ ಹೊರತು ನಾನು ನಿಮ್ಮಿಂದ ಯಾವುದೇ ಸಹಾಯ ಸಹಕಾರವನ್ನು ಇನ್ನು ಮುಂದೆ ಮತ್ತು ಯಾವತ್ತು ಬಯಸುವುದಿಲ್ಲ. ನಾನು ಮತ್ತು ಪದ್ಮಿನಿಯವರು ಗೌರವ ಕಾರ್ಯದರ್ಶಿಗಳಾಗಿ ಇವನ ನಿರ್ದೇಶನದಂತೆ ನಿಮ್ಮ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡಿದ್ದೇವೆ ಕೆಲವೊಮ್ಮೆ ಇವನು ನಿರ್ದೇಶಸಿದ ಸೂಚನೆಗಳನ್ನು ನೀಡಿ ನಿಮ್ಮ ಮನಸ್ಸಿಗೆ ನೋವಾಗಿರಬಹುದು ಅದಕ್ಕಾಗಿ ಈ ಹಿಂದೆಯೇ ಕ್ಷಮೆಯಾಚಿಸಿದ್ದೇನೆ.
ಆದರೆ ಅಧ್ಯಕ್ಷರು ಮತ್ತು ಹಿಂದಿನ ಕೋಶಾಧ್ಯಕ್ಷರು ಹಾಗೂ ಹಾಲಿ ಗೌರವ ಕಾರ್ಯದರ್ಶಿಗಳು ನಿಮ್ಮ ಕರೆಗಳನ್ನು ಸ್ವೀಕರಿಸಿದಾಗಲೂ ನೀವು ನನಗೆ ದೂರವಾಣಿ ಕರೆ ಮಾಡಿದಾಗ ಎಂದು ನಿರಾಕರಿಸದೆ ನಿಮ್ಮ ಕರೆಗಳನ್ನು ಸ್ವೀಕರಿಸಿ ನನ್ನ ಕೈಲಾದ ನಿಮ್ಮ ಸೇವೆಯನ್ನು ಮಾಡಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕದೇ ಹೋಗಿರಬಹುದು ಅದು ನನ್ನಿಂದ ಅಲ್ಲ, ಎಲ್ಲಾ ಅಧಿಕಾರವನ್ನು ತನ್ನೊಂದಿಗೆ ಇಟ್ಟುಕೊಂಡು ನಮ್ಮನ್ನು ಗುಲಾಮರಂತೆ ನಡೆಸಿಕೊಂಡ ಜೋಶಿಯಿಂದ ಮಾತ್ರ.
ಜಿಲ್ಲಾಧ್ಯಕ್ಷರುಗಳೇ ತಾವು ಸಾಹಿತ್ಯ ಪರಿಷತ್ತಿಗೆ ಆಡಳಿತ ಅಧಿಕಾರಿ ನೇಮಕ ಮಾಡಿದ ಸರ್ಕಾರದ ಆದೇಶವನ್ನು ನೋಡಿದ್ದೀರಿ. ಸರ್ಕಾರವು 30 ಸೆಪ್ಟೆಂಬರ್ 2025ರಂದು ಆಡಳಿತ ಅಧಿಕಾರಿ ನೇಮಕ್ಕೆ ಆದೇಶ ಹೊರಡಿಸಿದೆ.
ಈ ವಿಷಯ ಗೊತ್ತಿದ್ದು ಕೂಡ ಜೋಶಿ 4 ಅಕ್ಟೋಬರ್ 2025 ರಂದು ಹೋಟೆಲ್ ಒಂದರಲ್ಲಿ ಕಾರ್ಯಕಾರಿ ಸಮಿತಿ ಸಭೆ ಮಾಡುತ್ತಾನೆ. ಸರ್ಕಾರ ಆದೇಶ ಗೊತ್ತಿದ್ದರೂ ಕೂಡ ಕಾರ್ಯಕಾರಿ ಸಮಿತಿಗೆ ಅದನ್ನು ಮಂಡಿಸದೆ ತಮ್ಮೆಲ್ಲರಿಗೆ ತಿಳಿಯದಂತೆ ಇರಿಸಿದ್ದು ಖಂಡನೀಯ. ಆತ ಹೆಜ್ಜೆ ಹೆಜ್ಜೆಗೂ ಕಾರ್ಯಕಾರಿ ಸಮಿತಿಯನ್ನು ಚುನಾಯಿತ ಜಿಲ್ಲಾ ಮತ್ತು ಗಡಿ ಅಧ್ಯಕ್ಷರುಗಳನ್ನು ದಾರಿ ತಪ್ಪಿಸಿದ್ದಾನೆ ಎಂಬುದಕ್ಕೆ ಇದೇ ಬಹಳ ಸ್ಪಷ್ಟ ಉದಾಹರಣೆ.
ಪರಿಷತ್ತಿನ ಸಾಧಕ ಬಾದಕಗಳನ್ನು ಚರ್ಚಿಸುವುದಕ್ಕಾಗಿಯೇ ಕಾರ್ಯಕಾರಿ ಸಮಿತಿ ಸಭೆ ಕರೆಯವುದು. ಆದರೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇಂತಹ ಮಹತ್ವದ ವಿಷಯವನ್ನು ಚರ್ಚಸಿಲಿಲ್ಲವೇಕೆ?
ನಿಮ್ಮ ಅಧಿಕಾರದ ಕೊನೆಯ ದಿನದವರೆಗೂ ಜಿಲ್ಲಾಧ್ಯಕ್ಷರಾಗಿ ಗಡಿನಾಡ ಅಧ್ಯಕ್ಷರಾಗಿ ಕನ್ನಡ ಸೇವೆ ಮಾಡಬೇಕೆಂಬುದು ನನ್ನ ಬಯಕೆ. ರಾಜ್ಯಾಧ್ಯಕ್ಷ ಮಾಡಿದ ತಪ್ಪಿಗೆ ನಿರಪರಾಧಿಗಳಾದ ನೀವು ಬಲಿಯಾಗುವುದು ನನ್ನ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ. ನಾನು ಹತ್ತಿರದಿಂದ ಇವೆಲ್ಲವನ್ನೂ ನೋಡಿದ್ದೇನೆ ಅದಕ್ಕಾಗಿಯೇ ಸುದೀರ್ಘವಾದರೂ ಪತ್ರ ಬರೆಯುತ್ತಿದ್ದೇನೆ. ದಯವಿಟ್ಟು ಒಂದಾಗಿ ನ್ಯಾಯಾಲಯ ಇಲಾಖೆ ಮತ್ತು ಸರ್ಕಾರದ ಮುಂದೆ ಸೂಪರ್ ಸೀಡ್ ಮಾಡದಂತೆ ಹಾಗೂ ಜಿಲ್ಲಾಧ್ಯಕ್ಷರ ಅಧಿಕಾರ ಅವಧಿಯನ್ನು ಚುನಾವಣೆಯವರೆಗೂ ಉಳಿಸುವಂತೆ ಒಂದಾಗಿ ಹೋರಾಟ ಮಾಡಿ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ.
ಇಂದು ಕಸಾಪ ದ ಆಡಳಿತ ಅಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಯಾದ ಶ್ರೀಮತಿ ಕೆ ಎಂ ಗಾಯತ್ರಿ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ ಮಹೇಶ ಜೋಶಿ ಅಧ್ಯಕ್ಷ ಪಟ್ಟದಿಂದ ಕೆಳಕ್ಕೆ ಇಳಿದಿದ್ದಾನೆ
– ನೇ ಭ ರಾಮಲಿಂಗಶೆಟ್ಟಿ, ಮಾಜಿ ಗೌರವ ಕಾರ್ಯದರ್ಶಿ ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ — ಪ್ರೊ ಚಂಪಾ




