ಅವನತಿಯತ್ತ ದಿನವೂ ಸಾಗುತ್ತಿರುವ ಕನ್ನಡ ಸಿನಿಮಾವನ್ನು ಯಾರಾದರೂ ಉಳಿಸಬಲ್ಲರೆ ಎಂದು ಯಾರಾದರೂ ನನ್ನ ಕೇಳಿದರೆ ಸಾಧ್ಯವಿಲ್ಲ ಎಂದೇ ಹೇಳುತ್ತೇನೆ. ಕನ್ನಡ ಸಿನಿಮಾ ಉಳಿಸುವುದು ಎಂದರೆ ಏನು? ಮುಳುಗುತ್ತಿರುವ ಟೈಟಾನಿಕ್ ನೋಡಿದರೂ ಏನೂ ಅನಿಸದ ಸ್ಥಿತಿ ಕನ್ನಡ ನಿರ್ಮಾಪಕರಿಂದ ಹಿಡಿದು ನಿರ್ದೇಶಕ, ಹಂಚಿಕೆದಾರ, ಪ್ರದರ್ಶನಕಾರ ಮತ್ತು ಪ್ರೇಕ್ಷಕರವರೆಗಿನ ಎಲ್ಲ ಕೊಂಡಿಗಳೂ ಕಳಚಿ ಹೋಗಿವೆ. ಎಲ್ಲರೂ ಅವರವರ ಹಳೆಯ ದಿನಗಳ ಮೆಲುಕುಗಳಲ್ಲಿ ಮುಂದಿನ ದಾರಿ ಕಾಣದಷ್ಟೂ ಅವನತಿಯ ಕಂದಕದ ತುದಿಯಲ್ಲಿ ನಿಂತಿದ್ದಾರೆ. ಆದ್ದರಿಂದಲೇ ಅವರ್ಯಾರೂ ಕನ್ನಡ ಸಿನಿಮಾದ ಬಗ್ಗೆ ಕೇಳಿದರೆ ತಮ್ಮದೇನೂ ಇದರಲ್ಲಿ ತಪ್ಪಿಲ್ಲವೆಂದು ತಪ್ಪು ಅವರಲ್ಲಿದೆ; ಇವರಲ್ಲಿದೆಯೆಂದು ಬೇರೆಯವರ ಮೇಲೆ ಗೂಬೆ ಕೂರಿಸಿ ಶಕುನ ನೋಡುವ ಪ್ರವೃತ್ತಿಯಲ್ಲಿದ್ದಾರೆ. ಪರಿಹಾರಗಳು ಸಿಗದೇ ಹೋದರೂ ಪರವಾಗಿಲ್ಲ ಇರುವ ಸಮಸ್ಯೆಗಳಾದರೂ ಯಾವುವು ಎಂಬುದನ್ನು ಮಾನಗಾಣುವ ಪ್ರಯತ್ನವನ್ನಾದರೂ ಮಾಡೋಣ. ಸಮಸ್ಯೆಗಳನ್ನು ಅರಿಯದೆ ಪರಿಹಾರಗಳು ಕಾಣವು. ಸಿನಿಮಾದ ಗ್ರಾಹಕರಾದ ಪ್ರೇಕ್ಷಕರೆ ಅಪರಾಧಿಗಳು ಎನ್ನುವುದರಿಂದಲೇ ನಮ್ಮ ಸಮಸ್ಯೆಯನ್ನು ಒಡೆಯುವ ಪ್ರಯತ್ನ ಮಾಡೋಣ. ಸಿನಿಮಾ ನೋಡುವ ಹೋಟೆಲ್ ಕಾರ್ಮಿಕರು ೨೦ ವರ್ಷಗಳಿಗೆ ಹೋಲಿಸಿದರೆ ಈಗ ಇಲ್ಲ. ಬೆಂಗಳೂರಿನ ಸಿನಿಮಾ ಥಿಯೇಟರ್‌ಗಳು ಒಂದು ಕಾಲಕ್ಕೆ ಹೋಟೆಲ್ ಕಾರ್ಮಿಕರಿಂದ ತುಂಬಿ ಇರುತ್ತಿದ್ದವು. ಸಣ್ಣಪುಟ್ಟ ಕೆಲಸದ ಕಾರ್ಮಿಕರು ತಮಗೆ ಅಗತ್ಯವಿದ್ದ ಮನರಂಜನೆಗೆ ಅವಲಂಬಿಸಿದ್ದು ಸಿನಿಮಾವನ್ನು. ಕಾಲ ಬದಲಾದಂತೆ ಹೋಟೆಲ್ ಉದ್ಯಮದಿಂದ ಬಾಲ ಕಾರ್ಮಿಕರ ಕಾನೂನು ಬಂದು ದಾರಿ ತಪ್ಪಿದ ಮಕ್ಕಳ ಮೊದಲ ದುಡಿಮೆಯ ಕೇಂದ್ರವಾಗಿದ್ದ ಹೋಟೆಲ್ ಕಡಿಮೆ ಹಣದ ದುಡಿಮೆಗಾರರು ಸಿಗದೆ ದಿಕ್ಕೆಟ್ಟಿತು. ಬದಲಾದ ಕಾಲಮಾನದ ಜತೆ ಐಟಿ ಹಬ್ ಆಗಿ ಪರಿವರ್ತನೆಗೊಂಡ ಬೆಂಗಳೂರು ಉತ್ತರ ಭಾರತದ ಮತ್ತು ಈಶಾನ್ಯ ರಾಜ್ಯಗಳ ಕೂಲಿ ಕಾರ್ಮಿಕರಿಗೆ ಅವಕಾಶ ಕೊಟ್ಟಿದ್ದರಿಂದ ಹೋಟೆಲ್ ಉದ್ಯಮ ಸ್ಥಳೀಯರಿಗೆ ಕೆಲಸ ನಿರಾಕರಿಸಿ ಉತ್ತರದವರಿಗೆ ಪ್ರಾಶಸ್ತö್ಯ ಕೊಟ್ಟಿತು. ಅತಿ ದೊಡ್ಡ ಕನ್ನಡ ಸಿನಿಮಾ ಪ್ರೇಕ್ಷಕರನ್ನು ಕೂಲಿಯಿಂದ ನಿರಾಕರಿಸಲಾಗಿ ಕನ್ನಡ ಸಿನಿಮಾ ಗಲ್ಲಾಪೆಟ್ಟಿಗೆ ಕಾಸಿಲ್ಲದೆ ಪರದಾಡಬೇಕಾಯಿತು. ಬಹುಮುಖ್ಯ ರೆವಿನ್ಯೂ ದಾರಿಯೊಂದು ಬಂದ್ ಆಯಿತು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಕಾಲಾನಂತರದಲ್ಲಿ ಮೊಬೈಲ್ ಬಂದು ವಿವಿಧ ಕಂಪನಿಯ ಡೇಟಾಗಳು ಕಡಿಮೆ ವೆಚ್ಚದಲ್ಲಿ ಸಿಗತೊಡಗಿ, ಸಿನಿಮಾಗಳನ್ನು ಹಳೆಯವನ್ನು ನೋಡಿದಂತೆಯೇ ಪೈರೇಟ್ ಸಿನಿಮಾಗಳನ್ನು ರಿಲೀಸ್ ಆದ ದಿನವೇ ನೋಡುವ ಅನುಕೂಲ ಸಿಕ್ಕಿದುದರಿಂದ ಥಿಯೇಟರ್‌ಗಳು ಖಾಲಿ ಹೊಡೆಯಲಿಕ್ಕೆ ಶುರುವಾದವು. ಬೆಂಗಳೂರಿನಲ್ಲಿ ಇತರ ಎಲ್ಲ ಭಾಷೆಯ ಚಿತ್ರಗಳೂ ೧೩೪ರಿಂದ ೧೭೦ ಶೋ ದಿನವೊಂದಕ್ಕೆ ನಡೆಯುತ್ತವೆ. ಕನ್ನಡದ ಮೂರು ಮತ್ತೊಂದು ಶೋ ನಡೆಯುತ್ತವೆ. ಥಿಯೇಟರ್‌ಗಳು ೫೦೦, ೭೦೦, ೧೦೦೦ ವರೆಗಿನ ಸೀಟಿನ ದೊಡ್ಡ ದೊಡ್ಡವು ಕೆಡವಲ್ಪಟ್ಟು ಕಮರ್ಷಿಯಲ್ ಕಾಂಪ್ಲೆಕ್ಸ್, ಮಾಲ್‌ಗಳಾಗಿ ಪರಿವರ್ತನೆಯಾದವು. ಕೆಲವು ಪಿವಿಆರ್, ಐನಾಕ್ಸ್ ಮುಂತಾದ ಥಿಯೇಟರ್ ಕಂಪನಿಗಳಿಗೆ ಅವಕಾಶ ಕೊಟ್ಟವಾದರೂ ಅವುಗಳಿಗೆ ಕೂಲಿ ಕಾರ್ಮಿಕರು ಹೋಗಿ ಸಿನಿಮಾ ನೋಡದಂತೆ ಆಯಿತು. ಸಿನಿಮಾ ಟಿಕೇಟು ನೂರಿನ್ನೂರರಿಂದ ಕೆಲವೊಮ್ಮೆ ಸಾವಿರ ಒಂದೂವರೆ ಸಾವಿರ ಆದರೆ ಜ್ವಾಳದರಳಿಗೆ ೫೦೦, ೬೦೦. ಒಂದು ಕುಟುಂಬ ಸಿನಿಮಾ ನೋಡಲು ೩ದಿಂದ ೫ ಸಾವಿರದವರೆಗೆ ಖರ್ಚು ಬಂದರೆ, ವರ್ಷಕ್ಕೆ ಒಂದೊ ಎರಡೊ ನೋಡಬಹುದು. ಪ್ರವೇಶವೇ ದುಬಾರಿ. ಇನ್ನು ಸಿನಿಮಾ ನೋಡುವುದೆಲ್ಲಿಂದ ಬಂತು? ಮಾಲ್‌ಗಳಲ್ಲಿರುವ ಥಿಯೇಟರ್‌ಗಳ ಬಾಡಿಗೆಯಾಗಲಿ, ಹೋಲ್ಡಿಂಗ್ ಆಗಲಿ ತುಂಬಾ ದುಬಾರಿಯಾದುದು. ಅದರಿಂದಾಗಿ ಕನ್ನಡ ಸಿನಿಮಾದ ಪ್ರದರ್ಶಕರು ಬರದಿರುವ ಪ್ರೇಕ್ಷಕರಿಗಾಗಿ ಚಿತ್ರ ತೋರಿಸುವ ಸಾಹಸವನ್ನು ದಿನೇದಿನೇ ಕಡಿಮೆ ಮಾಡಿದರು. ಪ್ರದರ್ಶಕರಿಲ್ಲದಿದ್ದರೆ ವಿತರಕರು ಸಿನಿಮಾವನ್ನು ಯಾರಿಗೆ ಹಂಚಬೇಕು. ೫೦ ಥಿಯೇಟರ್‌ಗಳಲ್ಲಿ ರಿಲೀಜಾದ ಒಂದು ಸಿನಿಮಾ ೫೦೦೦ ರೂ.ಗಳನ್ನೂ ದಿನಕ್ಕೆ ಸಂಗ್ರಹಿಸದಿದ್ದರೆ ವಿತರಕರು, ಪ್ರದರ್ಶಕರು ಏನಾಗಬೇಕು? ಇವರನ್ನೆ ನಂಬಿ ಚಿತ್ರ ಮಾಡಿದ ನಿರ್ಮಾಪಕರು ಏನಾಗಬೇಕು? ೫೦೦, ೩೦೦ ಸೀಟುಗಳು ತುಂಬುವುದಿಲ್ಲ. ಒಂದು ಕಾಲಕ್ಕೆ ತುಂಬಿದ ಮಂದಿರಗಳಲ್ಲಿ ಪ್ರದರ್ಶನವಾಗುತ್ತಿದ್ದ ಚಿತ್ರಗಳು ಈಗ ಖಾಲಿ ಖುರ್ಚಿಗಳಿಗೆ ಸಿನಿಮಾ ಪ್ರದರ್ಶವಾಗುತ್ತಿವೆ. ಚಿತ್ರಗಳನ್ನು ನಿರ್ಮಿಸುವ ನಿರ್ಮಾಪಕರು ಅಥವಾ ನಿರ್ಮಾಣ ಸಂಸ್ಥೆಗಳು ಯಾವ ನಂಬಿಕೆಯ ಮೇಲೆ ಚಿತ್ರ ನಿರ್ಮಿಸಬೇಕು? ಸಿನಿಮಾದಲ್ಲಿ ಖರ್ಚು ಮಾಡಿ ಕಳೆದುಕೊಂಡ ಹಣವನ್ನು ಮತ್ತೊಂದು ಕ್ಷೇತ್ರದಲ್ಲಿ ದುಡಿದು ತೀರಿಸಲು ಸಾಧ್ಯವಿಲ್ಲ. ಸಿನಿಮಾದಲ್ಲಿ ಕಳಕೊಂಡದ್ದನ್ನು ಸಿನಿಮಾದಿಂದಲೇ ಗಳಿಸಬೇಕು ಇಲ್ಲವೇ ಪೂರಾ ನಾಶವಾಗಬೇಕು. ಸಿನಿಮಾ ನಿರ್ಮಿಸಿ ದಿವಾಳಿಯಾದವರ ಕತೆಗಳು ಅಸಂಖ್ಯಾತ. ಗೆಲುವಿನ ಕತೆಗಳು ಬೆರಳೆಣಿಕೆಯಷ್ಟು! ಏಕೆಂದರೆ ನಿರ್ಮಾಪಕ ತನ್ನ ಹಾಗೂ ನಿರ್ದೇಶಕರ ಯೋಜನೆಯಂತೆ ಎಲ್ಲದಕ್ಕೂ ಹಣ ಖರ್ಚು ಮಾಡಲೇಬೇಕು. ಮಾಡಿದ್ದು ಪೂರಾ ಬರದಿದ್ದರೂ ಪರವಾಗಿಲ್ಲ ಸ್ವಲ್ಪವಾದರೂ ಬಂದರೆ ಸಾಕು. ಆದರೆ ಬರುವುದು ಏನೂ ಇಲ್ಲ ಎಂದಾದರೆ ಅಂಥ ಸಿನಿಮಾ ನಿರ್ಮಾಣ ಯಾಕೆ ಬೇಕೆಂದು ಬೇರೆ ಕಡೆ ಇನ್ವೆಸ್ಟ್ಮೆಂಟ್ ಮಾಡುವವರೆ ಹೆಚ್ಚು. ಇನ್ನು ಸಿನಿಮಾ ಮಾಡುವ ತಂತ್ರಜ್ಞಾನ ಬದಲಾಗಿ ಸ್ಟುಡಿಯೋ ಕಲ್ಚರ್ ಹೋಗಿ ನಾಕಾರು ಜನ ಸೇರಿ ಡಿಜಿಟಲ್ ತಂತ್ರಜ್ಞಾನದ ಒಂದು ಸಿನಿಮಾ ಮಾಡುವ ಸೌಲಭ್ಯ ಸುಲಭವಾದುದರಿಂದ ಯಾರು ಬೇಕಾದರೂ ಸಿನಿಮಾ ಮಾಡಬಹುದು. ಮತ್ತೆ ಕೆಲವರು ಸರ್ಕಾರ ಕೊಡುವ ಸಬ್‌ಸಿಡಿಗಾಗಿ ಸಿನಿಮಾ ಮಾಡುತ್ತಾರೆ. ಇವರು ಬೇರೆ ಯಾರಿಗೂ ಸಿನಿಮಾ ತೋರಿಸಲು ಆಗುವುದಿಲ್ಲ. ಅಂಥವರು ಮೂರು ಕಮಿಟಿಗೆ ಮಾತ್ರ ತಮ್ಮ ಸಿನಿಮಾ ತೋರಿಸುತ್ತಾರೆ. ಒಂದು ಸೆನ್ಸಾರ್ ಬೋರ್ಡಿಗೆ, ಎರಡು ಸಬ್ಸಿಡಿ ಕಮಿಟಿಗೆ, ಮೂರು ಅವಾರ್ಡ್ ಕಮಿಟಿಗೆ.
ಇನ್ನು ವಾಣಿಜ್ಯ ಚಿತ್ರಗಳು ನಾಯಕ ಆಧಾರಿತವಾದವು. ಹೀರೊ ಎಂಟ್ರಿ, ಬಿಲ್ಡ್ ಅಪ್, ಅಭಿಮಾನಿಗಳ ಬಳಗ, ಸ್ಟಾರ್ ಕಟ್ಟುವುದು, ಹೀರೊಗಳಿಗೆ ತಮ್ಮ ಅಭಿಮಾನ ತೋರುವುದು ಮುಂತಾದ ಚಟುವಟಿಕೆ, ಬೇಡಿಕೆಗಳಿಂದ ಸಿನಿಮಾ ಕಥಾವಸ್ತು ಹೀರೊ ಪ್ರೊಜೆಕ್ಟ್ ಗೆ ಸೀಮಿತವಾಗುವ ಸಂದರ್ಭಗಳೆ ಹೆಚ್ಚು. ಈ ಚಟುವಟಿಕೆಗಳು ಅನೇಕ ಅಭಿಮಾನಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದರೂ ನಂತರ ಜನಸಾಮಾನ್ಯರನ್ನು ಥಿಯೇಟರಿಗೆ ಕರೆತರುವಲ್ಲಿ ಹಿಂದೆಬೀಳುವುದರಿಂದ ಹೀರೊ ಚಿತ್ರಗಳು ನಿರಂತರವಾಗಿ ಎಲ್ಲ ಥಿಯೇಟರ್‌ಗಳಲ್ಲೂ ಪ್ರದರ್ಶನ ಕಾಣುವ ಸಂದರ್ಭಗಳು ಕಡಿಮೆ ಆಗುತ್ತಿವೆ. ನಾಲ್ಕೈದು ಜನ ಹೀರೊಗಳಿಗಾಗಿ ಚಿತ್ರರಂಗ ಕಾದು ಕುಳಿತಿರಬೇಕಾಗಿದೆ. ಹಣ ಹಾಕಿದರೆ ಥಿಯೇಟರ್‌ಗೆ ಜನ ಕರೆತರುವ ಹೀರೊಗಳು ಕನ್ನಡ ನಾಡಿನ ಸ್ಪಂದನೆಗಿಂತ, ಇಲ್ಲಿನ ಜನರ ಆಶೋತ್ತರಗಳಿಗಿಂತ ಪ್ಯಾನ್ ಇಂಡಿಯಾದ ಬಿಸಿಲುಗುದುರೆಯನ್ನೇರಿ ಕುಳಿತಿದ್ದಾರೆ. ಕೋಟಿ ಕೋಟಿ ಬಂಡವಾಳ ಹಾಕಿ ಅದನ್ನು ವಾಪಸ್ಸು ತೆಗೆಯುವ ದಾರಿಗಳಿಲ್ಲದೆ ನಿರ್ಮಾಪಕರು ಕೈಚೆಲ್ಲಿ ಕುಳಿತಿದ್ದಾರೆ. ವ್ಯಾಪಾರವಾಗುವುದಾದರೆ ನಿರ್ಮಾಣ. ಇಲ್ಲದಿದ್ದರೆ ಬೇರೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅವರು ಸಿದ್ಧವಾಗಿದ್ದಾರೆ. ಹೀರೊಗಳ ಮನೆಗಳ ಕಾದು, ಅವರ ಎಲ್ಲ ಕ್ವಾಟ್ಲೆ, ರಗಳೆಗಳನ್ನು ಪೂರೈಸಿ ಹಣ ಬರುವುದೆಂಬ ಕನಸೂ ಭಗ್ನವಾದಾಗ ಸಿನಿಮಾ ನಿರ್ಮಾಣದ ಸಹವಾಸವನ್ನೇ ಕೈಬಿಟ್ಟಿದ್ದಾರೆ. ಹೀರೊಯಿಸಂನ ಇಂಥ ನಾನಾ ಕಾರಣದ ಬಿಕ್ಕಟ್ಟು ಕನ್ನಡ ಚಿತ್ರರಂಗದ ಮೇಲೆ ದುಷ್ಪರಿಣಾಮ ಬೀರಿದೆ. ಹಾಗಾಗಿ ಸಣ್ಣ ಬಜೆಟ್‌ನಲ್ಲಿ ಸಿನಿಮಾ ತಯಾರಾಗಲ್ಲ. ಇದರಿಂದ ನಷ್ಟದ ಪ್ರಮಾಣ ನಿರ್ಮಾಪಕರಿಗೆ ಹೆಚ್ಚಾಗುತ್ತದೆ. ಸುಡುವುದಾದರೆ ಕೈ ಸುಟ್ಟರೆ ಪರವಾಗಿಲ್ಲ. ಇಡಿ ಶರೀರವೇ ಸುಡುತ್ತದೆಂದಾಗ ನಿರ್ಮಾಪಕರು “ಯಾಕೆ ಸಿನಿಮಾ ನಿರ್ಮಾಣ ಮಾಡಬೇಕು?” ಎಂಬ ಚಿಂತನೆಯಲ್ಲಿದ್ದಾರೆ.
ಕನ್ನಡ ಸಿನಿಮಾ ವಾಣಿಜ್ಯ ಜಗತ್ತು ತಮಿಳು, ಮಲೆಯಾಳಂ, ತೆಲುಗು, ಹಿಂದಿಗೆ ಹೋಲಿಸಿದರೆ ಕಡಿಮೆ ವಹಿವಾಟು. ಒಂದು ಕೆಜಿಎಫ್ ಇಂಪ್ಯಾಕ್ಟಿಗಾಗಿ ಹಲವರು ಕಾಯುತ್ತಿರುತ್ತಾರೆ. ಆದರೆ ಅದರ ಪರಿಣಾಮ ಒಳ್ಳೆಯದೇ ಆಗುತ್ತದೆ ಎಂದು ಭಾವಿಸಬೇಕಿಲ್ಲ. ಕನ್ನಡ ವಾಣಿಜ್ಯ ವಹಿವಾಟಿಗಾಗಿ ಸಿನಿಮಾ ಮಾಡಲು ಸಾಧ್ಯ ಇಲ್ಲ. ರವಿಚಂದ್ರನ್ ಕಾಲಕ್ಕೆ ೪೦ ಪ್ರಿಂಟ್ ಹಾಕಿಸಿ ೧೦೦ಕ್ಕೂ ಹೆಚ್ಚು ಶೋಗಳನ್ನು ತೋರಿಸುತ್ತ ಕನ್ನಡ ಸಿನಿಮಾ ಮಾರುಕಟ್ಟೆಯನ್ನು ಹೆಚ್ಚಿಸಿದ ಕೀರ್ತಿ `ಪ್ರೇಮಲೋಕ’ದಂಥ ಚಿತ್ರಕ್ಕಿತ್ತು. `ಓಂ’ನಂಥ ಚಿತ್ರ ಸೃಷ್ಟಿ ಮಾಡಿದ ಮಾರ್ಕೆಟ್ ಎಕಾನಮಿ ಕನ್ನಡಕ್ಕೆ ಹೊಸ ಶಕ್ತಿಯನ್ನು ನೀಡಿತು. `ಎ.ಕೆ. ೪೭’ ಕನ್ನಡ ಮಾರ್ಕೆಟ್ ಹೆಚ್ಚಿಸಿದಂತೆ ಹಿಂದಿ ಮಾರ್ಕೆಟ್ಟನ್ನು ಹೆಚ್ಚಿಸಿತು. `ಹುಚ್ಚ’ದಂಥ ಸಿನಿಮಾ ಮಾಡಿದ ಪರಿಣಾಮ ಅಭೂತಪೂರ್ವವಾದುದು. ಹೊಸಕತೆ, ಹೊಸ ನಿರ್ದೇಶಕ, ಹೊಸನಟ ತನ್ನ ಹೊಸತನ್ನೆ ಚಿತ್ರರಂಗಕ್ಕೆ ಧಾರೆ ಎರೆಯುತ್ತಾರೆ.
ಸುದೀರ್ಘ ಚರಿತ್ರೆಯಿರುವ ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಅವರ ಕೊಡುಗೆ ಅಪಾರ. ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸಿದ ಅಭೂತಪೂರ್ವ ನಟ ಅವರಾಗಿದ್ದಾರೆ. ಆರು ರಜತ ಕಮಲ ಪ್ರಶಸ್ತಿ ಪಡೆದ ಚಿತ್ರಗಳು ನಮ್ಮ ಪ್ರಸಿದ್ಧ ಸಾಹಿತ್ಯ ಕೃತಿಗಳಾದ ಕತೆ, ಕಾದಂಬರಿಗಳು, ಪ್ರಶಸ್ತಿ ಮುಖೇನದ ಕನ್ನಡ ಸಿನಿಮಾ ತನ್ನ ಹೆಜ್ಜೆ ಗುರುತುಗಳನ್ನು ಲೋಕಲ್‌ನಿಂದ ಗ್ಲೋಬಲ್‌ವರೆಗೆ ಬೆಳೆಸಿದೆ. ಇಂಥ ದೊಡ್ಡ ಪರಂಪರೆಯಿರುವ ನಮ್ಮ ಸಿನಿಮಾ ಇಂದು ಏನಾಗಿದೆ? ವರ್ತಮಾನದ ಕನ್ನಡ ಸಿನಿಮಾ ಬಿಕ್ಕಟ್ಟುಗಳನ್ನು ಸರಿ ಮಾಡುವ ಬಗೆ ಯಾವುದು? ಇವು ಮುಖ್ಯ ಪ್ರಶ್ನೆಗಳು, ಸವಾಲುಗಳು. ಈಗಿರುವ ಸ್ಥಿತಿ ಒಬ್ಬರು ಇನ್ನೊಬ್ಬರನ್ನು ದೂರುತ್ತ ಎಲ್ಲರೂ ಪಂಕಕ್ಕೆ ಬಿದ್ದು ಕಾಲು ಎಳೆದಷ್ಟೂ ಉಸುಕು ತನ್ನ ಕಡೆಗೆ ಎಳೆದುಕೊಂಡು, ಮೇಲೆ ಬರಲು ಯತ್ನಿಸಿದಷ್ಟು ಕೆಳಕ್ಕೆ ಕುಸಿಯುತ್ತಿರುವ ಸ್ಥಿತಿಯಾಗಿದೆ. ಆದ್ದರಿಂದ ಈಗಿನ ಸ್ಥಿತಿಗೆ ಎಲ್ಲರೂ ಕಾರಣರಾಗಿರುವಂತೆಯೇ ಕನ್ನಡ ಸಿನಿಮಾ ಪುನಶ್ಚೇತನಕ್ಕೆ ಎಲ್ಲರೂ ಅನಿವಾರ್ಯವಾಗಿ ಕೈಜೋಡಿಸಬೇಕಿದೆ. ಬಹುಶಃ ಕೇರಳ ಮಾದರಿಯನ್ನು ಅನುಸರಿಸುವುದು ಒಳಿತು. ಏಕೆಂದರೆ ಹಿಂದೆ ಸಾಕ್ಷರತಾ ಆಂದೋಲನಕ್ಕೆ ನಾವು ಕೇರಳ ಮಾದರಿ ಅನುಸರಿಸಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿಕೊಂಡಿದ್ದೇವೆ. ಮುಳುಗುತ್ತಿರುವ ನಾವು ಹುಲ್ಲುಕಡ್ಡಿ ಹಿಡಿದು ಮೇಲೆ ಬರಲು ಯತ್ನಿಸಬೇಕು. ಆಗಲೂ ನಾವು ಕತೆ ಹೊಡೀತಾ ಕೂತರೆ ಮುಳುಗಡೆ ಕಡ್ಡಾಯ. ಒಂದು ಕಪ್ಪೆಯನ್ನು ಒಂದು ಪಾತ್ರೆ ನೀರಿಗೆ ಹಾಕಿ, ಸ್ಟವ್ ಹಚ್ಚಿ. ತಣ್ಣಗಿರುವ ತನಕ ಕಪ್ಪೆ ಸುಮ್ಮನಿರುತ್ತದೆ. ನೀರು ಬಿಸಿಯಾಗತೊಡಗಿದಂತೆ ಅದು ಅಲರ್ಟ್ ಆಗಿ ನೀರಲ್ಲಿ ಸುತ್ತತೊಡಗುತ್ತದೆ. ಬಿಸಿ ಹೆಚ್ಚಾದಂತೆ ಅದರ ವೇಗವೂ ಹೆಚ್ಚುತ್ತದೆ. ಆಮೇಲೆ ಆ ನೀರಿನಿಂದ ಅದು ಹಾರುತ್ತದೆ. ಆದರೆ ನಾವು ಸುಟ್ಟು ಹೋಗುತ್ತಿದ್ದರೂ ಎಚ್ಚೆತ್ತುಕೊಳ್ಳಬೇಕೆ? ಬೇಡವೆ? ಎಂದು ಚಿಂತಿಸುತ್ತಿದ್ದೇವೆ.
ಇನ್ನು ಕೇರಳ ಮಾದರಿ ಎಂದರೇನು? ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರವು ಚಿತ್ರಮಂದಿರಗಳನ್ನು ಕಟ್ಟಿಸಿ, ಅದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ. ಅದರ ನಿರ್ವಹಣಾ ವೆಚ್ಚವನ್ನು ಸರ್ಕಾರ ವಸೂಲಿ ಮಾಡುತ್ತದೆ. ಆ ಸಂಸ್ಥೆ ಶೇರಿನ ಆಧಾರದಲ್ಲಿ ಸಿನಿಮಾ ಪ್ರದರ್ಶನ ಮಾಡಿ ತಾನೂ ಲಾಭ ಮಾಡಿಕೊಳ್ಳುತ್ತದೆ. ಸಿನಿಮಾ ನಿರ್ಮಾಣ ಮಾಡಿದವರಿಗೂ ಲಾಭ ಮಾಡಿಕೊಡುತ್ತದೆ. ಇದರಿಂದ ಸಿನಿಮಾ ನಿರ್ಮಾಣ ನಿರಂತರವಾಗಿ ನಡೆಯುತ್ತದೆ. ನಮ್ಮಲ್ಲಿ ಪ್ರದರ್ಶನ ವ್ಯವಸ್ಥೆ ಇಲ್ಲದಿರುವುದರಿಂದ, ಇರುವುದೂ ದುಬಾರಿಯಾಗಿರುವುದರಿಂದ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಿನಿಮಾ ತೋರಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಸಿನಿಮಾ ಟೆಂಟ್‌ಗಳು ಖಾಯಂ ಆಗಿ ಮುಚ್ಚಿ ಹೋದುದರಿಂದ ಜನ ಸಿನಿಮಾ ನೋಡುವ ಅವಕಾಶಗಳನ್ನೇ ಕಳೆಯಲಾಗಿದೆ. ಬೆಂಗಳೂರಿನ ಪ್ರತಿ ಕಾರ್ಪೊರೇಟರ್ ಏರಿಯಾಗೆ ಒಂದು ಚಿತ್ರಮಂದಿರ ಕಡ್ಡಾಯ ಮಾಡಿದರೆ, ಪುರಸಭೆಯಲ್ಲಿ ಕಡ್ಡಾಯ ಒಂದು ಚಿತ್ರಮಂದಿರ ಇರುವಂತೆ ಮಾಡಿದರೆ, ಮುಂದುವರಿದು ತಾಲ್ಲೂಕು, ಹೋಬಳಿ, ಗ್ರಾಮಪಂಚಾಯಿತಿಗೊಂದು ಕಡ್ಡಾಯ ಸಿನಿಮಾ ಥಿಯೇಟರ್‌ಗಳ ವ್ಯವಸ್ಥೆಯಾದರೆ ಸಿನಿಮಾ ತೆಗೆದವರಿಗೆ ರೆವಿನ್ಯೂ ರಿಜನರೇಟ್ ಆಗುತ್ತದೆ. ಜನಕ್ಕೆ ಸಿನಿಮಾ ತೋರಿಸುವ ವ್ಯವಸ್ಥೆಯನ್ನೇ ಸರಿಮಾಡಿಕೊಳ್ಳದೆ ಉಳಿದದ್ದರ ಬಗ್ಗೆ ಮಾತನಾಡಿದರೆ ಗಾಳಿ ಜತೆಗಿನ ಗುದ್ದಾಟವಾಗುತ್ತದಷ್ಟೆ.
ಈ ಹಿಂದೆ ಪ್ರತಿ ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್‌ಗಳ ಮೇಲೆ ಸಿನಿಮಾ ಮಿನಿ ಥಿಯೇಟರ್ ಕಟ್ಟಲು ನಿರ್ಧರಿಸಲಾಗಿತ್ತಾದರೂ ನಿರ್ಧಾರ ಹಾಗೆಯೇ ಉಳಿದಿದೆ. ಕನಸು ನನಸು ಮಾಡುವ ಹಲವು ಪ್ರಯತ್ನಗಳು ಸರ್ಕಾರ – ಚಿತ್ರರಂಗದ ನಡುವೆ ನಡೆದು ಅವು ಏನೂ ಆಗದೆ ಸುಮ್ಮನಾಗುತ್ತವೆ. ಕೆಲವು ನೆನೆಗುದಿಗೆ ಬೀಳುತ್ತವೆ. ಇದಕ್ಕೆ ಕಾರಣ ರಾಜಕೀಯ ವ್ಯಕ್ತಿಗಳು ಸಿನಿಮಾದವರನ್ನು ನೆನಪು ಮಾಡಿಕೊಳ್ಳುವುದೇ ಚುನಾವಣಾ ಪೂರ್ವದ ದಿನಗಳಲ್ಲಿ, ಚುನಾವಣೆಯಲ್ಲಿ ಗೆದ್ದರೆ ಮತ್ತೆ ಅವರು ನೆನಪಾಗುವುದೇ ನಾಲ್ಕೂವರೆ ವರ್ಷಗಳ ನಂತರ. ಚಿತ್ರರಂಗದವರಿಗೆ ರಾಜಕಾರಣಿಗಳ ಮನೆಬಾಗಿಲು ಕಾಯ್ದು ಅಭ್ಯಾಸವಿರುವುದಿಲ್ಲ. ಒಂದೆರಡು ಸಾರಿ ಹೋಗುತ್ತಾರೆ. ಮತ್ತೆ ಇಲ್ಲಿಗೆ ಬರಬಾರದೆಂಬ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ನಿರಂತರ ನಡೆವ ಒಂದು ಕೆಟ್ಟ ಚಟುವಟಿಕೆ. ಅವರವರ ಕ್ಷೇತ್ರಗಳಲ್ಲಿ ಅವರವರು ಹೀರೋಗಳಾಗಿರುವುದರಿಂದ ಈ ಸಮಸ್ಯೆ ಇರಬಹುದು. ಸಿನಿಮಾ ವಿಲನ್ ಇಲ್ಲದೆ ನಡೆಯಲ್ಲ. ಹಾಗೆ ಯಾರು ಯಾರಿಗೆ ವಿಲನ್ ಎಂಬುದೇ ತಿಳಿಯದು. ಇವರ ಮೇಲೆ ಅವರು; ಅವರ ಮೇಲೆ ಇವರು ಗೂಬೆ ಕೂರಿಸುವುದು ಬಿಟ್ಟರೆ ಈ ವಿಷಯದಲ್ಲಿ ಹೆಚ್ಚಿನ ಏನೂ ಪ್ರಗತಿ ಆಗಿಲ್ಲ. ಕಾಡಿ ಬೇಡಿ ಸಿನಿಮಾ ಅಕಾಡೆಮಿ ಎಂಬುದೊಂದು ವಾರ್ತಾ ಇಲಾಖೆಯಡಿ ಇದೆ. ಸಿನಿಮಾ ಅಭಿವೃದ್ಧಿಯೂ ಈ ಖಾತೆಗೆ ಬರುತ್ತದೆ. ಅಲ್ಲಿ ಇರುವ ಕೆಲಸವೇ ಕಡಿಮೆ. ಸಿನಿಮಾ ಅಕಾಡೆಮಿ – ವಾರ್ತಾ ಇಲಾಖೆ ಜಂಟಿಯಾಗಿ ವರ್ಷಕ್ಕೊಮ್ಮೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾಡಿ ತಲೆತೊಳೆದುಕೊಂಡರೆ ಸಿನಿಮಾ ಕುರಿತು ಇನ್ನಾವ ಚಟುವಟಿಕೆಯೂ ಇಲ್ಲವೇ ಇಲ್ಲ. ಈ ಅಕಾಡೆಮಿ ಸ್ವಲ್ಪ ದೂರದಲ್ಲಿರುವ ರವೀಂದ್ರ ಕಲಾಕ್ಷೇತ್ರದ ಪಕ್ಕ ಇರುವ ವಿವಿಧ ಅಕಾಡೆಮಿಗಳು ತಮಗಿರುವ ಸೀಮಿತ ಅನುದಾನದಲ್ಲಿ ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ನೋಡಿ ಬಂದರೆ ತಾವೇನು ಮಾಡಬಹುದು ಎಂಬುದು ಗೊತ್ತಾಗುತ್ತದೆ. ಸಿನಿಮಾವನ್ನು ಅಕಾಡೆಮಿಕ್ ಆಗಿ ಬೆಳೆಸದೇ ಇದ್ದರೆ, ಸಿನಿಮಾ ನೋಡುವ, ತಯಾರಿಸುವ ಬಗ್ಗೆ ವಿಚಾರ ಸಂಕಿರಣ, ಚರ್ಚೆ, ಸಂವಾದ ಮಾಡದೆ ಸಿನಿಮಾ ಸಂಸ್ಕೃತಿ ಬೆಳೆಸಲು ಶ್ರಮಿಸದಿದ್ದರೆ ಅಂಥ ಅಕಾಡೆಮಿ ಇದ್ದು ಏನು ಪ್ರಯೋಜನ? ಪಕ್ಷದ ಹಬ್ಬ ಮಾಡಿದಂತೆ ಚಿತ್ರೋತ್ಸವ ಮಾಡಿ, ಅಷ್ಟೆ ನನಗೆ ಮಾಡಲು ಬರುವುದು ಎಂತಾದರೆ ಅಂಥ ಅಕಾಡೆಮಿಯನ್ನು ತೆರೆದು ಅದಕ್ಕೆ ಒಬ್ಬ ಅಧ್ಯಕ್ಷರಾದರೂ ಏಕೆ ಬೇಕು? ಸಿನಿಮಾ ಸಮಸ್ಯೆಗಳನ್ನು, ವಿವಿಧ ವಿಷಯ ಕುರಿತು ಅಭಿಪ್ರಾಯ ರೂಪಿಸುವ ಕೆಲಸವನ್ನು ಅಕಾಡೆಮಿ ಮಾಡಬೇಕಿತ್ತು. ಸಿನಿಮಾ ಕ್ಷೇತ್ರದ ವಿವಿಧ ಶಾಖೆಯ ಜನರು ಅವರವರ ಕಷ್ಟಗಳನ್ನು ಹೇಳುವಂತಾಗಿದೆ. ಸಿನಿಮಾ ನೋಡುವ, ತೋರುವ ವ್ಯವಸ್ಥೆಯೇ ಇಲ್ಲವೆಂದರೆ ಅದೊಂದು ಅರಣ್ಯ ರೋದನವೇ ಸರಿ. ಸಿನಿಮಾ ಮಂದಿ ತಮ್ಮ ಪರಿಹಾರವನ್ನು ವಿಧಾನಸೌಧದಿಂದ ಮಾತ್ರ ನಿರೀಕ್ಷಿಸಲೂಬಾರದು.
ಮುಳುಗುತ್ತಿರುವ ಚಿತ್ರರಂಗವನ್ನು ಚಿತ್ರರಂಗದವರೇ ಪುನರುಜ್ಜೀವನ ಮಾಡುವ ಮನಸ್ಸು ಮಾಡಬೇಕು. ಇದು ಅವರ ಕ್ಷೇತ್ರದ ಸಮಸ್ಯೆ. ರೈತರಿಗೆ ಸಮಸ್ಯೆಯಾದರೆ ರೈತರು ಮಾತ್ರ ಬೀದಿಗಿಳಿಯಬೇಕು. ಶಿಕ್ಷಕರಿಗೆ ಸಮಸ್ಯೆಯಾದರೆ ಶಿಕ್ಷಕರು ಮಾತ್ರ ಬೀದಿಗಿಳಿಯಬೇಕು. ಕಬ್ಬು ಬೆಳೆಗಾರರಿಗೆ ಸಮಸ್ಯೆಯಾದರೆ ಅವರು ಮಾತ್ರ ಬೀದಿಗಿಳಿದು ಹೋರಾಡಬೇಕಿದೆ. ಪುಸ್ತಕ ಕೊಳ್ಳಲಿ ಎಂದು ಸರ್ಕಾರದ ವಿರುದ್ಧ ಪ್ರಕಾಶಕರು ಮತ್ತು ಲೇಖಕರು ಹೋರಾಡಬೇಕಿದೆ. ಅಂದರೆ ಹೋರಾಟ ಮಾಡದೆ ಇಲ್ಲಿ ಏನೂ ಸಿಗದು. ಡಾ. ರಾಜಕುಮಾರರು ಗೋಕಾಕ ಚಳವಳಿಗೆ ಕೊಟ್ಟ ಒಂದು ಪ್ರವೇಶ ಕನ್ನಡ ನಾಡನ್ನು ಮರುಸೃಜಿಸಲು ಕಾರಣವಾದುದನ್ನು ಮರೆಯಬಾರದು. ಸರ್ಕಾರದ ಜತೆ ಮಾತುಕತೆಯನ್ನು ಸಿನಿಮಾದವರು ಎಷ್ಟು ಕಾಲ ಮಾಡಿದರೂ ಅಷ್ಟೆ. ಗೌರವ ತೋರಿ, ಆಗಲಿ ಎಂದು ಭರವಸೆ ಕೊಟ್ಟು ಕಳಿಸಿದರೆ ಅಲ್ಲಿಗೆ ಮುಗಿಯಿತು. ಅದನ್ನು ನಂಬಿ ಕೂರಬಾರದು. ಇದರಿಂದಾಗಿ ಸಿನಿಮಾ ಅವಲಂಬಿತ ಶ್ರಮಜೀವಿಗಳ ಬದುಕು ತುಂಬಾ ದುಸ್ತರವಾಗಿದೆ. ಕೊರೊನಾ ಕಾಲದಲ್ಲಿ ರೇಷನ್ನು, ಖರ್ಚಿಗೆ ಕಾಸಾದರೂ ಅವರಿವರು ಕೊಟ್ಟರು. ಈಗ ಪೂರ್ಣ ಕೆಲಸವೇ ಇಲ್ಲ. ಅವರು ಬದುಕುವುದಾದರೂ ಹೇಗೆ? ಸಿನಿಮಾ ಕೆಲಸಗಳನ್ನೇ ನಂಬಿ ಬದುಕಿದ್ದವರ ಬದುಕು ಮೂರಾಬಟ್ಟೆಯಾಗಿದೆ.
ಈಗ ಮಾಡಬಹುದಾದ ರಚನಾತ್ಮಕ ಕೆಲಸಗಳೆಂದರೆ ಸರ್ಕಾರ ಮತ್ತು ಸಿನಿಮಾರಂಗದ ಮಂದಿ ಒಟ್ಟಾರೆಯಾಗಿ ಅಥವಾ ಶೇರಿನ ಕ್ರಮದಲ್ಲಿ ಮೊದಲು ರಾಜ್ಯಾದ್ಯಂತ ಮಿನಿ ಥಿಯೇಟರ್‌ಗಳನ್ನು, ಅಂದರೆ ೨೦೦ ಸೀಟುಗಳ ಥಿಯೇಟರುಗಳನ್ನು ಕಟ್ಟಬೇಕು. ಅದು ನಿರ್ಮಾಣವಾದರೆ ಮುಂದಿನ ಎಲ್ಲ ಕೆಲಸಗಳೂ ಸುಸೂತ್ರವಾಗುತ್ತವೆ. ೧೦೦ ರೂಪಾಯಿಗಳ ಪ್ರವೇಶಧನವನ್ನು ನಿಗದಿ ಮಾಡಬೇಕು. ಅನಗತ್ಯ ದುಬಾರಿ ಟಿಕೆಟ್ ದರ ಇಡುವುದರಿಂದ ಜನ ಥಿಯೇಟರ್‌ಗಳಿಗೆ ಬರುವುದು ಕಡಿಮೆಯಾಗಿದೆ. ಜನರು ಬಂದು ಸಿನಿಮಾ ನೋಡಿದರೆ ಮಾತ್ರವೇ ಕನ್ನಡ ಚಿತ್ರರಂಗ ಉಳಿಯುತ್ತದೆಯೇ ಹೊರತು ಒಂದು ಸಿನಿಮಾ, ಒಬ್ಬ ನಟ, ಪ್ಯಾನ್ ಇಂಡಿಯಾ ಇವೆಲ್ಲ ಕೇವಲ ಆಯಾ ಕಾಲದ ವೇವ್ ಹೊರತು ಖಾಯಂ ಆದ ಹೆಗ್ಗಳಿಕೆಗಳಲ್ಲ. ಹಾಗಂತ ಅದು ಬೇಡ ಎಂದಲ್ಲ. ಕನ್ನಡ ಸಿನಿಮಾ ದೇಶಾದ್ಯಂತ ಪ್ರದರ್ಶನ ಕಾಣುವುದು ಹೆಮ್ಮೆಯ ಸಂಗತಿ. ಆದರೆ ಎಲ್ಲರೂ ಅದನ್ನೇ ಬೆನ್ನು ಹತ್ತಿ ಹೋಗುವ ಭ್ರಮೆ ಬೇಕಿಲ್ಲ. ಕನ್ನಡ ಉಳಿಯಬೇಕೆಂದರೆ ಕನ್ನಡ ಸಿನಿಮಾ ಮೊದಲು ಉಳಿಯಬೇಕು. ಕನ್ನಡ ಭಾಷೆಯ ಬಹುಮುಖ್ಯ ಮಾಧ್ಯಮ ಸಿನಿಮಾ ಆಗಿದೆ. ಕನ್ನಡ ಶಾಲೆಗಳು ಮುಚ್ಚಿ ಹೋದವು. ಅಷ್ಟರಮಟ್ಟಿಗೆ ಗ್ರಾಮೀಣ ಶಿಕ್ಷಣ ನಾಶವಾಯಿತು. ಅದೇ ಸ್ಥಿತಿ ಸಿನಿಮಾಕ್ಕೂ ಒದಗಿ ಬಂದಿದೆ. ಸಿನಿಮಾ ಟೆಂಟ್ ಹೋಯಿತೆಂದರೆ ಆ ಊರಿನಲ್ಲಿ ಸಿನಿಮಾ ನೋಡುವವರು ಮುಗಿದರು ಎಂದೇ ಅರ್ಥ. ಸಿನಿಮಾರಂಗ ತನ್ನ ರೆವಿನ್ಯೂ ಎಲ್ಲಿದೆಯೊ ಅಲ್ಲಿಗೆ ಮೊದಲು ಚಿಕಿತ್ಸೆ ಮಾಡಬೇಕು. ಈಗ ಇರುವ ಸಿನಿಮಾರಂಗದ ಸ್ಥಿತಿ ಹೇಗಿದೆಯೆಂದರೆ, ಕಾಲಿಗೆ ನೋವು ಬಂದರೆ ತಲೆಗೆ ಚಿಕಿತ್ಸೆ ಮಾಡಲಾಗುತ್ತಿದೆ. ಇದರಿಂದ ಕಾಲು ಮತ್ತು ತಲೆ ಎರಡೂ ಹೊರಟು ಹೋಗುತ್ತವೆ. ಮೊದಲು ಚಿತ್ರರಂಗದ ಸಮಸ್ಯೆಗಳೇನೆಂದು ಚರ್ಚಿಸಿ ಒಂದು ಉತ್ತಮ ಡಾಕ್ಯುಮೆಂಟ್ ಮಾಡುವುದು ಮೊದಲ ಕೆಲಸ. ಅದಕ್ಕೆ ನಮ್ಮ ಜವಾಬ್ದಾರಿಗಳೇನು? ಸರ್ಕಾರದ ಜವಾಬ್ದಾರಿಯೇನು? ಎಂದು ಕೆಲಸಗಳನ್ನು ಹಂಚಿಕೊಂಡು ಕಾರ್ಯಪ್ರವೃತ್ತರಾಗಬೇಕು. ಇದನ್ನು ಮಾಡುವ ಮೊದಲು ಚಿತ್ರರಂಗದ ಎಲ್ಲರೂ ರಾಜ್ಯಾದ್ಯಂತ ಒಂದು ಪ್ರವಾಸ ಮಾಡುವುದರಿಂದ ಪ್ರೇಕ್ಷಕರು ಪುನಃ ಸಿನಿಮಾ ನೋಡುವ ಸಂಸ್ಕೃತಿಯನ್ನು ವೃದ್ಧಿ ಮಾಡಬಹುದು. ವಾಣಿಜ್ಯ ಮಂಡಳಿ ಒಂದು ಮನವಿ, ಉಳಿದ ನಾಲ್ಕೈದು ಜನ ಒಂದು ಮನವಿ ಕೊಟ್ಟರೆ ಆಳುವ ಸರ್ಕಾರಗಳು ಖಂಡಿತ ಗಮನಿಸುವುದಿಲ್ಲ. ರಾಜಕಾರಣಿಗಳಿಗೂ ನಟ ನಟಿ ತಂತ್ರಜ್ಞರ ಬಗ್ಗೆ ಗೌರವ ಇದೆ. ನೀವು ಭೇಟಿಯಾದಾಗ ಅವರು ನೀವು ಮಾಡಿದ ಸಿನಿಮಾಗಳ ಬಗ್ಗೆ ಮಾತಾಡಬಹುದು. ಅದರಿಂದ ನಿಮಗೆ ಖುಷಿಯಾಗಲೂಬಹುದು. ಆದರೆ ಆ ಕರ್ಟಸಿ ಮಾತ್ರ ಸಿನಿಮಾ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಈ ಕ್ಷೇತ್ರದ ಪ್ರತಿನಿಧಿಯೂ ವಿಧಾನಸೌಧದಲ್ಲಿ ಇರುವುದಿಲ್ಲ. ರಾಜಕಾರಣಿಗಳು ನಿಮ್ಮನ್ನು ಕರಿಬೇವಿನ ಸೊಪ್ಪಿನ ತರ ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಅನೇಕ ಅವಲಂಬಿತ ಕ್ಷೇತ್ರಗಳನ್ನು ಅವಲಂಬಿಸಿ ಸಿನಿಮಾ ಕ್ಷೇತ್ರ ಇಷ್ಟು ಅಧೋಗತಿಗೆ ಹೋಗಿದೆ. ಮುಳುಗಿದರೆ ಏನು ಮಾಡಬೇಕೆಂಬುದನ್ನು ಇನ್ನಾದರೂ ಯೋಚಿಸಬೇಕು. ಎರಡು ದಿವಸವಲ್ಲ ಐದು ದಿನಗಳಾಗಲಿ ಸಿನಿಮಾರಂಗದ ಅವನತಿಯ ಸಮಗ್ರ ಚಿತ್ರಣವನ್ನು ವಿಚಾರ ಸಂಕಿರಣ ನಡೆಸಿ ಡಾಕ್ಯುಮೆಂಟ್ ಮಾಡಬೇಕು. ಆ ಪ್ರಕಾರ ಪರಿಹಾರಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕನ್ನಡ ಚಿತ್ರರಂಗವನ್ನು ಕನ್ನಡ ನಟ, ನಟಿ, ತಂತ್ರಜ್ಞರು ಉಳಿಸಿಕೊಳ್ಳಬೇಕಾಗಿದೆಯೇ ಹೊರತು ತಮಿಳು, ತೆಲುಗು, ಮಲೆಯಾಳಂ, ಹಿಂದಿ ಚಿತ್ರರಂಗದ ತಾರೆಯರುಗಳಲ್ಲ ಎಂಬ ಮೂಲ ಮಂತ್ರವನ್ನು ತಿಳಿಯಬೇಕು. ನಮ್ಮ ಕನ್ನಡ ಚಿತ್ರ ೧ ದಿನಕ್ಕೆ ೧ ವಾರಕ್ಕೆ ಎತ್ತಂಗಡಿಯಾಗುತ್ತದೆ. ತಮಿಳು, ತೆಲುಗು, ಮಲೆಯಾಳಂ, ಹಿಂದಿ ಚಿತ್ರಗಳು ನಮ್ಮೆದುರಿಗೇ ರಾಜಾರೋಷವಾಗಿ ದುಬಾರಿ ಬೆಲೆ ಸಂಗ್ರಹಿಸುತ್ತ ತಿಂಗಳು, ಮೂರ್ನಾಲ್ಕು ತಿಂಗಳು ಪ್ರದರ್ಶನ ಕಾಣುತ್ತಿದ್ದರೆ ನಮಗೆ ಏನೂ ಅನ್ನಿಸುವುದಿಲ್ಲವೇ? ಈ ಅಳಲನ್ನು ಯಾರ ಹತ್ತಿರ ತೋಡಿಕೊಳ್ಳುವುದು? ಇದು ರೀಲ್ ಅಲ್ಲ ರಿಯಲ್. ಈಗ ಸ್ಟುಡಿಯೊ ಕಲ್ಚರ್ ಇಲ್ಲ. ಸಾವಿರಾರು ಜನ, ಐನೂರು ಜನರ ಥಿಯೇಟರ್ ಪರಿಕಲ್ಪನೆ ಇಲ್ಲ. ಮಿನಿ ಥಿಯೇಟರ್‌ಗಳ ಕಾಲ. ಉದಾಹರಣೆಯೊಂದನ್ನು ಕೊಡುವೆ; ಪ್ರಸನ್ನ ಥಿಯೇಟರ್‌ನಲ್ಲಿ ಹೊಸ ಸಿನಿಮಾಗಳಿಗಿಂತ ಡಾ.ರಾಜ್ ಅವರ ಹಳೆಯ ಚಿತ್ರಗಳು ಮತ್ತೆ ಹೌಸ್‌ಪುಲ್ ಪ್ರದರ್ಶನ ಕಾಣುತ್ತಿವೆ. ಅಂದರೆ ನಮ್ಮ ಪ್ರದರ್ಶನ ವ್ಯವಸ್ಥೆ ಸರಿಯಿಲ್ಲ. ಥಿಯೇಟರ್ ಓನರ್‌ಗಳನ್ನು ನಂಬಿ ಹರಿಚಿಕೆದಾರರು ಕೆಟ್ಟರು. ಹಂಚಿಕೆದಾರರನ್ನು ನಂಬಿ ನಿರ್ಮಾಪಕರು ಕೆಟ್ಟರು. ನಿರ್ಮಾಪಕರನ್ನು ನಂಬಿ ನಟ, ನಟಿ, ತಂತ್ರಜ್ಞರು ಕೆಟ್ಟರು. ಇವರೆಲ್ಲರ ನಂಬಿ ಪ್ರೇಕ್ಷಕ ಕೆಟ್ಟ.
ಇನ್ನು ಕಂಟೆಂಟ್ ದೃಷ್ಟಿಯಿಂದ ನಮ್ಮಲ್ಲಿ ದೊಡ್ಡ ಬದಲಾವಣೆ ಇಲ್ಲ. ಮನುಷ್ಯನ ಬದುಕಿನ ಸಮಸ್ಯೆಗಳನ್ನು ಚಿತ್ರ ಮಾಡುವುದಕ್ಕೆ ತಮಿಳು, ಮಲೆಯಾಳಂ ಚಿತ್ರಗಳಿಗೆ ಹೋಲಿಸಿದರೆ, ನಮ್ಮಲ್ಲಿ ಹೀರೋ ಬಿಲ್ಡ್ಅಪ್‌ಗಳೆ ಜಾಸ್ತಿ. ಇದು ಕೂಡ ಕನ್ನಡ ಸಿನಿಮಾಗಳ ಮೈನಸ್ ಪಾಯಿಂಟ್. ಇತರ ಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ನಿರಂತರವಾಗಿ ನಡೆಯಲು ಕಾರಣವೇನು? ನಾವು ಯಾವುದರಲ್ಲಿ ಹಿಂದೆ ಇದ್ದೇವೆ ಎಂದು ತಿಳಿದು ಅದಕ್ಕೆ ತಕ್ಕ ರೆಮಿಡಿಗಳನ್ನು ಕಂಡುಕೊಳ್ಳದೇ ಹೋದರೆ ಮುಳುಗುವುದು, ಸಮಾಧಿಯಾಗುವುದು ಗ್ಯಾರಂಟಿ. `ಅಣ್ಣಂಗೆ ಜೈ’ ಎಂಬುದು ಬಹಳ ಕಾಲ ನಡೆಯುವ ಘೋಷಣೆ ಅಲ್ಲ. ವ್ಯಾಪಾರಿ ಚಿತ್ರಗಳು ನೆಲಕಚ್ಚುತ್ತಿವೆ. ಚಿಂತನ ಪ್ರಧಾನ ಚಿತ್ರಗಳು ತಯಾರಾದರೂ ತೋರಿಸುವ ವ್ಯವಸ್ಥೆ ಇಲ್ಲದ್ದರಿಂದ ಅವು ನಿರಂತರ ಸೊರಗುತ್ತಿವೆ. ಕೇವಲ ಅವಾರ್ಡಿಗಾಗಿ ತೆಗೆದ ಚಿತ್ರಗಳು ಹೆಸರು ತರಬಲ್ಲವು; ಹಣ ತರಲಾರವು. ನಮ್ಮ ಕಥೆ, ಚಿತ್ರಕತೆ, ನಿರ್ದೇಶನದ ಮಾದರಿಗಳು ಬದಲಾಗಬೇಕು. ನಿರ್ಮಾಪಕರು ಕತೆ ಬರೆದವನ ಜಾತಕ, ಹೆಸರು ಬಲ, ಸಂಖ್ಯೆ ಬಲಾಚಾರ, ಜೋತಿಷ್ಯ, ಶಾಸ್ತ್ರ ಕೇಳೋದು, ಗಿಳಿಶಾಸ್ತ್ರ ಇವೆಲ್ಲ ಕೇಳಿ, ಬಂದವರು ಯಾರು, ಅವರು ಹೆಸರು ಬಲಾಚಾರ ಎಂಥದು, ಯಾವ ಊರಿನ ಮನೆದೇವರಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದು. ರಾಹುಕಾಲ ಗುಳಿಕ ಯಮಗಂಡ ಕಾಲಗಳನ್ನು ನೋಡಿಕೊಂಡು ಕೆಲಸ ಮಾಡಿದರೆ ಅಂಥ ಸಿನಿಮಾ ಸೊರಗುತ್ತದೆಯೇ ಹೊರತು ಉದ್ಧಾರ ಆಗಲ್ಲ. ನಾಮದ ಬಲಾಚಾರದಿಂದ ಅಂದರೆ ಸಿನಿಮಾ ಟೈಟಲ್‌ನ ಅಕ್ಷರಗಳು ಎಷ್ಟಿರಬೇಕು, ನಿರ್ದೇಶಕನ ನಾಮದ ಬಲ, ಅದಕ್ಕಿರುವ ಶಕುನ, ಜೋತಿಷ್ಯ ಜ್ಞಾನ ಎಲ್ಲವೂ ಸೇರಿ ಒಳ್ಳೆಯದಾಗುತ್ತದೆಂದು ತೆಗೆದ ಸಿನಿಮಾ ಕೂಡ ಏನೂ ಗಳಿಸದೆ ಹೋಗಬಹುದು. ಕನ್ನಡದಲ್ಲಿ ಸಿನಿಮಾ ಕುರಿತ ನಿರ್ಮಾಪಕರ ಮನೋಧರ್ಮ ಬದಲಾಗಬೇಕು. ಲಂಕೇಶರು ೧೯೮೮ರಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ತಾಳಿಕಟ್ಟೆಯಲ್ಲಿ `ಪ್ರಗತಿರಂಗ’ ಎಂಬ ರಾಜಕೀಯ ಪಕ್ಷವನ್ನು ಉದ್ಘಾಟನೆ ಮಾಡುತ್ತ “ನನಗೆ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ `ಪಲ್ಲವಿ’ ಚಿತ್ರಕ್ಕೆ ಬಂದದ್ದು ರಾಹುಕಾಲದಲ್ಲಿ ಶೂಟಿಂಗ್ ಶುರು ಮಾಡಿದ್ದರಿಂದ” ಎಂದು ಹೇಳಿದ್ದರು. ಹಲ್ಲಿ ಶಕುನ, ಗಿಳಿಶಾಸ್ತ್ರ ಕೇಳಿ ಸಿನಿಮಾಕ್ಕೆ ಬಂಡವಾಳ ಹಾಕುವುದೇ ಅವೈಜ್ಞಾನಿಕ. ವೈಜ್ಞಾನಿಕ ವ್ಯವಹಾರಜ್ಞಾನ ಇಲ್ಲದೆ ಇವರ ವಹಿವಾಟುಗಳೆಲ್ಲ ಮುಚ್ಚಲ್ಪಡುತ್ತಿವೆ ಎಂದೆನಿಸುತ್ತದೆ. ಹಾಗಾದರೆ ಬದಲಾಗಬೇಕಾದುದು ಅತ್ಯಗತ್ಯವಾಗಿ ನಿರ್ಮಾಪಕರ ಮನೋಧರ್ಮ. ಒಬ್ಬ ಹೊಸ ನಿರ್ದೇಶಕನನ್ನು ನಂಬಿ ಹಣ ಹಾಕುವ ನಿರ್ಮಾಪಕರೆ ಕನ್ನಡದಲ್ಲಿ ಇಲ್ಲದಂತಾಗಿದ್ದಾರೆ. ಸಿನಿಮಾ ಸದಾ ಹೊಸಬರ ಕನಸುಗಾರಿಕೆಯೇ ಹೊರತು, ಹಳಬರ ಸಾಮ್ರಾಜ್ಯವಲ್ಲ. ತಮಿಳಿನಲ್ಲಿ ಬರುವ ಒಬ್ಬ ನಿರ್ದೇಶಕ ತನ್ನ ನೂರಾರು ಕನಸುಗಳೊಂದಿಗೆ ಬರುತ್ತಾನೆ. ಸಿನಿಮಾಗಳನ್ನು ಬದುಕುತ್ತಾನೆ. ಮಲೆಯಾಳಂನಲ್ಲಿ ಅದು ಸಾಧ್ಯ. ಕನ್ನಡದಲ್ಲಿ ಸಮಸ್ಯೆ ಇರುವುದೇ ನಿರ್ಮಾಪಕರಲ್ಲಿ ಅವರ ಆಲೋಚನೆಯಂತೆ ಸಿನಿಮಾ ತಯಾರಿಕೆಯಾಗುತ್ತದೆ. ಇದುವರೆಗೂ ಸಿನಿಮಾ ಮಾಡಿ ಗೆದ್ದಿರುವವರೆಲ್ಲ ತಾವು ಸೋಲುತ್ತೇವೆಂದೇ ಸಿನಿಮಾ ಮಾಡಿದರೆ? ಸೋಲು ಗೆಲುವು ಜೀವನದಲ್ಲಿದ್ದಂತೆ, ಸಿನಿಮಾ ನಿರ್ಮಾಣದಲ್ಲೂ ನಿರೀಕ್ಷೆ ಬುಡಮೇಲು ಆಗುತ್ತವೆ. ನಾಕಾರು ಸೋತರು ಗೆದ್ದ ಒಂದು ನಾಕಾರು ಸಿನಿಮಾಗಳ ನಷ್ಟವನ್ನು ಗೆದ್ದುಕೊಡುತ್ತದೆ. ಯಾವಾಗ ಯಾರು ಯಾವ ಸಿನಿಮಾ ಗೆಲ್ಲಿಸುತ್ತಾರೆಂದು ಹೇಳಲಾಗದು. `ಮುಂಗಾರು ಮಳೆ’ ಮೊದಲ ವಾರಕ್ಕೆ ಮುಗಿಯುತ್ತದೆಂದು ಸಿನಿಮಾ ಪಂಡಿತರು ನಿರೀಕ್ಷಿಸಿದ್ದರು. ಎರಡು ಮೂರನೆ ವಾರದಿಂದ ಅಷ್ಟೊಂದು ಬೆಳಕಿಗೆ ಬರಲು ಸಾಧ್ಯವಾಯಿತು. ಅದಕ್ಕಿದ್ದ ಒಂದೇ ಸತ್ವ ನಿರ್ಮಾಪಕರ ಅಚಲತೆ.
ನನ್ನ ಮಾತು ಕೆಲವರಿಗೆ ಅಪಥ್ಯ ಎನ್ನಿಸಬಹುದು. ಆದರೆ ಸಿನಿಮಾದ ತಾಂತ್ರಿಕತೆ ೨೦ ವರ್ಷಗಳಲ್ಲಿ ಸಂಪೂರ್ಣ ಬದಲಾಗಿದೆ. ಡಿಜಿಟಲ್ ತಂತ್ರಜ್ಞತೆ ಸಿನಿಮಾ ನಿರ್ಮಾಣವನ್ನು ಸರಳಗೊಳಿಸಿದೆ. ಈಗ ನಾಲ್ಕು ಜನ ಪರಿಣತರು ಸೇರಿ ಒಂದು ಸಿನಿಮಾ ಮಾಡಬಹುದು. ಅಂಥ ತಯಾರಿಕೆಯನ್ನು ನೆಗೆಟಿವ್ ಆಗಿ ನೋಡಬೇಕಾಗಿಲ್ಲ. ನೆಗೆಟಿವ್ ಬಹಳ ಮಹತ್ವದ್ದಾಗಿದ್ದ ಒಂದು ಕಾಲದ ಚರಿತ್ರೆ ಸಿನಿಮಾಕ್ಕಿತ್ತು. ಈಗ ಸಂಪೂರ್ಣ ಬದಲಾಗಿದೆ. ಬದಲಾದ ಕಾಲಕ್ಕೆ ನಮ್ಮ ಪರಿಣತಿ, ವ್ಯವಹಾರ, ಗಳಿಕೆ ಎಲ್ಲವೂ ಬದಲಾಗಬೇಕು. ಕ್ಯಾನ್ ಡಬ್ಬಿಗಳ ಕಾಲವೇ ಪರಮಶ್ರೇಷ್ಠ ಎಂಬ ಭ್ರಮೆ ಬಿಡಬೇಕು. ಅಪ್‌ಡೇಟಾದರೆ ಉಳಿಕೆ, ಇಲ್ಲದಿದ್ದರೆ ಅಳಿಕೆ. ಹೊಸಬರ ಬರುವಿಕೆಯನ್ನು ಗೌರವಿಸದಿದ್ದರೆ ಹಳಬರು ಕೊಳೆತು ಹೋಗುತ್ತಾರೆ. ಆದ್ದರಿಂದ ಚಿತ್ರರಂಗ ಸಂಪೂರ್ಣ ರಿಫ್ರೆಷ್ ಆಗಲು ರಚನಾತ್ಮಕವಾಗಿ ನಾವು ಏನು ಮಾಡಬೇಕು ಎಂಬುದನ್ನು ಒಟ್ಟಾರೆ ಉದ್ಯಮದ ಅಂಗವಾಗಿ ಚಿಂತಿಸಿ ಕ್ರಮ ಕೈಗೊಂಡರೆ ಮಾತ್ರ ಉಳಿಗಾಲ, ಇಲ್ಲದಿದ್ದರೆ ಬೋಳು ತಲೆ ನೇವರಿಸುತ್ತ ಒಂದು ಕಾಲದಲ್ಲಿ ನನ್ನ ತಲೆಯಲ್ಲಿ ಸಮೃದ್ಧ ಕ್ರಾಪ್ ತೆಗೆಯುತ್ತಿದ್ದೆ ಎಂದು ಕೊರಗುತ್ತಲೊ, ಹೆಮ್ಮೆಪಡುತ್ತಲೊ ನಿಷ್ಕ್ರಿಯವಾದರೆ ಪ್ರಯೋಜನವೇನೂ ಇಲ್ಲ. ಕಾಯಕಲ್ಪ ಎನ್ನುವುದು ಆಮೂಲಾಗ್ರ ಇರಬೇಕು. ಚಿತ್ರರಂಗವೇ ಮುಳುಗಿ ಹೋಗಿದೆ. ಈಗ ಚಿತ್ರ ನಗರಿಯ ಚಿಂತೆ. ಚಿತ್ರನಗರಿ ಬೆಳೆಸಿದರೆ ಪ್ರಯೋಜನ ಕಡಿಮೆ. ಮೊದಲು ಆಗಬೇಕಾದುದು ಸಾಮಾನ್ಯ ಜನರು ಚಿತ್ರ ನೋಡುವ ವ್ಯವಸ್ಥೆ. ಅದಿಲ್ಲದಿರೆ ಚಿತ್ರನಗರಿಯಲ್ಲಿ ಯಾರಿಗಾಗಿ ಚಿತ್ರ ತಯಾರಿಸುವುದು? ತಯಾರಿಸುವವರಾರು? ಅವರಿಗೆ ಹಣ ನೀಡುವವರು ಯಾರು? ಯೋಚನೆಗಳನ್ನು ಯೋಚಿಸುವವರು ಯಾರು? ಯೋಚಿಸಿರೆಂದು ಸಂಭಾವನೆ ನೀಡುವರ್ಯಾರು? ಇದೊಂದು ಕೊಂಡಿ ಕಳಚದ ಸರಪಳಿ. ಆದರೆ ಈಗ ಕನ್ನಡ ಚಿತ್ರರಂಗದ ಎಲ್ಲ ಕೊಂಡಿ ಅವಷ್ಟಕ್ಕವೆ ಬ್ರೋಕನ್ ಆಗಿವೆ. ಕಾರಣ ನಾನು ದೊಡ್ಡವನು; ನೀನು ಸಣ್ಣವನೆಂದು. ಕೊಂಡಿಗಳಲ್ಲಿ ಸಣ್ಣದು ದೊಡ್ಡದು ಇರುವುದಿಲ್ಲ. ಸರಪಳಿ ಕೊಂಡಿಗಳು ಸಮಾನವಾಗಿದ್ದಾಗ ಮಾತ್ರವೆ ಭಾರ ಎಳೆಯಲು ಲಗತ್ತಾಗುವುದು.
ಈಗಲೂ ಎಚ್ಚೆತ್ತುಕೊಂಡ ಚಿತ್ರರಂಗದ ಉಳಿವಿಗೆ ಏನು ಮಾಡಬೇಕು ಎಂದು ಚಿಂತಿಸದಿದ್ದರೆ, ಕ್ರಿಯಾಶೀಲರಾಗದಿದ್ದರೆ, ಚಿತ್ರರಂಗ ಪೂರ್ಣ ತೀರಿ ಹೋಗುತ್ತದೆ. ಅದರೊಂದಿಗೆ ಜೀವಂತವಾಗಿರುವ ಕನ್ನಡ ಭಾಷೆಯೂ ತೀರಿ ಹೋಗುತ್ತದೆ. ಕನ್ನಡವನ್ನು ಉಳಿಸುವ ಒಂದು ಮುಖ್ಯ ಉಪಕ್ರಮವನ್ನಾಗಿ ನಾವು ಚಿತ್ರರಂಗವನ್ನು ಉಳಿಸಬೇಕು. ಕನ್ನಡ ಶಾಲೆಗಳನ್ನಂತೂ ನಾವು ಉಳಿಸಿಕೊಳ್ಳಲಾಗಲಿಲ್ಲ. ಕನ್ನಡ ಸಿನಿಮಾವನ್ನಾದರೂ ಉಳಿಸಿಕೊಳ್ಳಬೇಕಿದೆ. ಇದೆಲ್ಲ ಸರಿ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
– ಡಾ.ರಾಜಪ್ಪ ದಳವಾಯಿ, ನಿವೃತ್ತ ಪ್ರಾಧ್ಯಾಪಕರು




