ಬೆಂಗಳೂರು: ಸದನದಲ್ಲಿ ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ದಾಖಲೆ ಬಿಚ್ಚಿಡುತ್ತೇನೆಂದು ಪ್ರಚಾರ ಪಡೆದ ಕುಮಾರಸ್ವಾಮಿ ಅವರು ರಾಜಕೀಯ ಮುತ್ಸದ್ದಿತನ ತೋರದೇ, ವೈಯಕ್ತಿಕ ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಯ ಮೇಲೆ ಪೂರ್ವಾಗ್ರಹ ಪೀಡಿತರಾಗಿ ಗಾಳಿಯಲ್ಲಿ ಹೊಡೆದ ಇನ್ನೊಂದು ಗುಂಡು ವ್ಯರ್ಥವಾಗಿದೆ ಎಂದು ವ್ಯಂಗ್ಯ ಮಾಡಿದರು.
ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ನಮ್ಮ ಸರ್ಕಾರ ಕಾನೂನು ರೀತ್ಯ ಕ್ರಮ ಕೈಗೊಂಡಿದೆ. ಬಿಎಂಎಸ್ ಸಂಸ್ಥೆಯ ಆಜೀವ ಟ್ರಸ್ಟಿಗೂ ಇತರ ಟ್ರಸ್ಟಿಗಳಿಗೆ ಇರುವಷ್ಟೇ ಅಧಿಕಾರ ಇರುತ್ತದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದು ನಿಮ್ಮ ಗಮನಕ್ಕೆ ಬರದಿದ್ದದ್ದು ದುರದೃಷ್ಟಕರ ಎಂದರು.
ಅವರು ಇಡೀ ಆಸ್ತಿಯನ್ನು ಪರಭಾರೆ ಮಾಡಬಹುದು, ಲಪಟಾಯಿಸಬಹುದು ಎಂಬ ನಿರಾಧಾರ ಆರೋಪ ಮಾಡಿ ಜನತೆಯ ದಿಕ್ಕು ತಪ್ಪಿಸುವ ಯತ್ನವೇಕೆ? ಕುಮಾರಸ್ವಾಮಿ ಅವರೇ ಎಂದು ಪ್ರಶ್ನಿಸಿದರು. ನಮ್ಮ ಅವಧಿಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಏನೆಲ್ಲಾ ಕ್ರಮ ಕೈಗೊಂಡಿದ್ದೇವೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗುಣಮಟ್ಟದ ಶಿಕ್ಷಣ ನೀಡಲು ಏನೆಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಬಲ್ಲೆ ಎಂದು ಪ್ರತಿಕ್ರಿಯಿಸಿದರು.
ಉನ್ನತ ಶಿಕ್ಷಣ ಸಚಿವನಾದ ನಂತರ ಕಳೆದ ಮೂರು ವರ್ಷಗಳಲ್ಲಿ ನಮ್ಮ ಇಲಾಖೆ ಅನೇಕ ಉತ್ತಮ ಕೆಲಸಗಳನ್ನು ಮಾಡಿದೆ. ಅದರಲ್ಲಿ ಬಹಳ ಮುಖ್ಯವಾದುದು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲು ಅನುಷ್ಠಾನಕ್ಕೆ ತಂದ ರಾಜ್ಯ ನಮ್ಮದು ಎಂದರು.
ಬೆಂಗಳೂರಿನ ಅತಿ ಹಳೆಯ ಎಂಜಿನಿಯರಿಂಗ್ ಕಾಲೇಜು ಯುವಿಸಿಇಗೆ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿಸುತ್ತಿದ್ದೇವೆ. ಅದರ ಜೊತೆಗೆ IIT ಮತ್ತು IIMಗಳ ಮಟ್ಟದಲ್ಲಿ ಪ್ರಸ್ತುತ ರಾಜ್ಯದ 30 ಎಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತ ದರ್ಜೆಗೆ ಏರಿಸಲಿದ್ದೇವೆ. ರಾಜ್ಯದ 7 ಎಂಜಿನಿಯರಿಂಗ್ ಕಾಲೇಜುಗಳನ್ನು NIT ದರ್ಜೆಗೆ ಏರಿಸಲಿದ್ದೇವೆ.ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರ ಬದಲಾಗಿ ನಿರ್ದಿಷ್ಟ ಗುರಿಯೊಂದಿಗೆ ಮುಂದಿನ ಪೀಳಿಗೆ ಮೆಚ್ಚುವಂತೆ ನಾಡು ಕಟ್ಟೋಣ ಎಂದರು.




