ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ

2 years ago

ಪ್ರಧಾನಮಂತ್ರಿ ಮೋದಿಯವರು ಪ್ರತಿಯೊಂದು ಸಭೆಯಲ್ಲಿ ಸತ್ತು ಹೋಗಿರುವ ನೆಹರೂರವರಿಂದ ಹಿಡಿದು ರಾಜೀವ್ ಗಾಂಧಿತನಕ ಕಾಂಗ್ರೆಸ್ ಪಕ್ಷದ ನಾಯಕರ ಮತ್ತು ಈಗ ಹಾಲಿ ಮುಖ್ಯಮಂತ್ರಿಗಳ ವಿಚಾರದಲ್ಲಿ ಭ್ರಷ್ಟಾಚಾರದ ಮಾತುಗಳನ್ನಾಡುತ್ತಾ ತಾವು ಸತ್ಯ ಹರಿಶ್ಚಂದ್ರರು ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ ನಿಜಕ್ಕೂ ಬಿಜೆಪಿಯ ನಾಯಕರಿಗೆ ಭ್ರಷ್ಟಾಚಾರದ ವಿಚಾರದಲ್ಲಿ ಮಾತನಾಡುವಂತಹ ಯಾವ ನೈತಿಕತೆ ಉಳಿದಿಲ್ಲ

ನೆಹರೂರವರ ಮೇಲೆ ಯಾವ ಆರೋಪವೂ ಇರಲಿಲ್ಲ. ಶ್ರೀಮತಿ ಇಂದಿರಾ ಗಾಂಧಿಯವರ ಮೇಲೆ ತನಿಖೆಗೆ ರಚಿಸಿದ್ದ ಆಯೋಗ ಯಾವುದೇ ಆರೋಪವನ್ನು ಸಾಬೀತು ಮಾಡಲಿಲ್ಲ. ಅವೆಲ್ಲವೂ ರಾಜಕೀಯ ಪ್ರೇರಿತವಾಗಿತ್ತು. ಇನ್ನು 2g ಹಗರಣದಲ್ಲಿ ಸಿಬಿಐ ನ್ಯಾಯಾಲಯ ಪ್ರಕರಣವನ್ನು ವಜಾಗಳಿಸಿತು. ಇದೊಂದು ಕಾಲ್ಪನಿಕ ಆರೋಪವೆಂದು ತನ್ನ ತೀರ್ಪಿನಲ್ಲಿ ಹೇಳಿದೆ. ಕಲ್ಲಿದ್ದಲು ಹಗರಣದಲ್ಲಿ ಯಾವ ನಾಯಕರು ಶಿಕ್ಷೆಗೆ ಗುರಿಯಾಗಲಿಲ್ಲ. ಆದರೂ ಸಹ ಬಿಜೆಪಿಯ ನಾಯಕರು ಹಳಸಲು ವಿಚಾರಗಳನ್ನು ಹೇಳುತ್ತಲೇ ಜನರನ್ನ ಮರಳು ಮಾಡುವ ದಾರಿಯಲ್ಲಿ ಸಾಗಿದ್ದಾರೆ.

ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಆರೋಪಿ ಎಂದು ಅವರ ಮೇಲೆ ಅಬ್ಬರಿಸಿದ ಬಿಜೆಪಿಯವರು ಅದೇ ಆರೋಪಿಯನ್ನ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿರುತ್ತಾರೆ. ಈ ಪುಣ್ಯಾತ್ಮನೇ ಹಿಮಂತ್ ಶರ್ಮ.

ಆದರ್ಶ ಹೌಸಿಂಗ್ ಹಗರಣದಲ್ಲಿ ಆರೋಪಿ ಎಂದು ಪ್ರತಿದಿನವೂ ಬಾಯಿ ಬಡೆದುಕೊಳ್ಳುತ್ತಿದ್ದ ಅಶೋಕ್ ಚೌಹಾಣ್ ಅವರನ್ನ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯಸಭಾ ಸದಸ್ಯರನ್ನಾಗಿಸಿದಾಗ ಅವರು ಸತ್ಯ ಹರಿಶ್ಚಂದ್ರರಾಗಿ ಬಿಟ್ಟರೆ?

ಜನಾರ್ದನ ರೆಡ್ಡಿ ಮೇಲೆ ಸಿಬಿಐ ಮತ್ತು ಇಡಿ ಇಲಾಖೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿ ಸೆರೆಮನೆ ವಾಸವನ್ನ ಅನುಭವಿಸಿ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಹೊರ ಬಂದಿದ್ದ ಇವರು ಈಗ ಮತ್ತೆ ಬಿಜೆಪಿಗೆ ಸೇರುತ್ತಿದ್ದಂತೆಯೇ ಸತ್ಯ ಹರಿಶ್ಚಂದ್ರರಾಗಿ ಬಿಟ್ಟರು!

ಕರ್ನಾಟಕದಲ್ಲಿ 2018ರ ವೇಳೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ನೂರಾರು ಕೋಟಿ ರೂಪಾಯಿಗಳ ಆಸ್ತಿ ಮಾಡಿದ್ದಾರೆಂದು ರಮೇಶ್ ಜಾರಕಿಹೊಳಿ ಮತ್ತು ಎಂಟಿಬಿ ನಾಗರಾಜ್ ರವರ ಮೇಲೆ ಚುನಾವಣೆಯ ವೇಳೆಯಲ್ಲಿ ಅಬ್ಬರಿಸಿದ ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡಿ ಇವರು ಬಿಜೆಪಿಗೆ ಸೇರುತ್ತಿದ್ದಂತೆಯೇ ಇವರನ್ನು ತಮ್ಮ ವಾಷಿಂಗ್ ಮಿಷನ್ ನಲ್ಲಿ ಹಾಕಿ ಶುದ್ಧ ಮಾಡಿಬಿಟ್ಟರು!

ಕಾಂಗ್ರೆಸ್ ಪಕ್ಷದಲ್ಲಿದ್ದರೆ ಅಥವಾ ಬೇರೆ ಪಕ್ಷದಲ್ಲಿದ್ದರೆ ಕೇವಲ ಆರೋಪ ಹೊತ್ತವರೆಲ್ಲರೂ ಅಪರಾಧಿಗಳಾಗಿಬಿಡುತ್ತಾರೆ. ಆದರೆ ಬಿಜೆಪಿಯ ನಾಯಕರುಗಳ ಮೇಲೆ ಆರೋಪಗಳೆಲ್ಲವೂ ಸಾಬೀತಾಗಿ ಅಪರಾಧಿಗಳಾದರು ಸಹ ಅವರುಗಳು ಅಪ್ಪಟ ಚಿನ್ನವಾಗಿ ಬಿಡುತ್ತಾರೆ!

ಪ್ರಧಾನಮಂತ್ರಿ ಮೋದಿ ಅವರು ಯಡಿಯೂರಪ್ಪನವರನ್ನ ಮತ್ತು ಬೊಮ್ಮಾಯಿ ಅವರನ್ನು ತಮ್ಮ ಅಕ್ಕಪಕ್ಕದಲ್ಲಿ ಕೂಡಿಸಿಕೊಂಡು ಭ್ರಷ್ಟಾಚಾರದ ವಿಚಾರದಲ್ಲಿ ಮಾತನಾಡುವಾಗ ಸ್ವಲ್ಪ ಮಟ್ಟಿಗಾದರೂ ನಾಚಿಕೆಯಾದರು ಆಗಬೇಕು. ಏಕೆಂದರೆ ಭ್ರಷ್ಟಾಚಾರದ ಆರೋಪದಲ್ಲಿ ಒಬ್ಬರು ಅಧಿಕಾರವನ್ನು ಕಳೆದುಕೊಂಡರು, ಮತ್ತೊಬ್ಬರು ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟರು.

ಸುಮಾರು ಎಂಟೂವರೆ ಸಾವಿರ ಕೋಟಿ ರೂಪಾಯಿಗಳ ಚುನಾವಣಾ ಬಾಂಡ್ ಅಕ್ರಮದ ಬಗ್ಗೆ ಪ್ರಧಾನಮಂತ್ರಿಗಳು ಬಾಯಿ ತೆಗೆಯುತ್ತಿಲ್ಲ. ನಿಮ್ಮ ಪಕ್ಷದ ಮೇಲೆ ಬಂದಿರುವ ಈ ಆರೋಪಕ್ಕೆ ಉತ್ತರವನ್ನು ನೀಡಿ. ಈಗಾಗಲೇ ದೇಶದ ಸರ್ವೋಚ್ಛ ನ್ಯಾಯಾಲಯ ನಿಮ್ಮ ಬಣ್ಣವನ್ನ ಬಯಲು ಮಾಡಿದೆ.

ಹತ್ತು ವರ್ಷಗಳ ಕೇಂದ್ರದ ನಿಮ್ಮ ಸರ್ಕಾರದ ಮೇಲೆ ಅನೇಕ ಆರೋಪಗಳಿವೆ. ಆದರೆ ತನಿಖೆ ಮಾಡುವ ಸಂಸ್ಥೆಗಳು ನಿಮ್ಮ ಕಪಿಮುಷ್ಠಿಯಲ್ಲಿ ಇರುವುದರಿಂದ ಯಾವುದು ಹೊರಗೆ ಬರುತ್ತಿಲ್ಲ. ತನಿಖೆ ಮಾಡುವ ಧೈರ್ಯ ಯಾವ ಅಧಿಕಾರಿಗು ಇಲ್ಲ. ಕಾರಣ ಅವರಿಗೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಲು ಮನಸ್ಸಿದ್ದರೂ ಧೈರ್ಯವಿಲ್ಲ.

ಇನ್ನು ಮುಂದಾದರು ಇಂತಹ ಹಳಸಲು ವಿಚಾರಗಳನ್ನು ಹೇಳುವುದನ್ನು ಬಿಟ್ಟು ನಿಮ್ಮ ಮೇಲಿನ ಆರೋಪಗಳಿಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನ ರಚಿಸಿ ತನಿಖೆಯನ್ನು ನಡೆಸಿ ನಿಮ್ಮ ಪ್ರಾಮಾಣಿಕತೆಯನ್ನು ಜನರ ಮುಂದೆ ಸಾಕ್ಷಿಕರಿಸಿ. ಇಲ್ಲದಿದ್ದರೆ ನಿಮ್ಮ ಮಾತುಗಳಿಗೆಲ್ಲ ಮೂರು ಕಾಸಿನ ಬೆಲೆ ಇರುವುದಿಲ್ಲ.

ನಿಮ್ಮ ಪಕ್ಷದ ಮಾಹಿತಿ ತಂತ್ರಜ್ಞಾನದ ವಿಭಾಗದವರು ಎಷ್ಟೇ ಸತ್ಯವನ್ನು ಮುಚ್ಚಿಟ್ಟರು ಒಂದಷ್ಟು ಮಾಧ್ಯಮಗಳು ನಿಮ್ಮ ಹಿಡಿತದಲ್ಲಿ ಇರದೆ ನಿಮ್ಮ ಯೋಗ್ಯತೆಯನ್ನ ತಮ್ಮ ವಾಹಿನಿಗಳಲ್ಲಿ ಜಗತ್ತಿಗೆ ತೋರಿಸುತ್ತಿದ್ದಾರೆ.

ಸೇರಿಸಿದ ಜನರ ಮುಂದೆ ಅಬ್ಬರಿಸುವ ನಾಯಕರುಗಳೆ ಮಾಧ್ಯಮದ ಮಿತ್ರರನ್ನು ಸೇರಿಸಿ ಪತ್ರಿಕಾಗೋಷ್ಠಿ ನಡೆಸಿ ನಿಮ್ಮ ಮೇಲಿನ ಆರೋಪಗಳಿಗೆ ನಿಮ್ಮ ಸರ್ಕಾರದ ವೈಖರಿಗೆ ಮಾಧ್ಯಮದ ಮಿತ್ರರು ಪತ್ರಿಕಾಗೋಷ್ಠಿಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಂತಹ ಸಾಹಸವನ್ನ ಹತ್ತು ವರ್ಷದಲ್ಲಂತೂ ಮಾಡಿಲ್ಲ. ಮುಂದೆ ಎಂದಾದರೂ ಒಂದು ದಿನ ಮಾಡುವ ಧೈರ್ಯವನ್ನಾದರೂ ಮಾಡಿ.

  • ಕೆಎಸ್ ನಾಗರಾಜ್, ಬೆಂಗಳೂರು

Leave a Reply