ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರ್ಪಡೆಯಾಗಿದ್ದಾರೆ. ತಮ್ಮ ನೇತೃತ್ವದ ಕಲ್ಯಾಣ ಕರ್ನಾಟಕ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಿರುವ ಶಾಸಕ ಜನಾರ್ದನರೆಡ್ಡಿ ಇಂದು ಬಿಜೆಪಿಗೆ ಸೇರಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಜನಾರ್ದನರೆಡ್ಡಿ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಾಗಿ ಘೋಷಣೆ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನೆಗೆ ನಾನು ವಾಪಸ್ ಬಂದಿದ್ದೇನೆ. ಬಿಜೆಪಿ ತಾಯಿ ಮಡಿಲಿಗೆ ಸುರಕ್ಷಿತವಾಗಿ ಬಂದು ಸೇರಿದ್ದೇನೆ ಎಂದರು.
13 ವರ್ಷಗಳ ಬಳಿಕ ಬಿಜೆಪಿಗೆ ಬಂದಿದ್ದೇನೆ ಎನಿಸುತ್ತಿಲ್ಲ. ನಿನ್ನೆ ಹೋಗಿ ಇಂದು ಬಂದಂತೆ ಭಾಸವಾಗುತ್ತದೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಿಭಾಯಿಸುತ್ತೇನೆ. ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರಿದ್ದೇನೆ ಎಂದರು.
ನಾನು ಚಿಕ್ಕ ವಯಸ್ಸಿನಲ್ಲೇ ಬಿಜೆಪಿಯಲ್ಲಿ ಕೆಲಸ ಮಾಡಿದ್ದೆ. ಯಡಿಯೂರಪ್ಪನವರ ಸಚಿವ ಸಂಪುಟದಲ್ಲೂ ಕೆಲಸ ಮಾಡಿದ್ದೇನೆ. ಅವರ ಬಗ್ಗೆ ಅಪಾರ ಗೌರವವಿದೆ. ಇಂದು ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ತಂದೆ ಮತ್ತು ಮಗನ ಜತೆಗೆ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಲವು ದಿನಗಳ ಹಿಂದೆ ದೆಹಲಿಗೆ ಕರೆಸಿಕೊಂಡಿದ್ದರು. ಬಾಹ್ಯ ಬೆಂಬಲ ಬೇಡ ಪಕ್ಷಕ್ಕೆ ಸೇರಿ ಎಂದಿದ್ದರು. ಅದರಂತೆ ನಾನು ಪಕ್ಷ ಸೇರಿದ್ದೇನೆ. ನನ್ನ ಆಪ್ತಮಿತ್ರ ಶ್ರೀರಾಮುಲು ಅವರಿಗೂ ಧನ್ಯವಾದಗಳು ಎಂದರು.
ಜನಾರ್ದನ ರೆಡ್ಡಿ ಅವರನ್ನು ಸ್ವಾಗತಿಸಿದ, ಯಡಿಯೂರಪ್ಪ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಬೀಸುತ್ತಿದ್ದು, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದರು.




