ಗರ್ಭದಲ್ಲಿರುವ ಮಗುವಿನ ಜೊತೆ ಸಂಭಾಷಣೆ ಸಾಧ್ಯ ಎಂಬ ಪುಸ್ತಕ

1 year ago

ಇದು ಕುತೂಹಲಕರ “ಮದುವೆ ಗಿಫ್ಟ್” ಆದೀತು…

ಕಳೆದ ವರ್ಷ ನಾನು ಅನುವಾದಿಸಿದ ಮೂರನೇ ಪುಸ್ತಕ ಇದು ( M ಡಾಕ್ಯುಮೆಂಟ್ ಮತ್ತು ಬಹುರೂಪಿಗಾಗಿ ಒಂದು ಮಕ್ಕಳ ಕಿರುಪುಸ್ತಕ ಇನ್ನೆರಡು). ಇಂದು ನನ್ನ ಪ್ರತಿ ಕೈ ಸೇರಿದೆ. ಮೊನ್ನೆ ವಿಜಯದಶಮಿ ದಿನದಿಂದ ಈ ಪುಸ್ತಕ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ. ಈಗಾಗಲೇ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಸಾಕಷ್ಟು ಪ್ರಚಲಿತ ಇರುವ ಪುಸ್ತಕ ಇದು.

ಪುಸ್ತಕದ ಲೇಖಕರು, ಆಂಧ್ರದ ನೆಲ್ಲೂರಿನಲ್ಲಿ ಫರ್ಟಿಲಿಟಿ-ಹೆರಿಗೆ ಆಸ್ಪತ್ರೆ ನಡೆಸುತ್ತಿರುವ, ಹತ್ತು ಸಾವಿರಕ್ಕೂ ಮಿಕ್ಕಿ ಹೆರಿಗೆಗಳ ಅನುಭವಿ ವೈದ್ಯೆ ಡಾ|ಎಸ್. ಅಂಡಾಳ್ ಹಾಗೂ ಅವರ ಪತಿ ಡಾ|ಭಾಸ್ಕರ್. ಗರ್ಭದಲ್ಲಿರುವ ಮಗುವಿನ ಜೊತೆ ಸಂಭಾಷಣೆ ಸಾಧ್ಯ ಎಂಬ ತಿರುಳು ಹೊಂದಿರುವ ಈ ಪುಸ್ತಕ ಅನುವಾದಕ್ಕೆಂದು ಬಂದಾಗ ಮೊದಲು ಹಿಂಜರಿಕೆ ಆಗಿತ್ತು. ಮೊದಲು ಓದಿ ನೋಡಿ, ಮತ್ತೆ ತೀರ್ಮಾನಿಸಿ ಎಂದು ಮೂಲಲೇಖಕರಿಂದ ಸೂಚನೆ ಬಂದ ಬಳಿಕ ಓದಿದೆ.

ಇಂತಹದೊಂದು ಸಾಧ್ಯತೆಯ ಬಗ್ಗೆ ವೈದ್ಯಕೀಯಕ್ಕೆ ಗೊತ್ತಿರುವುದು ಅತ್ಯಲ್ಪ. ಆದರೆ, ಅನುಭವಿ ವೈದ್ಯೆಯೊಬ್ಬರು ಈ ಬಗ್ಗೆ ಬರೆದಿರುವುದರಿಂದ, ಅವರದೇ ಅನುಭವಗಳ ಸಂಚಯ ಇದಾಗಿರುವುದರಿಂದ, ಕನಿಷ್ಠ ಚರ್ಚೆಯಾದರೂ ಆಗಲಿ ಎಂಬ ಕಾರಣಕ್ಕೆ ಅನುವಾದಿಸಲು ಒಪ್ಪಿಕೊಂಡೆ. ಜೊತೆಗೆ, ಪುಸ್ತಕ ಕುತೂಹಲಕರವಾಗಿದ್ದು, ಈ ಪ್ರಯೋಗಕ್ಕೆ ಗರ್ಭಿಣಿಯರು ಒಡ್ಡಿಕೊಳ್ಳುವುದರಿಂದ ಹಾನಿಯೇನಿಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸಿದ್ದು, ಅನುವಾದಕ್ಕಿಳಿಯಲು ಇನ್ನೊಂದು ಕಾರಣ.

ಲೇಖಕಿ ಇಲ್ಲಿ ತನ್ನ ಅನುಭವಗಳು, ಕೇಸ್ ಸ್ಟಡಿಗಳ ಆಧಾರದಲ್ಲಿ ತನ್ನ ವಾದವನ್ನು ಮಂಡಿಸಿದ್ದಾರೆ. ಜನಸಾಮಾನ್ಯರಿಗೂ ಅರ್ಥ ಆಗುವಂತಿದೆ, ಈ ಪುಸ್ತಕ. ಬೇರೆ ಭಾಷೆಗಳಲ್ಲೂ ಒಳ್ಳೆಯ ಮದುವೆ ಗಿಫ್ಟ್ ಆಗಿ ಈ ಪಸ್ತಕ ಬಹಳ ಜನಪ್ರಿಯವಂತೆ. ಇಂಗ್ಲೀಷಿನಲ್ಲಿ ಹಲವು ಆವೃತ್ತಿಗಳನ್ನೂ ಈ ಪುಸ್ತಕ ಕಂಡಿದೆ.

ಆಸಕ್ತರು ಸುಮಾರು 250+ ಪುಟಗಳ, ಆರ್ಟ್ ಪೇಪರಿನಲ್ಲಿ ಅಂದವಾಗಿ ಮುದ್ರಿತವಾದ ಈ ಪುಸ್ತಕವನ್ನು ಅಮೆಜಾನ್‌ನಲ್ಲಿ, ಮೇಲೆ ಹೇಳಲಾದ ಭಾಷೆಗಳಲ್ಲಿ ಖರೀದಿಸಬಹುದು.

– ರಾಜಾರಾಮ್ ತಲ್ಲೂರ್, ಹಿರಿಯ ಪತ್ರಕರ್ತರು

Leave a Reply