ತೂಗುಯ್ಯಾಲೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ

12 months ago

ಬೆಂಗಳೂರು: ಕಳೆದ ಶೈಕ್ಷಣಿಕ ವರ್ಷದಲ್ಲಿ ಆದ ಗೊಂದಲದಿಂದ ಇಂಜಿನಿಯರಿಂಗ್ ಶಿಕ್ಷಣ ಪ್ರವೇಶದ ಅವಕಾಶದಿಂದ ವಂಚಿತರಾಗಿದ್ದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಈ ವರ್ಷವೂ ಕೂಡ ತೂಗುಯ್ಯಾಲೆಯಲ್ಲಿದೆ.

ಎಂಜಿನಿಯರಿಂಗ್‌ ಸೀಟುಗಳನ್ನು ಬ್ಲಾಕ್‌ ಮಾಡಿದ್ದ ಆರೋಪ ಎದುರಿಸುತ್ತಿರುವ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು 2025-26ನೇ ಸಾಲಿನಲ್ಲೂ ಪರೀಕ್ಷೆ ಬರೆದಿದ್ದು, ಅಂತಹ ವಿದ್ಯಾರ್ಥಿಗಳ ಶ್ರೇಯಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ತಡೆಹಿಡಿದಿದೆ.

2024-25ನೇ ಸಾಲಿನ ವೃತ್ತಿ ಶಿಕ್ಷಣ ಪ್ರವೇಶದ ವೇಳೆ ಸೀಟ್‌ ಬ್ಲಾಕಿಂಗ್‌ ದಂಧೆ ನಡೆದಿತ್ತು. ಪ್ರತಿಷ್ಠಿತ ಕಾಲೇಜುಗಳು ನಡೆಸಿದ ಈ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಕೆಲವು ವಿದ್ಯಾರ್ಥಿಗಳು ಕೂಡ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಎಂಜಿನಿಯರಿಂಗ್‌ ಕೋರ್ಸ್‌ಗಳ ಸೀಟ್‌ ಬ್ಲಾಕಿಂಗ್‌’ ದಂಧೆ ನಡೆಸುತ್ತಿದ್ದವರ ವಿರುದ್ಧ ಮಲ್ಲೇಶ್ವರದ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಸೀಟು ಹಂಚಿಕೆಯಾಗಿದ್ದರೂ, ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪಡೆಯದ 2,348 ವಿದ್ಯಾರ್ಥಿಗಳಿಗೆ ಕೆಇಎ ನೋಟಿಸ್‌ ನೀಡಿತ್ತು. ಕೆಲವರು ಉತ್ತರ ನೀಡಿದರೆ, ಬಹುತೇಕ ವಿದ್ಯಾರ್ಥಿಗಳು ನೋಟಿಸ್‌ಗೆ ಉತ್ತರ ನೀಡಿರಲಿಲ್ಲ. ನೋಟಿಸ್‌ ನೀಡಿದ್ದರೂ ಉತ್ತರ ನೀಡದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಬರೆದಿದ್ದರು. ಅಂಥವರ ಶ್ರೇಯಾಂಕವನ್ನು ಕೆಇಎ ತಡೆಹಿಡಿದಿದೆ.

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ 2024-25ನೇ ಸಾಲಿಗೆ ನಡೆದಿದ್ದ ಸಿಇಟಿಯಲ್ಲಿ ಉನ್ನತ ರ್‍ಯಾಂಕ್‌ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಕಾಲೇಜುಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದರು ಎಂದು ಕೆಇಎ ಆರೋಪಿಸಿತ್ತು.

ಸೀಟ್‌ ಬ್ಲಾಕಿಂಗ್‌ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕೆಲವರು ಶ್ರೇಯಾಂಕ ನೀಡುವಂತೆ ಮನವಿ ಸಲ್ಲಿಸಿದ್ದು, ಅವರ ಅಹವಾಲು ಆಲಿಸಲು ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಹಾಗೂ ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿ ಪರಿಶೀಲನೆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆ ಇ ಎ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply